ಸೋಮವಾರ, ಜನವರಿ 17, 2022
27 °C
ಮಾನವನ ವಿಕಾಸವು ಆರೋಗ್ಯ ಸುಧಾರಣೆ ಜೊತೆಗೆ ಅನಾಹುತವನ್ನೂ ತಂದೊಡ್ಡಿದೆ

ಅಭಿವೃದ್ಧಿ ಮತ್ತು ಅನಾರೋಗ್ಯ

ಡಾ. ಸುಶಿ ಕಾಡನಕುಪ್ಪೆ Updated:

ಅಕ್ಷರ ಗಾತ್ರ : | |

Prajavani

ಮನುಷ್ಯ, ವಿಕಾಸದ ಶಿಶು. ಪರಿಸರ, ಸಾಮಾಜಿಕ, ಸಾಂಸ್ಕೃತಿಕ, ಜೈವಿಕ ಕ್ಷೇತ್ರಗಳಲ್ಲಿ ಮುಖ್ಯವಾಗಿ ವಿಕಾಸದ ನೆಲೆಗಳು ಇವೆ. ಆದರೆ, ಭೂಜೀವಿಗಳ ಮತ್ತು ಪರಿಸರದ ವಿಕಸನದಲ್ಲಿ ಹಾಸುಹೊಕ್ಕಾಗಿರುವ ಮನುಷ್ಯನ ವಿಕಸನದ ಪ್ರತಿಕೂಲ ಪರಿಣಾಮಗಳು ಮಾನವ ಸಮಾಜವನ್ನೂ ನುಂಗಿವೆ. ಈ ಪರಿಣಾಮಗಳಲ್ಲಿ ಮಾನವ ಕುಲದ ಆರೋಗ್ಯವೂ ಒಂದು.

ಆರೋಗ್ಯ ಕೇವಲ ವೈದ್ಯಕೀಯ ಕ್ಷೇತ್ರದ ಪರಿಧಿಗೆ ಒಳಪಡದಿರುವ ಒಂದು ಸಂಕೀರ್ಣ ವಿದ್ಯಮಾನ. 19ನೇ ಶತಮಾನದವರೆಗೂ ಮನುಷ್ಯನ ಜೀವಿತಾವಧಿ 40 ವರ್ಷಗಳನ್ನು ಮೀರಿರಲಿಲ್ಲ. ಇದಕ್ಕೆ ಮುಖ್ಯ ಕಾರಣ, ತಡೆಯಿಲ್ಲದೆ ಪಸರಿಸುತ್ತಿದ್ದ ಸಾಂಕ್ರಾಮಿಕ ರೋಗಗಳು ಮತ್ತು ಮೂಲ ಸೌಕರ್ಯಗಳ ಕೊರತೆ. ಮಾನವನ ವಿಕಾಸವು ಆರೋಗ್ಯವನ್ನು ಸುಧಾರಿಸುವುದರ ಜೊತೆಗೆ ಅನಾರೋಗ್ಯದ ಪರಿಸ್ಥಿತಿ ಮತ್ತು ಅದರ ಕಾರಣಗಳನ್ನೂ ನಿರಂತರವಾಗಿ ಬದಲಾಯಿಸುತ್ತಾ ಬಂದಿದೆ.

ಈ ಬದಲಾವಣೆಗಳು ಮೊದಲು ಕಂಡದ್ದು ಇಂಗ್ಲೆಂಡ್‌ ಒಳಗೊಂಡಂತೆ ಪಶ್ಚಿಮ ಯುರೋಪ್ ದೇಶಗಳಲ್ಲಿ. 19ನೇ ಶತಮಾನದಲ್ಲಿ ಸಾರ್ವಜನಿಕ ಆರೋಗ್ಯ ಕ್ಷೇತ್ರ (ನೈರ್ಮಲ್ಯ-ಮೂಲ ಸೌಕರ್ಯಗಳ ಸುಧಾರಣೆ) ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಆದ ಆವಿಷ್ಕಾರಗಳು ರೋಗಜನಕ ಸೂಕ್ಷ್ಮಾಣುಜೀವಿಗಳ ನಿಯಂತ್ರಣವನ್ನು ಸಾಧ್ಯವಾಗಿಸಿ ಸಾಂಕ್ರಾಮಿಕ ರೋಗಗಳನ್ನು ತಗ್ಗಿಸಿದವು. ಕಡಿಮೆಯಾದ ಭೀಕರ ಯುದ್ಧಗಳು, ಕೃಷಿ– ಕೈಗಾರಿಕಾ ಕ್ರಾಂತಿ ಮತ್ತು ರಾಜಕೀಯ ಕ್ಷೇತ್ರದಲ್ಲಾದ ಜನಪರ ಬದಲಾವಣೆಯಿಂದ ಆಹಾರ ಕೊರತೆ ಸಮಸ್ಯೆ ನೀಗಿತು. ಜನರಿಗೆ ಹೇರಳ ಪ್ರಮಾಣದ ಆಹಾರ ಪೂರೈಕೆ ಸಾಧ್ಯವಾಯಿತು. ಅಪೌಷ್ಟಿಕತೆ ತಕ್ಕಮಟ್ಟಿಗೆ ನಿಯಂತ್ರಣಕ್ಕೆ ಬಂದಿತು. ಜೊತೆಗೆ ವೈದ್ಯಕೀಯ ಔಷಧಿಗಳ ಆವಿಷ್ಕಾರಗಳು (ಮುಖ್ಯವಾಗಿ ಆ್ಯಂಟಿಬಯಾಟಿಕ್ ಔಷಧ ಮತ್ತು ಲಸಿಕೆ) ನವಜಾತ ಶಿಶು ಮತ್ತು ತಾಯಿಯ ಮರಣದ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸಿದವು.

ಇದರ ಪರಿಣಾಮವಾಗಿ, 20ನೇ ಶತಮಾನದ ಮಧ್ಯದ ಹೊತ್ತಿಗೆ ಆರೋಗ್ಯವಂತ ಮಕ್ಕಳ ಸಂಖ್ಯೆಯಲ್ಲಿ ಹೆಚ್ಚಳವಾಯಿತು. ಸಾಂಕ್ರಾಮಿಕ ರೋಗಗಳಿಂದ ಸಾಯುತ್ತಿದ್ದವರ ಸಂಖ್ಯೆಯಲ್ಲಿ ಗಣನೀಯವಾಗಿ ಕಡಿತ ಉಂಟಾಗಿ ವ್ಯಕ್ತಿಯ ಜೀವಿತಾವಧಿ ಕೂಡ ಹೆಚ್ಚಾಯಿತು. ಜೊತೆಗೆ ಮಹಿಳೆಯ ಗರ್ಭಧಾರಣಾ ಪ್ರಮಾಣವೂ ಕಡಿಮೆಯಾಗತೊಡಗಿತು. ಇವೆಲ್ಲದರ ಪರಿಣಾಮವಾಗಿ ಜನರ ಕ್ಷಮತೆ ಹೆಚ್ಚಿದಂತೆ ದೇಶಗಳ ಆರ್ಥಿಕ ಪರಿಸ್ಥಿತಿಯೂ ಉನ್ನತಿಯಾಗುತ್ತಾ ಸಾಗಿತು.

ಜೀವಿತಾವಧಿಯ ಹೆಚ್ಚಳದಿಂದ ಜನಸಂಖ್ಯೆಯ ಪ್ರಮಾಣವೂ ಹೆಚ್ಚಿತು. ಕೈಗಾರಿಕಾ ಕ್ರಾಂತಿಯ ಪರಿಣಾಮವಾಗಿ 20ನೇ ಶತಮಾನದ ಮಧ್ಯಭಾಗದಿಂದ ಹೃದಯ- ಶ್ವಾಸಕೋಶ ಸಂಬಂಧಿ ಕಾಯಿಲೆಗಳು, ಕ್ಯಾನ್ಸರ್, ಡಯಾಬಿಟೀಸ್, ಬೊಜ್ಜು ಮತ್ತು ಮಾನಸಿಕ ಕಾಯಿಲೆಗಳಂತಹ ಹೊಸ ರೋಗಗಳು ಕಾಣಿಸಿಕೊಳ್ಳತೊಡಗಿದವು. ಈ ಕಾಯಿಲೆಗಳನ್ನು ಒಬ್ಬರಿಂದ ಮತ್ತೊಬ್ಬರಿಗೆ ‘ಹರಡದ ಕಾಯಿಲೆ’ಗಳು ಎನ್ನುತ್ತಾರೆ. ಅಭಿವೃದ್ಧಿಯ ವೇಗದ ಕಾರಣದಿಂದಾಗಿ ಆರೋಗ್ಯ ಮತ್ತು ರೋಗಗಳಲ್ಲಿನ ಈ ಮಾರ್ಪಾಡು ಮುಂದುವರಿದ ದೇಶಗಳಲ್ಲಿ ಮೊದಲು ಕಾಣಿಸಿಕೊಂಡಿತು. ಈ ಮಾದರಿಯ ಸ್ಥಿತ್ಯಂತರ ಭಾರತ ಸೇರಿದಂತೆ ಅಭಿವೃದ್ಧಿಶೀಲ ದೇಶಗಳಲ್ಲೂ ಉಂಟಾಯಿತು.

ಲ್ಯಾನ್ಸೆಟ್ ನಿಯತಕಾಲಿಕ ಪ್ರಕಟಿಸಿರುವ ‘ಗ್ಲೋಬಲ್ ಬರ್ಡನ್ ಆಫ್ ಡಿಸೀಸಸ್- 2017’ ವರದಿಯು 1990ರಿಂದ 2017ರವರೆಗಿನ ಮಾನವಕುಲದ ರೋಗಗಳ ಪ್ರಮಾಣ, ಕಾಲಾನುಕ್ರಮದಲ್ಲಿ ಅವುಗಳ ಸ್ವರೂಪದಲ್ಲಿ ಆದ ಬದಲಾವಣೆ ಮತ್ತು ಕಾರಣಗಳನ್ನು ತೆರೆದಿಟ್ಟಿದೆ. ಈ ಅಧ್ಯಯನವು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಯುನಿಸೆಫ್ ಸಂಸ್ಥೆಗಳ ಅಧ್ಯಯನಗಳನ್ನು ಪುಷ್ಟೀಕರಿಸುತ್ತದೆ. 1990ರಲ್ಲಿ ಪ್ರಪಂಚದಾದ್ಯಂತ ದಾಖಲಾದ ಶೇ 61.4ರಷ್ಟು ಸಾವುಗಳಿಗೆ ಮತ್ತು ಶೇ 52.4ರಷ್ಟು ಅನಾರೋಗ್ಯದ ಸಮಸ್ಯೆಗಳಿಗೆ ಕಾರಣಗಳು– ತಾಯಿ-ಮಗುವಿನ ಅನಾರೋಗ್ಯ, ನೈರ್ಮಲ್ಯವಿಲ್ಲದ ಜೀವನ ಪರಿಸ್ಥಿತಿ ಮತ್ತು ಸಾಂಕ್ರಾಮಿಕ ರೋಗಗಳು.

ಇದನ್ನು 2017ರಲ್ಲಿನ ಪರಿಸ್ಥಿತಿಗೆ ಹೋಲಿಸಿದರೆ ಪ್ರಪಂಚದಾದ್ಯಂತ ಶೇ 61ರಷ್ಟು ಸಾವುಗಳು ಮತ್ತು ಶೇ 48.3ರಷ್ಟು ಅನಾರೋಗ್ಯದ ಸಮಸ್ಯೆಗಳಿಗೆ ಕಾರಣ– ಪರಿಸರ ಮಾಲಿನ್ಯ, ಭಯೋತ್ಪಾದನೆ, ‘ಹರಡದ ಕಾಯಿಲೆ’ಗಳು (Non-communicable diseases), ಮಾದಕ ಪದಾರ್ಥಗಳ ವ್ಯಸನ, ಖಿನ್ನತೆ, ಆತ್ಮಹತ್ಯೆ ಮತ್ತು ಡೆಂಗಿ. 2007ರಿಂದ ಈಚೆಗೆ ಭಯೋತ್ಪಾದನೆ ಸಂಬಂಧಿತ ಸಾವುನೋವುಗಳಲ್ಲಿ ಶೇ 118ರಷ್ಟು ಹೆಚ್ಚಳವಾಗಿದ್ದರೆ, ಕಳೆದ 45 ವರ್ಷಗಳಲ್ಲಿ ಆತ್ಮಹತ್ಯೆಯ ಪ್ರಮಾಣ ಶೇ 60ರಷ್ಟು ಹೆಚ್ಚಿದೆ. 2017ರಲ್ಲಿ ಮಾದಕ ಪದಾರ್ಥಗಳ ವ್ಯಸನದಿಂದ ದಾಖಲಾದ 40 ಲಕ್ಷ ಹೊಸ ಪ್ರಕರಣಗಳಲ್ಲಿ 1.10 ಲಕ್ಷ ಸಾವುಗಳಾಗಿದ್ದರೆ, ‘ಹರಡದಿರುವ ಕಾಯಿಲೆ’ಗಳಿಂದಾಗಿರುವ ಸಾವಿನ ಪ್ರಮಾಣ ಶೇ 73ರಷ್ಟು!

ಈ ಅಂಕಿಅಂಶಗಳನ್ನು ಪರಿಶೀಲಿಸಿದರೆ ಕಾಣುವುದು ಈ ಕುತೂಹಲಕಾರಿಯಾದ ಅಂಶ– ಪ್ರಪಂಚದಾದ್ಯಂತ ಶೇ 73ರಷ್ಟು ಸಾವುಗಳಿಗೆ ಹರಡದ ರೋಗಗಳಾದ ಅತಿಯಾದ ರಕ್ತದೊತ್ತಡ, ಧೂಮಪಾನ, ರಕ್ತದಲ್ಲಿ ಅತಿಯಾದ ಸಕ್ಕರೆ ಮತ್ತು ಅತಿಯಾದ ಬಾಡಿ-ಮಾಸ್ ಇಂಡೆಕ್ಸ್ (ಬಿ.ಎಮ್.ಐ/ಬೊಜ್ಜಿನ ಸೂಚಕ) ಕಾರಣ. ಅತಿಯಾದ ಮಾನಸಿಕ ಒತ್ತಡವು ಇವುಗಳ ಹಿನ್ನೆಲೆಯಲ್ಲಿರುವುದೂ ಸಾಬೀತಾಗಿದೆ. ವಾಯುಮಾಲಿನ್ಯದಿಂದ ಟೈಪ್ 2- ಸಕ್ಕರೆ ಕಾಯಿಲೆ ಹೆಚ್ಚಾಗಿರುವುದನ್ನು ಆರೋಗ್ಯ ತಜ್ಞರು ಬೆಳಕಿಗೆ ತಂದಿದ್ದಾರೆ. ಮನುಷ್ಯ ಅಭಿವೃದ್ಧಿ ಹೆಸರಿನಲ್ಲಿ ನಡೆಸುವ ಪರಿಸರ ಮಾಲಿನ್ಯದಿಂದ ಏನೆಲ್ಲಾ ಅನಾಹುತಗಳಾಗುತ್ತವೆ ಎಂಬುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಬೇಕೆ?

ಹೃದಯ ಸಂಬಂಧಿ ಕಾಯಿಲೆಗಳು, ಡಯಾಬಿಟೀಸ್, ಬೊಜ್ಜು ಇತ್ಯಾದಿಗಳು ಕೆಲವೇ ವರ್ಷಗಳಲ್ಲಿ ಸಂಭವಿಸುವುದಿಲ್ಲ. ಗರ್ಭಾವಸ್ಥೆಯಲ್ಲೇ ಶುರುವಾಗಿ ಜೀವಮಾನವಿಡೀ ನಿರಂತರವಾಗಿ ಪ್ರತಿಕೂಲ ಅಂಶಗಳಿಂದ ಗಾಸಿಗೊಳ್ಳುವ ದೇಹದ ವ್ಯವಸ್ಥೆಯು ಸೋತು ಉಂಟಾಗುವ ಪರಿಣಾಮಗಳಾಗಿರುತ್ತವೆ. ಅನಾರೋಗ್ಯಕರ ಜೀವನಶೈಲಿ, ಅತಿಯಾದ ಸಕ್ಕರೆ-ಉಪ್ಪಿನ ಬಳಕೆ, ತಂಬಾಕು ಸೇವನೆ, ಪರಿಸರ ಮಾಲಿನ್ಯ, ಖಿನ್ನತೆಯ ಕಾರಣಗಳು ಈಗಿನ ಕಾಲಮಾನದ ಪ್ರತಿಕೂಲ ಅಂಶಗಳು.

ಇತ್ತೀಚೆಗೆ ವರದಿಯಾದ 20 ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿನಿಯೊಬ್ಬರ ಆತ್ಮಹತ್ಯೆ ಈಗಿನ ಪ್ರತಿಕೂಲ ಜೀವನಶೈಲಿ ಮತ್ತು ಕುಟುಂಬ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ. ಮುದ್ದಾದ ಬುದ್ಧಿವಂತ ಹುಡುಗಿ. ಅಪ್ಪ– ಅಮ್ಮನ ಪ್ರೀತಿಯ ಕೊರತೆಯಿಂದ ಅನುಭವಿಸಿದ ಒಂಟಿತನ ಆಕೆಯ ಜೀವವನ್ನೇ ಬಲಿ ಪಡೆಯಿತು. ಎಷ್ಟು ಸಂಪಾದಿಸಿದರೂ ಸಾಲದು ಎಂಬ ಮನೋಭಾವ ಕುಟುಂಬದೊಳಗಿನ ಸಂಬಂಧಗಳನ್ನು ಶಿಥಿಲಗೊಳಿಸುತ್ತದೆ. ಸೂಕ್ಷ್ಮ ಮನಸ್ಸಿನ ಮಕ್ಕಳ ಮೇಲೆ ಇದು ಬೀರುವ ಪರಿಣಾಮ ಅಗಾಧ. ಗಂಡ–ಹೆಂಡತಿ ಇಬ್ಬರೂ ದುಡಿಯಲೇಬೇಕು ಎನ್ನುವ ಪ್ರತಿಷ್ಠೆಯು ಕೆಲವೊಮ್ಮೆ ಕುಟುಂಬದ ಒಟ್ಟಾರೆ ‘ಆರೋಗ್ಯ’ದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು.

ಅಂತಹುದೊಂದು ಭ್ರಮೆಯಲ್ಲಿ ನಾವು ಸೃಷ್ಟಿಸಿಕೊಂಡಿರುವ ಹೊಸ ಕಾಯಿಲೆಗಳು ನಮ್ಮನ್ನೇ ನಿಯಂತ್ರಿಸುತ್ತಿವೆ. ಅಭಿವೃದ್ಧಿಯ ಹೆಸರಿನಲ್ಲಿ ಸೃಷ್ಟಿಯಾಗಿರುವ ಪರಿಸರ ಮಾಲಿನ್ಯ ಯಾವುದೋ ಒಂದು ರಾಷ್ಟ್ರದ ಸಮಸ್ಯೆಯಾಗಿ ಉಳಿದಿಲ್ಲ. ಜಾಗತಿಕ ಸಮಸ್ಯೆಯಾಗಿದೆ. ಜತೆಗೆ ಭಯೋತ್ಪಾದನೆ, ಅಂತಃಕಲಹಗಳ ಹೊಣೆಗಾರಿಕೆಯನ್ನು ಒಪ್ಪಿಕೊಳ್ಳಲು ಮಾನವಕುಲ ಇನ್ನೂ ತಯಾರಿಲ್ಲ ಎನ್ನುವುದೇ ಈಗಿನ ಅಭಿವೃದ್ಧಿಯ ಲಕ್ಷಣವಾಗಿದೆ. ಹೊಸದಾಗಿ ಹುಟ್ಟಿಕೊಳ್ಳುತ್ತಿರುವ ಕಾಯಿಲೆಗಳಾದರೂ ನಮ್ಮಲ್ಲಿ ವಿವೇಕ ಮೂಡಿಸಲಿ.


ಡಾ. ಸುಶಿ ಕಾಡನಕುಪ್ಪೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು