ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಲ್ ಬಹದ್ದೂರ್ ಶಾಸ್ತ್ರಿ: ಸ್ಮರಣೆಯ ರಾಜಕಾರಣ

Last Updated 27 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

ಬಹುಶಃ ಇದು ನಾವು ನೀವೆಲ್ಲರೂ ಗಮನಿಸಿರಬಹುದಾದ ಸಂಗತಿ. ಅಕ್ಟೋಬರ್ 2ರಂದು ಸಂಘ ಪರಿವಾರದ ಸಮರ್ಥಕರು ವಿಶೇಷವಾಗಿ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಗೆ ಶುಭಾಶಯ ಹೇಳುತ್ತಾರೆ. ಅವರಲ್ಲಿ ಕೆಲವರು ಗಾಂಧಿ ಜಯಂತಿಗೆ ಶುಭಾಶಯ ಕೋರುತ್ತಲೇ, ‘ನಾವೇಕೆ ಶಾಸ್ತ್ರೀಜಿಯನ್ನು ಮರೆತುಬಿಟ್ಟೆವು’ ಎಂಬ ಪ್ರಶ್ನೆ ಮುಂದಿಡುತ್ತಾರೆ. ಮತ್ತೆ ಕೆಲವರು ಕೇವಲ ಶಾಸ್ತ್ರೀಜಿ ಜಯಂತಿಗೆ ಶುಭಾಶಯ ಕೋರಿ, ತಮ್ಮ ಸೈದ್ಧಾಂತಿಕ ಭಿನ್ನಾಭಿಪ್ರಾಯ ಮುಂದಿಟ್ಟು ಗಾಂಧೀಜಿಯನ್ನು ನಿರಾಕರಿಸುತ್ತಾರೆ.

ಹಾಗೆಂದ ಮಾತ್ರಕ್ಕೆ ಸಂಘ ಪರಿವಾರ, ಶಾಸ್ತ್ರಿಯವರ ಚಿಂತನಾಧಾರೆಯನ್ನು ಮೆಚ್ಚಿ ಅನುಸರಿಸುತ್ತದೆ, ಅವರನ್ನು ಕಂಡರೆ ಅದಕ್ಕೆ ಬಹಳ ಪ್ರೀತಿ ಎಂದೆಲ್ಲ ಭಾವಿಸಬೇಕಿಲ್ಲ. ಸುಲಭವಾಗಿ ಊಹಿಸಬಹುದಾದಂತೆ, ಇದು ಗಾಂಧೀಜಿ ಮೇಲಿನ ಅಸಮಾಧಾನ ತೋರಿಕೊಳ್ಳಲು ಮತ್ತೊಂದು ದಾರಿಯಷ್ಟೆ.

ಲಾಲ್ ಬಹದ್ದೂರ್ ಶಾಸ್ತ್ರಿ, ನಿರ್ವಿವಾದವಾಗಿ ಈ ದೇಶ ಕಂಡ ಧೀಮಂತ ನಾಯಕ. ಅಲ್ಪಾವಧಿಯೇ ಆದರೂ ತಮ್ಮ ಪ್ರಧಾನಿ ಹುದ್ದೆಯನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸಿದ್ದರು. ಅಮೆರಿಕದ ಕಳಪೆ ಗೋಧಿ ಸರಬರಾಜನ್ನು ತಿರಸ್ಕರಿಸಿ, ಶಾಸ್ತ್ರೀಜಿ ಇಡೀ ದೇಶಕ್ಕೆ ‘ವಾರದಲ್ಲಿ ಒಂದು ರಾತ್ರಿ ಉಪವಾಸ’ ಮಾಡಲು ಕರೆಕೊಟ್ಟ ಕಥೆ ಜನಜನಿತ. ಸರಳತೆ ಮತ್ತು ಸ್ವಾಭಿಮಾನಗಳೇ ಮೂರ್ತಿವೆತ್ತಂತೆ ಇದ್ದರು ಶಾಸ್ತ್ರೀಜಿ. ಸಚಿವರಾಗಿ ವಿವಿಧ ಖಾತೆಗಳ ಜವಾಬ್ದಾರಿ ಹೊತ್ತಾಗಲೂ, ಅನೇಕ ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿದ್ದರು. ಅವೆಲ್ಲ ಈಗಾಗಲೇ ನಮಗೆ ಗೊತ್ತಿರುವಂಥವು.

ಇಂತಹ ಸರಳ, ನೇರ ಹಾಗೂ ಭ್ರಷ್ಟತೆಯ ಸೋಂಕಿಲ್ಲದ ವ್ಯಕ್ತಿಯಿಂದ, ಪರಿವಾರದ ರಾಜಕೀಯ ಮುಖ ಬಿಜೆಪಿ ಯಾವ ಆದರ್ಶ ಆಯ್ದುಕೊಂಡಿದೆ? ಇಂಥದೊಂದು ಪ್ರಶ್ನೆ ಕೇಳುವುದೇ ಮೂರ್ಖತನ. ಏಕೆಂದರೆ, ಶಾಸ್ತ್ರೀಜಿ ಅವರು ಅದರ ಪಾಲಿಗೆ ‘ಸ್ಮರಣೆ ರಾಜಕಾರಣ’ದ ಒಂದು ಭಾಗ ಮಾತ್ರ.

ನೆಹರೂ ಕುಟುಂಬದ ಮೇಲಿನ ತನ್ನ ದ್ವೇಷವನ್ನು ಹೊರಹಾಕಲು ಕಾಂಗ್ರೆಸ್ಸಿನಿಂದಲೇ ಎರಡು ಐಕಾನ್‌ಗಳನ್ನು ಸಂಘ ಪರಿವಾರ ಆಯ್ದಿಟ್ಟುಕೊಂಡಿದೆ; ಸರ್ದಾರ್ ವಲ್ಲಭ ಭಾಯಿ ಪಟೇಲ್ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ. ಪಟೇಲರ ಮೇಲೆ ಅತಿಯಾದ ಪ್ರೀತಿ ತೋರಿಸುತ್ತಾ, ಆ ನೆಪದಲ್ಲಿ ನೆಹರೂ ಅವರನ್ನು ಬಯ್ಯುವುದು; ಶಾಸ್ತ್ರಿಯವರ ಗುಣಗಾನ ಮಾಡುತ್ತಾ, ಅವರ ಅನುಮಾನಾಸ್ಪದ ಸಾವಿಗೆ ಇಂದಿರಾ ಗಾಂಧಿಯನ್ನು ಗುರಿಯಾಗಿಸುವುದು ಅದರ ಕಾರ್ಯತಂತ್ರ. ನರೇಂದ್ರ ಮೋದಿ, ಸರಿಸುಮಾರು ₹ 2 ಸಾವಿರ ಕೋಟಿ ವೆಚ್ಚದಲ್ಲಿ ಸರ್ದಾರ್ ಪಟೇಲರ ಪ್ರತಿಮೆ ಸ್ಥಾಪಿಸುತ್ತಿರುವುದರ ಹಿಂದೆಯೂ ಇದೇ ಕಾರ್ಯತಂತ್ರವಿದೆ. ಸಂಘ ಪರಿವಾರದ ಪ್ರಕಾಶನಗಳು ಸರ್ದಾರ್ ಪಟೇಲರ ಕುರಿತು ಪುಸ್ತಕಗಳನ್ನು ತಂದಿರುವ ಹಿನ್ನೆಲೆಯೂ ಇದೇ.

ಇತ್ತೀಚೆಗೆ ಪರಿವಾರ, ಶಾಸ್ತ್ರಿಯವರ ವಿಷಯದಲ್ಲಿ ತನ್ನ ಕಾರ್ಯತಂತ್ರವನ್ನು ಮತ್ತಷ್ಟು ವಿಸ್ತರಿಸಿದೆ. ಕೇವಲ ಜಯಂತಿ ಶುಭಾಶಯಕ್ಕೆ ಮೀಸಲಾಗದೆ, ಶಾಸ್ತ್ರಿಯವರನ್ನು ಮತ್ತಷ್ಟು ತನ್ನೊಳಗೆ ಎಳೆದುಕೊಂಡಿದೆ. ಇದೇ ವರ್ಷದ ಆರಂಭದಲ್ಲಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖವಾಣಿ ‘ಆರ್ಗನೈಸರ್’ಗೆ ಬರೆದ ಲೇಖನದಲ್ಲಿ, ಅಡ್ವಾಣಿ ಅವರು ಶಾಸ್ತ್ರೀಜಿಯನ್ನು ಕೊಂಡಾಡಿದ್ದರು. ‘ಶಾಸ್ತ್ರಿಯವರಿಗೆ ಸಂಘದ ಕುರಿತು ಹಗೆತನ ಇರಲಿಲ್ಲ. ಅವರು ರಾಜಕೀಯ ಸಲಹೆ ಪಡೆಯಲು ಗುರೂಜಿ (ಗೊಳವಲ್ಕರ್) ಅವರನ್ನು ಆಹ್ವಾನಿಸುತ್ತಿದ್ದರು’ ಎಂದು ಬರೆದಿದ್ದರು. ಇದನ್ನು ಬರೆಯುವಾಗ, ವಾಕ್ಯದ ಶುರುವಿನಲ್ಲಿ ‘ನೆಹರೂಗೆ ಇದ್ದಂತೆ’ ಎಂದು ಸೇರಿಸಲು ಅಡ್ವಾಣಿ ಮರೆಯಲಿಲ್ಲ.

ವಾಸ್ತವದಲ್ಲಿ ಶಾಸ್ತ್ರೀಜಿ ಯೋಗ್ಯತೆ ಬಹಳ ದೊಡ್ಡದು. ಅವರ ಬಗ್ಗೆ ಮಾತನಾಡುವಾಗ ಯಾವ ಹೋಲಿಕೆಯ ಊರುಗೋಲು ಬೇಕಾಗಿಲ್ಲ. ಆದರೆ ‘ಸ್ಮರಣೆಯ ರಾಜಕಾರಣ’ ಮಾಡುವವರಿಗೆ ಶಾಸ್ತ್ರೀಜಿಯವರ ಈ ಸ್ವತಂತ್ರ ಯೋಗ್ಯತೆ ಬೇಕಿಲ್ಲ. ಅವರದ್ದೇನಿದ್ದರೂ, ಶಾಸ್ತ್ರೀಜಿಯನ್ನು ತಮ್ಮ ಗುರಿಯ ಎದುರಲ್ಲಿಟ್ಟು ಹೋರಾಡುವ ತಂತ್ರ. ಅದಕ್ಕೆ ಸರಿಯಾಗಿ ಕಾಂಗ್ರೆಸ್ ಕೂಡಾ ಕುಟುಂಬ ರಾಜಕಾರಣಕ್ಕೆ, ಕುಟುಂಬದ ನಾಯಕರಿಗೆ ತಲೆಬಾಗಿ ಅವಕಾಶ ಮಾಡಿಕೊಟ್ಟಿದೆ. ಅದರ ಈ ದೌರ್ಬಲ್ಯವನ್ನೇ ದಾಳ ಮಾಡಿಕೊಂಡಿರುವ ಪರಿವಾರ, ನೆಹರೂ ಮತ್ತು ಇಂದಿರಾ ವಿರುದ್ಧ ಅವರದೇ ಪಕ್ಷದ ನಾಯಕರನ್ನಿಟ್ಟು ಭಾವುಕತೆಯ ಆಟ ಕಟ್ಟುತ್ತ ಬಂದಿದೆ.

ಸಂಘ ಪರಿವಾರ ಸತತವಾಗಿ ಕಾಂಗ್ರೆಸ್ ಮತ್ತು ಕಮ್ಯುನಿಸ್ಟರನ್ನು ಒಂದೇ ಬಳ್ಳಿಯ ಹೂಗಳಂತೆ ಬಿಂಬಿಸುತ್ತಾ ಬಂದಿದೆ. ಕಮ್ಯುನಿಸ್ಟರು ಕಾಂಗ್ರೆಸ್ ನೀತಿಗಳನ್ನು ಬಹುಶಃ ಬಿಜೆಪಿಗಿಂತ ಪ್ರಬಲವಾಗಿ ವಿರೋಧಿಸುತ್ತಾ ಬಂದಿದ್ದಾರೆ. ಆದರೂ, ಪ್ರಚಾರ ಮತ್ತು ತಳಮಟ್ಟದ ಕಾರ್ಯಕರ್ತರ ಬಲವುಳ್ಳ ಪರಿವಾರ, ಜನಮಾನಸದಲ್ಲಿ ತನ್ನ ವಿರುದ್ಧ ಮಾತಾಡುವ ಎಲ್ಲರೂ ‘ಕಮ್ಯುನಿಸ್ಟರು’ ಎಂದು ಸಾರಾಸಗಟು ಬಿಂಬಿಸುವ ಕೆಲಸ ಮಾಡಿದೆ. ಚೀನಾವನ್ನು ಪ್ರಬಲ ವೈರಿಯಂತೆ ಬಿಂಬಿಸಿ, ಕಮ್ಯುನಿಸ್ಟರು ಅದರ ಬೆಂಬಲಿಗರೆಂದು ಭಾಷಣ ಮಾಡಿ, ಒಟ್ಟಾರೆ ‘ಕಾಂಗಿಗಳೂ – ಕಮ್ಮಿಗಳೂ’ ದೇಶದ್ರೋಹಿಗಳೆಂದು ಜನಸಾಮಾನ್ಯರನ್ನು ನಂಬಿಸುವಲ್ಲಿ ಸಾಕಷ್ಟು ಯಶಸ್ವಿಯಾಗಿದೆ. ‘ದ್ರೋಹಿ ಕಾಂಗ್ರೆಸ್’ ತನ್ನೊಳಗಿನ ನೈಜ ನಾಯಕರನ್ನು ತಾನೇ ಬಲಿ ಪಡೆದಿದೆ ಎಂದು ಬಿಂಬಿಸುತ್ತಾ, ತಾವು ಅಂಥಾ ನಾಯಕರನ್ನು ಪಕ್ಷಾತೀತ ಆದರ್ಶವಾಗಿ ಕಾಣುತ್ತೇವೆಂದು ಭಾಷಣ ಮಾಡುತ್ತ ಬಂದಿದೆ. ಹೀಗೆ, ಭಾವುಕ ಜನರ ಬೆಂಬಲವನ್ನು ತನ್ನ ಬೆನ್ನಿಗೆ ಕಟ್ಟಿಕೊಳ್ಳುತ್ತಿದೆ. ಶಾಸ್ತ್ರೀಜಿ, ಪರಿವಾರಕ್ಕೆ ಅಂಥದೊಂದು ಚದುರಂಗದ ಕಾಯಿ ಮಾತ್ರ.

1965ರಲ್ಲಿ, ಭಾರತ – ಪಾಕ್ ಯುದ್ಧ ಸಂದರ್ಭದಲ್ಲಿ ಪರಿಹಾರ ಕಾರ್ಯಕ್ಕಾಗಿ ಶಾಸ್ತ್ರೀಜಿ ಆರೆಸ್ಸೆಸ್ ಸಹಾಯ ಪಡೆದಿದ್ದರು. ಇದನ್ನು ಕೂಗಿ ಕೂಗಿ ಹೇಳುವ ಪರಿವಾರ, 1963ರ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಭಾಗವಹಿಸುವಂತೆ ಖುದ್ದು ನೆಹರೂ ಆರೆಸ್ಸೆಸ್‌ಗೆ ಆಹ್ವಾನ ನೀಡಿದ್ದನ್ನು ಪಿಸುಮಾತಿನಲ್ಲಿಯೂ ಹೇಳುವುದಿಲ್ಲ! 1962ರ ಚೀನಾ– ಭಾರತ ಯುದ್ಧದಲ್ಲಿ ಆರೆಸ್ಸೆಸ್ ಸ್ವಯಂಸೇವಕರು ಪರಿಹಾರ ಕಾರ್ಯಕ್ಕೆ ನೆರವಾಗಿದ್ದರು. ಅದರ ಗೌರವಾರ್ಥ, ಪೆರೇಡ್‌ನಲ್ಲಿ ಪಾಲ್ಗೊಳ್ಳುವಂತೆ ಸ್ವಯಂಸೇವಕರನ್ನು ನೆಹರೂ ಆಹ್ವಾನಿಸಿದ್ದರು. ‘ಆರ್ಗನೈಸರ್’ನಲ್ಲಿ, ‘ನೆಹರೂವಿನಂತೆ ಶಾಸ್ತ್ರೀಜಿಗೆ ಸಂಘದ ಮೇಲೆ ಹಗೆತನವಿರಲಿಲ್ಲ’ ಎಂದು ಲೇಖನ ಬರೆದ ಅಡ್ವಾಣಿಗೆ ಇದು ಗೊತ್ತಿರಲಿಲ್ಲವೆ? ಶಾಸ್ತ್ರೀಜಿಯನ್ನು ಹೊಗಳುವ ನೆಪದಲ್ಲಿ, ನೆಹರೂ ಅವರನ್ನು ಬೈಯುವುದೇ ಅವರ ಹುನ್ನಾರವೆಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ?

ಈ ಎಲ್ಲದರ ಬಳಿಕ, ಈಗ ಮತ್ತೊಂದು ಪ್ರಹಸನ ಶುರುವಾಗಿದೆ. ಪ್ರಧಾನಿ ನರೇಂದ್ರ ಮೋದಿಯನ್ನು ಶಾಸ್ತ್ರೀಜಿಗೆ ಹೋಲಿಸುವ ಪ್ರಯತ್ನ ನಡೆಯುತ್ತಿದೆ.

ಶಾಸ್ತ್ರೀಜಿಯವರ ಮಕ್ಕಳಲ್ಲಿ ಸುನಿಲ್ ಶಾಸ್ತ್ರಿ ಬಿಜೆಪಿ ಪರ ಮತ್ತು ಅನಿಲ್ ಶಾಸ್ತ್ರಿ ಕಾಂಗ್ರೆಸ್‌ನಲ್ಲಿ ಸಕ್ರಿಯವಿದ್ದಾರೆ. ಕಳೆದ ವರ್ಷ ಸುನಿಲ್, ‘ನನ್ನ ತಂದೆ ಶ್ರಮವಹಿಸಿ ಕೆಲಸ ಮಾಡುತ್ತಿದ್ದರು. ಮೋದಿಯನ್ನು ನೋಡಿದರೆ ನನ್ನ ತಂದೆಯ ನೆನಪಾಗುತ್ತದೆ’ ಎಂದಿದ್ದರು. ಅದನ್ನೇ ಮುಂದಿಟ್ಟುಕೊಂಡು ಮೋದಿ ಸಮರ್ಥಕರು (ಅಥವಾ ಭಕ್ತರು) ಶಾಸ್ತ್ರಿ ಅವರೊಡನೆ ಮೋದಿಯನ್ನು ಹೋಲಿಸಿ ಪ್ರಚಾರ ಶುರುವಿಟ್ಟರು.

ಈ ವರ್ಷ ಸುನಿಲ್ ಶಾಸ್ತ್ರಿ ಮತ್ತೆ ಅವೇ ಮಾತುಗಳನ್ನಾಡಿದ್ದಾರೆ. ಮೋದಿ ಮತ್ತು ಶಾಸ್ತ್ರೀಜಿ ಕಾರ್ಯಶೈಲಿ ಒಂದೇ. ಅವರಿಬ್ಬರಿಗೂ ಸಾಮ್ಯತೆಗಳಿವೆ ಎಂದು ಹೇಳಿದ್ದಾರೆ. ಮೋದಿಯಲ್ಲಿ ಸಾಕ್ಷಾತ್ ನರೇಂದ್ರನನ್ನೇ (ವಿವೇಕಾನಂದ) ಕಾಣಿಸಿದ ಭಕ್ತರಿಗೆ, ಈ ಹೋಲಿಕೆ ಮತ್ತೊಂದು ಅಸ್ತ್ರವಷ್ಟೆ.

ಆದರೆ ಶಾಸ್ತ್ರಿಯವರ ಮತ್ತೊಬ್ಬ ಮಗ, ಕಾಂಗ್ರೆಸ್ಸಿಗ ಅನಿಲ್ ಶಾಸ್ತ್ರಿ, ಈ ಹೋಲಿಕೆಯನ್ನು ತಿರಸ್ಕರಿಸಿದ್ದಾರೆ. ‘ಹತ್ತಿ ಜುಬ್ಬ, ಧೋತರ ಧರಿಸುತ್ತಿದ್ದ ನನ್ನ ತಂದೆ ಎಲ್ಲಿ, ಹತ್ತು ಲಕ್ಷ ರೂಪಾಯಿಯ ಸೂಟು ಧರಿಸುವ ಮೋದಿಯೆಲ್ಲಿ!’ ಎಂದು ವ್ಯಂಗ್ಯವಾಡಿದ್ದಾರೆ. ‘ನನ್ನ ತಂದೆ ಪಿಎನ್‌ಬಿ ಬ್ಯಾಂಕಲ್ಲಿ 5 ಸಾವಿರ ರೂಪಾಯಿ ಸಾಲ ಪಡೆದಿದ್ದರು. ಅವರ ನಂತರ ನನ್ನ ತಾಯಿ ಅದನ್ನು ತೀರಿಸಿದರು. ಅದೇ ಪಿಎನ್‌ಬಿ ಬ್ಯಾಂಕಿನಲ್ಲಿ, ನರೇಂದ್ರ ಮೋದಿ ಪ್ರಧಾನಿಯಾಗಿರುವ ಸಂದರ್ಭದಲ್ಲಿ ನೀರವ್ ಮೋದಿ ಸಾವಿರಾರು ಕೋಟಿ ಸಾಲ ಪಡೆದು ಪರಾರಿಯಾಗಿದ್ದಾರೆ. ಹೋಲಿಕೆ ಮಾಡುವುದಕ್ಕೂ ಮಿತಿ ಇಲ್ಲವೇ’ ಎಂದು ಪ್ರಶ್ನೆ ಹಾಕಿದ್ದಾರೆ.

ಅದೇನೇ ಇರಲಿ. ಈ ಅಕ್ಟೋಬರ್ 2ಕ್ಕೆ ಶಾಸ್ತ್ರೀಜಿ ಜನಿಸಿ 115ನೇ ವರ್ಷ. ಪುಟ್ಟ ಗಾತ್ರದ, ಬೆಟ್ಟದಷ್ಟು ಸಾಧನೆಯ ‘ನನ್ಹೇ’ (ಅದು ಅವರ ನಿಕ್ ನೇಮ್); ತಮ್ಮ ಸರಳತೆಗಾಗಿ, ಪ್ರಾಮಾಣಿಕತೆಗಾಗಿ ಮತ್ತು ದಕ್ಷ ಆಡಳಿತಕ್ಕಾಗಿ ನಾವು ಸದಾ ಕಾಲ ಸ್ಮರಿಸಬೇಕಾದ ನಾಯಕ. ‘ಸ್ಮರಣೆಯ ರಾಜಕಾರಣ’ ಮಾಡುವವರ ಹುನ್ನಾರಗಳನ್ನರಿತು, ಅಂಥವರನ್ನು ದೂರವಿಟ್ಟು, ಶಾಸ್ತ್ರೀಜಿ ಆದರ್ಶಗಳನ್ನು ಮೆಲುಕು ಹಾಕಲು ಇದು ಸಕಾಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT