ಸೋಮವಾರ, ಅಕ್ಟೋಬರ್ 14, 2019
22 °C
ಹ್ಯೂಸ್ಟನ್ ಸಮಾರಂಭವು ಭಾರತ– ಅಮೆರಿಕಕ್ಕೆ ವಿನ್-ವಿನ್ ಸಂದರ್ಭ. ಆದರೆ...

‘ಹೌಡಿ- ಮೋದಿ’ ರವಾನಿಸಿದ ಸಂದೇಶ?

ಸುಧೀಂದ್ರ ಬುಧ್ಯ
Published:
Updated:

ಅಮೆರಿಕದ ಟೆಕ್ಸಾಸ್ ರಾಜ್ಯದ ಹ್ಯೂಸ್ಟನ್ ನಗರದಲ್ಲಿ ಆಯೋಜನೆಯಾಗಿದ್ದ ‘ಹೌಡಿ ಮೋದಿ’ ಸಮಾರಂಭ ಹಲವು ಕಾರಣಗಳಿಗೆ ವಿಶಿಷ್ಟ ಎನಿಸಿಕೊಂಡಿತು. ಜಗತ್ತಿನ ಅತಿದೊಡ್ಡ ಪ್ರಜಾತಂತ್ರ ವ್ಯವಸ್ಥೆಯನ್ನು ಪ್ರತಿನಿಧಿಸುವ ಇಬ್ಬರು ನಾಯಕರು ಒಂದೇ ವೇದಿಕೆಯಲ್ಲಿ, ಅಮೆರಿಕದ ನೆಲದಲ್ಲಿ, ಅತಿದೊಡ್ಡ ಜನಸ್ತೋಮದ ಮುಂದೆ ಕಾಣಿಸಿಕೊಂಡಿದ್ದು ಚಾರಿತ್ರಿಕ. ಅಮೆರಿಕದ ಅಧ್ಯಕ್ಷರು ಬೇರೊಬ್ಬ ರಾಷ್ಟ್ರ ನಾಯಕನ ಜೊತೆ ಸಾರ್ವಜನಿಕವಾಗಿ ವೇದಿಕೆ ಹಂಚಿಕೊಳ್ಳುವುದು ಕೂಡ ಅಪರೂಪವೇ. ಹಾಗಾಗಿ ಟ್ರಂಪ್ ಮತ್ತು ಮೋದಿ ಜೊತೆಯಾಗಿ ಕಾಣಿಸಿಕೊಂಡ ಈ ಸಮಾರಂಭ ಜಗತ್ತಿನ ಗಮನ ಸೆಳೆಯಿತು.

ಅಮೆರಿಕದ ಮಟ್ಟಿಗೆ ಹೇಳುವುದಾದರೆ, ಭಾರತೀಯ ಮೂಲದ ಸಾಕಷ್ಟು ಜನ ಟೆಕ್ಸಾಸ್, ಕ್ಯಾಲಿಫೋರ್ನಿಯಾ, ನ್ಯೂಯಾರ್ಕ್ ಮತ್ತು ಇಲಿನಾಯ್‌ ರಾಜ್ಯಗಳಲ್ಲಿ ಸಾಂದ್ರಗೊಂಡಿದ್ದಾರೆ. ಅಮೆರಿಕದ ರಾಜಕೀಯದ ಮೇಲೆ ಪ್ರಭಾವ ಬೀರುವಷ್ಟು ಬೆಳೆದಿರುವುದಷ್ಟೇ ಅಲ್ಲ, ಅಲ್ಲಿನ ರಾಜಕೀಯದಲ್ಲಿ ನೇರ ಉಮೇದುವಾರರಾಗಿ ಪಾಲ್ಗೊಳ್ಳುವ, ಸಂಸತ್ತಿನ ನೀತಿ ನಿರೂಪಣಾ ಸಮಿತಿಗಳಲ್ಲಿ ಸ್ಥಾನ ಪಡೆದುಕೊಳ್ಳುವ ಹಂತಕ್ಕೂ ಹೋಗಿದ್ದಾರೆ. ಭಾರತ ಮತ್ತು ಅಮೆರಿಕದ ನಡುವಿನ ದ್ವಿಪಕ್ಷೀಯ ಬಾಂಧವ್ಯಕ್ಕೆ ಸೇತುವೆಯಾಗುವ ಸಾಮರ್ಥ್ಯವನ್ನೂ ಪ್ರದರ್ಶಿಸಿದ್ದಾರೆ. ಹೀಗೆ ಪರ ನೆಲದಲ್ಲಿ ಹಬ್ಬಿ ನಿಂತ ಸಮುದಾಯವನ್ನು ತಾಯ್ನಾಡಿನ ಏಳಿಗೆಗಾಗಿ ಜೋಡಿಸಿಕೊಳ್ಳುವ ಪ್ರಯತ್ನಗಳನ್ನು ಭಾರತ ಕಳೆದ ಕೆಲವು ದಶಕಗಳಿಂದ ಮಾಡುತ್ತಾ ಬಂದಿದೆ.

80ರ ದಶಕದಲ್ಲಿ ಅನಿವಾಸಿ ಭಾರತೀಯರ ಜೊತೆ ಸಂಪರ್ಕ ಇಟ್ಟುಕೊಂಡು, ಅವರನ್ನು ಭಾರತದಲ್ಲಿನ ಅಭಿವೃದ್ಧಿ ಕಾರ್ಯಗಳಿಗೆ ಜೋಡಿಸಿಕೊಳ್ಳುವ ಕೆಲಸವನ್ನು ರಾಜೀವ್ ಗಾಂಧಿ ನೇತೃತ್ವದ ಭಾರತ ಸರ್ಕಾರ ಮಾಡಿತ್ತು. ನಂತರ ಬಂದ ಪಿ.ವಿ. ನರಸಿಂಹರಾವ್, ಅನಿವಾಸಿಗಳಿಂದ ಬಂಡವಾಳ ಆಕರ್ಷಿಸುವ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದ್ದರು. ‘ಪ್ರವಾಸಿ ಭಾರತೀಯ ದಿವಸ’ದ ಮೂಲಕ ವಾಜಪೇಯಿ, ತಾಯ್ನೆಲದೊಂದಿಗಿನ ಅನಿವಾಸಿಗಳ ಬಾಂಧವ್ಯ ಗಟ್ಟಿಗೊಳಿಸಿದ್ದರು. 2014ರಲ್ಲಿ ಮೋದಿ ಪ್ರಧಾನಿಯಾದ ಬಳಿಕ ಈ ಪ್ರಕ್ರಿಯೆಯನ್ನು ಮತ್ತೊಂದು ಹಂತಕ್ಕೆ ಒಯ್ದರು.

2014ರಲ್ಲಿ ಪ್ರಧಾನಿಯಾದ ತರುವಾಯ ಮೋದಿ ಮೊದಲ ಬಾರಿಗೆ ಅಮೆರಿಕಕ್ಕೆ ಭೇಟಿಯಿತ್ತಾಗ ಅವರಿಗೆ ಭವ್ಯ ಸ್ವಾಗತ ದೊರಕಿತ್ತು. ಅಂದಿನ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ ಕಾರ್ಯಕ್ರಮದ ಆಯೋಜನೆಗೆ ಎರಡು ಆದ್ಯತೆಗಳಿದ್ದವು. ಒಂದು, ಪ್ರಧಾನಿ ಮೋದಿ ಅವರಿಗೆ ಭವ್ಯ ಸ್ವಾಗತ ಕೋರಿ, ಅವರು ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಲು ವೇದಿಕೆ ಕಲ್ಪಿಸುವುದು. ಎರಡು, ಅಮೆರಿಕದ ಒಟ್ಟು ಜನಸಂಖ್ಯೆಯ ಶೇಕಡ ಒಂದರಷ್ಟಿರುವ ಭಾರತೀಯ ಅಮೆರಿಕನ್ನರ ಇರುವಿಕೆಯನ್ನು ಅಮೆರಿಕದ ಆಡಳಿತಕ್ಕೆ ನೆನಪಿಸುವ ಶಕ್ತಿ ಪ್ರದರ್ಶನದ ರೂಪ ಅದಕ್ಕಿತ್ತು. ಈ ಬಾರಿಯ ಹ್ಯೂಸ್ಟನ್ ಕಾರ್ಯಕ್ರಮ, ಮ್ಯಾಡಿಸನ್ ಸ್ಕ್ವೇರ್ ಕಾರ್ಯಕ್ರಮದ ಸ್ವರೂಪವನ್ನೇ ಹೊಂದಿತ್ತಾದರೂ ಆದ್ಯತೆ ಭಿನ್ನವಾಗಿತ್ತು. ಅಮೆರಿಕದ ಅಧ್ಯಕ್ಷ ಟ್ರಂಪ್ ಮತ್ತು ಮೋದಿ ವೇದಿಕೆ ಹಂಚಿಕೊಳ್ಳುವಂತೆ ಸಮಾರಂಭ ಆಯೋಜಿಸುವುದು ಕಾರ್ಯಕ್ರಮ ಆಯೋಜಕರ ಮುಖ್ಯ ಗುರಿಯಾಗಿತ್ತು.

ಹಿಂದಿದ್ದ ಲೆಕ್ಕಾಚಾರ ಸ್ಪಷ್ಟ. ಒಂದು, ಚೀನಾ ಮತ್ತು ಪಾಕಿಸ್ತಾನದೊಂದಿಗಿನ ಪ್ರಾಂತೀಯ ರಾಜಕೀಯ ಬಿಕ್ಕಟ್ಟಿನ ವಿಷಯದಲ್ಲಿ ಅಮೆರಿಕವು ಭಾರತದ ಬಗಲಿಗೆ ನಿಂತರೆ, ಅಷ್ಟರಮಟ್ಟಿಗೆ ಭಾರತದ ಬಲ ಏಷ್ಯಾದ ಮಟ್ಟಿಗೆ ವೃದ್ಧಿಯಾಗುತ್ತದೆ. ಟ್ರಂಪ್ ಪಾಲ್ಗೊಳ್ಳುವಿಕೆ ಆ ಸಂದೇಶ ರವಾನೆಗೆ ಸಹಕಾರಿಯಾಗುತ್ತದೆ. ಎರಡು, ಟ್ರಂಪ್ ಆಡಳಿತದ ವಲಸೆ ವಿರೋಧಿ ಧೋರಣೆಯಿಂದ ಅನಿವಾಸಿ ಭಾರತೀಯರಿಗೆ ತೊಂದರೆಯಾಗದಂತೆ ರಾಜಕೀಯ ಒತ್ತಡ ಹೇರುವುದು. ಚುನಾವಣೆಗೆ ವರ್ಷವಷ್ಟೇ ಬಾಕಿಯಿರುವಾಗ ಭಾರತೀಯ ಅಮೆರಿಕನ್ ಸಮುದಾಯದ ಆಹ್ವಾನವನ್ನು ಟ್ರಂಪ್ ನಿರಾಕರಿಸಲಾರರು ಎಂಬುದು ಆಯೋಜಕರಿಗೆ ಮನದಟ್ಟಾಗಿತ್ತು. ಅಂತೆಯೇ ಅಧ್ಯಕ್ಷ ಟ್ರಂಪ್ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಟ್ರಂಪ್ ಮತ್ತು ಮೋದಿ ತಮಗೆ ಅಗತ್ಯವಿದ್ದ ಸಂದೇಶಗಳನ್ನು ಬಹಳ ಜಾಣ್ಮೆಯಿಂದ ರವಾನಿಸಿದರು. ತಮ್ಮ ಆಡಳಿತದ ಸಾಧನೆಯನ್ನು ಪ್ರಸ್ತಾಪಿಸಿರುವ ಟ್ರಂಪ್, ‘ಭಾರತೀಯ ಅಮೆರಿಕನ್ನರು ಅಮೆರಿಕದ ಪ್ರಜೆಗಳಾಗಿರುವುದು ನಮ್ಮ ಹೆಮ್ಮೆ. ಈ ಸಮುದಾಯದ ಯೋಗಕ್ಷೇಮ ನಮ್ಮ ಸರ್ಕಾರದ ಆದ್ಯತೆಯಾಗಿದೆ. ಐವತ್ತೊಂದು ವರ್ಷಗಳ ಇತಿಹಾಸದಲ್ಲೇ ಇದೀಗ ಅಮೆರಿಕದಲ್ಲಿ ನಿರುದ್ಯೋಗದ ಪ್ರಮಾಣ ತಗ್ಗಿದೆ. ಅನಗತ್ಯ ಕಾನೂನುಗಳನ್ನು ತೊಡೆದು ಹಾಕಿ, ವ್ಯಾಪಾರಕ್ಕೆ ಉತ್ತೇಜನ ನೀಡಲಾಗುತ್ತಿದೆ’ ಎನ್ನುವ ಮೂಲಕ ಅನಿವಾಸಿ ಭಾರತೀಯರ ಉದ್ಯಮಗಳಿಗೆ ಯಾವುದೇ ತೊಡಕಾಗುವುದಿಲ್ಲ ಎಂಬ ಭರವಸೆ ಇತ್ತಿದ್ದಾರೆ. ಜೊತೆಗೆ ‘ಅಮೆರಿಕ ಗಡಿ ಸಮಸ್ಯೆ ಎದುರಿಸುತ್ತಿದೆ, ಭಾರತ ಗಡಿಯಲ್ಲಿ ಎದುರಿಸುತ್ತಿರುವ ಸಮಸ್ಯೆಯ ಅರಿವು ನಮಗಿದೆ. ಹಿಂದೆಂದೂ ಭಾರತಕ್ಕೆ ಇಷ್ಟು ಉತ್ತಮ ಸ್ನೇಹಿತ ಶ್ವೇತಭವನದಲ್ಲಿ ಇದ್ದಿರಲಿಕ್ಕಿಲ್ಲ. ಟ್ರಂಪ್‌ಗಿಂತ ಉತ್ತಮ ಸ್ನೇಹಿತ ಭಾರತಕ್ಕೆ ಸಿಗಲು ಸಾಧ್ಯವಿಲ್ಲ’ ಎನ್ನುವ ಮೂಲಕ ದ್ವಿಪಕ್ಷೀಯ ಬಾಂಧವ್ಯ ಗಟ್ಟಿಗೊಳ್ಳಲಿದೆ ಎಂಬ ಸಂದೇಶ ರವಾನಿಸಿದ್ದಾರೆ.

ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಟೆಕ್ಸಾಸ್ ಪ್ರಮುಖ ಪಾತ್ರ ವಹಿಸುತ್ತದೆ. ಇದುವರೆಗೂ ಈ ರಾಜ್ಯ ರಿಪಬ್ಲಿಕನ್ನರ ಹಿಡಿತದಲ್ಲೇ ಇದ್ದರೂ, ಡೆಮಾಕ್ರಟಿಕ್ ಪಕ್ಷ 2020ರ ಚುನಾವಣೆಯಲ್ಲಿ ಈ ರಾಜ್ಯದಲ್ಲಿ ಗೆಲ್ಲುವ ಗುರಿ ಇಟ್ಟುಕೊಂಡಿದೆ ಮತ್ತು ‘ಟೆಕ್ಸಾಸ್ ಈಸ್ ಅವರ್ ಬ್ಯಾಟಲ್‌ಫೀಲ್ಡ್’ ಎಂದು ಘೋಷಿಸಿದೆ. ಅಮೆರಿಕದ ಭಾರತೀಯ ಸಮೂಹ ಇದುವರೆಗೆ ಡೆಮಾಕ್ರಟಿಕ್ ಪಕ್ಷದ ಜೊತೆ ಹೆಚ್ಚು ಗುರುತಿಸಿಕೊಂಡಿದೆ. ಸಮಾರಂಭದಲ್ಲಿ ಪಾಲ್ಗೊಳ್ಳುವ ಮೂಲಕ ಅನಿವಾಸಿ ಭಾರತೀಯ ಮತಗಳನ್ನು ರಿಪಬ್ಲಿಕನ್ ಪಕ್ಷದೆಡೆ ಸೆಳೆಯುವ ಪ್ರಯತ್ನವನ್ನು ಟ್ರಂಪ್ ಮಾಡಿದ್ದಾರೆ.

ಇನ್ನು, ಮೋದಿ ಅವರ ಅತಿದೊಡ್ಡ ಸಾಮರ್ಥ್ಯ ಅವರ ಸಂವಹನ ಕಲೆ. ಇತ್ತೀಚೆಗೆ ಅಮಿತ್ ಶಾ ಅವರು ಹಿಂದಿ ಕುರಿತು ಕೊಟ್ಟ ಹೇಳಿಕೆಯನ್ನು ದಕ್ಷಿಣದ ರಾಜ್ಯಗಳು ಪ್ರತಿಭಟಿಸಿದ್ದವು. ಅದಕ್ಕೆ ಉತ್ತರವೆಂಬಂತೆ ಮೋದಿ, ಭಾರತದ ವಿವಿಧ ಪ್ರಾಂತೀಯ ಭಾಷೆಗಳಲ್ಲಿ All is well (ಎಲ್ಲವೂ ಚೆನ್ನಾಗಿದೆ) ಎನ್ನುವ ಮೂಲಕ ಹಿಂದಿ ಹೇರಿಕೆಯ ಆಕ್ಷೇಪಕ್ಕೆ ತೆರೆ ಎಳೆದಿದ್ದಾರೆ. ಕಾಶ್ಮೀರಕ್ಕೆ ಅನ್ವಯವಾಗುತ್ತಿದ್ದ 370ನೇ ವಿಧಿಯ ಕುರಿತು ಅಮೆರಿಕದ ಅಧ್ಯಕ್ಷರ ಸಮ್ಮುಖದಲ್ಲೇ ಪ್ರಸ್ತಾಪಿಸಿದ್ದರಿಂದ ಪಾಕಿಸ್ತಾನಕ್ಕೆ ಸೂಕ್ತ ಸಂದೇಶ ರವಾನಿಸಿದಂತಾಗಿದೆ. ಸೆಪ್ಟೆಂಬರ್ 11ರ ಕೃತ್ಯವಿರಲಿ, ಮುಂಬೈ ಭಯೋತ್ಪಾದಕ ದಾಳಿಯ ಘಟನೆಯಿರಲಿ, ಆ ದಾಳಿಯ ಹಿಂದಿದ್ದವರು ಯಾರೆಂಬುದು ಇಡೀ ಜಗತ್ತಿಗೆ ಗೊತ್ತಿದೆ. ಈ ಕೃತ್ಯಗಳನ್ನು ಎಸಗಿ ಅವರು ನೆಮ್ಮದಿಯಿಂದ ಇರಲು ಸಾಧ್ಯವೇ ಎನ್ನುವ ಮೂಲಕ ಮುಂಬೈ ದಾಳಿಯ ಸೂತ್ರಧಾರ ಹಫೀಸ್ ಸಯೀದ್‌ ಮತ್ತು ಆತನನ್ನು ಪೋಷಿಸುತ್ತಿರುವ ಪಾಕಿಸ್ತಾನಕ್ಕೆ ಎಚ್ಚರಿಕೆಯನ್ನು ನೀಡಿದಂತಾಗಿದೆ.

ಹಾಗಾಗಿ, ಒಂದು ರೀತಿಯಲ್ಲಿ ಹ್ಯೂಸ್ಟನ್ ಸಮಾರಂಭ, ಭಾರತ ಮತ್ತು ಅಮೆರಿಕ, ಅಂತೆಯೇ ಅನಿವಾಸಿ ಭಾರತೀಯರು ಮತ್ತು ರಿಪಬ್ಲಿಕನ್ ಪಕ್ಷಕ್ಕೆ ವಿನ್‌– ವಿನ್ ಸಂದರ್ಭ ಎಂದೇ ಕರೆಯಬಹುದು. ನಾಲ್ಕು ತಿಂಗಳ ಅವಧಿಯಲ್ಲಿ ಮೂರು ಬಾರಿ ಭೇಟಿಯಾಗಿರುವ ಮೋದಿ ಮತ್ತು ಟ್ರಂಪ್ ಇದೀಗ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು, ಕೈ ಕೈ ಹಿಡಿದು ಕ್ರೀಡಾಂಗಣದ ಸುತ್ತ ಒಂದು ಸುತ್ತು ಬಂದು ಭಾರತ- ಅಮೆರಿಕ ಮುಂದಿನ ದಿನಗಳಲ್ಲಿ ವ್ಯಾಪಾರ, ಭದ್ರತೆ ಹಾಗೂ ಭಯೋತ್ಪಾದನೆ ನಿಗ್ರಹದ ವಿಷಯದಲ್ಲಿ ಒಟ್ಟಾಗಿ ಹೆಜ್ಜೆ ಹಾಕಲಿವೆ ಎಂಬ ಸೂಚನೆಯನ್ನು ಜಾಗತಿಕ ಸಮುದಾಯಕ್ಕೆ ನೀಡಿದ್ದಾರೆ. ಆದರೆ ಟ್ರಂಪ್ ಅವರನ್ನು ಖುಷಿಪಡಿಸುವ ಉಮೇದಿನಲ್ಲಿ ಭಾರತ, ಅಮೆರಿಕದ ಆಂತರಿಕ ರಾಜಕೀಯ ವಿಷಯದಲ್ಲಿ ನೇರವಾಗಿ ತನ್ನ ಆಯ್ಕೆಯನ್ನು ಅಭಿವ್ಯಕ್ತಿಸಬಾರದು. ‘ಅಬ್ ಕೀ ಬಾರ್ ಟ್ರಂಪ್ ಸರ್ಕಾರ್’ ಎಂಬ ಮೋದಿ ಘೋಷಣೆಯು ಅನಿವಾಸಿ ಭಾರತೀಯರು ಟ್ರಂಪ್ ಪರ ನಿಂತಿದ್ದಾರೆ ಎನ್ನುವ ಸಂದೇಶ ರವಾನಿಸಿದ್ದರೆ, ಅದರಿಂದ ತಾತ್ಕಾಲಿಕವಾಗಿ ಭಾರತ ಮತ್ತು ಅನಿವಾಸಿ ಸಮುದಾಯಕ್ಕೆ ಅನುಕೂಲವಾಗಬಹುದಾದರೂ ಮುಂದಿನ ವರ್ಷಗಳಲ್ಲಿ ಅದು ಹೆಚ್ಚಿನ ತೊಡಕುಂಟು ಮಾಡಬಹುದು.

Post Comments (+)