ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂರ್ಯ ನಮಸ್ಕಾರ | ‘ಇಂಡಿಯಾ’ ಮೈತ್ರಿಕೂಟ: ತಂಟೆ, ತೊಡಕು...

ವಾಸ್ತವಕ್ಕೆ ಬೆನ್ನು ತಿರುಗಿಸಿರುವ ಕಾಂಗ್ರೆಸ್‌ಗೆ ಮಿತ್ರಪಕ್ಷಗಳ ಮಾತು ರುಚಿಸುವುದೇ?
Published 29 ಡಿಸೆಂಬರ್ 2023, 23:49 IST
Last Updated 29 ಡಿಸೆಂಬರ್ 2023, 23:49 IST
ಅಕ್ಷರ ಗಾತ್ರ

‘ಇಂಡಿಯಾ’ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ಪ್ರಸ್ತಾಪಿಸಿದ ತೃಣಮೂಲ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ ಜಾಣ್ಮೆಯ ನಡೆಯು ಕಾಂಗ್ರೆಸ್ ವರಿಷ್ಠರ ಬಾಯಿಯನ್ನು ಪೂರ್ತಿಯಾಗಿ ಕಟ್ಟಿಹಾಕಿದೆ.

ಖರ್ಗೆಯವರು ದೇಶದಲ್ಲಿರುವ ಅತ್ಯಂತ ಪಳಗಿದ ರಾಜಕಾರಣಿಗಳಲ್ಲಿ ಒಬ್ಬರಾಗಿರುವುದರ ಜೊತೆಗೆ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರೂ ಹೌದು. ಹೀಗಿದ್ದರೂ ಮಮತಾ ಬ್ಯಾನರ್ಜಿ ಮತ್ತು ಅರವಿಂದ ಕೇಜ್ರಿವಾಲ್ ಅವರು ಖರ್ಗೆ ಅವರ ಹೆಸರನ್ನು ಅತ್ಯುನ್ನತ ಹುದ್ದೆಗೆ ದಿಢೀರ್ ಸೂಚಿಸಿದ್ದರಿಂದ ಕಾಂಗ್ರೆಸ್‌ ಪಕ್ಷವು ನಿಬ್ಬೆರಗಾಗಿದೆ.

ಖರ್ಗೆ ಅವರಂತೆ ತನ್ನ ಕುಟುಂಬದ ಯಾರೊಬ್ಬರಿಗೂ ರಾಜಕೀಯ ಹಾಗೂ ಆಡಳಿತಾತ್ಮಕ ಅನುಭವ ಇಲ್ಲದಿದ್ದರೂ ಪಕ್ಷವನ್ನು ತನ್ನ ಹಿಡಿತದಲ್ಲಿ ಇರಿಸಿಕೊಂಡು ನಿಯಂತ್ರಿಸುವ ನೆಹರೂ–ಗಾಂಧಿ ಕುಟುಂಬವು ಮೈತ್ರಿಕೂಟಕ್ಕೆ ತನ್ನ ಕುಟುಂಬಕ್ಕೆ ಸೇರಿದವರೇ ಪ್ರಮುಖ ನಾಯಕ ಆಗಬೇಕೆಂಬ ಭಾವನೆ ಹೊಂದಿರುವುದೇ ಇದಕ್ಕೆ ಕಾರಣವಾಗಿದೆ. ಈ ಪ್ರಸ್ತಾವದ ಬಗ್ಗೆ ಕುಟುಂಬದೊಳಗೆ ಮೌನ ಆವರಿಸಿರುವುದರಿಂದ, ಪಕ್ಷದ ಇತರ ನಾಯಕರು ಈ ಬಗ್ಗೆ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ನೀಡಲು ಮುಂದಾಗುತ್ತಿಲ್ಲ. 

ಇದು ದುಃಖದ ಸಂಗತಿ. ಏಕೆಂದರೆ, 1970ರ ದಶಕದ ಆರಂಭದಲ್ಲಿ ದೇವರಾಜ ಅರಸು ಅವರ ಮೂಲಕ ಬೆಳಕಿಗೆ ಬಂದ ಖರ್ಗೆ, ಅರ್ಧ ಶತಮಾನಕ್ಕಿಂತಲೂ ಹೆಚ್ಚಿನ ಅವಧಿಯ ಶಾಸಕಾಂಗ ಅನುಭವ ಹೊಂದಿದವರಾಗಿದ್ದಾರೆ. 1972ರಲ್ಲಿ ಅವರು ಕರ್ನಾಟಕ ವಿಧಾನಸಭೆ ಪ್ರವೇಶಿಸಿದರು. ಎಸ್.ಎಂ.ಕೃಷ್ಣ, ಗುಂಡೂರಾವ್, ವೀರಪ್ಪ ಮೊಯಿಲಿ ಮತ್ತು ಧರ್ಮಸಿಂಗ್ ಅವರಂತೆಯೇ ಖರ್ಗೆ ಕೂಡ 1972ರ ಬ್ಯಾಚ್‌ಗೆ ಸೇರಿದವರು. ಇವರಲ್ಲಿ ಅನೇಕರಿಗೆ ದೇವರಾಜ ಅರಸು ಅವರು ಒತ್ತಾಸೆ ಕೊಟ್ಟು ಬೆಳೆಸಿ ನಂತರ ಮಂತ್ರಿ ಸ್ಥಾನ ಹಾಗೂ ಇನ್ನಿತರ ಹೊಣೆಗಾರಿಕೆಗಳನ್ನು ನೀಡಿದರು. ಅಲ್ಲಿಂದೀಚೆಗೆ ಖರ್ಗೆ ಅವರು ತಮ್ಮ ರಾಜಕೀಯ ಜೀವನದಲ್ಲಿ ಹಿಂದಿರುಗಿ ನೋಡಿದ್ದೇ ಇಲ್ಲ. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹಲವಾರು ಸ್ಥಾನಗಳನ್ನು ಅವರು ನಿರ್ವಹಿಸಿದ್ದಾರೆ.

1972ರಿಂದ ಸತತವಾಗಿ ಒಂಬತ್ತು ಬಾರಿ ಅವರು ಕರ್ನಾಟಕ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಅಲ್ಲದೆ, ಎರಡು ಬಾರಿ ಲೋಕಸಭೆ ಚುನಾವಣೆಯಲ್ಲಿ ಗೆಲುವು ಕಂಡಿದ್ದಾರೆ. ರಾಜ್ಯದಲ್ಲಿ ಮತ್ತು ಕೇಂದ್ರ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿರುವ ಅವರು ಪಕ್ಷದಲ್ಲಿಯೂ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿ
ದ್ದಾರೆ. ಸದ್ಯ, ಖರ್ಗೆ ಅವರು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾರೆ. 

ಉನ್ನತ ಸ್ಥಾನಕ್ಕೆ ಏರಿರುವ ಅವರು ದಲಿತ ಸಮುದಾಯಕ್ಕೆ ಸೇರಿದವರು ಹಾಗೂ ಪಕ್ಷನಿಷ್ಠೆ ಕಾಯ್ದುಕೊಂಡು ಬಂದವರು ಎಂಬುದು ಅವರ ಅರ್ಹತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಅಷ್ಟರಮಟ್ಟಿಗೆ ಅರ್ಹತೆ ಮತ್ತು ಅನುಭವ ಇರುವ ಮತ್ತೊಬ್ಬ ರಾಜಕೀಯ ವ್ಯಕ್ತಿ ಇಲ್ಲವೆಂದೇ ಹೇಳಬಹುದಾಗಿದೆ.

ನೆಹರೂ- ಗಾಂಧಿ ಕುಟುಂಬದಿಂದ ರಾಹುಲ್ ಗಾಂಧಿ ಯವರನ್ನು ಮೈತ್ರಿಕೂಟದ ನಾಯಕನನ್ನಾಗಿ ಬಿಂಬಿಸುವ ನಡೆಯನ್ನು ಭಗ್ನಗೊಳಿಸುವ ಆಲೋಚನೆಯನ್ನು ಮಮತಾ ಮತ್ತು ಕೇಜ್ರಿವಾಲ್ ಹೊಂದಿದ್ದರು ಎಂಬುದನ್ನು ಇದು ಸ್ಪಷ್ಟಪಡಿಸುತ್ತದೆ. ಆದರೆ, ಅವರು ಅತ್ಯುತ್ತಮ ಅರ್ಹತೆ
ಗಳಿರುವ ವ್ಯಕ್ತಿಯೊಬ್ಬರನ್ನು ಗುರುತಿಸಿದ್ದಾರೆ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಆದರೆ, ಖರ್ಗೆ ಅವರಿಗೆ ಅರ್ಹತೆಗಳಿದ್ದರೂ ನೆಹರೂ- ಗಾಂಧಿ ಕುಟುಂಬದ ಮೌನವು ‘ಕುಟುಂಬವು ಪರಿವಾರವಾದದಲ್ಲಿ ಮುಳುಗಿದೆ ಮತ್ತು ಪ್ರತಿಯೊಂದನ್ನೂ ತನ್ನ ಮೂಗಿನ ನೇರಕ್ಕಷ್ಟೇ ನೋಡುತ್ತದೆ’ ಎಂಬ ಆರೋಪಗಳಿಗೆ ಇನ್ನಷ್ಟು ಪುಷ್ಟಿ ನೀಡಿದೆ. ಮೈತ್ರಿಕೂಟವನ್ನು ಮುನ್ನಡೆಸಲು ತಾವು ಒಮ್ಮತದ ಅಭ್ಯರ್ಥಿ ಎಂದು ಸ್ವಯಂ ಪರಿಭಾವಿಸಿರುವ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್‌, ಈ ಬೆಳವಣಿಗೆಯಿಂದ ಹತಾಶರಾಗಿರುವ ಮತ್ತೊಬ್ಬ ವ್ಯಕ್ತಿ. 

ತೃಣಮೂಲ ಕಾಂಗ್ರೆಸ್‌, ಆಮ್‌ ಆದ್ಮಿ ಪಕ್ಷ ಮತ್ತು ಸಮಾಜವಾದಿ ಪಕ್ಷದಂತಹ ಪ್ರಾದೇಶಿಕ ಪಕ್ಷಗಳು ತಂತಮ್ಮ ಪ್ರಾಂತ್ಯಗಳಲ್ಲಿ ಕಾಂಗ್ರೆಸ್‌ ಪಕ್ಷವು ಹೆಚ್ಚು ಕ್ಷೇತ್ರಗಳಿಗೆ ಪಟ್ಟು ಹಿಡಿಯಬಾರದು ಎಂದು ಮುಂದಿಟ್ಟಿರುವ ಪ್ರಸ್ತಾವವು ಕಾಂಗ್ರೆಸ್‌ಗೆ ಎದುರಾಗಿರುವ ಎರಡನೇ ಸಮಸ್ಯೆ. ಆ ಪಕ್ಷಗಳ ಪ್ರಕಾರ, ಕಾಂಗ್ರೆಸ್ ಪಕ್ಷವು ಉತ್ತರಪ್ರದೇಶ, ಪಶ್ಚಿಮ ಬಂಗಾಳ, ದೆಹಲಿ ಮತ್ತು ಪಂಜಾಬಿನಲ್ಲಿ ಮತದಾರರನ್ನು ಸೆಳೆಯುವ ಸಾಮರ್ಥ್ಯ ಉಳಿಸಿಕೊಂಡಿಲ್ಲ. ಅದಕ್ಕೆ ಸೀಟುಗಳನ್ನು ಬಿಟ್ಟುಕೊಟ್ಟರೆ ಬಿಜೆಪಿ ವಿರುದ್ಧ ಹೋರಾಡುವುದಕ್ಕೆ ಬೇಕಾದ ಕಾರ್ಯಕರ್ತರ ಬಲವೂ ಇಲ್ಲ ಎಂಬುದು ಆ ಪಕ್ಷಗಳ ಪ್ರಬಲ ಅನಿಸಿಕೆ. ಆದ್ದರಿಂದ, ‘ಇಂಡಿಯಾ’ ಮೈತ್ರಿಕೂಟವು ಮುಂದುವರಿಯ ಬೇಕೆಂದರೆ, 200ಕ್ಕಿಂತ ಕಡಿಮೆ ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಸೂತ್ರಕ್ಕೆ ಕಾಂಗ್ರೆಸ್ ಒಪ್ಪಿಕೊಳ್ಳಬೇಕಾಗುತ್ತದೆ. ಅಂದರೆ, ತನಗೆ ಗಟ್ಟಿ ನೆಲೆಯಿರುವ ಕೇರಳ, ಕರ್ನಾಟಕ, ತೆಲಂಗಾಣದಲ್ಲಿ ಮತ್ತು ಬಿಜೆಪಿಗೆ ಪ್ರಮುಖ ವಿರೋಧ ಪಕ್ಷವಾಗಿರುವ ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸಗಡ, ಹಿಮಾಚಲ ಪ್ರದೇಶ, ಉತ್ತರಾಖಂಡ ಹಾಗೂ ಗೋವಾಕ್ಕೆ ಪ್ರಧಾನವಾಗಿ ಅದರ ಸ್ಪರ್ಧೆ ಸೀಮಿತಗೊಳ್ಳಬೇಕಾಗುತ್ತದೆ.

ಮೈತ್ರಿಕೂಟದ ಕೆಲವು ಪಕ್ಷಗಳು ಈ ಮೇಲೆ ತಿಳಿಸಿರುವ ಅಭಿಪ್ರಾಯದಲ್ಲಿ ಬಹಳಷ್ಟು ತಥ್ಯವಿದ್ದರೂ ಕಾಂಗ್ರೆಸ್ ಪಕ್ಷವು ಇದನ್ನು ತೀವ್ರ ಅವಮಾನಕರ ಎಂದು ಭಾವಿಸಿ ತಿರಸ್ಕರಿಸುವ ಸಾಧ್ಯತೆಯೇ ಹೆಚ್ಚು. ಉದಾಹರಣೆಗೆ, ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷವು ಸಂಪೂರ್ಣವಾಗಿ ಅಸ್ತಿತ್ವ ಕಳೆದುಕೊಂಡಿದೆ– ರಾಯ್‌ಬರೇಲಿ ಮತ್ತು ಅಮೇಠಿ ಹೊರತುಪಡಿಸಿ. ಆದರೆ, ಪಕ್ಷವು ಈ ವಾಸ್ತವವನ್ನು ಒಪ್ಪಿಕೊಳ್ಳುವುದಿಲ್ಲ. ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಬಿಹಾರದಲ್ಲಿ ಆ ಪಕ್ಷದ ಸ್ಥಿತಿ ಶೋಚನೀಯವಾಗಿದೆ. ಹೀಗಿದ್ದರೂ ಈ ರಾಜ್ಯಗಳಲ್ಲಿ ತನ್ನ ಚುನಾವಣಾ ಸ್ಪರ್ಧೆ ಅಪ್ರಸ್ತುತ ಎಂಬುದನ್ನು ಅದು ಒಪ್ಪಿಕೊಳ್ಳುವುದಿಲ್ಲ ಮತ್ತು ಕ್ಷೇತ್ರಗಳಿಗಾಗಿ ಬೇಡಿಕೆ ಮುಂದಿಡಲಿದೆ.

ಮತ್ತೊಂದೆಡೆ, ಕಾಂಗ್ರೆಸ್ ಮತ್ತು ಕಮ್ಯುನಿಸ್ಟ ರನ್ನು ಹಿಮ್ಮೆಟ್ಟಿಸಿರುವ ತೃಣಮೂಲ ಕಾಂಗ್ರೆಸ್‌ ಪಕ್ಷವು ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಪ್ರತಿಯೊಂದು ರಾಜ್ಯವನ್ನೂ ಆ ರಾಜ್ಯದಲ್ಲಿ ಹಿಡಿತ ಹೊಂದಿರುವ ಪಕ್ಷಕ್ಕೆ ಬಿಟ್ಟುಕೊಡಬೇಕೆಂಬ ತನ್ನ ಪ್ರಸ್ತಾವ ವನ್ನು ಮೈತ್ರಿಕೂಟ ಪರಿಗಣಿಸಬೇಕೆಂದು ಆಗ್ರಹಿಸುತ್ತಿದೆ.

ಕಾಂಗ್ರೆಸ್ ಪಕ್ಷವು ಪಶ್ಚಿಮ ಬಂಗಾಳದಲ್ಲಿ ಲೋಕಸಭೆಗೆ ಎರಡು ಕ್ಷೇತ್ರಗಳಲ್ಲಷ್ಟೇ ಪ್ರಾತಿನಿಧ್ಯ ಹೊಂದಿದೆ. ವಿಧಾನಸಭೆಗೆ ಒಂದೇ ಒಂದು ಕ್ಷೇತ್ರದಿಂದಲೂ ಆಯ್ಕೆಯಾಗಿಲ್ಲ. ಆದ್ದರಿಂದ, ಕಾಂಗ್ರೆಸ್ ಪಕ್ಷಕ್ಕೆ ಸೀಟುಗಳನ್ನು ಬಿಟ್ಟುಕೊಡಲು ತೃಣಮೂಲ ಕಾಂಗ್ರೆಸ್‌ಗೆ ಸುತರಾಂ ಮನಸ್ಸಿಲ್ಲ. ಅಖಿಲೇಶ್ ಯಾದವ್ ಅವರು ಮಧ್ಯಪ್ರದೇಶಕ್ಕೆ ಈಚೆಗೆ ಜರುಗಿದ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ತೋರಿದ ಅಹಂಕಾರದ ನಡೆಯನ್ನು ಮರೆಯಲಾರರು.

ಆಮ್‌ ಆದ್ಮಿ ಪಕ್ಷವು ವಿಧಾನಸಭೆ ಚುನಾವಣೆಗಳಲ್ಲಿ ಭರ್ಜರಿ ಗೆಲುವು ದಾಖಲಿಸಿ ಅಧಿಕಾರದಲ್ಲಿರುವ ದೆಹಲಿ ಮತ್ತು ಪಂಜಾಬ್‌ನಲ್ಲೂ ಇದೇ ರೀತಿಯ ಪರಿಸ್ಥಿತಿ ಇದೆ. ಈ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ತೀವ್ರ ಹಿನ್ನಡೆ ಅನುಭವಿಸಿದೆ ಎಂಬುದು ಯಾವ ಉತ್ಪ್ರೇಕ್ಷೆಯೂ ಇಲ್ಲದ ವಾಸ್ತವವಾಗಿದೆ. ಕಾಂಗ್ರೆಸ್ ಪಕ್ಷವು ನರೇಂದ್ರ ಮೋದಿ ಅವರ ವಿರುದ್ಧ ಸಂಘಟಿತ ಹೋರಾಟ ನಡೆಸಬೇಕೆಂಬು ದನ್ನು ಗಂಭೀರವಾಗಿ ತೆಗೆದುಕೊಂಡಿರುವುದು ಹೌದೇ ಆದರೆ ಅದು ವಾಸ್ತವವನ್ನು ಒಪ್ಪಿಕೊಳ್ಳಬೇಕು ಎಂಬುದು ವಿವಿಧ ರಾಜ್ಯಗಳಲ್ಲಿ ಹಿಡಿತ ಸಾಧಿಸಿರುವ ಪ್ರಾದೇಶಿಕ ಪಕ್ಷಗಳ ಇರಾದೆಯಾಗಿದೆ. ತಾವು ಪ್ರಬಲವಾಗಿರುವ ರಾಜ್ಯಗಳಲ್ಲಿ ಕಾಂಗ್ರೆಸ್ಸಿಗೆ ಕ್ಷೇತ್ರಗಳನ್ನು ಬಿಟ್ಟುಕೊಟ್ಟರೆ, ಬಿಜೆಪಿಯು ಅವನ್ನು ಸಲೀಸಾಗಿ ತನ್ನ ಗೆಲುವಿನ ಪಟ್ಟಿಗೆ ಸೇರಿಸಿಕೊಳ್ಳುತ್ತದೆ ಎಂಬುದು ಆ ಪಕ್ಷಗಳ ಅಭಿಪ್ರಾಯ ವಾಗಿದೆ. ಬಿಜೆಪಿಯನ್ನು ಎದುರಿಸಲು ಕಾಂಗ್ರೆಸ್‌ಗೆ ತಾತ್ವಿಕ ಸನ್ನದ್ಧತೆಯಾಗಲೀ ಅಥವಾ ಕಾರ್ಯಕರ್ತರ ಪಡೆಯಾಗಲೀ ಇಲ್ಲದಿರುವುದೇ ಈ ಹಿನ್ನಡೆಗೆ ಕಾರಣವಾಗಲಿದೆ ಎಂಬುದು ಅವುಗಳ ತರ್ಕ. ಅದೇನೇ ಇದ್ದರೂ ಕಾಂಗ್ರೆಸ್ ಮಾತ್ರ ಇದೆಲ್ಲವನ್ನೂ ತೀರಾ ಅವಮಾನಕರ ಎಂದೇ ಭಾವಿಸುತ್ತದೆ.

ಇವೆಲ್ಲವೂ ‘ಇಂಡಿಯಾ’ ಮೈತ್ರಿಕೂಟವನ್ನು ಎಲ್ಲಿಗೆ ಕೊಂಡೊಯ್ಯುತ್ತವೆ? ಈ ಎಲ್ಲ ತೊಡಕುಗಳನ್ನು ಸರಿಪಡಿಸಿಕೊಂಡು ಮೋದಿ ಮತ್ತು ಬಿಜೆಪಿ ವಿರುದ್ಧ ಸಂಘಟಿತ ಹೋರಾಟ ರೂಪಿಸಲು ಈ ಮೈತ್ರಿಕೂಟದ ಪಕ್ಷಗಳಿಗೆ ಇನ್ನು ನಾಲ್ಕರಿಂದ ಆರು ವಾರಗಳಷ್ಟೇ ಸಮಯಾವಕಾಶ ಇದೆ. ಅವು ಇದರಲ್ಲಿ ಯಶಸ್ವಿ
ಯಾಗುತ್ತವೆಯೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT