ಭಾನುವಾರ, ಜೂನ್ 20, 2021
28 °C
ತಾಲಿಬಾನ್ ಪಡೆಯನ್ನು ಎದುರಿಸಲು ಅಮೆರಿಕಕ್ಕೆ ಸಾಧ್ಯವಾಗಲಿಲ್ಲವೇ ಎಂಬ ಪ್ರಶ್ನೆ ಈಗ ಚರ್ಚೆಯಲ್ಲಿದೆ

ಸೀಮೋಲ್ಲಂಘನ – ಅಫ್ಗಾನಿಸ್ತಾನ: ಕೈಚೆಲ್ಲಿತೇ ಅಮೆರಿಕ?

ಸುಧೀಂದ್ರ ಬುಧ್ಯ Updated:

ಅಕ್ಷರ ಗಾತ್ರ : | |

ಅಮೆರಿಕದ ಅಂದಿನ ಅಧ್ಯಕ್ಷ ಜಾರ್ಜ್ ಡಬ್ಲ್ಯು. ಬುಷ್ ಅವರು 2001ರ ಅಕ್ಟೋಬರ್ 7ರಂದು ಶ್ವೇತಭವನದ ರೂಸ್‌ವೆಲ್ಟ್ ಕೊಠಡಿಯಲ್ಲಿ ಕೂತು, ‘ಅಫ್ಗಾನಿಸ್ತಾನದ ಅಲ್‌ಕೈದಾ ಉಗ್ರರ ತರಬೇತಿ ಕೇಂದ್ರಗಳ ಮೇಲೆ ಅಮೆರಿಕದ ಸೇನೆಯು ದಾಳಿ ಆರಂಭಿಸಿದೆ. ತಾಲಿಬಾನ್ ಪಡೆಯ ಸಾಮರಿಕ ಸಾಮರ್ಥ್ಯವನ್ನು ಕುಗ್ಗಿಸುವುದು, ಅಮೆರಿಕದ ಮೇಲಿನ ದಾಳಿಗೆ ಪ್ರತೀಕಾರ ತೆಗೆದುಕೊಳ್ಳುವುದು ನಮ್ಮ ಉದ್ದೇಶ’ ಎಂದಿದ್ದರು. 2021ರ ಏಪ್ರಿಲ್ 14ರಂದು ಅದೇ ಕೊಠಡಿಯಿಂದ ಮಾತನಾಡಿದ ಇಂದಿನ ಅಧ್ಯಕ್ಷ ಜೋ ಬೈಡನ್, ‘ನರಕದ ಬಾಗಿಲಿನವರೆಗೂ ಲಾಡೆನ್‌ನ ಬೆನ್ನುಹತ್ತದೇ ಬಿಡುವುದಿಲ್ಲ ಎಂದು ನಾವು ಅಂದು ಹೇಳಿದ್ದೆವು. ಅದನ್ನೇ ಮಾಡಿದೆವು. ಲಾಡೆನ್ ಹತ್ಯೆ ನಡೆದು ಇದೀಗ ಹತ್ತು ವರ್ಷ ಕಳೆದಿದೆ. ಅಫ್ಗಾನಿಸ್ತಾನದಲ್ಲಿ ಉಳಿಯಲು ನಮಗೆ ಸ್ಪಷ್ಟ ಕಾರಣಗಳು ಉಳಿದಿಲ್ಲ. ಆ ಯುದ್ಧಕ್ಕೆ ಅಂತ್ಯ ಹಾಡುತ್ತಿದ್ದೇವೆ’ ಎಂದು ಘೋಷಿಸಿದ್ದಾರೆ.

2001ರ ಸೆಪ್ಟೆಂಬರ್ 11ರಂದು ಅಮೆರಿಕದ ಮೇಲೆ ಉಗ್ರರ ದಾಳಿ ನಡೆದ ಬಳಿಕ ಅಮೆರಿಕವು ಭಯೋತ್ಪಾದನೆಯ ವಿರುದ್ಧ ಯುದ್ಧ ಘೋಷಿಸಿ ಅಫ್ಗಾನಿಸ್ತಾನಕ್ಕೆ ತನ್ನ ಸೇನೆಯನ್ನು ನುಗ್ಗಿಸಿತ್ತು. ನ್ಯಾಟೊ ಸದಸ್ಯ ರಾಷ್ಟ್ರಗಳು ಜೊತೆಗೂಡಿದ್ದವು. ಆ ಯುದ್ಧ ಘೋಷಣೆಯಾದ ಬಳಿಕ ಶ್ವೇತಭವನ ನಾಲ್ವರು ಅಧ್ಯಕ್ಷರನ್ನು ಕಂಡಿತು. ಈ ಹಿಂದಿನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ‘ಅಮೆರಿಕ ಮೊದಲು’ ಧ್ಯೇಯಕ್ಕೆ ಪ್ರಾಶಸ್ತ್ಯ ನೀಡಿ, ಅಫ್ಗಾನಿಸ್ತಾನದಿಂದ ಸೇನೆಯನ್ನು ವಾಪಸ್‌ ಕರೆಸಿಕೊಳ್ಳುವ ಪ್ರಕ್ರಿಯೆಗೆ ಸಿದ್ಧತೆ ಆರಂಭಿಸಿದರು. ಟ್ರಂಪ್ ನಡೆಯನ್ನು ಮೊದಲು ಬೈಡನ್ ಟೀಕಿಸಿದ್ದರಾದರೂ ಇದೀಗ ಅಫ್ಗಾನಿಸ್ತಾನದಿಂದ ಹೊರಬರುವ ಅಧಿಕೃತ ಘೋಷಣೆ ಮಾಡಿದ್ದಾರೆ. 9/11 ಘಟನೆಗೆ ಈ ವರ್ಷ 20 ತುಂಬುವುದರಿಂದ ಆ ಹೊತ್ತಿಗೆ ಅಮೆರಿಕದ ಸೇನೆ ಅಫ್ಗಾನಿಸ್ತಾನದಿಂದ ಹೊರಬೀಳಲಿದೆ ಎಂದಿದ್ದಾರೆ.

ಅಫ್ಗಾನಿಸ್ತಾನದ ವಿಷಯ ನೋಡುವುದಾದರೆ, ಅರಾಜಕತೆ, ಅಸ್ಥಿರತೆ ಆ ದೇಶಕ್ಕೆ ಹೊಸ ವಿದ್ಯಮಾನವಲ್ಲ. ಐದು ದಶಕಗಳ ಹಿಂದೆ ಅಂದಿನ ಸೋವಿಯತ್ ಒಕ್ಕೂಟವನ್ನು ಮಣಿಸಲು ಅಮೆರಿಕ, ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ಡಾಲರ್ ಗಂಟಿನ ಜೊತೆ ಶಸ್ತ್ರಗಳ ಮೂಟೆ ಹೊತ್ತು ಅಫ್ಗಾನಿಸ್ತಾನಕ್ಕೆ ಕಾಲಿಟ್ಟಿದ್ದವು. ಸೋವಿಯತ್ ಪಡೆಯ ವಿರುದ್ಧ ಹೋರಾಡಲು ಯುವಕರ ಕೈಗೆ ಬಂದೂಕನ್ನು ಕೊಟ್ಟು ಗೆರಿಲ್ಲಾ ಪಡೆಯನ್ನು ಅಮೆರಿಕ ಹುಟ್ಟುಹಾಕಿತು. ಸೋವಿಯತ್ ಅಲ್ಲಿಂದ ಕಾಲ್ತೆಗೆದ ಮೇಲೆ ಮತೀಯವಾದಿಗಳು ಆಡಳಿತದ ಚುಕ್ಕಾಣಿ ಹಿಡಿದರು. ಅಮೆರಿಕದಿಂದ ಶಸ್ತ್ರಾಸ್ತ್ರ ಪಡೆದು ತರಬೇತಿ ಪಡೆದವರು ಅಮೆರಿಕದ ವಿರುದ್ಧವೇ ತಿರುಗಿಬಿದ್ದರು.

9/11 ಘಟನೆ ನಡೆಯುವವರೆಗೆ, ಅಫ್ಗಾನಿಸ್ತಾನವನ್ನು ಅಮೆರಿಕ ದೂರದಿಂದ ನೋಡುತ್ತಿತ್ತು. ಆದರೆ ಲಾಡೆನ್ ಪಡೆ ತನ್ನ ಮೇಲೆರಗಿದಾಗ ನೇರ ಯುದ್ಧಕ್ಕೆ ಇಳಿಯಿತು. ಕೆಲವು ವಾರಗಳಲ್ಲೇ ತಾಲಿಬಾನ್ ಆಡಳಿತವು ಶರಣಾಗುವಂತೆ ಮಾಡುವಲ್ಲಿ ಅಮೆರಿಕ ಯಶಸ್ವಿಯಾಯಿತು. ಅಲ್‌ಕೈದಾ ಭೂಗತಗೊಂಡಿತು. ತನ್ನ ಕೇಂದ್ರವನ್ನು ಪಾಕಿಸ್ತಾನಕ್ಕೆ ಬದಲಿಸಿಕೊಂಡಿತು. ಲಾಡೆನ್‌ಗಾಗಿ ಹುಡುಕಾಟ 10 ವರ್ಷಗಳವರೆಗೆ ನಡೆಯಿತು. ಕೊನೆಗೂ ಪಾಕಿಸ್ತಾನದಲ್ಲಿ ಆತ ಇದ್ದಾನೆ ಎಂಬ ಸುಳಿವನ್ನು ಪಡೆದು ಹತ್ಯೆ ಮಾಡಿತು. ಆದರೆ ನಂತರ ದಂಗೆಗಳು ಆರಂಭವಾದವು. ತಾಲಿಬಾನ್ ದಂಗೆಕೋರರನ್ನು ಮಟ್ಟಹಾಕಿ ಸ್ಥಿರ ರಾಜಕೀಯ ವ್ಯವಸ್ಥೆಯನ್ನು ಅಫ್ಗಾನಿಸ್ತಾನದಲ್ಲಿ ಹುಟ್ಟುಹಾಕುವುದು ನಮ್ಮ ಗುರಿ ಎಂದು ಅಮೆರಿಕ ಹೇಳಿತು. ಆಫ್ಗನ್ ಸರ್ಕಾರಕ್ಕೆ ಆರ್ಥಿಕ ಶಕ್ತಿ ತುಂಬಿ, ಸೈನಿಕರನ್ನು ನೀಡಿ ತಾಲಿಬಾನ್ ದಂಗೆಕೋರರ ವಿರುದ್ಧ ಕಾರ್ಯಾಚರಣೆಗೆ ಪ್ರಚೋದಿಸಿತು. ಆದರೆ ಅಮೆರಿಕದಿಂದ ಹೆಚ್ಚಿನ ಹಣ ಬರುತ್ತಿದ್ದಂತೆ ಆಫ್ಗನ್ ಆಡಳಿತದಲ್ಲಿ ಭ್ರಷ್ಟಾಚಾರ ಹೆಚ್ಚಿತು. ತಳವಿಲ್ಲದ ಪಾತ್ರೆಗೆ ಮೊಗೆಮೊಗೆದು ಅಮೆರಿಕ ಹಣವನ್ನು ಸುರಿಯುತ್ತಾ ನಿಡುಸುಯ್ದಿತು. ಉಗ್ರ ಸಂಘಟನೆಗಳು ಪಾಕಿಸ್ತಾನದ ಐಎಸ್ಐ ತಾಳಕ್ಕೆ ಹೆಜ್ಜೆ ಹಾಕಿದವು.

ಅಫ್ಗಾನಿಸ್ತಾನದಲ್ಲಿ ಅಮೆರಿಕ ಸೇನೆಯ ನೇತೃತ್ವ ವಹಿಸಿದ್ದ ಜನರಲ್ ಜಾನ್ ನಿಕೋಲ್ಸನ್, ‘ಭಯೋತ್ಪಾದನೆಯ ವಿರುದ್ಧದ ಸಮರ ಇಷ್ಟು ವರ್ಷಗಳ ಮೇಲೂ ತಾರ್ಕಿಕ ಅಂತ್ಯ ಕಾಣದಿರುವುದಕ್ಕೆ ಪಾಕಿಸ್ತಾನದ ಕಪಟ ನೀತಿಯೇ ಕಾರಣ’ ಎಂದು ನೇರವಾಗಿಯೇ ಹೇಳಿದ್ದರು. ಟ್ರಂಪ್ ಶ್ವೇತಭವನ ಪ್ರವೇಶಿಸಿದ ನಂತರ, ಇನ್ನು ಅಫ್ಗಾನಿಸ್ತಾನದಲ್ಲಿರಲು ಯಾವುದೇ ಕಾರಣಗಳಿಲ್ಲ ಎಂದು ಘೋಷಿಸಿ, ಅಲ್ಲಿಂದ ಹೊರಬರುವ ಮಾರ್ಗ ಹುಡುಕಿದರು. 2018ರಲ್ಲಿ ತಾಲಿಬಾನ್ ಜೊತೆಗಿನ ಮಾತುಕತೆಗೆ ಚಾಲನೆ ಕೊಟ್ಟರು. 2020ರ ಫೆಬ್ರುವರಿಯಲ್ಲಿ ಅಮೆರಿಕವು ತಾಲಿಬಾನ್ ಜೊತೆ ಒಪ್ಪಂದ ಮಾಡಿಕೊಂಡಿತು. ‘ಅಮೆರಿಕವನ್ನು ಗುರಿಯಾಗಿಸಿಕೊಂಡ ಯಾವುದೇ ಬಗೆಯ ಭಯೋತ್ಪಾದಕ ಚಟುವಟಿಕೆಗೆ ತಾಲಿಬಾನ್ ಬೆಂಬಲ ನೀಡದಿದ್ದರೆ ಅಮೆರಿಕವು ಅಫ್ಗಾನಿಸ್ತಾನವನ್ನು 2021ರ ಮೇ 1ರ ವೇಳೆಗೆ ಸಂಪೂರ್ಣವಾಗಿ ತೊರೆಯಲಿದೆ’ ಎಂಬುದು ಆ ಒಪ್ಪಂದದ ಸಾರಾಂಶ. ಕೊನೆಗೂ ಅಮೆರಿಕ ಯಾರೊಂದಿಗೆ ಕದನಕ್ಕೆ ಇಳಿದಿತ್ತೋ ಅವರೊಂದಿಗೆ ಕೈಕುಲುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಜಗತ್ತಿನ ಅತ್ಯಂತ ಬಲಿಷ್ಠ ಸೇನೆ, ಅತ್ಯುನ್ನತ ಯುದ್ಧೋಪಕರಣಗಳು ಮತ್ತು ಗುಪ್ತಚರ ಜಾಲವನ್ನು ಹೊಂದಿರುವ ಅಮೆರಿಕಕ್ಕೆ, ತನಗೆ ಸಮಾನವಲ್ಲದ ತಾಲಿಬಾನ್ ಪಡೆಯನ್ನು ಎದುರಿಸಲು ಸಾಧ್ಯವಾಗಲಿಲ್ಲವೇ ಎಂಬ ಪ್ರಶ್ನೆ ಇದೀಗ ಚರ್ಚೆಯಲ್ಲಿದೆ. ಗೆರಿಲ್ಲಾ ಪಡೆಗಳ ವಿರುದ್ಧದ ಯುದ್ಧ, ರೂಢಿಗತ ಯುದ್ಧದಷ್ಟು ನೇರವಾಗಿ ಇರುವುದಿಲ್ಲ ಮತ್ತು ಸೋಲು ಗೆಲುವುಗಳ ಲೆಕ್ಕಾಚಾರ ಸುಲಭವೂ ಅಲ್ಲ. ಸ್ಥಳೀಯರ ಮನಗೆಲ್ಲದೇ ತಾಲಿಬಾನ್‌ನಂತಹ ಸಂಘಟನೆಯನ್ನು ಎದುರಿಸಲು ಸಾಧ್ಯವಿಲ್ಲ. ಅಲ್ಲಿನ ಜನ ತಾಲಿಬಾನ್ ಧೋರಣೆ, ಕಾರ್ಯವೈಖರಿಯ ಬಗ್ಗೆ ಅಸಮಾಧಾನ ಹೊಂದಿದ್ದರೂ ಅಮೆರಿಕ ಮತ್ತು ಮಿತ್ರಪಡೆಗಳನ್ನು ‘ಹೊರಗಿನವರು’ ಎಂದೇ ನೋಡಿದರು ಮತ್ತು ತಾಲಿಬಾನಿಗೆ ಬೆಂಬಲವಾಗಿ ನಿಂತರು. ಇದು ಅಮೆರಿಕಕ್ಕೆ ಮನವರಿಕೆಯಾಗಲು ಬಹಳ ಸಮಯ ಹಿಡಿಯಿತು. ಜೊತೆಗೆ ತಾಲಿಬಾನಿಗೆ ಪಾಕಿಸ್ತಾನ ಬೆಂಬಲವಾಗಿ ನಿಂತಿದ್ದು, ಅಡಗುತಾಣ ಕಲ್ಪಿಸಿಕೊಟ್ಟಿದ್ದು ಮತ್ತು ಐಎಸ್ಐ ಮೂಲಕ ತಾಲಿಬಾನ್ ಅಗತ್ಯಗಳನ್ನು ಪೂರೈಸಿದ್ದು ಅಮೆರಿಕದ ಮೀಸೆ ಮಣ್ಣಾಗಲು ಕಾರಣವಾಯಿತು.

ಹಾಗಾದರೆ ಅಮೆರಿಕ ಮತ್ತು ಮಿತ್ರಪಡೆಗಳು ಅಫ್ಗಾನಿಸ್ತಾನದಿಂದ ಹೊರಬಂದ ಮೇಲೆ ಏನಾಗಬಹುದು? ಆ ಆತಂಕ ಅಲ್ಲಿನ ಸ್ಥಳೀಯರನ್ನು ಮತ್ತು ಭಾರತ ಸೇರಿದಂತೆ ನೆರೆಯ ರಾಷ್ಟ್ರಗಳನ್ನು ಕಾಡುತ್ತಿದೆ. ಆರೋಗ್ಯ, ಶಿಕ್ಷಣ ಮತ್ತು ಮಹಿಳಾ ಹಕ್ಕುಗಳ ವಿಷಯದಲ್ಲಿ ಅಫ್ಗಾನಿಸ್ತಾನ ಕಳೆದ ಹತ್ತು ವರ್ಷಗಳಲ್ಲಿ ಬಹಳಷ್ಟು ಮುಂದಡಿ ಇಟ್ಟಿದೆ. ಮತೀಯವಾದಿಗಳು ಮತ್ತೊಮ್ಮೆ ಆಡಳಿತದ ಚುಕ್ಕಾಣಿ ಹಿಡಿದರೆ ಅಫ್ಗಾನಿಸ್ತಾನ ಪುನಃ ಹಿಂದಿನ ಸ್ಥಿತಿಗೆ ಮರಳಬಹುದು. ರಾಜಕೀಯ ಅಸ್ಥಿರತೆ, ದಂಗೆಗಳಿಗೆ ದಾರಿ ಮಾಡಿಕೊಡಬಹುದು.

ಭಾರತದ ಆತಂಕ ಆ ದಿಸೆಯಲ್ಲಿಯೇ ಇದೆ. ಭಾರತದ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ‘ಅಮೆರಿಕದ ಸೇನಾಪಡೆಗಳ ನಿರ್ಗಮನದ ಬಳಿಕ ಉಂಟಾಗುವ ನಿರ್ವಾತವು ಅರಾಜಕತೆ ಸೃಷ್ಟಿಸುವ ಇತರ ಶಕ್ತಿಗಳಿಗೆ ಜಾಗ ಮಾಡಿಕೊಡಬಹುದು’ ಎಂದು ಪ್ರತಿಕ್ರಿಯಿಸಿದ್ದಾರೆ. ‘ಭಾರತವನ್ನು ಎದುರಿಸುವ ಸಲುವಾಗಿಯೇ ತಾಲಿಬಾನನ್ನು ಐಎಸ್ಐ ಪೋಷಿಸುತ್ತಿದೆ’ ಎಂದು ಈ ಹಿಂದೆ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಹೇಳಿದ್ದರು. ಪಾಕಿಸ್ತಾನದ ಜೊತೆ ಚೀನಾ ಕೂಡ ಅಫ್ಗಾನಿಸ್ತಾನದಲ್ಲಿ ತನ್ನ ಪ್ರಭಾವ ಹೆಚ್ಚಿಸಿಕೊಳ್ಳಲು ಪ್ರಯತ್ನಿಸಿದರೆ ಅಚ್ಚರಿಯಿಲ್ಲ. ಹಾಗಾಗಿ ಭಾರತ ಎಚ್ಚರಿಕೆಯಿಂದ ಇರಬೇಕು.

ಒಟ್ಟಿನಲ್ಲಿ, ‘ಅಫ್ಗಾನಿಸ್ತಾನವನ್ನೂ ಮೀರಿ ಬೆಳೆದಿರುವ ಭಯೋತ್ಪಾದಕ ಜಾಲದ ಬಗ್ಗೆ ನಾವು ಗಮನ ಹರಿಸಬೇಕಿದೆ. ಅಫ್ಗಾನಿಸ್ತಾನಕ್ಕೆ ನಾವು ಬಂದ ಉದ್ದೇಶ ಈಡೇರಿದೆ. ಹಾಗಾಗಿ ಹಿಂದಿರುಗುತ್ತೇವೆ’ ಎಂದು ಜಗತ್ತಿಗೆ ಅಮೆರಿಕ ಸಬೂಬು ಹೇಳಿದರೂ ವಿಯೆಟ್ನಾಂ ಯುದ್ಧವು ಅಮೆರಿಕಕ್ಕೆ ಬಿದ್ದ ಮೊದಲ ಬರೆಯಾದರೆ, ಅಫ್ಗಾನಿಸ್ತಾನದ ಕದನ ಆ ಸಾಲಿನಲ್ಲಿ ಎರಡನೆಯದು ಮತ್ತು ದೀರ್ಘ ಅವಧಿಯದ್ದು ಎಂಬುದು ಜಾಹೀರಾಗಿದೆ.

ಸುಧೀಂದ್ರ ಬುಧ್ಯ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು