ಭಾನುವಾರ, ಸೆಪ್ಟೆಂಬರ್ 27, 2020
24 °C
ಭಾರತದ ವಿರುದ್ಧ ಈತ ನಡೆಸಿದ ಎಲ್ಲ ಕೃತ್ಯಗಳಿಗೂ ಚೀನಾ ಮೂಕಸಾಕ್ಷಿಯಾಗಿದೆ

ಚೀನಾಕ್ಕೆ ಮಸೂದ್ ಮೇಲೇಕೆ ಮಮತೆ?

ಸುಧೀಂದ್ರ ಬುಧ್ಯ Updated:

ಅಕ್ಷರ ಗಾತ್ರ : | |

Prajavani

ಚೀನಾದ ಇಬ್ಬಗೆ ನೀತಿ ಮತ್ತೊಮ್ಮೆ ಜಾಹೀರಾಗಿದೆ. ಮೊದಲಿಗೆ ಪುಲ್ವಾಮಾ ದಾಳಿ ಕುರಿತು ಪ್ರತಿಕ್ರಿಯಿಸಿದ್ದ ಚೀನಾ, ತೀವ್ರ ಸಂತಾಪ ವ್ಯಕ್ತಪಡಿಸಿತ್ತು. ಆದರೆ, ಮಸೂದ್ ಅಜರ್‌ನನ್ನು ಜಾಗತಿಕ ಉಗ್ರ ಎಂದು ಪರಿಗಣಿಸಬೇಕು ಎಂಬ ಭಾರತದ ಹಳೆಯ ಆಗ್ರಹಕ್ಕೆ ಫೆಬ್ರುವರಿ 27ರಂದು ಫ್ರಾನ್ಸ್, ಯುಕೆ ಮತ್ತು ಅಮೆರಿಕ ಧ್ವನಿಗೂಡಿಸಿದಾಗ, ಚೀನಾ ಮಾತ್ರ ಅಪಸ್ವರ ಎತ್ತಿತು. ಕಳೆದ 10 ವರ್ಷಗಳಿಂದ ಚೀನಾ ಇದೇ ಕೆಲಸ ಮಾಡುತ್ತಾ ಬಂದಿದೆ. ಇದೀಗ ನಾಲ್ಕನೆಯ ಬಾರಿಗೆ ತಾಂತ್ರಿಕ ಕಾರಣವೊಡ್ಡಿ ಮಸೂದ್ ಅಜರ್ ರಕ್ಷಣೆಗೆ ನಿಂತಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ 15 ರಾಷ್ಟ್ರಗಳ ಪೈಕಿ 14 ರಾಷ್ಟ್ರಗಳು ಭಾರತದ ಪ್ರಸ್ತಾವಕ್ಕೆ ಅನುಮೋದನೆ ನೀಡಿದ್ದರೆ, ನಮ್ಮ ನೆರೆಯ ರಾಷ್ಟ್ರ ಚೀನಾ ಮಾತ್ರ ಅಡ್ಡಗಾಲು ತೆಗೆಯುತ್ತಿಲ್ಲ.

ಚೀನಾದ ಈ ಧೋರಣೆಗೆ ಕಾರಣವೇನು? ಮಸೂದ್ ಅಜರ್‌ನನ್ನು ಉಗ್ರ ಎಂದು ಪರಿಗಣಿಸಲು ಇನ್ನಾವ ಸಾಕ್ಷಿಯನ್ನು ಚೀನಾ ಎದುರು ನೋಡುತ್ತಿದೆ? ಮಸೂದ್ ಭಾರತದ ವಿರುದ್ಧ ಈವರೆಗೆ ನಡೆಸಿರುವ ಕೃತ್ಯಗಳ ಬಗ್ಗೆ ಚೀನಾಕ್ಕೆ ಅರಿವಿದೆ. 1994ರಲ್ಲಿ ಭಾರತದ ವಿರುದ್ಧ ಕಾರ್ಯಾಚರಣೆ ನಡೆಸಲು ಮಸೂದ್ ಕಾಶ್ಮೀರದೊಳಗೆ ನುಸುಳಿದ ದಿನದಿಂದ ಒಂದಲ್ಲಾ ಒಂದು ಯೋಜನೆ ರೂಪಿಸಿ, ಅದನ್ನು ಕಾರ್ಯಗತಗೊಳಿಸುತ್ತಾ ಬಂದಿದ್ದಾನೆ. ಚೀನಾ ಇದೆಲ್ಲಕ್ಕೂ ಮೂಕಸಾಕ್ಷಿಯಾಗಿ ಪಕ್ಕದಲ್ಲೇ ನಿಂತಿದೆ.

ಹಾಗಾದರೆ ಮಸೂದ್ ಅಜರ್ ಪರವಾಗಿ ಚೀನಾ ನಿಂತಿರುವುದೇಕೆ? ಅದಕ್ಕೆ ನಾಲ್ಕಾರು ಕಾರಣಗಳು ಸಿಗುತ್ತವೆ. ಚೀನಾ 6,200 ಕೋಟಿ ಡಾಲರ್ (₹4.34 ಲಕ್ಷ ಕೋಟಿ) ಮೊತ್ತವನ್ನು ಸಿಪಿಇಸಿ (ಚೀನಾ– ಪಾಕಿಸ್ತಾನ್ ಎಕನಾಮಿಕ್ ಕಾರಿಡಾರ್) ಯೋಜನೆಯಲ್ಲಿ ತೊಡಗಿಸಿದೆ. ರಾಜತಾಂತ್ರಿಕ ಮತ್ತು ಆರ್ಥಿಕ ದೃಷ್ಟಿಯಿಂದ ಇದು ಚೀನಾದ ಬಹುದೊಡ್ಡ ಹೂಡಿಕೆ. ಈ ಯೋಜನೆಯ ಭಾಗವಾಗಿ ಹಲವು ಕಾಮಗಾರಿಗಳು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ನಡೆಯಬೇಕಿದೆ. ಈ ಭಾಗ ಭಾರತ ವಿರೋಧಿ ಉಗ್ರ ಸಂಘಟನೆಗಳ ಹಿಡಿತದಲ್ಲಿದೆ. ಚೀನಾ ಒಂದೊಮ್ಮೆ ಮಸೂದ್ ಅಜರ್‌ನನ್ನು ಜಾಗತಿಕ ಉಗ್ರ ಎಂದು ಗುರುತಿಸಲು ಮುಂದಾದರೆ, ಚೀನಾದ ಈ ಮಹತ್ವಾಕಾಂಕ್ಷಿ ಯೋಜನೆಗೆ ಜೈಷ್‌–ಎ–ಮೊಹಮ್ಮದ್‌ (ಜೆಇಎಂ) ಉಗ್ರ ಸಂಘಟನೆ ತೊಂದರೆ ನೀಡಬಹುದು. ಕೆಲಸದಲ್ಲಿ ತೊಡಗಿರುವ ಕಾರ್ಮಿಕರ ಮೇಲೆ ದಾಳಿಗಳು ನಡೆಯಬಹುದು ಎಂಬ ದಿಗಿಲು ಚೀನಾಕ್ಕಿದೆ.

ಇತ್ತ ಅಮೆರಿಕದೊಂದಿಗೆ ಭಾರತದ ಬಾಂಧವ್ಯ ಗಟ್ಟಿಯಾಗುತ್ತಿರುವುದು ಚೀನಾ ಹೆಚ್ಚೆಚ್ಚು ಪಾಕಿಸ್ತಾನದತ್ತ ವಾಲುತ್ತಿರುವುದಕ್ಕೆ ಮತ್ತೊಂದು ಕಾರಣ. ಹಿಂದೆ ಪಾಕಿಸ್ತಾನದ ಆಪ್ತ ರಾಷ್ಟ್ರವಾಗಿ ಅಮೆರಿಕ ಇತ್ತು. ಇದೀಗ ಆ ಸ್ಥಾನವನ್ನು ಚೀನಾ ತುಂಬಿದೆ. ಆರ್ಥಿಕ ಸಂಕಷ್ಟದಿಂದ ಪಾರಾಗಲು ಪಾಕಿಸ್ತಾನಕ್ಕೆ ಚೀನಾ ನೆರವು ಬೇಕಿದೆ. ಯುದ್ಧೋಪಕರಣಗಳ ಸರಬರಾಜಿಗೂ ಚೀನಾವನ್ನೇ ಅದು ನೆಚ್ಚಿಕೊಂಡಿದೆ. ಚೀನಾಕ್ಕೂ ಪಾಕಿಸ್ತಾನ ಅನಿವಾರ್ಯವಾಗಿ ಪರಿಣಮಿಸಿದೆ. ಮೊದಲಿಗೆ ಉತ್ತರ ಕೊರಿಯಾದ ಜೊತೆ ಚೀನಾ ಉತ್ತಮ ಸಂಬಂಧ ಹೊಂದಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಕಿಮ್ ಜಾಂಗ್ ಉನ್, ಚೀನಾ ಹಿಡಿತದಿಂದ ಬಿಡಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಅತ್ತ ಅಮೆರಿಕದ ಅಧ್ಯಕ್ಷರ ಜೊತೆ ಮಾತುಕತೆಯ ಪ್ರಯತ್ನ ನಡೆಸಿದ್ದಾರೆ. ಸದ್ಯದ ಮಟ್ಟಿಗೆ ಚೀನಾದ ಆಪ್ತ ರಾಷ್ಟ್ರಗಳ ಪಟ್ಟಿಯಲ್ಲಿ ಉಳಿದಿರುವ ದೇಶ ಎಂದರೆ ಅದು ಪಾಕಿಸ್ತಾನ. ಹಾಗಾಗಿ ಅದು ಪಾಕಿಸ್ತಾನವನ್ನು ಬಿಟ್ಟುಕೊಡುವ ಸ್ಥಿತಿಯಲ್ಲಿಲ್ಲ. ಜೊತೆಗೆ ತನ್ನ ಪಾಲ್ಗೊಳ್ಳುವಿಕೆ ಇರದ ಇಸ್ಲಾಮಿಕ್ ಸಹಕಾರ ಒಕ್ಕೂಟ (ಒಐಸಿ) ಮತ್ತು ಅಲಿಪ್ತ ಒಕ್ಕೂಟದಲ್ಲಿ ಪಾಕಿಸ್ತಾನ ತನ್ನ ಪರವಾಗಿ ಧ್ವನಿ ಎತ್ತಲಿದೆ ಎಂದು ಚೀನಾ ನಂಬಿದೆ. ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಆಕ್ರಮಣಕಾರಿ ಚಟುವಟಿಕೆ ಕುರಿತು ಅಲಿಪ್ತ ಒಕ್ಕೂಟದಲ್ಲಿ ಈ ಹಿಂದೆ ಆಕ್ಷೇಪ ಬಂದಾಗ ಪಾಕಿಸ್ತಾನವು ಚೀನಾ ಪರ ವಕಾಲತ್ತು ವಹಿಸಿತ್ತು. ಒಐಸಿಯಲ್ಲೂ ಚೀನಾ ನಿಲುವುಗಳನ್ನು ಪ್ರಶಂಸಿಸಿ ಮಾತನಾಡಿತ್ತು.

ಇನ್ನು, ಭಾರತವನ್ನು ತನ್ನ ಪ್ರತಿಸ್ಪರ್ಧಿಯಾಗಿ ಕಾಣುವ ಚೀನಾ, ಪಾಕಿಸ್ತಾನವನ್ನು ತನ್ನ ವಿದೇಶಾಂಗ ನೀತಿಯ ಅಸ್ತ್ರವಾಗಿ ಕೂಡ ನೋಡುತ್ತಾ ಬಂದಿದೆ. ಒಂದೊಮ್ಮೆ ಭಾರತ– ಪಾಕಿಸ್ತಾನದ ನಡುವೆ ಶಾಂತಿ ನೆಲೆಸಿದರೆ, ಇಲ್ಲವೇ ಇನ್ನಾವುದೇ ರೀತಿಯಾಗಿ ಪಾಕಿಸ್ತಾನದ ಉಗ್ರ ಉಪಟಳವನ್ನು ಭಾರತ ನಿಗ್ರಹಿಸಲು ಸಾಧ್ಯವಾದರೆ, ಸಮಸ್ಯೆಗಳ ಭಾರ ಇಳಿಸಿ ಭಾರತ ನಿಶ್ಚಿಂತೆಯಿಂದ ಅಭಿವೃದ್ಧಿಯ ಹೆದ್ದಾರಿಯಲ್ಲಿ ದಾಪುಗಾಲು ಇಡುತ್ತಾ ಸಾಗಬಹುದು. ಹಾಗಾಗಿಯೇ ಈ ಹಿಂದೆ ಪರಮಾಣು ಪೂರೈಕೆದಾರ ರಾಷ್ಟ್ರಗಳ ಒಕ್ಕೂಟದ (ಎನ್‌ಎಸ್‌ಜಿ) ಸದಸ್ಯತ್ವಕ್ಕೆ, ಭದ್ರತಾ ಮಂಡಳಿಯ ಕಾಯಂ ಸ್ಥಾನಕ್ಕೆ ಭಾರತದ ಉಮೇದುವಾರಿಕೆಯನ್ನು ಚೀನಾ ವಿರೋಧಿಸಿದ್ದು. ಇದೀಗ ಪಾಕಿಸ್ತಾನ ಮತ್ತು ಮಸೂದ್ ಅಜರ್‌ನನ್ನು ಭಾರತದ ವೇಗಕ್ಕೆ ತಡೆಯೊಡ್ಡುವ ಬದಲಿ ದಾಳವಾಗಿ ಚೀನಾ ಬಳಸುತ್ತಿದೆ.

ಅತ್ತ, ಟಿಬೆಟನ್ನು ತನ್ನ ಕಪಿಮುಷ್ಟಿಯಲ್ಲಿ ಹಿಡಿದಿರುವ ಚೀನಾಕ್ಕೆ, ತಾನು ಪ್ರತ್ಯೇಕತಾವಾದಿ ಎಂದು ಕರೆಯುವ ದಲೈಲಾಮಾರಿಗೆ ಭಾರತ ಆಶ್ರಯ ನೀಡಿದೆ ಎಂಬ ಸಿಟ್ಟು ಇನ್ನೂ ಇದೆ. ಬೌದ್ಧ ಧರ್ಮಗುರು ದಲೈಲಾಮಾರನ್ನು ಮತ್ತು ಹಫೀಸ್ ಸಯೀದ್, ಮಸೂದ್ ಅಜರ್‌ನನ್ನು ಚೀನಾ ಒಂದೇ ತಕ್ಕಡಿಯಲ್ಲಿಟ್ಟು ತೂಗುತ್ತಿದೆ. ಈ ಎಲ್ಲದರ ಜೊತೆಗೆ, ಪ್ರಾಂತೀಯವಾಗಿ ಮೇಲುಗೈ ಸಾಧಿಸುವ ವಾಂಛೆ ಚೀನಾಕ್ಕಿದೆ. ಪಾಕಿಸ್ತಾನ ಮತ್ತು ಭಾರತದ ನಡುವಿನ ಸಮಸ್ಯೆ ಬಗೆಹರಿಸುವಲ್ಲಿ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಚೀನಾ ಹೇಳಿರುವುದು ಅದೇ ಕಾರಣಕ್ಕಾಗಿ. ತನ್ಮೂಲಕ ಏಷ್ಯಾದ ಮಟ್ಟಿಗೆ ಮತ್ತು ಜಾಗತಿಕವಾಗಿ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳುವುದು ಚೀನಾದ ಯೋಜನೆ.

ಅದಿರಲಿ, ಮಸೂದ್‌ನನ್ನು ವಿಶ್ವಸಂಸ್ಥೆಯು ಜಾಗತಿಕ ಉಗ್ರ ಎಂದು ಗುರುತಿಸಿದರೆ ಭಾರತಕ್ಕೆ ಅಷ್ಟು ಸಾಕೇ? ಈಗಾಗಲೇ ವಿಶ್ವಸಂಸ್ಥೆಯ ಉಗ್ರ ಪಟ್ಟಿಯಲ್ಲಿರುವ ಹಫೀಸ್ ಸಯೀದ್ ಪಾಕಿಸ್ತಾನದಲ್ಲಿ ಯಾವುದೇ ಅಡೆತಡೆಯಿಲ್ಲದೆ ತನ್ನ ಕಾರ್ಯಚಟುವಟಿಕೆ ಮುಂದುವರಿಸಿದ್ದಾನೆ. ಪಾಕಿಸ್ತಾನದ ವಿದೇಶಾಂಗ ನೀತಿಯ ಭಾಗವಾಗಿಯೇ ಜಿಹಾದ್ ಬೆಳೆದು ಬಂದಿದೆ ಮತ್ತು ಅಲ್ಲಿನ ಸೇನೆ, ಐಎಸ್ಐ ನೇರವಾಗಿ ಉಗ್ರ ಕೃತ್ಯಗಳಿಗೆ ಬೆಂಬಲ ನೀಡುತ್ತಾ ಬಂದಿವೆ ಎನ್ನುವುದನ್ನೂ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಹಾಗಾಗಿ ಎಫ್‌ಎಟಿಎಫ್‌ (ಫೈನಾನ್ಷಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್), ಪಾಕಿಸ್ತಾನದ ಮೇಲೆ ನಿರ್ಬಂಧ ಹೇರುವಂತೆ ಭಾರತ ನೋಡಿಕೊಳ್ಳಬೇಕು. ಆ ನಿಟ್ಟಿನಲ್ಲಿ ಅಭಿಪ್ರಾಯ ರೂಪಿಸಬೇಕು. ಅಷ್ಟರಮಟ್ಟಿಗೆ ಪಾಕಿಸ್ತಾನದ ಕೈ ಕಟ್ಟಿದಂತಾಗುತ್ತದೆ.

ಮೊನ್ನೆಯಷ್ಟೇ ಅಮೆರಿಕ ‘ಪುಲ್ವಾಮಾದಂತಹ ಇನ್ನೊಂದು ಉಗ್ರ ದಾಳಿ ಭಾರತದ ಮೇಲಾದರೆ ಪರಿಣಾಮ ನೆಟ್ಟಗಿರಲಿಕ್ಕಿಲ್ಲ’ ಎಂದು ಪಾಕಿಸ್ತಾನವನ್ನು
ಎಚ್ಚರಿಸಿದೆ. ‘ಉಗ್ರರನ್ನು ರಕ್ಷಿಸುವ ವಿಚಾರದಲ್ಲಿ ಪಾಕಿಸ್ತಾನಕ್ಕೆ ರಕ್ಷಾ ಕವಚದಂತೆ ಚೀನಾ ವರ್ತಿಸಬಾರದು’ ಎಂದು ಹೇಳಿದೆ. ಅತ್ತ ಫ್ರಾನ್ಸ್, ಮಸೂದ್ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ. ಐರೋಪ್ಯ ಒಕ್ಕೂಟದ ಮುಂದೆ ವಾದ ದಾಖಲಿಸಿ ಮಸೂದ್‌ನನ್ನು ಉಗ್ರರ ಪಟ್ಟಿಗೆ ಸೇರಿಸುವಂತೆ ಜರ್ಮನಿ ಒತ್ತಾಯಿಸಿದೆ.

ಈ ಎಲ್ಲ ಕ್ರಮಗಳಿಂದ ಪಾಕಿಸ್ತಾನ ವಿರುದ್ಧದ ಭಾರತದ ವಾದಕ್ಕೆ ಜಾಗತಿಕ ವೇದಿಕೆಯಲ್ಲಿ ಹೆಚ್ಚಿನ ಬಲ ಬಂದಂತಾಗಿದೆ. ಪಾಕಿಸ್ತಾನವನ್ನು ಒಂಟಿಯಾಗಿಸುವ ಪ್ರಯತ್ನದಲ್ಲಿ ಭಾರತ ಒಂದು ಹಂತದವರೆಗೆ ಯಶಸ್ವಿಯಾಗಿದೆ. ಇನ್ನು ಚೀನಾವನ್ನೂ ರಾಜತಾಂತ್ರಿಕವಾಗಿ ಬೆತ್ತಲುಗೊಳಿಸುವ ಜಾಣ್ಮೆಯನ್ನು ಭಾರತ ತೋರಬೇಕು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು