ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀಮೋಲ್ಲಂಘನ | ವಿದೇಶಾಂಗ ನೀತಿ: ಆದರ್ಶ, ವಾಸ್ತವ

ಪ್ರಜಾಪ್ರಭುತ್ವದ ಮೌಲ್ಯ ಎತ್ತಿಹಿಡಿದಿದ್ದ ನೆಹರೂ, ವಿದೇಶಾಂಗ ನೀತಿಯಲ್ಲಿ ಎಡವಿದ್ದರು
Last Updated 1 ಆಗಸ್ಟ್ 2022, 20:45 IST
ಅಕ್ಷರ ಗಾತ್ರ

ಇದು, ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷ. 1947ರ ಆಗಸ್ಟ್ 15ರಂದು ಬ್ರಿಟಿಷರ ಆಳ್ವಿಕೆ ಕೊನೆ ಗೊಂಡು ನಮ್ಮ ನಾಯಕರು ದೇಶದ ಚುಕ್ಕಾಣಿ ಹಿಡಿದಾಗ ಜನ ಸಂಭ್ರಮಿಸಿದ್ದರು. ಆ ಸಂಭ್ರಮದ ಜೊತೆಗೇ ನಾಳೆಯ ಕುರಿತು ಕನಸುಗಳು ಚಿಗುರಿದ್ದವು. ‘ಭಾರತಕ್ಕೆ ಸ್ವಾತಂತ್ರ್ಯ ನೀಡಿದರೆ ಅದು ಒಂದು ದೇಶವಾಗಿ ಉಳಿಯಲಾರದು. ಭಾರತೀಯರು ಆಳ್ವಿಕೆ ನಡೆಸಲು ಅಸಮರ್ಥರು’ ಎಂಬರ್ಥದ ಮಾತನ್ನು ಚರ್ಚಿಲ್ ಆದಿಯಾಗಿ ಅನೇಕರು ಹೇಳಿದ್ದರು.

ಆ ಮಾತು ನಿಜವಾಗಿಬಿಡಬಹುದೇ ಎಂಬ ವಾತಾವರಣ ಅಲ್ಲಲ್ಲಿ ಕಾಣುತ್ತಿತ್ತು. ದೇಶದ ವಿವಿಧ ಭಾಗಗಳಲ್ಲಿ ಕೋಮುದಂಗೆಗಳು ನಡೆದಿದ್ದವು. ಹಲವು ಪ್ರಾಂತ್ಯಗಳನ್ನು ಒಂದು ದೇಶವಾಗಿ ಒಗ್ಗೂಡಿಸುವ ಕೆಲಸ ಸರಳವಾಗಿರಲಿಲ್ಲ. ಎಲ್ಲರಿಗೂ ಅನ್ವಯವಾಗುವ, ಎಲ್ಲರನ್ನೂ ಸಮಭಾವದಿಂದ ಕಾಣುವ, ಎಲ್ಲರೂ ಒಪ್ಪಿಕೊಳ್ಳಬಹುದಾದ ಕಾನೂನು ರೂಪಿಸುವುದು ಸುಲಭವಾಗಿರಲಿಲ್ಲ. ಬ್ರಿಟಿಷರು ಭಾರತದ ಸಂಪತ್ತ
ನ್ನಷ್ಟೇ ಲೂಟಿ ಹೊಡೆದಿರಲಿಲ್ಲ. ಭಾರತದ ಗುಡಿ ಕೈಗಾರಿಕೆ
ಗಳನ್ನು ನಾಶ ಮಾಡಿದ್ದರು. ಉತ್ಪಾದನಾ ಸಾಮರ್ಥ್ಯವನ್ನು ಕುಗ್ಗಿಸಿದ್ದರು. ಇದೆಲ್ಲವನ್ನೂ ದಾಟಿ ಹೊಸ ನಾಡೊಂದನ್ನು ಕಟ್ಟುವುದು, ಅಭ್ಯುದಯದ ಕಡೆ ಹೆಜ್ಜೆ ಹಾಕುವುದು ನಮ್ಮ ಗುರಿಯಾಯಿತು. ಜಗತ್ತಿನ ಇತರ ದೇಶಗಳೊಂದಿಗೆ ವ್ಯವಹರಿಸಲು ಭಾರತಕ್ಕೊಂದು ಸ್ಪಷ್ಟ ವಿದೇಶಾಂಗ ನೀತಿಯ ಅವಶ್ಯಕತೆ ಇತ್ತು.

ವಿದೇಶಾಂಗ ನೀತಿ ರೂಪಿಸಲು ಮತ್ತು ವಿದೇಶಾಂಗ ವ್ಯವಹಾರಗಳನ್ನು ನಿರ್ವಹಿಸಲು ತಾವೇ ಸಮರ್ಥ ವ್ಯಕ್ತಿ ಎಂಬ ಅಭಿಪ್ರಾಯವನ್ನು ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್‌ ನೆಹರೂ ಹೊಂದಿದ್ದರು. ಆ ಕಾರಣದಿಂದಲೇ ತಾವು ಪ್ರಧಾನಿಯಾಗಿದ್ದ 16 ವರ್ಷಗಳ ಅವಧಿಯಲ್ಲಿ ವಿದೇಶಾಂಗ ಖಾತೆಯನ್ನು ಮತ್ತೊಬ್ಬರಿಗೆ ನೀಡಲಿಲ್ಲ. 1947ರಿಂದ 1950ರವರೆಗೆ ವಿದೇಶಾಂಗ ಇಲಾಖೆಯ ನೇಮಕಾತಿ ಕೇವಲ ಶಿಫಾರಸಿನ ಆಧಾರದ ಮೇಲೆ ನಡೆಯುತ್ತಿತ್ತು. ಸ್ವತಃ ಪ್ರಧಾನಿ ನೆಹರೂ ಅಭ್ಯರ್ಥಿಗಳ ಸಂದರ್ಶನ ನಡೆಸುತ್ತಿದ್ದರು. ನೆಹರೂ ಅವರ ಸೈದ್ಧಾಂತಿಕ ನಿಲುವು, ಲೋಕದೃಷ್ಟಿ, ಮಹತ್ವಾಕಾಂಕ್ಷೆಗಳ ಛಾಯೆಯಲ್ಲಿ ಭಾರತದ ವಿದೇಶಾಂಗ ನೀತಿ ರೂಪುಗೊಂಡಿತು. ಅದೇ ಅದರ ಮಿತಿಯೂ ಆಗಿತ್ತು.

ಯಾವುದೇ ದೇಶದ ವಿದೇಶಾಂಗ ನೀತಿಯನ್ನು ಹಲವು ಸಂಗತಿಗಳು ಪ್ರಭಾವಿಸುತ್ತವೆ. ದೇಶದ ಇತಿಹಾಸ, ಆಳುವವರ ಮಾನಸಿಕತೆ, ಭೌಗೋಳಿಕತೆ, ಸೇನಾ ಸಾಮರ್ಥ್ಯ, ಮಾನವ ಸಂಪನ್ಮೂಲದ ಗಾತ್ರ ಮತ್ತು ಆರ್ಥಿಕ ಸ್ಥಿತಿಗತಿ ಆ ಪೈಕಿ ಮುಖ್ಯವಾದವು. ವಸಾಹತುಶಾಹಿ ವ್ಯವಸ್ಥೆಯ ವಿರುದ್ಧ ಹೋರಾಡಿ ದಾಸ್ಯದ ಸಂಕೋಲೆಯನ್ನು ಬಿಡಿಸಿಕೊಂಡಿದ್ದ ನಮಗೆ ಇನ್ನೊಂದು ರೂಪದ ದಾಸ್ಯಕ್ಕೆ ಒಳಗಾಗುವುದು ಬೇಕಿರಲಿಲ್ಲ. ಹಾಗಾಗಿ ನಮ್ಮದೇ ಸ್ಥಿತಿಯಲ್ಲಿದ್ದ, ವಸಾಹತು ವ್ಯವಸ್ಥೆಯಿಂದ ಬಿಡಿಸಿಕೊಂಡು ಎದ್ದುನಿಲ್ಲುತ್ತಿದ್ದ
ರಾಷ್ಟ್ರಗಳನ್ನು ಒಗ್ಗೂಡಿಸುವ, ತನ್ಮೂಲಕ ನವ ವಸಾಹತು ಶಾಹಿ ವ್ಯವಸ್ಥೆಯ ವಿರುದ್ಧ ಸಂಘಟಿತವಾಗುವ ಪ್ರಯತ್ನಕ್ಕೆ ನೆಹರೂ ಚಾಲನೆ ಕೊಟ್ಟರು.

ಆದರೆ ವಿದೇಶಾಂಗ ನೀತಿಯು ಭಾರತದ ಹಿತಾಸಕ್ತಿ ಯನ್ನು ಪೂರ್ಣವಾಗಿ ಒಳಗೊಳ್ಳಲಿಲ್ಲ. ಭಾರತದ ಆರ್ಥಿಕತೆ ಸದೃಢವಾಗಿರಲಿಲ್ಲ. ಆಧುನಿಕ ಯುದ್ಧೋಪ ಕರಣಗಳ ಕೊರತೆ ಇತ್ತು. ತಾಂತ್ರಿಕ ಪರಿಣತಿಯನ್ನು ನಾವು ಸಾಧಿಸಿರಲಿಲ್ಲ. ಉದ್ಯೋಗ ಅವಕಾಶ ಕಲ್ಪಿಸಲು ಬಂಡವಾಳ ಆಕರ್ಷಿಸುವ ಅಗತ್ಯವಿತ್ತು. ಆಹಾರದ ಅಭಾವ ಕಾಡುತ್ತಿತ್ತು. ದೇಶದ ಮೂಲಸೌಕರ್ಯ ಯೋಜನೆಗಳಿಗೆ ಹಣ ಬೇಕಿತ್ತು. ಈ ಸವಾಲುಗಳನ್ನು ದಾಟುವುದು ನಮ್ಮ ಆದ್ಯತೆಯಾಗಬೇಕಿತ್ತು. ಆದರೆ ಆದರ್ಶವಾದ, ಅನುಮಾನ ಮತ್ತು ಅಸ್ಪಷ್ಟತೆಗಳೇ ನಮ್ಮ ವಿದೇಶಾಂಗ ನೀತಿಯ ಅಡಿಗಲ್ಲಾದವು.

ಎರಡನೇ ಮಹಾಯುದ್ಧದ ಭೀಕರತೆಯನ್ನು ಕಂಡಿದ್ದ, ಜಗತ್ತಿಗೆ ಅಹಿಂಸಾತ್ಮಕ ಹೋರಾಟವನ್ನು ಪರಿಚಯಿಸಿದ್ದ ಭಾರತ, ಯಾವುದೇ ಮಿಲಿಟರಿ ಬಣದ ಜೊತೆ ಗುರುತಿಸಿಕೊಳ್ಳುವುದಿಲ್ಲ ಎಂಬ ನಿಲುವು ತಳೆದಿದ್ದು ನೈತಿಕವಾಗಿ ಸರಿಯಿತ್ತು. ರಾಜಕೀಯವಾಗಿ ಯಾವುದೇ ಬಣದ ಜೊತೆ ಗುರುತಿಸಿಕೊಳ್ಳದಿದ್ದರೂ ಆರ್ಥಿಕ ಮತ್ತು ವಾಣಿಜ್ಯಿಕ ಹಿತಾಸಕ್ತಿಗಳಿಗೆ ಪೂರಕವಾಗಿ ಅಮೆರಿಕದೊಂದಿಗೆ ಸಂಬಂಧ ಗಟ್ಟಿಮಾಡಿಕೊಳ್ಳುವ ಅವಶ್ಯಕತೆ ಭಾರತಕ್ಕೆ ಇತ್ತು.

ಆದರೆ ಮಾತುಕತೆಗೆ ಅಮೆರಿಕ ಆಸಕ್ತಿ ತೋರಿದಾಗ, ನೆಹರೂ ನಿರುತ್ಸಾಹ ತೋರಿದರು. ಬೆಳೆ ವೈಫಲ್ಯವಾದರೆ ಬಳಸಲು ಹತ್ತು ಲಕ್ಷ ಟನ್ ಆಹಾರ ಧಾನ್ಯಗಳನ್ನು ಸಂಗ್ರಹಿಸುವ ಗುರಿಯನ್ನು 1949ರಲ್ಲಿ ಭಾರತ ಹೊಂದಿತ್ತು. ಅದೇ ವರ್ಷ ಅಮೆರಿಕ ಅಧ್ಯಕ್ಷ ಟ್ರೂಮನ್ ಅವರನ್ನು ನೆಹರೂ ಭೇಟಿಯಾಗಿದ್ದರು. ಟ್ರೂಮನ್ ಅವರೊಂದಿಗೆ ಚರ್ಚಿಸಬೇಕಾದ ವಿಷಯಗಳನ್ನು ಪಟ್ಟಿ ಮಾಡಿ ಪ್ರಧಾನಿ ನೆಹರೂ ಅವರ ಗಮನಕ್ಕೆ ಸರ್ ಗಿರಿಜಾಶಂಕರ್ ಬಾಜಪೇಯಿ ತಂದಿದ್ದರು. ಆಹಾರಧಾನ್ಯ ಕುರಿತ ಪ್ರಸ್ತಾಪವಿದ್ದ ಟಿಪ್ಪಣಿ ನೋಡಿ ನೆಹರೂ ಸಿಟ್ಟಾಗಿದ್ದರು. ‘ನೀವು ನನಗೆ ಏನು ಮಾಡಬೇಕೆಂದು ಸಲಹೆ ನೀಡುತ್ತಿದ್ದೀರಿ? ಕೈಗಳಲ್ಲಿ ಭಿಕ್ಷಾಪಾತ್ರೆ ಹಿಡಿದು ಟ್ರೂಮನ್ ಅವರನ್ನು ಕಾಣಬೇಕೆ’ ಎಂದು ರೇಗಿದ್ದರು. ಟ್ರೂಮನ್ ಭೇಟಿಯ ವೇಳೆ ವಿಯೆಟ್ನಾಂ ಮತ್ತು ಕೊರಿಯಾ ವಿಷಯದಲ್ಲಿ ಅಮೆರಿಕದ ನೀತಿಯ ಕುರಿತು, ಫ್ರಾನ್ಸ್ ಮತ್ತು ನೆದರ್‌ಲೆಂಡ್ಸ್‌ನ ವಸಾಹತು ಮನಃಸ್ಥಿತಿ ಕುರಿತು ಚರ್ಚಿಸಿ ನೆಹರೂ ಭಾರತಕ್ಕೆ ಮರಳಿದ್ದರು!

1952ರಲ್ಲಿ ಅಮೆರಿಕದ ಉಪಾಧ್ಯಕ್ಷ ರಿಚರ್ಡ್ ನಿಕ್ಸನ್, 1954 ಮತ್ತು 1956ರಲ್ಲಿ ಅಮೆರಿಕದ ವಿದೇಶಾಂಗ ಮಂತ್ರಿ ಜಾನ್ ಫಾಸ್ಟರ್ ಡಾಲಸ್ ಭಾರತಕ್ಕೆ ಬಂದಿದ್ದರು. ಆಗ ಕೂಡ ಜಾಗತಿಕ ಸಂಗತಿಗಳ ಕುರಿತು ಮಾತನಾಡಲು ನೆಹರೂ ಹೆಚ್ಚಿನ ಸಮಯ ವ್ಯಯಿಸಿದ್ದರು. 1959ರಲ್ಲಿ ಮೊದಲ ಬಾರಿಗೆ ಅಮೆರಿಕದ ಅಧ್ಯಕ್ಷ ಐಸೆನ್ ಹೋವರ್ ಭಾರತಕ್ಕೆ ಬಂದರು. ಅದಾಗಲೇ ಗಡಿ ವಿಷಯವಾಗಿ ಭಾರತದೊಂದಿಗೆ ಚೀನಾ ತಂಟೆಗೆ ನಿಂತಿತ್ತು. ಸೇನೆಗೆ ಆಧುನಿಕ ಯುದ್ಧೋಪಕರಣ ಒದಗಿಸುವ ಕುರಿತು ಚರ್ಚಿಸುವ ಅಗತ್ಯವಿತ್ತು. ಆದರೆ ನೆಹರೂ ಅವರು ಮತ್ತೊಮ್ಮೆ ಆದರ್ಶದ ಬಳ್ಳಿ ಹಿಡಿದು ನಿಂತರು. ಜಾನ್ ಕೆನಡಿ ಅವರು ಅಧ್ಯಕ್ಷರಾದ ಬಳಿಕ ನೆಹರೂ ಅವರ ಕುರಿತು ಕೆನಡಿ ಒಳ್ಳೆಯ ಮಾತನ್ನಾಡಿದ್ದರು. ಆದರೆ ಅದನ್ನು ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ಬಳಸಿಕೊಳ್ಳುವಲ್ಲಿ ನೆಹರೂ ಸೋತರು. ವಯಸ್ಸಿನಲ್ಲಿ ಕಿರಿಯರಾಗಿದ್ದ ಕೆನಡಿ ಅವರೊಂದಿಗೆ ನೆಹರೂ ಅವರು ಉಪದೇಶ ಮಾಡುವ ಧಾಟಿಯಲ್ಲಿ ಮಾತನಾಡು
ತ್ತಿದ್ದರು. ‘ಬೇ ಆಫ್ ಪಿಗ್ಸ್’ ದಾಳಿಯ ಮೂಲಕ ಕ್ಯೂಬಾದ ಅಧ್ಯಕ್ಷ ಫಿಡೆಲ್ ಕ್ಯಾಸ್ಟ್ರೋ ಅವರನ್ನು ಪದಚ್ಯುತಿ
ಗೊಳಿಸಲು ಅಮೆರಿಕ ಯತ್ನಿಸುತ್ತಿದೆ ಎಂದು ಅಮೆರಿಕದ ಮೇಲೆ ನೆಹರೂ ಸಿಟ್ಟಾಗಿದ್ದರು!

1962ರಲ್ಲಿ ಭಾರತದ ಮೇಲೆಚೀನಾ ಆಕ್ರಮಣ ಮಾಡಿತು. ಯುದ್ಧೋಪಕರಣಗಳ ಅಭಾವದಿಂದ ಭಾರತದ ಸೇನೆಯ ಶಕ್ತಿ ಕುಂದಿತ್ತು. ಸೋವಿಯತ್ ತಟಸ್ಥ ನಿಲುವು ತಳೆಯಿತು. ಅಲಿಪ್ತ ರಾಷ್ಟ್ರಗಳು ಸನಿಹ ಬರಲಿಲ್ಲ. ಆಪತ್ಕಾಲದಲ್ಲಿ ಆದರ್ಶ ಸಹಾಯಕ್ಕೆ ಒದಗಲಿಲ್ಲ. 1962ರ ನವೆಂಬರ್ 19ರಂದು ಕೆನಡಿ ಅವರಿಗೆ ನೆಹರೂ ಎರಡು ಪತ್ರಗಳನ್ನು ಬರೆದರು. ಮೊದಲ ಪತ್ರದಲ್ಲಿ ಅಗತ್ಯ
ಶಸ್ತ್ರಾಸ್ತ್ರಗಳನ್ನು ರವಾನಿಸಿದ್ದಕ್ಕೆ ಧನ್ಯವಾದ ಅರ್ಪಿಸಿದ್ದ ಪ್ರಧಾನಿ ನೆಹರೂ, ಮತ್ತೊಂದು ಪತ್ರದಲ್ಲಿ ಚೀನಾದ ಪಡೆಗಳು ಕಾಶ್ಮೀರವನ್ನು ವಶಪಡಿಸಿಕೊಳ್ಳುವ ಆತಂಕ ನನ್ನನ್ನು ಕಾಡುತ್ತಿದೆ. ಚೀನಾದ ಸೇನೆಯನ್ನು ಹಿಮ್ಮೆಟ್ಟಿಸಲು ಅಮೆರಿಕದ ಸೂಪರ್ ಸಾನಿಕ್ ಯುದ್ಧವಿಮಾನಗಳ ಅಗತ್ಯವಿದೆ ಎಂದು ಸಹಾಯ ಕೇಳಿದ್ದರು. ಈ ಪತ್ರ ಬರೆದ ಎರಡು ದಿನದಲ್ಲಿ ಚೀನಾ ಏಕಪಕ್ಷೀಯವಾಗಿ ಕದನ ವಿರಾಮ ಘೋಷಿಸಿತು. ಇದು ಕೇವಲ ಕಾಕತಾಳೀಯವಾಗಿರಲಿಲ್ಲ.

ಪ್ರಧಾನಿ ನೆಹರೂ ಓರ್ವ ಮುತ್ಸದ್ದಿಯಾಗಿದ್ದರು.ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿದರು. ಆಧುನಿಕ ಭಾರತದ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದರು. ಆದರೆ ಉತ್ತಮ ವಿದೇಶಾಂಗ ಮಂತ್ರಿಯಾಗಿರಲಿಲ್ಲ. ಸೋವಿಯತ್ ಕುರಿತು ಅವರಿಗೆ ವೈಯಕ್ತಿಕವಾಗಿ ಒಲವಿತ್ತು. ಆದರೆ ಭಾರತಕ್ಕೆ ಅಮೆರಿಕದ ನೆರವಿನ ಅಗತ್ಯವಿತ್ತು. ಕೊನೆಗೆ ಆಹಾರ ಧಾನ್ಯ ಪೂರೈಕೆಯ ವಿಷಯದಲ್ಲಿ, ಚೀನಾದ ಯುದ್ಧ ಸಂದರ್ಭದಲ್ಲಿ ಅಮೆರಿಕದ ನೆರವನ್ನು ಪಡೆಯಲೇಬೇಕಾಯಿತು. ಆದರ್ಶದ ಕಲ್ಪನಾ ಪಥದಿಂದ ವಾಸ್ತವದ ಹಾದಿಗೆ ವಿದೇಶಾಂಗ ನೀತಿಯನ್ನು ಎಳೆದು ತರುವ ಮೊದಲ ಪ್ರಯತ್ನ 90ರ ದಶಕದಲ್ಲಿ ಆಯಿತು. ಅಮೃತ ಮಹೋತ್ಸವದ ನೆಪದಲ್ಲಿ, ಇಟ್ಟ ತಪ್ಪು ಹೆಜ್ಜೆಗಳನ್ನೂ ಮೆಲುಕು ಹಾಕಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT