ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಾಂಗಣ: ಹಿತಾಸಕ್ತಿಯ ರಿಂಗಣ

ಸಂಘರ್ಷ ಕೊನೆಗಾಣಿಸುವ ಪ್ರಯತ್ನಗಳ ಹಿಂದೆ ಆಯಾ ರಾಷ್ಟ್ರಗಳ ಹಿತಾಸಕ್ತಿ ಅಡಗಿದೆ
Last Updated 1 ಏಪ್ರಿಲ್ 2022, 19:31 IST
ಅಕ್ಷರ ಗಾತ್ರ

ಯುದ್ಧವನ್ನು ಆರಂಭಿಸುವುದು ಸುಲಭ, ಆದರೆ ಅಂತ್ಯಗೊಳಿಸುವುದು ಕಷ್ಟ ಎಂಬ ಮಾತಿದೆ. ಅಷ್ಟೇ ಅಲ್ಲ, ಯುದ್ಧದ ಪರಿಣಾಮಗಳನ್ನು ಎದುರಿಸುವುದು ಮತ್ತು ಮರೆಯುವುದು ಕೂಡ ಕಷ್ಟ.

ಸುಧೀಂದ್ರ ಬುಧ್ಯ
ಸುಧೀಂದ್ರ ಬುಧ್ಯ

ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಆರಂಭವಾಗಿ ಒಂದು ತಿಂಗಳು ಕಳೆದಿದೆ. ಅಪಾರ ಸಂಖ್ಯೆಯ ಜನ ಉಕ್ರೇನ್‌ನಿಂದ ಇತರ ದೇಶಗಳಿಗೆ ವಲಸೆ ಹೋಗಿದ್ದಾರೆ. ಮತ್ತೊಂದು ದೇಶದ ಬಾಗಿಲಿನಲ್ಲಿ ನಿಂತು ಅಲ್ಲಿನ ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಿ, ನಾಲ್ಕಾರು ಅರ್ಜಿಗಳನ್ನು ತುಂಬಿ, ನಿರಾಶ್ರಿತರ ಶಿಬಿರದಲ್ಲಿ ಮುದುರಿ ಮಲಗುವ ಪರಿಸ್ಥಿತಿ ಯಾವ ದೇಶದ ನಾಗರಿಕರಿಗೂ ಬರಬಾರದು. ಆದರೆ ಉಕ್ರೇನಿನ ಜನ ಆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅವರ ಈ ಪರಿಸ್ಥಿತಿಗೆ ಕಾರಣ ಏನು, ಆ ಜನರ ಮಹತ್ವಾಕಾಂಕ್ಷೆಯೇ, ಆಳುವವರ ಮುನ್ನೋಟದ ಕೊರತೆಯೇ, ನೆರೆಯ ರಾಷ್ಟ್ರದ ರಾಕ್ಷಸ ಪ್ರವೃತ್ತಿಯೇ, ಬಲಾಢ್ಯ ರಾಷ್ಟ್ರಗಳ ವಾಣಿಜ್ಯಿಕ ಹಿತಾಸಕ್ತಿಯೇ, ಹೀಗೆ ಯುದ್ಧಕ್ಕೆ ನಾಲ್ಕಾರು ಕಾರಣಗಳು ಇರಬಹುದು. ಆದರೆ ಇದೀಗ ಉಕ್ರೇನಿನ ಹಲವು ನಗರಗಳು ಧ್ವಂಸಗೊಂಡಿವೆ. ದೂರದಿಂದ ತೂರಿಬಂದ ಕ್ಷಿಪಣಿಗಳು ಯಾವ ಕಟ್ಟಡದಲ್ಲಿ ಯಾರಿದ್ದಾರೆ, ಅದರ ಐತಿಹಾಸಿಕ ಮಹತ್ವವೇನು ಎಂದು ನೋಡದೆಯೇ ಅವುಗಳನ್ನು ನಾಶ ಮಾಡಿವೆ.

ಒಂದು ತಿಂಗಳ ಈ ಅವಧಿಯಲ್ಲಿ ಉಕ್ರೇನ್ ಮತ್ತು ರಷ್ಯಾಕ್ಕೆ ಕೆಲವು ಸಂಗತಿಗಳು ಮನವರಿಕೆಯಾದಂತಿದೆ. ದೂರದಲ್ಲಿ ನಿಂತು ಸದಸ್ಯತ್ವದ ಆಹ್ವಾನ ನೀಡಿದ್ದ ನ್ಯಾಟೊ, ಸಂಕಷ್ಟ ಎದುರಾದಾಗ ಅಂತರ ಕಾಯ್ದುಕೊಂಡದ್ದನ್ನು ಉಕ್ರೇನ್ ಮರೆಯುವಂತಿಲ್ಲ. ಇದೀಗ ಉಕ್ರೇನ್ ತನಗೆ ನ್ಯಾಟೊ ಭಾಗವಾಗುವ ಆಕಾಂಕ್ಷೆಯಿಲ್ಲ ಎಂದು ಹೇಳುತ್ತಿದೆ. ಆರ್ಥಿಕ ಪ್ರಗತಿ ಸಾಧಿಸಲು ಐರೋಪ್ಯ ಒಕ್ಕೂಟದ ಭಾಗವಾಗಬೇಕು ಎಂಬ ಹಂಬಲ ಇನ್ನೂ ಉಕ್ರೇನಿಗಿದೆ. ಆದರೆ ಆ ಪ್ರಕ್ರಿಯೆ ದೀರ್ಘ ಅವಧಿಯದ್ದು, ಐರೋಪ್ಯ ಒಕ್ಕೂಟವೂ ಪೂರ್ಣ ಮನಸ್ಸಿನಿಂದ ತನ್ನನ್ನು ಸ್ವಾಗತಿಸದು ಎಂಬುದು ಉಕ್ರೇನಿಗೆ ಮನವರಿಕೆಯಾಗಿದೆ.ಹಾಗಾಗಿ ಮಾತುಕತೆಯಿಂದಷ್ಟೇ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು ಎಂಬ ನಿಲುವಿಗೆ ಉಕ್ರೇನ್ ಬಂದಿದೆ.

ಅತ್ತ ರಷ್ಯಾ ಕೂಡ ಬಳಲಿದಂತೆ ಕಾಣುತ್ತಿದೆ. ಉಕ್ರೇನಿನ ಮೇಲೆ ರಷ್ಯಾ ಮೊದಲ ಗುಂಡು ತೂರಿದಾಗ ಅದು ಬೇರೆಯದೇ ಲೆಕ್ಕಾಚಾರವನ್ನು ಹೊಂದಿತ್ತು. ಸಾಮರಿಕವಾಗಿ ತನಗೆ ಸಾಟಿಯಲ್ಲದ ರಾಷ್ಟ್ರವನ್ನು ಮಣಿಸುವುದು ಸುಲಭ ಎಂಬ ಅತಿವಿಶ್ವಾಸದಿಂದ ಅದು ಮುನ್ನುಗ್ಗಿತ್ತು. ಈಗ ರಷ್ಯಾ ಅಪಾರ ಸಂಖ್ಯೆಯ ಸೈನಿಕರನ್ನು, ಹಿರಿಯ ಅಧಿಕಾರಿಗಳನ್ನು ಕಳೆದುಕೊಂಡಿದೆ. ಪಶ್ಚಿಮ ರಾಷ್ಟ್ರಗಳ ಆರ್ಥಿಕ ದಿಗ್ಬಂಧನದ ಬಿಸಿ ಸಾಮಾನ್ಯ ರಷ್ಯನ್ನರಿಗೆ ತಟ್ಟುತ್ತಿದೆ. ರಷ್ಯಾದ ರಾಜಕಾರಣವನ್ನು ನಿಯಂತ್ರಿಸುವ ಸಿರಿವಂತರು ಆಡಳಿತದ ವಿರುದ್ಧ ಸಿಟ್ಟಾಗಿದ್ದಾರೆ. ಮುಖ ಉಳಿಸಿಕೊಳ್ಳುವ ಹಾದಿಗಾಗಿ ರಷ್ಯಾ ಕೂಡ ಎದುರುನೋಡುತ್ತಿದೆ.

ಯುದ್ಧ ಆರಂಭವಾದ ಬಳಿಕ, ಉಕ್ರೇನ್ ಮತ್ತು ರಷ್ಯಾವನ್ನು ಮಾತುಕತೆಯ ಮೇಜಿಗೆ ತರಲು ಹಲವು ಪ್ರಯತ್ನಗಳು ನಡೆದವು. ಇದೀಗ ಅಮೆರಿಕದ ಜೊತೆಗೆ ನಿಕಟ ಸಖ್ಯ ಹೊಂದಿರುವ ಇಸ್ರೇಲ್ ಹಾಗೂ ನ್ಯಾಟೊ ಸದಸ್ಯ ರಾಷ್ಟ್ರಗಳಾದ ಟರ್ಕಿ ಮತ್ತು ಫ್ರಾನ್ಸ್ ಸಂಘರ್ಷವನ್ನು ಕೊನೆಗಾಣಿಸಲು ಪ್ರಯತ್ನಿಸುತ್ತಿವೆ. ಆ ಪ್ರಯತ್ನದ ಹಿಂದೆ ಕೂಡ ಆಯಾ ರಾಷ್ಟ್ರಗಳ ಹಿತಾಸಕ್ತಿ ಅಡಗಿದೆ.

ರಷ್ಯಾ ಮತ್ತು ಉಕ್ರೇನ್ ಎರಡರ ಜೊತೆಗೂ ಟರ್ಕಿ ಉತ್ತಮ ಬಾಂಧವ್ಯ ಹೊಂದಿದೆ. ಅದು ತನ್ನ ದೇಶಿ ಡ್ರೋನ್‌ಗಳನ್ನು (ಯುಸಿಎವಿ) ಉಕ್ರೇನಿಗೆ ಪೂರೈಸುತ್ತದೆ. ಅಗತ್ಯವಿರುವ ಆಧುನಿಕ ಯುದ್ಧ ತಂತ್ರಜ್ಞಾನವನ್ನು ರಷ್ಯಾದಿಂದ ಆಮದು ಮಾಡಿಕೊಳ್ಳುತ್ತದೆ. ಮೇಲಾಗಿ ಸಿರಿಯಾದ ವಿಷಯದಲ್ಲಿ ರಷ್ಯಾದ ಬೆಂಬಲ ಟರ್ಕಿಗೆ ಅಗತ್ಯವಾಗಿದೆ. ತೈಲ, ಅನಿಲ ಮತ್ತು ಪ್ರವಾಸೋದ್ಯಮದ ದೃಷ್ಟಿಯಿಂದಲೂ ರಷ್ಯಾವನ್ನು ಟರ್ಕಿ ಅವಲಂಬಿಸಿದೆ. ಹಾಗಾಗಿ ಮಧ್ಯವರ್ತಿಯಾಗಲು ಉತ್ಸಾಹ ತೋರುತ್ತಿದೆ.

ಈ ಯುದ್ಧ ಶೀಘ್ರದಲ್ಲಿ ಅಂತ್ಯವಾಗಲಿ ಎಂದು ಬಯಸುತ್ತಿರುವ ಮತ್ತೊಂದು ದೇಶ ಇಸ್ರೇಲ್. ಮಧ್ಯಪ್ರಾಚ್ಯದ ರಾಜಕೀಯದಲ್ಲಿ ಪ್ರಧಾನ ಪಾತ್ರಧಾರಿಯಾಗಿ ರಷ್ಯಾ ಇದೆ. ಇದೀಗ ಬೈಡನ್ ಅವರ ಆಡಳಿತ ಇರಾನ್ ಜೊತೆಗೆ ಸಂಬಂಧ ಸುಧಾರಿಸಿಕೊಳ್ಳುವ, ಪರಮಾಣು ಒಪ್ಪಂದ ಮಾಡಿಕೊಳ್ಳುವ ಕುರಿತು ಮುಂದಡಿ ಇಟ್ಟಿದೆ. ಮಧ್ಯಪ್ರಾಚ್ಯದಲ್ಲಿ ಸಮತೋಲನ ಕಾಯ್ದುಕೊಳ್ಳಲು ರಷ್ಯಾದ ಬೆಂಬಲ ಇಸ್ರೇಲಿಗೆ ಅಗತ್ಯವಾಗಿದೆ. ಹಾಗಾಗಿ ಅಮೆರಿಕದ ಜೊತೆ ಹೆಚ್ಚು ಗುರುತಿಸಿಕೊಂಡರೂ ರಷ್ಯಾದ ವಿರೋಧ ಕಟ್ಟಿಕೊಳ್ಳಲು ಇಸ್ರೇಲ್ ಸಿದ್ಧವಿಲ್ಲ. ಯುದ್ಧದ ವ್ಯಾಪ್ತಿ ಹಿರಿದಾಗಿ ತಾನು ಖಚಿತ ನಿಲುವು ಪ್ರಕಟಿಸುವ ಸಂದರ್ಭ ಬರಬಾರದು ಎಂದು ಇಸ್ರೇಲ್ ಬಯಸುತ್ತಿದೆ.

ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಕೂಡ ರಷ್ಯಾ ಮತ್ತು ಉಕ್ರೇನ್ ಅಧ್ಯಕ್ಷರ ಜೊತೆಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಫ್ರಾನ್ಸ್ ಅಧ್ಯಕ್ಷೀಯ ಚುನಾವಣೆ ಎದುರಿಗಿದೆ. ಅಧ್ಯಕ್ಷ ಪದವಿಗೆ ಸ್ಪರ್ಧಿಸಿರುವ ಪ್ರಮುಖ ಐವರು ಅಭ್ಯರ್ಥಿಗಳಲ್ಲಿ ಮೂವರು ಅಭ್ಯರ್ಥಿಗಳು ‘ನಾವು ನ್ಯಾಟೊ ಭಾಗವಾಗಿದ್ದು ಸಾಕು’ ಎಂದು ನ್ಯಾಟೊ ವಿರುದ್ಧ ಅಪಸ್ವರ ತೆಗೆದಿದ್ದಾರೆ. ಯುದ್ಧದಿಂದಾಗಿ ಐರೋಪ್ಯ ರಾಷ್ಟ್ರಗಳು ವಲಸೆ, ಬೆಲೆ ಏರಿಕೆಯ ಸಮಸ್ಯೆ ಎದುರಿಸುತ್ತಿವೆ. ಚುನಾವಣೆಯ ಸನಿಹದಲ್ಲಿ ಇಂತಹ ಸಮಸ್ಯೆಗಳು ಆಡಳಿತ ವಿರೋಧಿ ಅಲೆಯನ್ನು ಎಬ್ಬಿಸುತ್ತವೆ. ಹಾಗಾಗಿ ಮ್ಯಾಕ್ರನ್ ಅವರಿಗೆ ಈ ಯುದ್ಧ ಶೀಘ್ರ ಮುಗಿಯುವುದು ಬೇಕಿದೆ. ಯುದ್ಧ ವಿರಾಮಕ್ಕೆ ಮಧ್ಯವರ್ತಿಯಾದರೆ ಜನಪ್ರಿಯತೆಯೂ ಸಹಾಯಕ್ಕೆ ಬರುತ್ತದೆ ಎಂಬುದು ಅವರ ಲೆಕ್ಕಾಚಾರ.

ಈ ಮೂರು ದೇಶಗಳ ಪ್ರಯತ್ನ ಎಲ್ಲಿಗೆ ತಲುಪುತ್ತದೆಯೋ ಗೊತ್ತಿಲ್ಲ. ಆದರೆ ಫ್ರಾನ್ಸ್, ಟರ್ಕಿ ಅಥವಾ ಇಸ್ರೇಲಿನ ಮಧ್ಯಸ್ಥಿಕೆಯಲ್ಲಿ ಮಾತುಕತೆ ನಡೆದರೆ ರಷ್ಯಾವನ್ನು ರಾಜಿ ಸೂತ್ರಕ್ಕೆ ಬದ್ಧವಾಗುವಂತೆ ನೋಡಿಕೊಳ್ಳುವುದು ಕಠಿಣ, ಅಮೆರಿಕ ಇಲ್ಲವೇ ಚೀನಾದಂತಹ ಪ್ರಬಲ ರಾಷ್ಟ್ರಗಳ ಮಧ್ಯಸ್ಥಿಕೆಯಲ್ಲಿ ಸಂಧಾನ ನಡೆದರೆ ಯುದ್ಧ ಅಂತ್ಯಗೊಳ್ಳಬಹುದು ಎಂಬ ಅನಿಸಿಕೆ ದಟ್ಟವಾಗುತ್ತಿದೆ. ಆದರೆ ಈ ಎರಡು ರಾಷ್ಟ್ರಗಳು ಮಾತುಕತೆಗೆ ಕೊಂಡಿಯಾಗಲು ಮನಸ್ಸು ಮಾಡುತ್ತಿಲ್ಲ.

ಯುದ್ಧದಿಂದ ಬಲಗುಂದಿರುವ ರಷ್ಯಾವನ್ನು ತನ್ಮೂಲಕ ಪುಟಿನ್ ಅವರನ್ನು ಸೋಲೊಪ್ಪಿಕೊಳ್ಳುವಂತೆ ಮಾಡಬೇಕು ಎಂಬುದು ಅಮೆರಿಕದ ಹಂಬಲ. ಅಮೆರಿಕದ ಅಧ್ಯಕ್ಷ ಬೈಡನ್ ಉಕ್ರೇನಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಒದಗಿಸುವ, ಬತ್ತಳಿಕೆ ಬರಿದಾಗದಂತೆ ನೋಡಿಕೊಳ್ಳುವ ಭರವಸೆ ನೀಡುತ್ತಿದ್ದಾರೆಯೇ ವಿನಾ, ಸಂಧಾನ ಯಶಸ್ವಿಯಾಗಲಿ ಎಂದು ಹಾರೈಸುತ್ತಿಲ್ಲ. ಈ ಯುದ್ಧವನ್ನು ಚೀನಾ ಎರಡು ದೃಷ್ಟಿಯಿಂದ ನೋಡುತ್ತಿದೆ. ಮೊದಲನೆಯದು, ರಷ್ಯಾ ಪರ ನಿಂತರೆ ಆಗುವ ಲಾಭಗಳು. ದಕ್ಷಿಣ ಚೀನಾ ಸಮುದ್ರ ಪ್ರದೇಶದಲ್ಲಿ ನ್ಯಾಟೊ ಹಿಡಿತ ಸಾಧಿಸಲು ಬಯಸುತ್ತಿರುವುದರಿಂದ ಚೀನಾ ಕಳವಳಗೊಂಡಿದೆ. ರಷ್ಯಾದ ಮೂಲಕ ನ್ಯಾಟೊದ ಪ್ರಭಾವ ವಲಯವನ್ನು ಮೊಟಕುಗೊಳಿಸುವುದು ಸಾಧ್ಯವಾದರೆ ಅದರಿಂದ ಚೀನಾಕ್ಕೆ ಕೂಡ ಲಾಭ. ಆದ್ದರಿಂದ ಅಮೆರಿಕಕ್ಕೆ ಮುಖಭಂಗ ಆಗಬೇಕು ಎಂದು ಚೀನಾ ಬಯಸುತ್ತಿದೆ. ಜೊತೆಗೆ, ರಷ್ಯಾವನ್ನು ಪಶ್ಚಿಮದ ರಾಷ್ಟ್ರಗಳು ಏಕಾಂಗಿಯಾಗಿಸಿದರೆ, ಚೀನಾವನ್ನು ನೆಚ್ಚಿಕೊಳ್ಳುವುದು ರಷ್ಯಾಕ್ಕೆ ಅನಿವಾರ್ಯವಾಗುತ್ತದೆ, ಅವಲಂಬನೆ ಬೆಳೆಯುತ್ತದೆ. ಇದರಿಂದ ವಾಣಿಜ್ಯಿಕವಾಗಿಯಷ್ಟೇ ಅಲ್ಲ ರಾಜತಾಂತ್ರಿಕವಾಗಿ ಕೂಡ ತನಗೆ ಲಾಭ ಎಂಬುದು ಚೀನಾದ ಲೆಕ್ಕಾಚಾರ.

ಆದರೆ ಚೀನಾ ನೇರವಾಗಿ ರಷ್ಯಾದ ಸಹಾಯಕ್ಕೆ ನಿಲ್ಲಲು ಹಿಂಜರಿಯುತ್ತಿದೆ. ತಾನು ಬಹಿರಂಗವಾಗಿ ರಷ್ಯಾವನ್ನು ಬೆಂಬಲಿಸಿದರೆ ಯುದ್ಧದ ವ್ಯಾಪ್ತಿ ಹಿರಿದಾಗುತ್ತದೆ, ತನ್ನದಲ್ಲದ ಯುದ್ಧಕ್ಕೆ ಬೆಲೆ ತೆರಬೇಕಾ ಗುತ್ತದೆ ಎಂಬುದು ಚೀನಾಕ್ಕೆ ತಿಳಿದಿದೆ. ಐರೋಪ್ಯ ರಾಷ್ಟ್ರಗಳು ತನ್ನೊಂದಿಗಿನ ವಾಣಿಜ್ಯಿಕ ಸಂಬಂಧವನ್ನು ಕಡಿದುಕೊಂಡರೆ ಆರ್ಥಿಕವಾಗಿ ನಷ್ಟ ಅನುಭವಿಸ
ಬೇಕಾಗುತ್ತದೆ ಎಂಬುದನ್ನು ಚೀನಾ ಅರಿತಿದೆ. ಒಂದೊಮ್ಮೆ ಯುದ್ಧದಲ್ಲಿ ರಷ್ಯಾ ತೀರಾ ಕಳೆಗುಂದಿದರೆ ಅಥವಾ ಅಮೆರಿಕವೇ ಚೀನಾದ ಮಧ್ಯಸ್ಥಿಕೆಗೆ ಆಗ್ರಹಿಸಿದರೆ, ಆಗ ಅದು ಮಾತುಕತೆಗೆ ಕೊಂಡಿಯಾಗಿ, ಅಮೆರಿಕ ದೊಂದಿಗಿನ ತನ್ನ ಬಾಂಧವ್ಯ ಸುಧಾರಿಸಿಕೊಳ್ಳಲು, ವಾಣಿಜ್ಯ ಸಮರದಿಂದ ಆಚೆ ಬರಲು ಈ ಅವಕಾಶವನ್ನು ಬಳಸಿಕೊಳ್ಳುತ್ತದೆ.

ಒಟ್ಟಿನಲ್ಲಿ, ರಣಾಂಗಣದಲ್ಲಿ ಉಕ್ರೇನ್ ಮತ್ತು ರಷ್ಯಾದ ಸೈನಿಕರು ಪರಸ್ಪರ ಕಾದಾಡಿ ಪ್ರಾಣತೆರುತ್ತಿದ್ದರೆ, ಇತರ ದೇಶಗಳು ತಮ್ಮ ಹಿತಾಸಕ್ತಿಗಳಿಗೆ ಪೂರಕವಾಗಿ ದಾಳ ಉರುಳಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT