ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀಮೋಲ್ಲಂಘನ: ಇನ್ನಷ್ಟು ಹೆಚ್ಚೀತೇ ಪುಟಿನ್ ಪ್ರಾಬಲ್ಯ?

ಉಕ್ರೇನ್ ಯುದ್ಧ ಆರಂಭವಾದ ಬಳಿಕ ಎದ್ದ ಪ್ರಶ್ನೆಗಳಿಗೆ ಈ ಚುನಾವಣೆ ಉತ್ತರ ಒದಗಿಸಬಹುದು
Published 4 ಮಾರ್ಚ್ 2024, 23:50 IST
Last Updated 4 ಮಾರ್ಚ್ 2024, 23:50 IST
ಅಕ್ಷರ ಗಾತ್ರ

ವ್ಲಾಡಿಮಿರ್ ಪುಟಿನ್ ಅವರು ಐದನೆಯ ಅವಧಿಗೆ ರಷ್ಯಾದ ಅಧ್ಯಕ್ಷರಾಗುವತ್ತ ಮುನ್ನಡೆದಿದ್ದಾರೆ. ಈ ತಿಂಗಳ 15ರಿಂದ 17ರವರೆಗೆ ರಷ್ಯಾದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ತಾಂತ್ರಿಕವಾಗಿ ನೋಡಿದರೆ ಪುಟಿನ್ ಅವರ ವಿರುದ್ಧ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆದರೆ ಪುಟಿನ್ ಅವರಿಗೆ ಸ್ಪರ್ಧೆ ಒಡ್ಡುವಷ್ಟು ಬಲಿಷ್ಠರಾಗಿಲ್ಲ.

ಇದೇ ಸಂದರ್ಭದಲ್ಲಿ ಉಕ್ರೇನ್ ಯುದ್ಧಕ್ಕೆ ಎರಡು ವರ್ಷ ತುಂಬಿದೆ. ಹಾಗಾಗಿ ರಷ್ಯಾದ ಅಧ್ಯಕ್ಷೀಯ ಚುನಾವಣೆ ಮತ್ತು ಉಕ್ರೇನ್ ಯುದ್ಧವನ್ನು ಜೊತೆಯಾಗಿಯೇ ನೋಡಬೇಕಾಗುತ್ತದೆ. ಉಕ್ರೇನ್ ಯುದ್ಧ ಆರಂಭವಾದ ಬಳಿಕ ಎದ್ದ ಹಲವು ಪ್ರಶ್ನೆಗಳಿಗೆ, ಈ ಚುನಾವಣೆ ಉತ್ತರ ಒದಗಿಸಬಹುದು. ಆ ಕಾರಣದಿಂದಲೂ ರಷ್ಯಾದ ಅಧ್ಯಕ್ಷೀಯ ಚುನಾವಣೆ ಮಹತ್ವ ಪಡೆದುಕೊಂಡಿದೆ.

ಉಕ್ರೇನ್ ಯುದ್ಧ ಆರಂಭವಾದಾಗ, ಇದು ಪುಟಿನ್ ಅವರು ಪ್ರತಿಷ್ಠೆಗಾಗಿ ನಡೆಸುತ್ತಿರುವ ಯುದ್ಧ, ರಷ್ಯಾದ ಜನ ಉಕ್ರೇನ್ ಯುದ್ಧದ ವಿರುದ್ಧ ಇದ್ದಾರೆ, ಪಾಶ್ಚಿಮಾತ್ಯ ರಾಷ್ಟ್ರಗಳು ವಿಧಿಸಿರುವ ಆರ್ಥಿಕ ದಿಗ್ಬಂಧನದ ಬಿಸಿ ನೇರವಾಗಿ ರಷ್ಯಾದ ಜನರನ್ನು ತಟ್ಟಲಿದೆ, ಜನಾಂದೋಲನ ನಡೆದು ಪುಟಿನ್ ಪದಚ್ಯುತಿಯಾದರೆ ಅಚ್ಚರಿಯಿಲ್ಲ, ಆಗ ಯುದ್ಧ ನಿಲ್ಲಬಹುದು ಎಂಬ ಒಂದು ಸಾಧ್ಯತೆಯನ್ನು ಪಶ್ಚಿಮ ಜಗತ್ತು ಚರ್ಚಿಸಿತ್ತು.

ಆದರೆ ಈ ಎರಡು ವರ್ಷಗಳ ಅವಧಿಯಲ್ಲಿ ಅಂತಹ ಬೆಳವಣಿಗೆಗಳು ನಡೆಯಲಿಲ್ಲ. ರಷ್ಯಾ ತೈಲ ಮಾರಾಟದಿಂದ ಗಳಿಸುತ್ತಿದ್ದ ಆದಾಯವನ್ನು ಪರಿಣಾಮ ಕಾರಿಯಾಗಿ ನಿಗ್ರಹಿಸಲು ಅಮೆರಿಕ ಸೇರಿದಂತೆ ಪಶ್ಚಿಮ ರಾಷ್ಟ್ರಗಳಿಗೆ ಸಾಧ್ಯವಾಗಲಿಲ್ಲ. ದಕ್ಷಿಣ ಜಗತ್ತಿನ ಬಹುತೇಕ ರಾಷ್ಟ್ರಗಳು ರಷ್ಯಾದೊಂದಿಗಿನ ವ್ಯವಹಾರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡವು. ಹಾಗಾಗಿ ರಷ್ಯಾಕ್ಕೆ ಆರ್ಥಿಕ ಆಘಾತ ನೀಡುವ ಅಮೆರಿಕದ ತಂತ್ರಗಾರಿಕೆಗೆ ಸೋಲಾಯಿತು. ಹಾಗಂತ ನಿಜಕ್ಕೂ ರಷ್ಯಾದ ಜನ ಪುಟಿನ್ ಅವರನ್ನು
ಬೆಂಬಲಿಸುತ್ತಿಲ್ಲವೇ, ಉಕ್ರೇನ್ ಯುದ್ಧದ ವಿರುದ್ಧ ಅಭಿಪ್ರಾಯ ದಾಖಲಿಸಲಿದ್ದಾರೆಯೇ ಎನ್ನುವುದಕ್ಕೆ ಈ ಚುನಾವಣೆ ಉತ್ತರ ಹೇಳಬಹುದು.

ಕಳೆದ ವರ್ಷ ಪುಟಿನ್ ಅವರ ಒಂದು ಕಾಲದ ಆಪ್ತ ಪ್ರಿಗೋಷಿನ್ ತನ್ನ ವ್ಯಾಗ್ನರ್ ಪಡೆಯ ಮೂಲಕ ಪುಟಿನ್ ಅವರ ಎದೆಯಲ್ಲಿ ದಿಗಿಲು ಹುಟ್ಟಿಸಿದ್ದು ನಿಜ. 20 ವರ್ಷಗಳಿಗೂ ಹೆಚ್ಚಿನ ತಮ್ಮ ಆಡಳಿತದಲ್ಲಿ, ಪುಟಿನ್ ಎದುರಿಸಿದ ಅತಿದೊಡ್ಡ ಬೆದರಿಕೆ ಎಂದರೆ ಅದು ವ್ಯಾಗ್ನರ್ ಪಡೆಯದ್ದಾಗಿತ್ತು. ಆ ಸಂದರ್ಭದಲ್ಲಿ ಪುಟಿನ್ ಅವರ ಕುರಿತು ರಷ್ಯಾದ ಸೇನೆಗೆ ಅಸಮಾಧಾನವಿದೆ. ವ್ಯಾಗ್ನರ್ ದಂಗೆಯ ನೆಪದಲ್ಲಿ ಸೇನೆ ಆಡಳಿತವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡು, ಪುಟಿನ್ ಅವರನ್ನು ಪದಚ್ಯುತಿಗೊಳಿಸಬಹುದು ಎಂಬ ವದಂತಿ ಹಬ್ಬಿತ್ತು.

ಪುಟಿನ್ ಆಂತರಿಕ ವಿರೋಧವನ್ನು ಎದುರಿಸುತ್ತಿದ್ದಾರೆಯೇ, ಜಗತ್ತಿನ ಬಲಿಷ್ಠ ನಾಯಕರ ಪೈಕಿ ಒಬ್ಬರಾಗಿರುವ ಪುಟಿನ್ ಅವರ ಪ್ರಾಬಲ್ಯ ರಷ್ಯಾದಲ್ಲಿ ಕುಗ್ಗುತ್ತಿದೆಯೇ ಎಂಬ ಪ್ರಶ್ನೆಗಳು ಎದ್ದಿದ್ದವು. ಆದರೆ ವ್ಯಾಗ್ನರ್ ದಂಗೆಯನ್ನು ತಮ್ಮದೇ ಶೈಲಿಯಲ್ಲಿ ತ್ವರಿತವಾಗಿ ಮಟ್ಟಹಾಕುವಲ್ಲಿ ಪುಟಿನ್ ಯಶಸ್ವಿಯಾದರು. ಪ್ರಿಗೋಷಿನ್ ವಿಮಾನ ಅಪಘಾತದಲ್ಲಿ ಮರಣ ಹೊಂದಿದ್ದರ ಕುರಿತು ಹೆಚ್ಚು ಚರ್ಚೆಯಾಗಲಿಲ್ಲ! ಒಂದೊಮ್ಮೆ ಪುಟಿನ್ ಆಂತರಿಕ ವಿರೋಧ ಎದುರಿಸುತ್ತಿದ್ದರೆ, ಅದು ಈ ಚುನಾವಣೆಯಲ್ಲಿ ಯಾವುದಾದರೂ ಮಾದರಿಯಲ್ಲಿ ಅಭಿವ್ಯಕ್ತಗೊಳ್ಳಬಹುದು. ಆ ಕಾರಣದಿಂದಲೂ ರಷ್ಯಾದ ಅಧ್ಯಕ್ಷೀಯ ಚುನಾವಣೆಯನ್ನು ಜಗತ್ತು ಗಮನಿಸುತ್ತಿದೆ.

ಪುಟಿನ್ ಅವರ ವಿಷಯ ನೋಡುವುದಾದರೆ, ಜೋಸೆಫ್ ಸ್ಟಾಲಿನ್ ಅವರ ಬಳಿಕ ಹೆಚ್ಚು ಅವಧಿಗೆ ರಷ್ಯಾದ ಅಧ್ಯಕ್ಷ ಗಾದಿಯಲ್ಲಿ ಕುಳಿತ ನಾಯಕ ಎಂದರೆ ಅದು ಪುಟಿನ್. ಕೆಲವು ಸಮೀಕ್ಷೆಗಳ ಪ್ರಕಾರ ರಷ್ಯಾದಲ್ಲಿ ಅತಿ ಹೆಚ್ಚು ಜನಪ್ರಿಯತೆಯನ್ನು ಗಳಿಸಿಕೊಂಡ ಮತ್ತು ಈಗಲೂ ಉಳಿಸಿಕೊಂಡಿರುವ ನಾಯಕ ಕೂಡ ಹೌದು.

ಸೋವಿಯತ್ ಅವಧಿಯಲ್ಲಿ ಅದರ ಗುಪ್ತಚರ ಸಂಸ್ಥೆ ಕೆಜಿಬಿಯ ಏಜೆಂಟ್ ಆಗಿ ವೃತ್ತಿ ಆರಂಭಿಸಿದ್ದ ಪುಟಿನ್, ನಂತರ ರಾಜಕೀಯವಾಗಿ ಬೆಳೆದು ಪ್ರಧಾನಿ ಪಟ್ಟಕ್ಕೆ ಏರಿದರು. 1999ರ ಡಿಸೆಂಬರ್ 31ರಂದು ರಷ್ಯಾದ ಹಂಗಾಮಿ ಅಧ್ಯಕ್ಷರಾಗಿ, ಆ ಪದವಿಯಲ್ಲಿ ಕುಳಿತ ಮೇಲೆ ಅವರು ರಷ್ಯಾದ ಮೇಲಿನ ತಮ್ಮ ಹಿಡಿತವನ್ನು, ಅಗ್ರ ನಾಯಕನ ಪಟ್ಟವನ್ನು ಬಿಟ್ಟುಕೊಡಲಿಲ್ಲ. ಅಧಿಕಾರ ಉಳಿಸಿಕೊಳ್ಳಲು ಬೇಕಾದ ಎಲ್ಲ ಸಾಂವಿಧಾನಿಕ
ಮಾರ್ಪಾಡುಗಳನ್ನೂ ಮಾಡಿಕೊಂಡರು.

2000ನೇ ಇಸವಿಯಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಶೇಕಡ 53ರಷ್ಟು ಮತ ಪಡೆದು ಅಧ್ಯಕ್ಷರಾಗಿ ಚುನಾಯಿತರಾದರು. 2004ರಲ್ಲಿ ಎರಡನೆಯ ಬಾರಿ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿದ ಪುಟಿನ್, ಶೇಕಡ 71ರಷ್ಟು ಮತ ಪಡೆದು ಪುನರಾಯ್ಕೆಯಾದರು.

ರಷ್ಯಾದ ಸಂವಿಧಾನ, ನಾಲ್ಕು ವರ್ಷಗಳ ಎರಡು ಸತತ ಅವಧಿಗೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಬಹುದು ಎಂಬ ನಿಬಂಧನೆಯನ್ನು ಹೊಂದಿತ್ತು. ಅದು ಪುಟಿನ್ ಅವರಿಗೆ ತೊಡಕಾಗಿತ್ತು. 2008ರಲ್ಲಿ ಪುಟಿನ್, ತಮ್ಮ ಆಪ್ತ ಡಿಮಿಟ್ರಿ ಮೆಡ್ವೆಡೆವ್ ಅವರನ್ನು ಆ ಸ್ಥಾನಕ್ಕೆ ತಂದರು. ತಾವು ಪ್ರಧಾನಿ ಹುದ್ದೆಯಲ್ಲಿ ಕುಳಿತರು. 2008ರಲ್ಲಿ ತರಲಾದ ಸಾಂವಿಧಾನಿಕ ತಿದ್ದುಪಡಿಯು ಅಧ್ಯಕ್ಷರ ಅವಧಿಯನ್ನು ಆರು ವರ್ಷಗಳಿಗೆ ಏರಿಸಿತು.

2012ರಲ್ಲಿ ಮತ್ತು 2018ರ ಅಧ್ಯಕ್ಷೀಯ ಚುನಾವಣೆಯಲ್ಲಿ ಪುಟಿನ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಗೆದ್ದರು. 2020ರಲ್ಲಿ ತರಲಾದ ಮತ್ತೊಂದು ಸಾಂವಿಧಾನಿಕ ತಿದ್ದುಪಡಿಯು ಇನ್ನೂ ಎರಡು ಅವಧಿಗೆ ಪುಟಿನ್ ಅಧ್ಯಕ್ಷರಾಗಬಹುದು ಎಂಬ ಅವಕಾಶವನ್ನು ಒದಗಿಸಿತು.

ಹೀಗೆ ತಮಗೆ ಅಡ್ಡಿಯಾಗಿದ್ದ ಕಾನೂನುಗಳನ್ನು ಕಾಲಕಾಲಕ್ಕೆ ಬದಲಿಸಿ, ಸತತವಾಗಿ ಅಧಿಕಾರ ಕಾಯ್ದು ಕೊಂಡ ಪುಟಿನ್ ಅವರ ಅವಧಿಯಲ್ಲಿ ಭ್ರಷ್ಟಾಚಾರ, ಮಾನವ ಹಕ್ಕುಗಳ ಉಲ್ಲಂಘನೆ ಹೆಚ್ಚಿತು. ರಾಜಕೀಯ ವಿರೋಧಿಗಳನ್ನು, ಮಾಧ್ಯಮಗಳನ್ನು ಮಟ್ಟಹಾಕಲಾಯಿತು. ರಷ್ಯಾ ನಿಜಕ್ಕೂ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ದೇಶವೇ ಎಂಬ ಪ್ರಶ್ನೆ ಏಳಲು ಪುಟಿನ್ ಕಾರಣರಾದರು.

ಪುಟಿನ್ ಅವರ ಆಡಳಿತವನ್ನು ‘ಕಳ್ಳರು ಮತ್ತು ದುಷ್ಟರ ಆಡಳಿತ’ ಎಂದು ಬಣ್ಣಿಸಿದ್ದ, ಭ್ರಷ್ಟಾಚಾರ ವಿರೋಧಿ ಹೋರಾಟ ಕಟ್ಟಿದ್ದ ವಿರೋಧ ಪಕ್ಷದ ಅಲೆಕ್ಸಿ ನವಲ್ನಿ ರಾಜಕೀಯ ಕೈದಿಯಾಗಿ ಸೆರೆವಾಸ ಅನುಭವಿಸಬೇಕಾಯಿತು. ‘ಈ ಬಾರಿಯ ಚುನಾವಣೆಯಲ್ಲಿ ಪುಟಿನ್ ವಿರುದ್ಧ ಮತ ಚಲಾಯಿಸಿ’ ಎಂಬ ಸಂದೇಶವನ್ನು ರಷ್ಯಾದ ಮತದಾರರಿಗೆ ಫೆಬ್ರುವರಿ ಮೊದಲ ವಾರದಲ್ಲಿ ಅಲೆಕ್ಸಿ ನೀಡಿದ್ದರು. ಫೆಬ್ರುವರಿ 16ರಂದು ಜೈಲಿನಲ್ಲಿ ವಾಕ್ ಮಾಡುತ್ತಿದ್ದ ವೇಳೆ ಅವರು ಕುಸಿದುಬಿದ್ದು ತೀರಿಕೊಂಡರು!

ಕಳೆದ ಕಾಲು ಶತಮಾನದಿಂದ ರಷ್ಯಾದ ಪ್ರಧಾನ ಅಂಶವಾಗಿರುವ ಪುಟಿನ್, ದೇಶದ ಒಳಗೆ ಜನಪ್ರಿಯತೆ ಯನ್ನು ಮತ್ತು ಜಾಗತಿಕವಾಗಿ ಹಲವು ವಿಷಯಗಳಲ್ಲಿ ಕುಖ್ಯಾತಿಯನ್ನು ಹೊಂದಿರುವ ನಾಯಕ. ಆದರೆ ಪುಟಿನ್ ಅವರ ಅವಧಿಯಲ್ಲಿ ರಷ್ಯಾ ಸ್ಥಿರತೆಯನ್ನು ಸಾಧಿಸಿದೆ ಮತ್ತು ಆರ್ಥಿಕವಾಗಿ ಸಬಲಗೊಂಡಿದೆ ಎಂಬುದೂ ದಿಟ. ಆ ಕಾರಣದಿಂದಲೇ ಅಲ್ಲಿನ ಜನ ಪುಟಿನ್ ಅವರನ್ನು ಬೆಂಬಲಿಸುತ್ತಾರೆ ಎನ್ನುವ ಅಭಿಪ್ರಾಯವೂ ಇದೆ. ಹಾಗಾಗಿ ಪುಟಿನ್ ನಂತರ ಯಾರು ಅಥವಾ ಪುಟಿನ್ ಬದಲಿಗೆ ಯಾರು ಎಂಬ ಪ್ರಶ್ನೆ ಸದ್ಯಕ್ಕಂತೂ ಅಪ್ರಸ್ತುತ. ಈ ಚುನಾವಣೆಯಲ್ಲಿ ಗೆದ್ದು ಅವರು ತಮ್ಮ ಪ್ರಾಬಲ್ಯವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಬಹುದು.

ಚುನಾವಣೆಯ ವಿಜಯವನ್ನು ಪುಟಿನ್, ಉಕ್ರೇನ್ ಯುದ್ಧಕ್ಕೆ ರಷ್ಯಾದ ಜನರ ಅನುಮೋದನೆ ಎಂಬಂತೆ ಬಿಂಬಿಸಬಹುದು. ರಷ್ಯಾದಲ್ಲಿ ಅಧ್ಯಕ್ಷೀಯ ಚುನಾವಣೆ ನಿರಾತಂಕವಾಗಿ ನಡೆದರೆ, ಉಕ್ರೇನ್ ಯುದ್ಧದಿಂದ ರಷ್ಯಾ ಯಾವುದೇ ರೀತಿಯಲ್ಲೂ ಬಾಧಿತವಾಗಿಲ್ಲ ಎಂಬ ಸಂದೇಶ ಹೊರಹೊಮ್ಮುತ್ತದೆ. ಅಧ್ಯಕ್ಷೀಯ ಚುನಾವಣೆಯನ್ನು ರಷ್ಯಾ ಆಕ್ರಮಿತ ಉಕ್ರೇನ್ ಭಾಗಗಳಿಗೂ ವಿಸ್ತರಿಸಿರುವುದರಿಂದ, ಆ ಪ್ರದೇಶಗಳು ರಷ್ಯಾದ ಭಾಗ ಎಂದು ಜಗತ್ತಿಗೆ ಮತ್ತೊಮ್ಮೆ ಸಾರಿದಂತೆ ಆಗುತ್ತದೆ. ಪುಟಿನ್ ಅವರಿಗೆ ಬೇಕಿರುವುದು ಅದೇ.
71ರ ವಯಸ್ಸಿನ ಪುಟಿನ್, ಆರು ವರ್ಷಗಳ ಮತ್ತೆರಡು ಅವಧಿಗೆ ಅಂದರೆ 2036ರವರೆಗೆ ಅಧ್ಯಕ್ಷ ಗಾದಿಯಲ್ಲಿ ಉಳಿಯಲು ಬೇಕಾದ ಸಿದ್ಧತೆ ಮಾಡಿಕೊಂಡಂತೆ ಕಾಣುತ್ತಿದೆ. ಆ ವೇಳೆಗೆ ಪುಟಿನ್ 85 ವರ್ಷದ ಆಸುಪಾಸಿನಲ್ಲಿರುತ್ತಾರೆ. ಸದ್ಯಕ್ಕೆ ಸಾಂವಿಧಾನಿಕ ತೊಡಕನ್ನಂತೂ ಪುಟಿನ್ ನಿವಾರಿಸಿಕೊಂಡಿದ್ದಾರೆ, ವಿಧಿ ಸಹಕರಿಸಬೇಕಷ್ಟೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT