ಮಂಗಳವಾರ, ಜೂನ್ 22, 2021
27 °C
ತುರ್ತು ಸಂದರ್ಭಗಳಲ್ಲಿ ರಾಜ್ಯಗಳು ‘ಕೇಂದ್ರದತ್ತ ವಾಲುವುದು’ ಎಂದರೆ...

ಸೂರ್ಯ ನಮಸ್ಕಾರ: ಬಲಿಷ್ಠ ಕೇಂದ್ರದ ಅಗತ್ಯ

ಎ.ಸೂರ್ಯ ಪ್ರಕಾಶ್ Updated:

ಅಕ್ಷರ ಗಾತ್ರ : | |

Prajavani

ಕೋವಿಡ್–19 ಸಾಂಕ್ರಾಮಿಕವನ್ನು ನಮ್ಮ ದೇಶದಲ್ಲಿ ಪೂರ್ತಿಯಾಗಿ ನಿಯಂತ್ರಣಕ್ಕೆ ತರಲು ಹಾಗೂ ಅದನ್ನು ನಿರ್ಮೂಲಗೊಳಿಸಲು ಇನ್ನಷ್ಟು ಕಾಲ ಬೇಕಾಗಬಹುದು. ಆದರೆ, ಒಂದು ಮಾತಂತೂ ಸ್ಪಷ್ಟ. ಭಾರತದ ಒಕ್ಕೂಟ ವ್ಯವಸ್ಥೆ ಹಾಗೂ ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಬಂಧದಲ್ಲಿ ಈ ವೈರಾಣು ಒಂದಿಷ್ಟು ಮರುಹೊಂದಾಣಿಕೆಗಳನ್ನು ತರಲಿದೆ.

ಮೊದಲ ಸುತ್ತಿನ ಲಾಕ್‌ಡೌನ್‌ ಜಾರಿಗೊಳಿಸಿದಾಗ ಕೆಲವು ರಾಜ್ಯಗಳು, ಈ ವಿಚಾರದಲ್ಲಿ ನಿರ್ದೇಶನ ನೀಡುವ ಅಧಿಕಾರ ಕೇಂದ್ರಕ್ಕೆ ಎಷ್ಟರಮಟ್ಟಿಗೆ ಇದೆ ಎಂಬ ಪ್ರಶ್ನೆಗಳನ್ನು ಎತ್ತಿದ್ದವು. ಆದರೆ, ಈಗ ಈ ಸಾಂಕ್ರಾಮಿಕವನ್ನು ನಿಭಾಯಿಸಲು ಒಗ್ಗಟ್ಟಿನ ರಾಷ್ಟ್ರವ್ಯಾಪಿ ಪ್ರಯತ್ನವೊಂದು ನಡೆದಿದೆ ಎಂದು ಹೇಳಬಹುದು. ಇಷ್ಟೊಂದು ದೀರ್ಘಾವಧಿಯ, ಇಷ್ಟೊಂದು ವ್ಯಾಪಕವಾದ ಜೈವಿಕ ದುರಂತವನ್ನು ಭಾರತವು ಯಾವತ್ತೂ ಕಂಡಿರಲಿಲ್ಲ. ಹಾಗಾಗಿ, ಈ ಬಗೆಯ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಅಗತ್ಯವಿರುವ ಎಲ್ಲ ಸಾಂವಿಧಾನಿಕ ಮತ್ತು ಕಾನೂನು ಕ್ರಮಗಳನ್ನು ಬಳಸಿಕೊಳ್ಳಬೇಕಾಗಿತ್ತು.

ಇನ್ನೊಂದು ರೀತಿಯಲ್ಲಿ ಹೇಳಬೇಕು ಎಂದಾದರೆ, ಡಾ. ಬಿ.ಆರ್.ಅಂಬೇಡ್ಕರ್ ಅವರು ಹೇಳಿದ್ದ ‘ಕೇಂದ್ರದತ್ತ ವಾಲುವಿಕೆ’ ಮಾತಿನ ಅರ್ಥ ಹೆಚ್ಚು ಗಾಢವಾಗಿ ಕಾಣಿಸಿತು.

ತುರ್ತು ಪರಿಸ್ಥಿತಿಗಳಲ್ಲಿ ಸಾಂವಿಧಾನಿಕ ಸಮತೋಲನವು ಕೇಂದ್ರದ ಪರವಾಗಿ ವಾಲಿಕೊಳ್ಳಬೇಕು ಎಂಬ ನಿಲುವನ್ನು ಅಂಬೇಡ್ಕರ್ ಹೊಂದಿದ್ದರು. ಸಂವಿಧಾನ ರಚನಾ ಸಭೆಯಲ್ಲಿ 1949ರ ನವೆಂಬರ್ 25ರಂದು ಆಡಿದ ತಮ್ಮ ಸಮಾರೋಪದ ಮಾತುಗಳಲ್ಲಿ ಅಂಬೇಡ್ಕರ್ ಅವರು ಭಾರತೀಯ ಒಕ್ಕೂಟ ಹಾಗೂ ಇತರ ಒಕ್ಕೂಟ ವ್ಯವಸ್ಥೆಗಳ ಸ್ವರೂಪದ ಬಗ್ಗೆ ಉಲ್ಲೇಖಿಸಿದ್ದರು. ಕೇಂದ್ರೀಕರಣ ಅತಿಯಾಗಿದೆ, ರಾಜ್ಯಗಳನ್ನು ಮುನಿಸಿಪಾಲಿಟಿಗಳ ಮಟ್ಟಕ್ಕೆ ಇಳಿಸಲಾಗಿದೆ ಎಂಬ ಆರೋಪ ಇದೆ ಎಂದು ಅವರು ಹೇಳಿದ್ದರು. ಆದರೆ, ಈ ರೀತಿಯ ನಿಲುವುಗಳು ಉತ್ಪ್ರೇಕ್ಷಿತವಷ್ಟೇ ಅಲ್ಲದೆ, ಸಂವಿಧಾನದ ಗುರಿಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದರ ಪರಿಣಾಮ ಇದು ಎಂದು ಅವರು ಪ್ರತಿಪಾದಿಸಿದ್ದರು.

ಶಾಸಕಾಂಗ ಹಾಗೂ ಕಾರ್ಯಾಂಗದ ಅಧಿಕಾರಗಳು ಕೇಂದ್ರ ಮತ್ತು ರಾಜ್ಯಗಳ ನಡುವೆ ಹಂಚಿಕೆಯಾಗಿರುವುದು ಒಕ್ಕೂಟ ವ್ಯವಸ್ಥೆಯ ಮೂಲ ತತ್ವ. ಹೀಗೆ ಹಂಚಿಕೆಯಾಗಿರುವುದು ಕೇಂದ್ರ ರೂಪಿಸಿದ ಯಾವುದೇ ಕಾನೂನಿನಿಂದಾಗಿ ಅಲ್ಲ; ಬದಲಿಗೆ, ಸಂವಿಧಾನವೇ ಹಾಗೆ ಮಾಡಿದೆ. ಈ ತತ್ವವು ಸಂವಿಧಾನದಲ್ಲೇ ಅಡಕವಾಗಿದೆ. ಕೇಂದ್ರೀಕರಣವು ಒಕ್ಕೂಟ ವ್ಯವಸ್ಥೆಯ ಉದ್ದೇಶ ಸಾಧನೆಗೆ ಅಡ್ಡಿ ಎಂಬ ಆರೋಪಕ್ಕೆ ಸೋಲಾಗಬೇಕು ಎಂದು ಅಂಬೇಡ್ಕರ್ ಹೇಳಿದ್ದರು. ರಾಜ್ಯಗಳ ತೀರ್ಮಾನವನ್ನು ಅಸಿಂಧುಗೊಳಿಸುವ ಅಧಿಕಾರವನ್ನು ಕೇಂದ್ರಕ್ಕೆ ನೀಡಲಾಗಿದೆ ಎಂಬುದು ಇನ್ನೊಂದು ಆರೋಪವಾಗಿತ್ತು. ಈ ಆರೋಪವನ್ನು ಒಪ್ಪಿಕೊಳ್ಳುವುದಾಗಿ ಅಂಬೇಡ್ಕರ್ ಹೇಳಿದ್ದರು. ಆದರೆ, ಅಸಿಂಧುಗೊಳಿಸುವ ಅಧಿಕಾರಗಳು ‘ತುರ್ತು ಸಂದರ್ಭಗಳಿಗೆ ಮಾತ್ರ ಸೀಮಿತವಾಗಿರುತ್ತವೆ’ ಎಂದು ಅವರು ಹೇಳಿದ್ದರು.

ತುರ್ತು ಪರಿಸ್ಥಿತಿಯನ್ನು ಘೋಷಿಸುವ ವಿಚಾರವಾಗಿ ಸಂವಿಧಾನದಲ್ಲಿ ಉಲ್ಲೇಖವಾಗಿರುವ ವಿಧಿಗಳು ಮಾತ್ರವಲ್ಲದೆ, ತುರ್ತು ಸಂದರ್ಭಗಳನ್ನು ನಿಭಾಯಿಸಲು ಶಾಸನ ರೂಪಿಸಲು ಸಮವರ್ತಿ ಪಟ್ಟಿಯು ಕೇಂದ್ರಕ್ಕೆ ನೀಡಿದ್ದ ಅಧಿಕಾರಗಳನ್ನೂ ಅವರು ಗಮನದಲ್ಲಿ ಇಟ್ಟುಕೊಂಡಿದ್ದರು. ಉದಾಹರಣೆಗೆ, ಸಮವರ್ತಿ ಪಟ್ಟಿಯ 23ನೇ ಉಲ್ಲೇಖವು, ‘ಸೋಂಕು ರೋಗ ಅಥವಾ ಅಂಟು ರೋಗ, ಮನುಷ್ಯರಿಗೆ, ಪ್ರಾಣಿಗಳಿಗೆ ಅಥವಾ ಸಸ್ಯಗಳಿಗೆ ಹಾನಿ ಉಂಟುಮಾಡುವ ಕೀಟಗಳು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ವಿಸ್ತರಣೆ ಆಗದಿರುವಂತೆ ಮಾಡಲು’ ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡುತ್ತದೆ. ಕೋವಿಡ್–19 ಬಿಕ್ಕಟ್ಟನ್ನು ನಿಭಾಯಿಸಲು ರಾಷ್ಟ್ರೀಯ ನೀತಿ ಹಾಗೂ ರಾಷ್ಟ್ರೀಯ ಕ್ರಿಯಾಯೋಜನೆಯನ್ನು ರೂಪಿಸಲು ಕೇಂದ್ರಕ್ಕೆ ಅಧಿಕಾರ ನೀಡುವ ವಿಕೋಪ ನಿರ್ವಹಣಾ ಕಾಯ್ದೆಯು (ಡಿಎಂಎ) ಅಂಥದ್ದೊಂದು ಕಾನೂನು.

ವಿಕೋಪ ಎದುರಾದಾಗ ನಿರ್ದೇಶನಗಳನ್ನು ಜಾರಿಗೊಳಿಸಲು ಈ ಕಾಯ್ದೆಯು ಕೇಂದ್ರಕ್ಕೆ ಅಧಿಕಾರ ನೀಡುತ್ತದೆ. ಕೇಂದ್ರ ಗೃಹ ಕಾರ್ಯದರ್ಶಿ ಲಾಕ್‌ಡೌನ್‌ ವಿಚಾರವಾಗಿ ಹೊರಡಿಸಿದ ಆದೇಶ ಹಾಗೂ ಅದರ ಅನುಷ್ಠಾನಕ್ಕೆ ಕೈಗೊಳ್ಳಬೇಕಾದ ಕ್ರಮಗಳು ಈ ಕಾಯ್ದೆಯ ವ್ಯಾಪ್ತಿಗೆ ಸಂಬಂಧಿಸಿದವು. ಮಾರ್ಚ್‌ 24ರ ನಂತರ ಹೊರಡಿಸಿದ ಆ ಆದೇಶಗಳಲ್ಲಿ, ಅಂತರ ಕಾಯ್ದುಕೊಳ್ಳುವುದಕ್ಕೆ ಸಂಬಂಧಿಸಿದಂತೆ ಲಾಕ್‌ಡೌನ್‌ ನಿಯಮಗಳ ಉಲ್ಲಂಘನೆ ಆಗಿದೆ ಎಂದು ಅವರು ರಾಜ್ಯಗಳಿಗೆ ಹೇಳಿದರು. ನಿರ್ದೇಶನಗಳ ಉಲ್ಲಂಘನೆ ಆದಲ್ಲಿ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕಿರುವುದು ಕಡ್ಡಾಯ ಎಂದೂ ಅವರು ಹೇಳಿದರು. ಲಾಕ್‌ಡೌನ್‌ ನಿಯಮಗಳು ಹಾಗೂ ಈ ನಿರ್ದೇಶನಗಳ ಅನುಷ್ಠಾನದ ವಿಚಾರವಾಗಿ ಜಿಲ್ಲಾ ಮ್ಯಾಜಿಸ್ಟ್ರೇಟರು ಮತ್ತು ಜಿಲ್ಲಾ ಪೊಲೀಸ್ ವರಿಷ್ಠರು ವೈಯಕ್ತಿಕವಾಗಿ ಹೊಣೆ ಎಂದೂ ಅವರು ತಿಳಿಸಿದ್ದರು.

ಸಮವರ್ತಿ ಪಟ್ಟಿ ಹಾಗೂ ಡಿಎಂಎ ಕಾಯ್ದೆ ನೀಡಿರುವ ಅಧಿಕಾರಗಳು ಮಾತ್ರವಲ್ಲದೆ, ಸಾಂಕ್ರಾಮಿಕ ಕಾಯಿಲೆ ಕಾಯ್ದೆ– 1897 ಕೂಡ ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡಿದೆ. ತುರ್ತು ಸಂದರ್ಭಗಳಲ್ಲಿ ಕೇಂದ್ರಕ್ಕೆ ಇರುವ ಅಧಿಕಾರಗಳ ಬಗ್ಗೆ ರಾಜ್ಯಗಳಿಗೆ ಪೂರ್ತಿಯಾಗಿ ಅರಿವು ಇರಲಿಲ್ಲವಾದ ಕಾರಣ, ಆರಂಭದಲ್ಲಿ ರಾಜ್ಯಗಳಿಂದ ಪ್ರತಿರೋಧ ಎದುರಾಯಿತು. ಉದಾಹರಣೆಗೆ, ಪಶ್ಚಿಮ ಬಂಗಾಳ ಸರ್ಕಾರವು ಅಲ್ಲಿನ ಕೆಲವು ಜಿಲ್ಲೆಗಳಲ್ಲಿನ ಸ್ಥಿತಿ ಅರಿಯಲು ವಿವಿಧ ಸಚಿವಾಲಯಗಳ ತಂಡವನ್ನು ಕಳುಹಿಸುವ ಕೇಂದ್ರದ ತೀರ್ಮಾನಕ್ಕೆ ವಿರೋಧ ವ್ಯಕ್ತಪಡಿಸಿತು. ಕೇರಳ ಮತ್ತು ಕೇಂದ್ರದ ನಡುವೆಯೂ ಬಿಕ್ಕಟ್ಟು ತಲೆದೋರಿತ್ತು. ಆದರೆ, ವೈರಾಣು ನಿಯಂತ್ರಿಸಬೇಕು ಎಂದಾದರೆ ಕೇಂದ್ರದ ನಾಯಕತ್ವದಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂಬುದನ್ನು ಒಂದು ಹಂತದಲ್ಲಿ ಎಲ್ಲರೂ ಅರ್ಥ ಮಾಡಿಕೊಂಡರು. ಏಕೆಂದರೆ ಈ ಕಾರ್ಯದಲ್ಲಿ, ಕೇಂದ್ರ–ರಾಜ್ಯಗಳ ನಡುವೆ ಮಾತ್ರವಲ್ಲದೆ, ರಾಜ್ಯ–ರಾಜ್ಯಗಳ ನಡುವೆಯೂ ಸಹಕಾರದ ಅಗತ್ಯ ಇತ್ತು.

ತಮ್ಮ ಮುಕ್ತಾಯ ಭಾಷಣದಲ್ಲಿ ಅಂಬೇಡ್ಕರ್ ಅವರು, ಕೆಲವು ತುರ್ತು ಸಂದರ್ಭಗಳಲ್ಲಿ ಕೇಂದ್ರಕ್ಕೆ ಹೆಚ್ಚಿನ ಅಧಿಕಾರ ಇರುವುದರ ಪರವಾಗಿ ಒತ್ತು ಕೊಟ್ಟು ಹೇಳಿದರು. ತುರ್ತು ಸಂದರ್ಭಗಳಲ್ಲಿ ನಿಷ್ಠೆಯು (residual loyalty) ಕೇಂದ್ರಕ್ಕೆ ಇರಬೇಕೇ ವಿನಾ ರಾಜ್ಯಕ್ಕೆ ಅಲ್ಲ ಎಂಬುದು ಬಹುತೇಕರ ಅಭಿಪ್ರಾಯ ಎಂದು ಹೇಳಿದರು. ಏಕೆಂದರೆ, ಇಡೀ ದೇಶದ ಸಮಾನ ಹಿತಾಸಕ್ತಿಗಾಗಿ ಕೆಲಸ ಮಾಡಬಲ್ಲದ್ದು ಕೇಂದ್ರ ಮಾತ್ರವೇ ಎಂಬುದು ಅವರ ನಿಲುವಾಗಿತ್ತು. ತುರ್ತು ಸಂದರ್ಭಗಳಲ್ಲಿ ರಾಜ್ಯಗಳ ಮೇಲೆ ತನ್ನ ನಿರ್ಧಾರ ಹೇರುವ ಅಧಿಕಾರವನ್ನು ಕೇಂದ್ರಕ್ಕೆ ನೀಡುವುದರ ಪರ ಸಮರ್ಥನೆ ಇದುವೇ. ‘ಕಡೆಗೂ, ಈ ತುರ್ತು ಸಂದರ್ಭದ ಅಧಿಕಾರಗಳು ರಾಜ್ಯಗಳ ಪಾಲಿಗೆ ಕಡ್ಡಾಯಗೊಳಿಸುವ ಕರ್ತವ್ಯವಾದರೂ ಏನು? ತುರ್ತು ಸಂದರ್ಭದಲ್ಲಿ ಅವು ತಮ್ಮ ಸ್ಥಳೀಯ ಹಿತಾಸಕ್ತಿಗಳ ಜೊತೆಯಲ್ಲೇ, ಇಡೀ ದೇಶದ ಅಭಿಪ್ರಾಯ ಹಾಗೂ ಹಿತಾಸಕ್ತಿಗಳ ಬಗ್ಗೆಯೂ ಗಮನ ನೀಡಬೇಕು. ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳದವರು ಮಾತ್ರ ಇದರ ವಿರುದ್ಧ ದೂರಬಹುದು’ ಎಂದಿದ್ದರು ಅವರು.

ಅಂಬೇಡ್ಕರ್ ಅವರ ಈ ಮಾತುಗಳನ್ನು ಓದಿದಾಗ, ಅವರು ಸಮಾಜವನ್ನು ಎಷ್ಟು ಆಳವಾಗಿ ಅರ್ಥ ಮಾಡಿಕೊಂಡಿದ್ದರು, ಅವರಿಗೆ ಇದ್ದ ದೂರದರ್ಶಿತ್ವ ಎಂಥದ್ದು ಎಂಬುದು ಗೊತ್ತಾಗುತ್ತದೆ. ತನ್ನ ದೇಶ ಹಾಗೂ ತನ್ನ ಜನರ ಬಗ್ಗೆ ಅವರಿಗೆ ಗೊತ್ತಿತ್ತು. ಭಾರತದಂತಹ ಬಹುತ್ವದ ದೇಶದಲ್ಲಿ ಎದುರಾಗಬಹುದಾದ ಸಮಸ್ಯೆಗಳನ್ನು ಅವರು ಅಂದಾಜಿಸಬಲ್ಲವರಾಗಿದ್ದರು. ಈಗ 42 ಪಕ್ಷಗಳು ಬೇರೆ ಬೇರೆ ರಾಜ್ಯಗಳಲ್ಲಿ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸರ್ಕಾರ ನಡೆಸುತ್ತಿವೆ. ಈಗ ಎದುರಾಗಿರುವ ಸಮಸ್ಯೆಯನ್ನು ಬಲಿಷ್ಠ ಕೇಂದ್ರೀಕೃತ ಶಕ್ತಿ ಮಾತ್ರವೇ, ಕೇಂದ್ರ ಹಾಗೂ ರಾಜ್ಯಗಳ ನಡುವೆ ಸೂಕ್ತ ಸಮಾಲೋಚನೆಯ ಮೂಲಕ ನಿಭಾಯಿಸಬಲ್ಲದು.

ಇಂಥದ್ದೊಂದು ಸಾಂಕ್ರಾಮಿಕವನ್ನು ನಿಭಾಯಿಸುವ ಮಾರ್ಗವನ್ನು ಕೊಟ್ಟಿದ್ದಕ್ಕೆ ನಾವು ನಮ್ಮ ಹಿರಿಯರಿಗೆ ಋಣಿಯಾಗಿರಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು