ಗುರುವಾರ , ಆಗಸ್ಟ್ 13, 2020
21 °C

ಎಣಿಕೆಗೆ ಸಿಗದ ಪೇಟೆಯ ವಹಿವಾಟು

ಕೆ. ಜಿ. ಕೃಪಾಲ್ Updated:

ಅಕ್ಷರ ಗಾತ್ರ : | |

ಷೇರುಪೇಟೆಯ ಚಟುವಟಿಕೆಯು ಇತ್ತೀಚಿನ ದಿನಗಳಲ್ಲಿ ಹೂಡಿಕೆಯಂತಿರದೆ ವ್ಯವಹಾರದಂತಿದೆ. ಇದಕ್ಕೆ ಮುಖ್ಯ ಕಾರಣ ತಾಂತ್ರಿಕತೆಯ ಸವಲತ್ತು, ಮಾಧ್ಯಮಗಳಲ್ಲಿ ಒದಗಿಬರುವ ಸ್ಥಳೀಯ ಮತ್ತು ಅಂತರ ರಾಷ್ಟ್ರೀಯ ಸುದ್ದಿ ಸಮಾಚಾರಗಳು, ವಿಶ್ಲೇಷಣೆಗಳಾಗಿವೆ. ಮ್ಯಾನೇಜ್‌ಮೆಂಟ್ ಪುಸ್ತಕಗಳಲ್ಲಿರುವ ಮಾಹಿತಿಗಳಿಂದ ಹೊರಬಂದು ತಮ್ಮದೇ ಆದ ಶೈಲಿಯಲ್ಲಿ ಚಟುವಟಿಕೆಗಳು ನಡೆಯುತ್ತಿವೆ. ಈಗಿನ ಏರಿಳಿತಗಳನ್ನು ಪಠ್ಯಗಳಲ್ಲಿ ಹಿಡಿದಿಡಲು ಸಾಧ್ಯವಿಲ್ಲದಂತಾಗಿದೆ. ಪೇಟೆಯ ವೇಗ ಹೇಗಿದೆ ಎಂದರೆ, ಮಂಗಳವಾರ ಪೇಟೆಯ ಬಂಡವಾಳೀಕರಣ ಮೌಲ್ಯ ₹ 135.31 ಲಕ್ಷ ಕೋಟಿಯಾದರೆ ಬುಧವಾರ ₹ 138.39 ಲಕ್ಷ ಕೋಟಿಗೆ ಏರಿಕೆ ಕಂಡಿತಾದರೂ, ಗುರುವಾರ ₹ 135.70 ಲಕ್ಷ ಕೋಟಿಗೆ ಕುಸಿಯಿತು.

ಅಂತರ ರಾಷ್ಟ್ರೀಯ ಮಟ್ಟದಲ್ಲಿ ರೂಪಾಯಿಯ ಬೆಲೆ ಮತ್ತು ಕಚ್ಚಾ ತೈಲಬೆಲೆಗಳ ನರ್ತನಕ್ಕೆ ತಕ್ಕಂತೆ ಸ್ಥಳೀಯ ಪೇಟೆಗಳು ಸ್ಪಂದಿಸಿದರೆ ಗುರುವಾರ ವಿಶ್ವದ ಇತರೆ ಪೇಟೆಗಳು ಪ್ರದರ್ಶಿಸಿದ ಭಾರಿ ಕುಸಿತವು ಸ್ಥಳೀಯ ಪೇಟೆಯ ಕುಸಿತಕ್ಕೆ ಕಾರಣವಾಗಿದೆ. ಪೇಟೆಯು ನಿಧಾನವಾಗಿ ಮೆಟ್ಟಲೇರಿಕೊಂಡು ಮೇಲೆ ಬಂದರೆ, ಇಳಿಯುವಾಗ 'ಲಿಫ್ಟ್' ನಲ್ಲಿ ಸರಾಗವಾಗಿ ಜಾರುವುದು ವಾಡಿಕೆಯಾಗಿದೆ. ಪೇಟೆಯಲ್ಲಿ ಯಶಸ್ಸು ಕಾಣಬೇಕಾದರೆ ಶ್ವಾನ ನಿದ್ದೆಯಂತೆ ಕಣ್ಮುಚ್ಚಿದ್ದರೂ ಎಚ್ಚರವಾಗಿರಬೇಕು, ಸದಾ ಲಾಭ ಗಳಿಕೆಯ ಅವಕಾಶದ ಧ್ಯಾನ ಮಾಡಿದಲ್ಲಿ ಮಾತ್ರ ಗಜ ಸ್ನಾನದ ತೃಪ್ತಿ ಲಭಿಸುವುದು ಸಾಧ್ಯ.

ಹೆಚ್ಚಿನವರಿಗೆ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದರೆ ಸುರಕ್ಷಿತವೆಂಬ ಭಾವನೆ ಇದೆ. ಆದರೆ, ಇಲ್ಲಿಯೂ ಸಹ ಪೇಟೆಯ ಏರಿಳಿತಗಳಿಗೆ ತಕ್ಕಂತೆ ಹೂಡಿಕೆಯ ನಿವ್ವಳ ಸಂಪತ್ತಿನ ಮೌಲ್ಯವು (ಎನ್‌ಎವಿ) ಬದಲಾಗುತ್ತಿರುತ್ತದೆ. ಕೆಲವರಿಗೆ ಸಾಲಪತ್ರಗಳ ಯೋಜನೆಯಲ್ಲಿ ಹೂಡಿಕೆ ಸುರಕ್ಷಿತ ಎಂಬ ಭಾವನೆ ಇದೆ. ಇದು ಸಹ ಸರಿಯಲ್ಲ. ವಿಶೇಷವಾಗಿ ಕಾರ್ಪೊರೇಟ್ ಸಾಲಪತ್ರಗಳು ಹೆಚ್ಚು ಅಪಾಯಕಾರಿ. ಪೇಟೆಯಲ್ಲಿ ಎಲ್ಲಾ ವ್ಯಾವಹಾರಿಕ ಚಟುವಟಿಕೆಗೆ ಮೂಲ ಬೇಡಿಕೆ - ಪೂರೈಕೆಗಳೇ ಆಗಿವೆ. ಇತ್ತೀಚಿಗೆ ಪ್ರಮುಖ ಕಂಪನಿಗಳಾದ ದಿವಾನ್ ಹೌಸಿಂಗ್ ಫೈನಾನ್ಸ್, ಶ್ರೀರಾಮ್ ಟ್ರಾನ್ಸ್‌ಪೋರ್ಟ್ ಫೈನಾನ್ಸ್, ಟಾಟಾ ಕ್ಯಾಪಿಟಲ್ ನಂತಹ ಡಿಬೆಂಚರ್‌ಗಳು ವಿತರಣೆ ಬೆಲೆಗಿಂತ ಕಡಿಮೆ ಬೆಲೆಗೆ ಮಾರಾಟವಾಗುತ್ತಿವೆ. ಆಂಧ್ರಪ್ರದೇಶ ಕ್ಯಾಪಿಟಲ್ ರೀಜನ್ ಡೆವಲಪ್‌ಮೆಂಟ್ ಅಥಾರಿಟಿ ವಿತರಿಸಿದ ಶೇ 10.32 ಬಡ್ಡಿ ಹೊಂದಿದ ₹ 2 ಲಕ್ಷ ಮುಖಬೆಲೆಯ ಬಾಂಡ್‌ಗಳು ಲಿಸ್ಟ್ ಆದಾಗಿನಿಂದಲೂ ಒಂದು ಡಿಬೆಂಚರ್ ಸಹ ವಹಿವಾಟಾಗಿಲ್ಲ. ಲಿಸ್ಟಿಂಗ್ ಆಗುತ್ತವೆ ಎನ್ನುವುದಕ್ಕಿಂತ ಎಷ್ಟು ಚುರುಕಾದ ವಹಿವಾಟು ಪ್ರದರ್ಶಿಸುತ್ತವೆ ಎಂಬುದು ಮುಖ್ಯ. ಹಾಗಾಗಿ ಕಾರ್ಪೊರೇಟ್ ಡಿಬೆಂಚರ್‌ಗಳು ಸಹ ಸುರಕ್ಷತೆಹೊಂದಿಲ್ಲ ಎಂಬುದನ್ನು ಹೂಡಿಕೆದಾರರು ಗಮನದಲ್ಲಿ ಇರಿಸಿಕೊಳ್ಳಬೇಕು.

ಸಂವೇದಿ ಸೂಚ್ಯಂಕವು ಆಗಸ್ಟ್ ತಿಂಗಳ 29 ರಂದು 38,989 ಅಂಶಗಳಿಗೆ ಏರಿಕೆ ಕಂಡು ಅಕ್ಟೋಬರ್ ಎರಡನೇ ವಾರದಲ್ಲಿ 34,001 ಪಾಯಿಂಟುಗಳಿಗೆ ಕುಸಿದಿರುವ ಅಸ್ಥಿರತೆಗೆ ಪದೇ ಪದೇ ಪ್ರಕಟವಾಗುವ ಅಪಾರ ಅಂಕಿ ಅಂಶಗಳೇ ಕಾರಣ. ಸೂಚ್ಯಂಕಗಳು, ಉಪ ಸೂಚ್ಯಂಕಗಳ ಜೊತೆಗೆ ರೂಪಾಯಿ ಬೆಲೆ, ಕಚ್ಚಾ ತೈಲ ಬೆಲೆ, ಸರಕುಗಳ ಬೆಲೆಗಳಲ್ಲದೆ ಹಣದುಬ್ಬರ, ಕೈಗಾರಿಕಾ ಉತ್ಪನ್ನ ಸೂಚ್ಯಂಕದಲ್ಲಾಗುವ ಬದಲಾವಣೆ, ನಿರೀಕ್ಷಿತ ಜಿ ಡಿ ಪಿ ಬದಲಾವಣೆ, ರೇಟಿಂಗ್ ಸಂಸ್ಥೆಗಳು ನೀಡಬಹುದಾದ ದರ್ಜೆಗಳ ಮಧ್ಯೆ ಬಾಂಡ್ ಪೇಟೆಗಳಲ್ಲಾಗುವ ಏರಿಳಿತಗಳು ಮುಂತಾದ ಅಂಕಿ ಅಂಶಗಳು ಪೇಟೆಯಲ್ಲಿನ ಅಸ್ಥಿರತೆ ಹೆಚ್ಚಿಸುತ್ತಿವೆ.

ಇವುಗಳ ಮಧ್ಯೆ ಕಂಪನಿಗಳು ಆಂತರಿಕವಾಗಿ ಮಾಡಿದ ಸಾಧನೆಗಳು ಮರೆಯಾಗುವುದಲ್ಲದೆ, ಅವು ಕಾರ್ಪೊರೇಟ್ ಫಲಗಳ ಪ್ರಕಟಣೆಯಿಂದ ಹಿಂದೆ ಸರಿದು ಹೂಡಿಕೆದಾರರಲ್ಲಿ ಲಾಯಲ್ಟಿಯನ್ನು ದೂರಮಾಡಿ ಕೇವಲ ' ರಾಯಲ್ಟಿ' ಅಂಶವನ್ನು ಬಿತ್ತುತ್ತಿವೆ. ಷೇರುಪೇಟೆಯಲ್ಲಿ ಲಾಭ ಗಳಿಸಬೇಕು ಎಂದರೆ, ಕೇವಲ ಷೇರು ಮಾರಾಟ ಮಾಡಿಯೇ ಗಳಿಸಬೇಕು, ದೀರ್ಘಕಾಲ ಹೂಡಿಕೆ ಮುಂದುವರೆಸಿದರೆ ಅನಿಶ್ಚಿತ ವಾತಾವರಣವನ್ನು ಎದುರಿಸಬೇಕಾಗಬಹುದು. ಅಗ್ರಮಾನ್ಯ ಕಂಪನಿಗಳ ಷೇರಿನ ಬೆಲೆ ಕುಸಿತ ಕಂಡಾಗ ದೀರ್ಘಕಾಲೀನ ಚಿಂತನೆಯಿಂದ ವ್ಯಾಲ್ಯೂ ಪಿಕ್ ಮಾಡಿದರೂ ಅಲ್ಪಕಾಲೀನ ಅವಕಾಶವನ್ನು ಉಪಯೋಗಿಸುವ ಪ್ರಾಫಿಟ್ ಬುಕ್ ಅಳವಡಿಕೆಯೊಂದೇ ಇಂದಿನ ವಾತಾವರಣಕ್ಕೆ ರಾಮಬಾಣವಾಗಿದೆ.

ಹೂಡಿಕೆದಾರರು ಷೇರುಪೇಟೆಯ ಚಕ್ರವ್ಯೂಹದೊಳಗೆ ಪ್ರವೇಶಿಸುವ ಮುನ್ನ ಅರ್ಜುನ ವಿದ್ಯೆಯನ್ನು ಅಳವಡಿಸಿಕೊಳ್ಳಬೇಕು. ಕೇವಲ ಚಕ್ರವ್ಯೂಹದೊಳಗೆ ಪ್ರವೇಶಿಸಿ, ಹೊರಬರಲಾರದೆ ಇರುವ ಅಭಿಮನ್ಯುತನದಿಂದ ಹೊರಬಂದು, ಯಾಂತ್ರಿಕತೆಯ ಪ್ರಭಾವದಿಂದ ಬೇಕೆಂದಾಗ ಒಳ ಹೋಗುವ, ಹೊರ ಬರುವ ಅರ್ಜುನ ಗುಣ ಬೆಳೆಸಿಕೊಂಡಲ್ಲಿ ಅವಕಾಶಗಳು ಹೇಗೆ ಒದಗಿಬರುತ್ತವೆ ಎಂಬುದಕ್ಕೆ ಈ ಕೆಳಗಿನ ಅಗ್ರಮಾನ್ಯ ಕಂಪನಿಗಳು ಒದಗಿಸಿದ ಅವಕಾಶಗಳನ್ನು ಗಮನಿಸಬಹುದು.

* ಮಾರುತಿ ಸುಜುಕಿ ಷೇರಿನ ಬೆಲೆಯು ಮಂಗಳವಾರ ₹ 6,650 ರವರೆಗೂ ಕುಸಿದು ವಾರ್ಷಿಕ ಕನಿಷ್ಠಕ್ಕೆ ತಲುಪಿತು. ಶುಕ್ರವಾರ ಷೇರಿನ ಬೆಲೆ ಚೇತರಿಕೆ ಕಂಡು ₹ 7,320 ರವರೆಗೂ ಚೇತರಿಕೆ ಕಂಡು ₹ 7,283 ರಲ್ಲಿ ಅಂತ್ಯಕಂಡಿತು.

* ವೇದಾಂತ ಲಿಮಿಟೆಡ್ ಕಂಪನಿ ಸೋಮವಾರ ₹ 197.10 ಕ್ಕೆ ಕುಸಿದು ಶುಕ್ರವಾರ ₹ 216 ರವರೆಗೂ ಚೇತರಿಸಿಕೊಂಡು ₹ 214 ರ ಸಮೀಪ ಕೊನೆಗೊಂಡಿತು.

* ಟಾಟಾ ಮೋಟಾರ್ ಷೇರಿನ ಬೆಲೆ ಮಂಗಳವಾರ ₹ 170.65 ರ ವಾರ್ಷಿಕ ಕನಿಷ್ಠಕ್ಕೆ ಕುಸಿದು ಶುಕ್ರವಾರ ₹ 188 ರ ಸಮೀಪಕ್ಕೆ ಜಿಗಿದು ₹ 183 ರ ಸಮೀಪ ಕೊನೆಗೊಂಡಿದೆ.

* ಹೀರೊ ಮೋಟೋ ಕಾರ್ಪ್ ಷೇರಿನ ಬೆಲೆ ಒಂದು ತಿಂಗಳಲ್ಲಿ ₹ 3,205 ರ ಸಮೀಪದಿಂದ ಈ ತಿಂಗಳ 5 ರಂದು ₹ 2,695 ಕ್ಕೆ ತಲುಪಿ ವಾರ್ಷಿಕ ಕನಿಷ್ಠ ದಾಖಲಿಸಿ ಶುಕ್ರವಾರ ₹ 2,939 ರವರೆಗೂ ಜಿಗಿತಕಂಡು ₹ 2,892 ರಲ್ಲಿ ಕೊನೆಗೊಂಡಿತು.

* ಬಜಾಜ್ ಆಟೋ ಷೇರು ಒಂದು ತಿಂಗಳಲ್ಲಿ ₹ 2,908 ರಿಂದ ಸೋಮವಾರ 8 ರಂದು ₹ 2,500 ಕನಿಷ್ಠ ಮಟ್ಟ ದಾಖಲಿಸಿ ಶುಕ್ರವಾರ ₹ 2,649 ರವರೆಗೂ ಏರಿಕೆ ಕಂಡು ₹ 2,628 ರಲ್ಲಿ ಕೊನೆಗೊಂಡಿದೆ.

* ಒಎನ್‌ಜಿಸಿ ಷೇರಿನ ಬೆಲೆ ಸೋಮವಾರ ₹ 144.90ರ ಕನಿಷ್ಠಕ್ಕೆ ಕುಸಿದು ಶುಕ್ರವಾರ ₹ 157.80 ನ್ನು ತಲುಪಿ ₹ 157.20 ರಲ್ಲಿ ಕೊನೆಗೊಂಡಿತು.

ಶುಕ್ರವಾರ ಕುಸಿತ ಕಂಡಿದ್ದ  ಸರ್ಕಾರಿ  ವಲಯದ ಕಂಪನಿ ಷೇರುಗಳು ಅಂದರೆ ಎಂಜಿನೀಯರ್ಸ್‌ ಇಂಡಿಯಾ, ಬಿಇಎಲ್, ಗೇಲ್ ಇಂಡಿಯಾ , ಆಯಿಲ್ ಇಂಡಿಯಾ, ಐಒಸಿ, ಬಿಪಿಸಿಎಲ್, ಎಚ್‌ಎಲ್, ಎಂಎಂಟಿಸಿ, ಚೆನ್ನೈ ಪೆಟ್ರೋ, ಕೋಲ್ ಇಂಡಿಯಾ ಮುಂತಾದವುಗಳು ಗಮನಾರ್ಹವಾದ ಏರಿಕೆ ಪಡೆದುಕೊಂಡವು.

ಹೊಸ ಷೇರಿನ ವಿಚಾರ: ಗಾರ್ಡನ್ ರಿಚ್ ಶಿಪ್ ಬಿಲ್ಡರ್ಸ್ ಆ್ಯಂಡ್ ಎಂಜಿನಿಯರ್ಸ್‌ ಲಿಮಿಟೆಡ್ ಕಂಪನಿ ಇತ್ತೀಚಿಗೆ ಪ್ರತಿ ಷೇರಿಗೆ ₹ 118 ರಂತೆ ಆರಂಭಿಕ ಷೇರು ವಿತರಣೆ ಮಾಡಿದ್ದು   ಬುಧವಾರ ಬಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಯಿತು. ವಾರಾಂತ್ಯದವರೆಗೂ ವಿತರಣೆ ಬೆಲೆ ತಲುಪಲು ಸಾಧ್ಯವಾಗಿರಲಿಲ್ಲ.

ಲಾಭಾಂಶ ವಿಚಾರ: ಟಿಸಿಎಸ್: ಪ್ರತಿ ಷೇರಿಗೆ ₹ 4 (ನಿಗದಿತ ದಿನಾಂಕ: 24), ಹಿಂದೂಸ್ಥಾನ್ ಯುನಿಲಿವರ್: ₹ 9 (ನಿ. ದಿ.: 26 )

ಮುಖಬೆಲೆ ಸೀಳಿಕೆ ವಿಚಾರ: ಕೆಐಸಿ ಮೆಟಾಲಿಕ್ಸ್ ಲಿಮಿಟೆಡ್ ಕಂಪನಿ ಷೇರಿನ ಮುಖಬೆಲೆಯನ್ನು ₹ 10 ರಿಂದ ₹ 2 ಕ್ಕೆ ಸೀಳಲು ನವೆಂಬರ್ 5 ನಿಗದಿತ ದಿನವಾಗಿದೆ.

* ಫ್ರಂಟ್‌ಲೈನ್ ಸೆಕ್ಯುರಿಟೀಸ್ ಲಿಮಿಟೆಡ್ ಕಂಪನಿ ಷೇರಿನ ಮುಖಬೆಲೆಯನ್ನು ₹ 10 ರಿಂದ ₹ 5 ಕ್ಕೆ ಸೀಳಲು ಈ ತಿಂಗಳ 23 ನಿಗದಿತ ದಿನವಾಗಿದೆ.

* ಜಿಂದಾಲ್ ವರ್ಲ್ಡ್ ವೈಡ್ ಲಿ ಕಂಪನಿಯ ಷೇರಿನ ಮುಖಬೆಲೆಯನ್ನು ₹ 5 ರಿಂದ ₹ 1 ಕ್ಕೆ ಸೀಳಲು ನವೆಂಬರ್ 1 ನಿಗದಿತ ದಿನವಾಗಿದೆ.

ಕಂಪನಿ ಹೆಸರಿನ ಬದಲಾವಣೆ ವಿಚಾರ: ಆ್ಯಕ್ಸಲ್ ಫ್ರಂಟ್‌ಲೈನ್ ಲಿಮಿಟೆಡ್ ಕಂಪನಿಯ ಹೆಸರನ್ನು ಇನ್ಸ್ ಪಿರಿಸಿಸ್ ಸೊಲ್ಯೂಷನ್ಸ್ ಲಿಮಿಟೆಡ್ ಎಂದು ಬದಲಾಯಿಸಲಾಗಿದೆ.

ಬಾಂಬೆ ಆಕ್ಸಿಜನ್ ಕಾರ್ಪೊರೇಷನ್ ಲಿಮಿಟೆಡ್ ಕಂಪನಿ ಹೆಸರನ್ನು ಬಾಂಬೆ ಆಕ್ಸಿಜನ್ ಇನ್ವೆಸ್ಟ್‌ಮೆಂಟ್ಸ್ ಲಿಮಿಟೆಡ್ ಎಂದು ಬದಲಿಸಲಾಗಿದೆ.

ವಾರದ ಮುನ್ನೋಟ 
ಪ್ರಮುಖ ಸಂಸ್ಥೆಗಳಾದ ಇನ್ಫೊಸಿಸ್‌, ಎಸಿಸಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್‌ನ ದ್ವಿತೀಯ ತ್ರೈಮಾಸಿಕದ ಹಣಕಾಸು ಸಾಧನೆ, ಡಾಲರ್ ಎದುರು ರೂಪಾಯಿ ಬೆಲೆ ಏರಿಳಿತ, ಕಚ್ಚಾ ತೈಲದ ಬೆಲೆ ಮಟ್ಟವು ಈ ವಾರದ ವಹಿವಾಟಿನ ದಿಕ್ಕನ್ನು ನಿರ್ಧರಿಸಲಿವೆ.

ಸದ್ಯಕ್ಕೆ ಪೇಟೆಯ ವಹಿವಾಟು ಆಕರ್ಷಕವಾಗಿ ಕಾಣುತ್ತಿದ್ದು, ಹೂಡಿಕೆದಾರರು ತ್ರೈಮಾಸಿಕ ಹಣಕಾಸು ಫಲಿತಾಂಶಗಳ ಬಗ್ಗೆ ಹೆಚ್ಚಿನ ಸ್ಪಷ್ಟತೆ ನಿರೀಕ್ಷಿಸುತ್ತಿದ್ದಾರೆ. ಪೇಟೆಯಲ್ಲಿನ ಈ ಪರಿಸ್ಥಿತಿಯು ಬಾಂಡ್‌ಗಳ ಗಳಿಕೆ ಮತ್ತು ರೂಪಾಯಿ ವಿನಿಮಯ ದರ ಸ್ಥಿರತೆಯನ್ನು ಹೆಚ್ಚಾಗಿ ಅವಲಂಬಿಸಿದೆ.

ಅಮೆರಿಕದ ಫೆಡರಲ್‌ ರಿಸರ್ವ್‌ ಬಡ್ಡಿ ದರ ಹೆಚ್ಚಿಸುವುದಕ್ಕೆ ಸಂಬಂಧಿಸಿದ ಆತಂಕ, ಅಮೆರಿಕ ಮತ್ತು ಚೀನಾ ವಾಣಿಜ್ಯ ವಿವಾದ, ಚುನಾವಣೆಗೆ ಸಂಬಂಧಿಸಿದ ರಾಜಕೀಯ ಅನಿಶ್ಚಿತತೆಯು ವಹಿವಾಟಿನ ಮೇಲೆ ಪರಿಣಾಮ ಬೀರಲಿವೆ. ಗುರುವಾರ ಪೇಟೆಗೆ ರಜೆ ಇರಲಿದೆ.

***

ವಾರದ ವಹಿವಾಟು
ಸೂಚ್ಯಂಕ ಏರಿಕೆ: 356 ಅಂಶ
ಮಧ್ಯಮ ಶ್ರೇಣಿ ಸೂಚ್ಯಂಕದ ಏರಿಕೆ: 281 ಅಂಶ
ಕೆಳಮಧ್ಯಮ ಶ್ರೇಣಿ ಸೂಚ್ಯಂಕದ ಏರಿಕೆ : 313 ಅಂಶ
ವಿದೇಶಿ ವಿತ್ತೀಯ ಸಂಸ್ಥೆಗಳ ಮಾರಾಟ : ₹ 8,325 ಕೋಟಿ
ಸ್ವದೇಶಿ ವಿತ್ತೀಯ ಸಂಸ್ಥೆಗಳ ಹೂಡಿಕೆ: ₹ 8,658 ಕೋಟಿ
ಪೇಟೆಯ ಬಂಡವಾಳೀಕರಣ ಮೌಲ್ಯ: ₹ 138.68 ಲಕ್ಷ ಕೋಟಿ (ಹಿಂದಿನವಾರ: ₹ 136.60 ಲಕ್ಷ ಕೋಟಿ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು