ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀಮೋಲ್ಲಂಘನ | ಕೊರೊನಾ ಮೂಲ: ಉತ್ತರ ಸಿಕ್ಕೀತೆ?

ರಾಜಕೀಯ ಹಿತಾಸಕ್ತಿಯಾಚೆ ನಡೆಯಬೇಕಾಗಿದೆ ಪಾರದರ್ಶಕ ತನಿಖೆ
Last Updated 7 ಜೂನ್ 2021, 19:30 IST
ಅಕ್ಷರ ಗಾತ್ರ

ಕೊರೊನಾ ಮೂಲ ಯಾವುದು ಎಂಬ ಪ್ರಶ್ನೆಗೆ ಹದಿನೆಂಟು ತಿಂಗಳು ಕಳೆದರೂ ನಿಖರವಾದ ಉತ್ತರ ದೊರೆತಿಲ್ಲ. ಜಗತ್ತನ್ನು ಆವರಿಸಿಕೊಂಡಿರುವ ಕೊರೊನಾ ವೈರಾಣು ನಿಜಕ್ಕೂ ನೈಸರ್ಗಿಕವಾದದ್ದೇ ಅಥವಾ ಮಾನವ ಸೃಷ್ಟಿಯೇ ಎಂಬ ಪ್ರಶ್ನೆಗೆ ಪುರಾವೆಗಳೊಂದಿಗೆ ಯಾರೂ ಉತ್ತರಿಸುತ್ತಿಲ್ಲ. ಆರಂಭದಲ್ಲಿ ಹತ್ತಾರು ವಿಜ್ಞಾನಿಗಳು, ಇದು ವುಹಾನ್ ಪ್ರಯೋಗಾಲಯದಲ್ಲಿ ಸೃಷ್ಟಿಯಾದದ್ದಲ್ಲ ಎಂದರಾದರೂ ತಮ್ಮ ವಾದವನ್ನು ಅಲ್ಲಗಳೆಯಲು ಸಾಧ್ಯವಾಗದಂತಹ ಪುರಾವೆ ಒದಗಿಸಲಿಲ್ಲ.

ಈಗ ವಿವಿಧ ದೇಶಗಳ ಕೆಲವು ವಿಜ್ಞಾನಿಗಳು ‘ಇದು ಮಾನವ ಸೃಷ್ಟಿಯೇ ಇರಬೇಕು’ ಎಂದು ಚೀನಾದ ವುಹಾನ್ ಪ್ರಯೋಗಾಲಯದತ್ತ ಅನುಮಾನದ ಕಣ್ಣುಗಳಿಂದ ನೋಡುತ್ತಿದ್ದಾರೆ. ಅತ್ತ ಅಮೆರಿಕದಲ್ಲಿ ಸಾಂಕ್ರಾಮಿಕ ರೋಗ ತಜ್ಞ ಡಾ. ಆಂತೋನಿ ಫಾಸಿ, 2020ರ ಜನವರಿಯಿಂದ ಜೂನ್‌ವರೆಗೆ ನಡೆಸಿದ ಇ-ಮೇಲ್ ಸಂವಹನದ ವಿವರಗಳು ಬಹಿರಂಗಗೊಂಡು ಈ ಚರ್ಚೆಗೆ ಮತ್ತಷ್ಟು ಹೂರಣ ಒದಗಿಸಿವೆ.

2020ರ ಜನವರಿಯಲ್ಲಿ ಅಮೆರಿಕದ ಜೈವಿಕ ವಿಜ್ಞಾನ ಸಂಶೋಧನಾ ಕೇಂದ್ರದ ನಿರ್ದೇಶಕರೊಬ್ಬರು ಡಾ. ಫಾಸಿ ಅವರಿಗೆ ಇ-ಮೇಲ್ ಮಾಡಿ, ‘ಕೊರೊನಾ ವೈರಾಣುವಿನ ಅಸಾಮಾನ್ಯ ಚರ್ಯೆ, ಅದು ಸೃಷ್ಟಿಸಲಾಗಿರುವ ವೈರಾಣು ಎನ್ನುವುದನ್ನು ಸೂಚಿಸುತ್ತದೆ’ ಎಂದು ತಿಳಿಸುತ್ತಾರೆ. ಅದಕ್ಕೆ ಡಾ. ಫಾಸಿ, ದೂರವಾಣಿ ಮೂಲಕ ತಮ್ಮನ್ನು ಸಂಪರ್ಕಿಸುತ್ತೇನೆ ಎಂದು ಪ್ರತಿಕ್ರಿಯಿಸುತ್ತಾರೆ. ಮುಂದೇನಾಯಿತು ಆ ವಿವರ ಲಭ್ಯವಿಲ್ಲ. ಡಾ. ಫಾಸಿ ‘ಕೊರೊನಾ ವೈರಸ್ ಚೀನಾದ ಪ್ರಯೋಗಾಲಯದಿಂದ ಬಂದದ್ದಲ್ಲ’ ಎಂದು ಸಾರ್ವಜನಿಕವಾಗಿ ಹೇಳಿದಾಗ, ವುಹಾನ್ ಪ್ರಯೋಗಾಲಯಕ್ಕೆ ಆರ್ಥಿಕ ನೆರವು ನೀಡುತ್ತಿದ್ದ ಸಂಸ್ಥೆಯ ಮುಖ್ಯಸ್ಥರಿಂದ ‘ನಿಮ್ಮ ಧೈರ್ಯವನ್ನು ಮೆಚ್ಚುತ್ತೇನೆ. ಧನ್ಯವಾದಗಳು’ ಎಂಬ ಇ-ಮೇಲ್ ಸಂದೇಶ ಬರುತ್ತದೆ.

2020ರ ಫೆಬ್ರುವರಿ 1ರಂದು ಸ್ಕ್ರಿಪ್ಸ್ ಸಂಶೋಧನಾ ಸಂಸ್ಥೆಯ ಕ್ರಿಸ್ಟಿಯನ್ ಆ್ಯಂಡರ್ಸನ್ ‘ವಿಕಸನ ಸಿದ್ಧಾಂತದ ನಿರೀಕ್ಷೆಗಳಿಗೆ ಹೊಂದಿಕೆಯಾಗದ ಜೀನೋಮ್ ಅನ್ನು ನಾವು ಕೊರೊನಾ ವೈರಾಣುವಿನಲ್ಲಿ ಕಂಡಿದ್ದೇವೆ. ಆದ್ದರಿಂದ ಇದರ ಎಲ್ಲಾ ಅನುಕ್ರಮಗಳನ್ನು ಹತ್ತಿರದಿಂದ ನೋಡುವ ಅಗತ್ಯವಿದೆ’ ಎಂದು ಫಾಸಿ ಅವರಿಗೆ ಬರೆಯುತ್ತಾರೆ. ಇದೇ ಆ್ಯಂಡರ್ಸನ್ ನಂತರ ‘ನೇಚರ್ ಮೆಡಿಸಿನ್’ ಪತ್ರಿಕೆಯಲ್ಲಿ ‘ಕೋವಿಡ್-19 ಸೃಷ್ಟಿಸಿರುವ ವೈರಾಣು ಪ್ರಯೋಗಾಲಯದಿಂದ ಸೋರಿಕೆಯಾದದ್ದಲ್ಲ’ ಎಂದು ಬರೆಯುತ್ತಾರೆ. ಬಿಡಿಬಿಡಿಯಾಗಿ ಕಾಣುವ ಈ ಸಂಗತಿಗಳು ಕೇವಲ ಕೊರೊನಾ ಮೂಲದ ಕುರಿತಷ್ಟೇ ಅಲ್ಲದೆ ಅಮೆರಿಕ- ಚೀನಾ ನಡುವಿನ ಸಖ್ಯದ ಬಗ್ಗೆಯೂ ಪ್ರಶ್ನೆ ಎಬ್ಬಿಸಿವೆ.

ಮೊದಲಿಗೆ, ಕೊರೊನಾದ ಹೊಸ ತಳಿಯ ವೈರಾಣು ಉದ್ಭವಿಸಿದ್ದು ಎಲ್ಲಿ ಎಂಬ ಪ್ರಶ್ನೆಗೆ ಚೀನಾ, ವುಹಾನಿನ ತೇವ ಮಾರುಕಟ್ಟೆಯಿಂದ ಇದು ಬಂದಿರಬೇಕು, ಬಾವಲಿಗಳಿಂದ ಮನುಷ್ಯನಿಗೆ ತಗುಲಿರಬೇಕು, ಶೀತಲೀಕರಿಸಿದ ಆಹಾರ ಪೊಟ್ಟಣಕ್ಕೆ ಅಂಟಿಕೊಂಡ ವೈರಾಣು ಮನುಷ್ಯನ ಒಳಹೊಕ್ಕಿರಬೇಕು ಎಂದಿತ್ತು. ಆದರೆ ಆಧಾರ ನೀಡಲಿಲ್ಲ. ನಂತರ ಮತ್ತೊಂದು ವಾದ ಕೇಳಿಬಂತು. ದಕ್ಷಿಣ ಚೀನಾದ ಯೂನಾನ್ ಗುಹೆಗಳಲ್ಲಿರುವ ಬಾವಲಿಗಳಲ್ಲಿ ಕೊರೊನಾ ರೋಗಕಾರಕಗಳು ಹೆಚ್ಚಾಗಿ ಕಂಡುಬರುತ್ತವೆ. ಈ ರೋಗಕಾರಕಗಳು 1,800 ಕಿ.ಮೀ ದಾಟಿ ಬಂದು ವುಹಾನಿನಲ್ಲಿ ಮೊದಲಿಗೆ ಮನುಷ್ಯನಿಗೆ ತಗುಲಿದವೇ? ವುಹಾನಿನ ಪ್ರಯೋಗಾಲಯದಲ್ಲಿ ಕೊರೊನಾ ವೈರಾಣುಗಳ ಬಗ್ಗೆ ಅಧ್ಯಯನ ನಡೆಯುತ್ತಿತ್ತು. ಇದರ ನೇತೃತ್ವ ವಹಿಸಿರುವ ಶೀ ಝೇಂಗ್ಲೀ 2015ರಲ್ಲಿ ಯೂನಾನ್ ಗುಹೆಗಳಿಗೆ ಭೇಟಿ ಕೊಟ್ಟು ಅಲ್ಲಿಂದ ನೂರಾರು ಬಗೆಯ ಕೊರೊನಾ ವೈರಾಣುಗಳನ್ನು ತಂದು ಅಧ್ಯಯನ ಮಾಡುತ್ತಿದ್ದರು, ಈ ವೇಳೆ ಪ್ರಯೋಗಾಲಯದಿಂದ ವೈರಾಣು ಸೋರಿಕೆಯಾಗಿರಬಹುದು ಎಂಬ ವಾದ ಕೇಳಿಬಂತು. ಆದರೆ ಇದನ್ನು ಆಧಾರ ರಹಿತ ಪಿತೂರಿ ಸಿದ್ಧಾಂತ ಎಂದು ತಳ್ಳಿಹಾಕಲಾಯಿತು.

ಇದೇ ಹೊತ್ತಿಗೆ, ‘ದಿ ಲ್ಯಾನ್ಸೆಟ್’ ಎಂಬ ಪ್ರತಿಷ್ಠಿತ ಪತ್ರಿಕೆಯಲ್ಲಿ ವಿಜ್ಞಾನಿಗಳ ಹೇಳಿಕೆ ಪ್ರಕಟವಾಯಿತು. ‘ಪ್ರಯೋಗಾಲಯದಿಂದ ಸೋರಿಕೆಯಾಗಿದೆ ಎನ್ನುವ ವಾದದಲ್ಲಿ ಹುರುಳಿಲ್ಲ. ಚೀನಾದ ವಿಜ್ಞಾನಿಗಳು ಮತ್ತು ಆರೋಗ್ಯ ವೃತ್ತಿಪರರೊಂದಿಗೆ ನಾವಿದ್ದೇವೆ’ ಎನ್ನುವ ಹೇಳಿಕೆಗೆ 27 ವಿಜ್ಞಾನಿಗಳು ಸಹಿ ಹಾಕಿದ್ದರು. ಈ ಹೇಳಿಕೆ ಪ್ರಕಟವಾಗಿದ್ದು 2020ರ ಫೆಬ್ರುವರಿ 19ರಂದು. ಕೊರೊನಾ ಮೂಲ ಕುರಿತು ದೊಡ್ಡ ಮಟ್ಟದ ಚರ್ಚೆ, ಅಧ್ಯಯನ ಆರಂಭವಾಗುವ ಮುನ್ನವೇ ಪ್ರತಿಷ್ಠಿತ ಪತ್ರಿಕೆಯಿಂದ ಹೊರಟ ಈ ಹೇಳಿಕೆಗೆ ವಿಜ್ಞಾನ ವಲಯ ಆತುಕೊಂಡಿತು. ಈ ಹೇಳಿಕೆಗೆ ಸಹಿ ಮಾಡಿದ್ದ ಮತ್ತು ಇತರ ವಿಜ್ಞಾನಿಗಳನ್ನು ಸಂಘಟಿಸಿ ಸಹಿ ಪಡೆದಿದ್ದ ಪ್ರಾಣಿಶಾಸ್ತ್ರಜ್ಞ ಪೀಟರ್ ಡಜಾಕ್, ನ್ಯೂಯಾರ್ಕ್ ಮೂಲದ ‘ಎಕೋ ಹೆಲ್ತ್ ಅಲಯನ್ಸ್’ ಸಂಸ್ಥೆಯ ಅಧ್ಯಕ್ಷ ಮತ್ತು ಈ ಸಂಸ್ಥೆ ವುಹಾನ್ ಪ್ರಯೋಗಾಲಯದಲ್ಲಿ ನಡೆಯುತ್ತಿದ್ದ ಕೊರೊನಾ ರೋಗಕಾರಕಗಳ ಕ್ರಿಯಾ ವೃದ್ಧಿ (ಗೈನ್ ಆಫ್ ಫಂಕ್ಷನ್) ಅಧ್ಯಯನಕ್ಕೆ ಆರ್ಥಿಕ ನೆರವು ನೀಡುತ್ತಿದೆ ಎನ್ನುವುದು ಗೌಣವಾಯಿತು.

ಕೆಲವು ತಿಂಗಳುಗಳ ಬಳಿಕ ವಿಶ್ವ ಆರೋಗ್ಯ ಸಂಸ್ಥೆಯು ಕೊರೊನಾ ಮೂಲದ ಬಗ್ಗೆ ತನಿಖೆ ನಡೆಸಿತು. ಆ ತಂಡದಲ್ಲಿ ಪೀಟರ್ ಡಜಾಕ್ ಸ್ಥಾನ ಪಡೆದಿದ್ದರು. ತನಿಖೆಯ ವರದಿಯು ಸಾಧ್ಯಾಸಾಧ್ಯತೆಗಳ ಬಗ್ಗೆ ಹೇಳಿತೇ ಹೊರತು, ಕೋವಿಡ್-19 ರೋಗಕಾರಕದ ಮೂಲದ ಬಗ್ಗೆ ಖಚಿತವಾಗಿ ಹೇಳಲಿಲ್ಲ. ವುಹಾನ್ ಪ್ರಯೋಗಾಲಯದಲ್ಲಿ ನಡೆದಿದ್ದ ಸಂಶೋಧನೆಗೆ ಶೀ ಝೇಂಗ್ಲೀ ಮತ್ತು ತಂಡಕ್ಕೆ ಒಪ್ಪಂದದ ಮೂಲಕ ಈ ಕೆಲಸವನ್ನು ವಹಿಸಿದ್ದು ಪೀಟರ್ ಡಜಾಕ್ ಎಂಬುದು ಗೋಪ್ಯವಾಗಿ ಇರಲಿಲ್ಲ.

ಸುಧೀಂದ್ರ ಬುಧ್ಯ
ಸುಧೀಂದ್ರ ಬುಧ್ಯ

ಇನ್ನು, ರೋಗಕಾರಕಗಳ ಕ್ರಿಯಾವೃದ್ಧಿ ಅಧ್ಯಯನದ ಕುರಿತು ಮೊದಲಿನಿಂದಲೂ ಪರ, ವಿರೋಧದ ವಾದ ಇದೆ. ಇಂತಹ ಅಧ್ಯಯನದಲ್ಲಿ ರೋಗಕಾರಕಗಳನ್ನು ಹೆಚ್ಚು ಪ್ರಸರಣಗೊಳ್ಳುವಂತೆ, ವಿಷಪೂರಿತಗೊಳ್ಳುವಂತೆ ಮಾರ್ಪಾಡು ಮಾಡಿ, ಅವು ಹೇಗೆ ಪರಿವರ್ತನೆಗೊಳ್ಳುತ್ತವೆ (ಮ್ಯುಟೇಟ್) ಎಂದು ಅಭ್ಯಾಸ ಮಾಡಲಾಗುತ್ತದೆ. ಒಂದೊಮ್ಮೆ ಅತಿ ವೇಗವಾಗಿ ಪ್ರಸರಣಗೊಳ್ಳುವ ಸೋಂಕು ಮುಂದೆ ಸ್ವಾಭಾವಿಕವಾಗಿ ಕಾಣಿಸಿಕೊಂಡರೆ, ಅದಕ್ಕೆ ಪ್ರತಿಯಾಗಿ ಚುಚ್ಚುಮದ್ದು ತಯಾರಿಸಲು ನಾವು ಸನ್ನದ್ಧಗೊಂಡಿರುತ್ತೇವೆ ಎಂಬುದು ಇದನ್ನು ಬೆಂಬಲಿಸುವವರ ವಾದ. ಆದರೆ ಇದು ತೀರಾ ಅಪಾಯಕಾರಿ ಪ್ರಕ್ರಿಯೆ. ಕೊಂಚ ಎಚ್ಚರ ತಪ್ಪಿದರೂ ಮುಂದೆಂದೋ ಬರಬಹುದಾದ ಸೋಂಕನ್ನು ನಾವೇ ಆಹ್ವಾನಿಸಿಕೊಂಡಂತೆ ಎನ್ನುವುದು ವಿರೋಧಿಸುವವರ ಅಂಬೋಣ. ಹಾಗಾಗಿ ಒಂದು ಹಂತದಲ್ಲಿ ಅಮೆರಿಕ ಈ ಬಗೆಯ ಸಂಶೋಧನೆಯನ್ನು ಉತ್ತೇಜಿಸುವುದಿಲ್ಲ ಎಂದು ನಿರ್ಧರಿಸಿತ್ತು. ಆದರೆ 2015ರಲ್ಲಿ ವುಹಾನ್ ಪ್ರಯೋಗಾಲಯಕ್ಕೆ ಇಂತಹ ಅಧ್ಯಯನ ನಡೆಸಲು ಬರಾಕ್‌ ಒಬಾಮ ಆರ್ಥಿಕ ನೆರವು ಆರಂಭಿಸಿದ್ದರು ಮತ್ತು ಅದು 2019ರವರೆಗೆ ಮುಂದುವರಿದಿತ್ತು ಎಂದು ಫಾಕ್ಸ್ ಸುದ್ದಿವಾಹಿನಿ ವರದಿ ಮಾಡಿದೆ. ‌

ಈ ಎಲ್ಲಾ ಅಂಶಗಳು ‘ಲ್ಯಾಬ್ ಲೀಕ್’ ಥಿಯರಿಗೆ ಪುಷ್ಟಿ ನೀಡಿವೆ. ಇದೀಗ ಡಾ. ಫಾಸಿ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಡಾ. ಟೆಡ್ರೋಸ್ ‘ಕೊರೊನಾ ಮೂಲದ ಕುರಿತು ಹೆಚ್ಚಿನ ಅಧ್ಯಯನ ಮತ್ತು ತನಿಖೆಯ ಅಗತ್ಯ ಇದೆ’ ಎಂದು ಅಡ್ಡಗೋಡೆಯ ಮೇಲೆ ಮತ್ತೊಮ್ಮೆ ದೀಪ ಇಟ್ಟಿದ್ದಾರೆ.

ಆದರೆ, ಕೊರೊನಾ ಮೂಲ ಕುರಿತ ಪ್ರಶ್ನೆ ಸುಲಭಕ್ಕೆ ಬಗೆಹರಿಯುವಂತೆ ಕಾಣುತ್ತಿಲ್ಲ. ಜಾಗತಿಕ ಮಟ್ಟದ, ವಿವಿಧ ರಾಷ್ಟ್ರಗಳ ಸಹಭಾಗಿತ್ವದಲ್ಲಿ, ರಾಜಕೀಯ ಹಿತಾಸಕ್ತಿಯಾಚೆ ನಡೆಯುವ ಪಾರದರ್ಶಕ ತನಿಖೆ ಮಾತ್ರ ಕೊರೊನಾದ ಮೂಲವನ್ನು ಕಾಣಿಸಬಹುದು. ಮುಖ್ಯವಾಗಿ ಅಮೆರಿಕ ಮತ್ತು ಚೀನಾವನ್ನು ಹೊರತುಪಡಿಸಿದ ರಾಷ್ಟ್ರವೊಂದು ತನಿಖೆಯ ನೇತೃತ್ವ ವಹಿಸಿಕೊಳ್ಳಬೇಕು ಮತ್ತು ಈ ಎರಡು ದೇಶಗಳು ಅದಕ್ಕೆ ಪ್ರಾಮಾಣಿಕವಾಗಿ ಸಹಕರಿಸಬೇಕು. ಆದರೆ ಅದು ಅಷ್ಟು ಸುಲಭವಾಗಲಾರದು.

ಒಟ್ಟಿನಲ್ಲಿ, ಕೊರೊನಾ ಮೂಲದ ರಹಸ್ಯ ಭೇದಿಸುವ ಅವಶ್ಯಕತೆಯಂತೂ ಇದೆ. ಒಂದೊಮ್ಮೆ ಕೊರೊನಾ ಸೋಂಕು ಬಾವಲಿಗಳಿಂದ ನೇರವಾಗಿ ಅಥವಾ ಮಧ್ಯವರ್ತಿಯ ಮೂಲಕ ಮನುಷ್ಯನಿಗೆ ಬಂದಿದೆ ಎಂಬುದು ಖಚಿತವಾದರೆ, ಮುಂದೆ ಏನೆಲ್ಲಾ ಎಚ್ಚರಿಕೆ ವಹಿಸಬೇಕು ಎಂಬುದು ತಿಳಿಯುತ್ತದೆ. ಪ್ರಯೋಗಾಲಯದಲ್ಲಿ ಅವಘಡವಾಗಿ ಸೋರಿಕೆಯಾಗಿದೆ ಎಂಬುದು ತಿಳಿದರೆ, ಪುನರಾವರ್ತನೆಯಾಗದಂತೆ ನೋಡಿಕೊಳ್ಳಲು ಅನುವಾಗುತ್ತದೆ. ಮನುಷ್ಯನ ಸ್ವಾರ್ಥ, ಯಾವುದೋ ರಾಷ್ಟ್ರದ ಆರ್ಥಿಕ, ರಾಜಕೀಯ ಮಹತ್ವಾಕಾಂಕ್ಷೆ ಇಂತಹ ದುಷ್ಕೃತ್ಯಕ್ಕೆ ಕಾರಣವಾಗಿದ್ದರೆ, ಮನುಷ್ಯನ ನೈತಿಕ ಅಧಃಪತನದ ದರ್ಶನ ಆಗುವುದರ ಜೊತೆಗೆ ನಮ್ಮ ನಾಳೆಗಳು ಹೇಗಿರಬಹುದು ಎಂಬ ಕಲ್ಪನೆ ದೊರೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT