ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂರ್ಯ–ನಮಸ್ಕಾರ | ತೀರಾ ಪ್ರಶ್ನಾರ್ಹವಾದ ಸೂಚ್ಯಂಕಗಳು

ಅಭಿಪ್ರಾಯ ಆಧಾರಿತ ಸೂಚ್ಯಂಕಗಳು ನ್ಯೂನತೆಗಳಿಂದ ಹೊರತಾಗಿಲ್ಲ
Last Updated 19 ಜನವರಿ 2023, 19:36 IST
ಅಕ್ಷರ ಗಾತ್ರ

ಅಭಿಪ್ರಾಯ ಆಧಾರಿತ ಸೂಚ್ಯಂಕಗಳ ಕುರಿತು ಪ್ರಧಾನಿಯವರ ಆರ್ಥಿಕ ಸಲಹಾ ಮಂಡಳಿಯು ಅಧ್ಯಯನ ವರದಿಯೊಂದನ್ನು ಈಚೆಗೆ ಬಿಡುಗಡೆ ಮಾಡಿದೆ. ಫ್ರೀಡಂ ಹೌಸ್ ಸಿದ್ಧಪಡಿಸುವ ಜಗತ್ತಿನ ಸ್ವಾತಂತ್ರ್ಯ ಸೂಚ್ಯಂಕ, ಇಐಯು ಪ್ರಜಾತಂತ್ರ ಸೂಚ್ಯಂಕ ಮತ್ತು ವೆರೈಟಿ ಆಫ್ ಡೆಮಾಕ್ರಸಿ (ವಿ–ಡೆಮ್) ಸೂಚ್ಯಂಕ ಕುರಿತ ಮೊದಲ ಅಧಿಕೃತ ಅಧ್ಯಯನ ವರದಿ ಇದು. ಈ ಸೂಚ್ಯಂಕಗಳನ್ನು ಪ್ರಕಟಿಸುವ ಸಂಸ್ಥೆಗಳು, 2014ರಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರದಲ್ಲಿ ಅನುಸರಿಸುತ್ತಿರುವ ಪದ್ಧತಿಯ ಬಗ್ಗೆ ಹಾಗೂ ಅವುಗಳ ಅಭಿಪ್ರಾಯದ ಬಗ್ಗೆ ಈ ವರದಿಯು ಗಂಭೀರವಾದ ಅನುಮಾನಗಳನ್ನು ಹುಟ್ಟುಹಾಕಿದೆ.

ಆಡಳಿತದ ಮೌಲ್ಯಮಾಪನ, ರಾಜಕೀಯ ಸ್ಥಿರತೆ, ಕಾನೂನಿಗೆ ಅನುಗುಣವಾದ ಆಡಳಿತಕ್ಕೆ ಸಂಬಂಧಿಸಿದಂತೆ ಕೆಲವು ವಸ್ತುನಿಷ್ಠವಲ್ಲದ ಅಂಶಗಳು ಹಾಗೂ ಕೆಲವು ಆರ್ಥಿಕ ಸೂಚಕಗಳನ್ನು ಈ ಸೂಚ್ಯಂಕಗಳು ಆಧರಿಸಿವೆ ಎಂದು ವರದಿ ಹೇಳಿದೆ. ಸೂಚ್ಯಂಕಗಳಲ್ಲಿನ ಇತರ ಕೆಲವು ನ್ಯೂನತೆಗಳು: ‘ಅಧ್ಯಯನ, ವಿಶ್ಲೇಷಣೆಯಲ್ಲಿ ಗಂಭೀರ ಸಮಸ್ಯೆಗಳಿವೆ’; ಇವು ಇತರರಿಗೆ ಗೊತ್ತಿಲ್ಲದ ತಜ್ಞರ ಸಣ್ಣ ಗುಂ‍ಪೊಂದು ನೀಡುವ ಅಭಿಪ್ರಾಯ ಆಧರಿಸಿ ತೀರ್ಮಾನಕ್ಕೆ ಬರುತ್ತವೆ; ತಜ್ಞರನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಪಾರದರ್ಶಕತೆಯ ಕೊರತೆ ಇದೆ; ‘ವಸ್ತುನಿಷ್ಠವಾಗಿ ಉತ್ತರಿಸಲು ಸಾಧ್ಯವಿಲ್ಲದ ರೀತಿಯಲ್ಲಿ ಪದಗಳನ್ನು ಹೆಣೆದು’ ಪ್ರಶ್ನೆಗಳನ್ನು ಸಿದ್ಧಪಡಿಸಿರುವುದು. ಈ ಅಧ್ಯಯನ ವರದಿಯನ್ನು ಆರ್ಥಿಕ ಸಲಹಾ ಮಂಡಳಿಯ ಸದಸ್ಯ ಸಂಜೀವ್ ಸನ್ಯಾಲ್ ಮತ್ತು ಮಂಡಳಿಯ ಉಪ ನಿರ್ದೇಶಕಿ ಆಕಾಂಕ್ಷಾ ಅರೋರಾ ಸಿದ್ಧಪಡಿಸಿದ್ದಾರೆ. ಮೇಲೆ ಹೇಳಲಾಗಿರುವ ಸಂಸ್ಥೆಗಳ ಪೈಕಿ ವಿ–ಡೆಮ್ ತನ್ನ ತೀರ್ಮಾನಗಳನ್ನು ಸಮರ್ಥಿಸಿಕೊಂಡಿದೆ. ಆದರೆ, ವಿ–ಡೆಮ್ ಸಂಸ್ಥೆಯ ನಿರ್ದೇಶಕ ಸ್ಟಾಫನ್ ಲಿಂಡ್‌ಬರ್ಗ್‌ ಅವರು ಸುದ್ದಿಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಕೊಟ್ಟಿರುವ ಬಹುತೇಕ ವಿವರಣೆಗಳು ತೃಪ್ತಿಕರವಾಗಿಲ್ಲ.

ಉದಾಹರಣೆಗೆ, ವಿ–ಡೆಮ್ ಸಂಸ್ಥೆಯು ಕೆಲವೇ ಕೆಲವು ತಜ್ಞರ ಅಭಿಪ್ರಾಯ ಪಡೆದು ಅಂಕಗಳನ್ನು ನೀಡುತ್ತದೆ. 140 ಕೋಟಿ ಜನರಿರುವ ಭಾರತದ ಪ್ರಜಾತಂತ್ರಕ್ಕೆ ಅಂಕ ನೀಡುವಾಗ ಅದು ಗಣನೀಯ ಸಂಖ್ಯೆಯ ಜನರಿಂದ ಅಭಿಪ್ರಾಯ ಸಂಗ್ರಹಿಸುವುದಿಲ್ಲ. ನಿರ್ದಿಷ್ಟವಾಗಿ ಹೇಳಬೇಕು ಎಂದಾದರೆ, 30 ಜನರ ಅಭಿಪ್ರಾಯ ಪಡೆದು ಅದು ಒಂದು ತೀರ್ಮಾನಕ್ಕೆ ಬಂದಿದೆ. ಈ ತಜ್ಞರಿಗೆ ಒಂದಿಷ್ಟು ಪ್ರಶ್ನೆಗಳನ್ನು ಕೇಳಲಾಗುತ್ತದೆ. ಪ್ರಶ್ನೆಗಳಲ್ಲಿ ಹಲವಕ್ಕೆ ವಸ್ತುನಿಷ್ಠವಾದ ಉತ್ತರಗಳನ್ನು ನೀಡುವುದು ಸಾಧ್ಯವೇ ಇಲ್ಲ. ಹೀಗಿದ್ದರೂ ಸಂಸ್ಥೆಯ ನಿರ್ದೇಶಕರು, ತಮ್ಮ ವಿಶ್ಲೇಷಣೆಯು ಉನ್ನತ ಮಟ್ಟದ ಗಣಿತಶಾಸ್ತ್ರವನ್ನು ಆಧರಿಸಿದೆ ಎನ್ನುತ್ತಾರೆ.

ಇಂತಹ ಸಮೀಕ್ಷೆಗಳನ್ನು ನಡೆಸುವ ವಿ–ಡೆಮ್ ಹಾಗೂ ಇತರ ಸಂಸ್ಥೆಗಳಲ್ಲಿ ದೊಡ್ಡ ಲೋಪವೊಂದು ಇದೆ. ಅವು ತಮ್ಮ ಸಮೀಕ್ಷೆಗಳಲ್ಲಿ ಅಭಿಪ್ರಾಯ ನೀಡಲು ನೇಮಕ ಮಾಡಿಕೊಳ್ಳುವ ‘ತಜ್ಞರ’ ವಿಚಾರದಲ್ಲಿ ಗೋಪ್ಯತೆಯನ್ನು ಕಾಯ್ದುಕೊಳ್ಳುತ್ತವೆ. 180 ದೇಶಗಳ ತಜ್ಞರ ಜೊತೆ ಸಂಸ್ಥೆ ಕೆಲಸ ಮಾಡುತ್ತದೆ, ಅವರ ಹೆಸರನ್ನು ಬಹಿರಂಗಪಡಿಸಿದರೆ ಅವರಿಗೆ ಹಾಗೂ ಅವರ ಕುಟುಂಬದ ಸದಸ್ಯರಿಗೆ ತೊಂದರೆ ಆಗಬಹುದು ಎಂದು ಲಿಂಡ್‌ಬರ್ಗ್‌ ಅವರು ಹೇಳಿದ್ದಾರೆ. ಆದರೆ, ಬರೀ 30 ಜನ ತಜ್ಞರು ಅಭಿಪ್ರಾಯ ನೀಡಿ, ಆ ಅಭಿಪ್ರಾಯ ಆಧರಿಸಿ ವಿ–ಡೆಮ್ ಸಂಸ್ಥೆಯು ಭಾರತವು ‘ಮತದಾನ ಪ್ರಕ್ರಿಯೆ ನಡೆಯುವ ಸರ್ವಾಧಿಕಾರ’ವಾಗುವತ್ತ ಸಾಗುತ್ತಿದೆ ಎಂಬ ತೀರ್ಮಾನ ನೀಡಿದರೆ, ಆ ತೀರ್ಮಾನಕ್ಕೆ ಯಾವ ಬಗೆಯ ವಿಶ್ವಾಸಾರ್ಹತೆ ಸಿಗಲು ಸಾಧ್ಯ?

ಈ ತಜ್ಞರು ಯಾರು, ಅವರ ಅಕಡೆಮಿಕ್ ಅರ್ಹತೆಗಳು ಏನು, ಅವರಿಗೆ ಇರುವ ವೃತ್ತಿ ಮನ್ನಣೆ ಏನು ಎಂಬುದನ್ನು ತಿಳಿದುಕೊಳ್ಳದೆ, ಇವೆಲ್ಲಕ್ಕಿಂತ ಮುಖ್ಯವಾಗಿ ಅವರ ರಾಜಕೀಯ ಹಿನ್ನೆಲೆ ಹಾಗೂ ಅವರ ಉದ್ದೇಶ ಏನು ಎಂಬುದನ್ನು ತಿಳಿದುಕೊಳ್ಳದೇ ಇದ್ದರೆ, ತೀರ್ಮಾನವು ಸಂಶಯಾಸ್ಪದವಾಗಿಯೇ ಇರುತ್ತದೆ.

ಬಿಜೆಪಿ ಕಡೆ ಬೊಟ್ಟುಮಾಡಿ ವಿ–ಡೆಮ್ ಸಂಸ್ಥೆಯು ಭಾರತವನ್ನು ‘ಮತದಾನ ಪ್ರಕ್ರಿಯೆ ನಡೆಯುವ ಸರ್ವಾಧಿಕಾರ ವ್ಯವಸ್ಥೆ’ ಎಂದು ವರ್ಗೀಕರಿಸಿದೆ. ಬಹುತ್ವ ವಿರೋಧಿ ರಾಜಕೀಯ ಪಕ್ಷಗಳು ಸರ್ವಾಧಿಕಾರದ ಅಜೆಂಡಾವನ್ನು ಕನಿಷ್ಠ ಆರು ದೇಶಗಳಲ್ಲಿ– ಭಾರತ, ಬ್ರೆಜಿಲ್, ಹಂಗರಿ, ಪೋಲೆಂಡ್, ಸರ್ಬಿಯಾ ಮತ್ತು ಟರ್ಕಿ– ಮುಂದಕ್ಕೆ ಒಯ್ಯುತ್ತಿವೆ ಎಂದು ಹೇಳಿದೆ. ಬೇರೆ ದೇಶಗಳ ಪಕ್ಷಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದಿದ್ದರೂ, ಒಂದಿಷ್ಟು ಮನ್ನಣೆ ಹಾಗೂ ಒಂದಿಷ್ಟು ಮತಗಳನ್ನು ಪಡೆದಿರುವ ಬಿಜೆಪಿ ಸೇರಿದಂತೆ ಭಾರತದ ಯಾವ ಪಕ್ಷವನ್ನೂ ‘ಬಹುತ್ವ ವಿರೋಧಿ’ ಎಂದು ಜರಿಯಲು ಆಗದು. ಈ ಆರೋಪವನ್ನು ಕೇಳಿ ನಗಬಹುದು, ಅಷ್ಟೇ. ಏಕೆಂದರೆ, ಭಾರತದ ಸಂದರ್ಭದಲ್ಲಿ ಇಲ್ಲಿನ ಸಾಮಾಜಿಕ ಬಹುತ್ವವು ರಾಜಕೀಯ ಬಹುತ್ವಕ್ಕೆ ಯಾವ ರೀತಿಯಲ್ಲಿ ಕೊಡುಗೆ ನೀಡಿದೆ ಎಂಬುದನ್ನು ಯಾವುದೇ ರಾಜಕೀಯ ಮತ್ತು ಸಮಾಜಶಾಸ್ತ್ರಜ್ಞ ಹೇಳಬಲ್ಲ. ಇಲ್ಲಿನ ಸಾಮಾಜಿಕ ಬಹುತ್ವವು ಸಣ್ಣ ಜಾತಿ, ಭಾಷೆ, ಪ್ರದೇಶಗಳನ್ನು ಆಧರಿಸಿದ ರಾಜಕೀಯ ಪಕ್ಷಗಳು ದೇಶದುದ್ದಕ್ಕೂ ದೊಡ್ಡ ಸಂಖ್ಯೆಯಲ್ಲಿ ಜನಿಸಲು ಕಾರಣವಾಗಿದೆ. ದೇಶದ ಎರಡನೆಯ ಲೋಕಸಭೆಯಲ್ಲಿ (1957–62) 12 ರಾಜಕೀಯ ಪಕ್ಷಗಳ ಪ್ರತಿನಿಧಿಗಳಿದ್ದರು. ನಾಲ್ಕು ದಶಕಗಳ ನಂತರದಲ್ಲಿ ಪ್ರಾತಿನಿಧ್ಯದ ಸಂಖ್ಯೆಯು 40 ಪಕ್ಷಗಳಿಗೆ ಏರಿತ್ತು. ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದಲ್ಲಿ (ಎನ್‌ಡಿಎ) 15 ಪಕ್ಷಗಳು, 329 ಲೋಕ ಸಭಾ ಸದಸ್ಯರು ಹಾಗೂ 110 ರಾಜ್ಯಸಭಾ ಸದಸ್ಯರಿದ್ದಾರೆ.

ಪೂರ್ಣ ಪ್ರಮಾಣದ ಪ್ರಜಾತಂತ್ರ ವ್ಯವಸ್ಥೆಗಳು ಗಟ್ಟಿಯಾದ ನೆಲೆಗಟ್ಟಿನ ಮೇಲೆ ನಿಂತಿರಬೇಕು ಎಂಬುದನ್ನು ವಿ–ಡೆಮ್ ಹಾಗೂ ಅದರಂತಹ ಇತರ ಸಂಸ್ಥೆಗಳು ಗುರುತಿಸಲು ವಿಫಲವಾಗುತ್ತಿವೆ. ನಮ್ಮ ಸಂವಿಧಾನದಲ್ಲಿ ಹೇಳಿರುವ ಸಮಾನತೆ ಮತ್ತು ಸಮಾನ ರಕ್ಷಣೆ (ಸಂವಿಧಾನದ 14ನೆಯ ವಿಧಿ); ತಾರತಮ್ಯಕ್ಕೆ ಅವಕಾಶ ಇಲ್ಲದಿರುವುದು (15ನೇ ವಿಧಿ); ಮುಖ್ಯಸ್ಥನನ್ನು ಆಯ್ಕೆ ಮಾಡುವ ಗಣತಂತ್ರ ಮಾದರಿಯ ಸರ್ಕಾರ (ಸಂವಿಧಾನದ ಪೀಠಿಕೆ); ಆತ್ಮಸಾಕ್ಷಿ ಹಾಗೂ ಪೂಜೆಯ ಸ್ವಾತಂತ್ರ್ಯ (25ನೇ ವಿಧಿ); ಅಲ್ಪಸಂಖ್ಯಾತರ ಹಕ್ಕುಗಳು (25, 26, 29 ಮತ್ತು 30ನೆಯ ವಿಧಿಗಳು) ಅಂತಹ ಗಟ್ಟಿ ನೆಲೆಗಟ್ಟು.

ಉದಾಹರಣೆಗೆ, ಭಾರತವು ಗಣರಾಜ್ಯ ಆದ ನಂತರದಲ್ಲಿ, ಅತ್ಯಂತ ದುರ್ಬಲ ಸಮುದಾಯಗಳಿಗೆ ಸೇರಿದ ಜನ ಕೂಡ ಸರ್ಕಾರಗಳ ಮುಖ್ಯಸ್ಥರಾಗಲು ಅವಕಾಶ ಸಿಕ್ಕಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು, ಹಿಂದಿನ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಈ ಮಾತಿಗೆ ಈಚಿನ ಉದಾಹರಣೆಗಳು. ಆದರೆ ಸಾರ್ವಜನಿಕರ ಹಣದಲ್ಲಿ ತಮ್ಮ ರಾಜಕುಟುಂಬಗಳನ್ನು ಸಾಕುತ್ತಿರುವ ಸ್ವೀಡನ್, ಡೆನ್ಮಾರ್ಕ್‌ನಂತಹ ರಾಷ್ಟ್ರಗಳಿಗೆ ಗಣತಂತ್ರವು ಲೆಕ್ಕಕ್ಕಿಲ್ಲ. ಇನ್ನೂ ಆಘಾತಕಾರಿ ಅನ್ನಿಸುವ ಸಂಗತಿಯೊಂದು ಇದೆ. ಇಂತಹ ಸಂಸ್ಥೆಗಳು ಸಿದ್ಧಪಡಿಸುವ ಪಟ್ಟಿಯಲ್ಲಿ, ಡಜನ್‌ಗಟ್ಟಲೆ ಸಂಖ್ಯೆಯ ಇಸ್ಲಾಮಿಕ್ ಹಾಗೂ ಕ್ರೈಸ್ತ ರಾಷ್ಟ್ರಗಳು ಭಾರತದ ಸ್ಥಾನಕ್ಕಿಂತ ಉನ್ನತವಾದ ಸ್ಥಾನದಲ್ಲಿವೆ. ಈ ರಾಷ್ಟ್ರಗಳು ತಮ್ಮ ನಿಷ್ಠೆ ಇಸ್ಲಾಂ ಅಥವಾ ಕ್ರೈಸ್ತ ಧರ್ಮಕ್ಕೆ ಎಂದು ಸಾಂವಿಧಾನಿಕವಾಗಿ ಘೋಷಿಸಿವೆ. ಆದರೆ ಭಾರತವು ಧರ್ಮನಿರಪೇಕ್ಷ ರಾಷ್ಟ್ರ. ಭಾರತದ ಪ್ರಭುತ್ವವು ಎಲ್ಲ ಧರ್ಮಗಳಿಂದ ಸಮಾನ ಅಂತರ ಕಾಯ್ದುಕೊಳ್ಳುತ್ತದೆ. ಸರ್ಕಾರಗಳಿಂದ ಅನುದಾನ ಪಡೆಯುವ ಶಿಕ್ಷಣ ಸಂಸ್ಥೆಗಳಲ್ಲಿ ಧರ್ಮ ಆಧಾರಿತ ಪಾಠಗಳು ನಡೆಯಬಾರದು ಎಂದು ಸಂವಿಧಾನದ 28ನೆಯ ವಿಧಿ ಹೇಳುತ್ತದೆ.

ವಿ–ಡೆಮ್ ಹಾಗೂ ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್‌ ಸಂಸ್ಥೆಯು ಭಾರತವನ್ನು ಕೆಟ್ಟದ್ದಾಗಿ ಚಿತ್ರಿಸಲು ಯತ್ನಿಸಿದಾಗ, ಪ್ರಜಾತಂತ್ರ ದೇಶಗಳ ಸಾಲಿನಲ್ಲಿ ದೇಶವನ್ನು ಕೆಳಗಿನ ಸ್ಥಾನಕ್ಕೆ ತಳ್ಳಲು ಯತ್ನಿಸಿದಾಗ ಎರಡು ವರ್ಷಗಳ ಹಿಂದೆ ಈ ಲೇಖಕ ಇದೇ ವಿಷಯಗಳನ್ನು ಎತ್ತಿದ್ದರು. ಆದರೆ ಈ ಥಿಂಕ್‌–ಟ್ಯಾಂಕ್‌ ಮಂದಿ ಅಜೆಂಡಾ ಇಟ್ಟುಕೊಂಡು ಕೆಲಸ ಮಾಡುತ್ತಾರಾದ ಕಾರಣ, ಅವರು ಇಂತಹ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT