ಶನಿವಾರ, ಜೂನ್ 6, 2020
27 °C
ವಿದೇಶಿ ಮಾಧ್ಯಮಗಳ ವರದಿಗಳಲ್ಲಿನ ಪೂರ್ವಗ್ರಹಗಳನ್ನು ಗುರುತಿಸಬೇಕಾಗಿದೆ

ವಿದೇಶಿ ಮಾಧ್ಯಮಗಳ ಪೂರ್ವಗ್ರಹ: ಪ್ರಜಾತಂತ್ರ ವ್ಯವಸ್ಥೆ ಶಿಥಿಲಗೊಳಿಸುವ ಯತ್ನವೇ?

ಎ. ಸೂರ್ಯ ಪ್ರಕಾಶ್ Updated:

ಅಕ್ಷರ ಗಾತ್ರ : | |

‘ಭಾರತದಲ್ಲಿನ ಪರಿಸ್ಥಿತಿಯು ನಿರ್ದಿಷ್ಟ ಸಮುದಾಯವೊಂದರ ಹತ್ಯಾಕಾಂಡದ ಕಡೆ ಸಾಗುತ್ತಿದೆ’ ಎಂದು ಕಾದಂಬರಿಕಾರ್ತಿ, ಸಾಮಾಜಿಕ ಕಾರ್ಯಕರ್ತೆ ಅರುಂಧತಿ ರಾಯ್ ಅವರು ಜರ್ಮನಿಯ ಡಿಡಬ್ಲ್ಯೂ (ಡಾಯಿಚ್ ವೆಲೆ) ಸುದ್ದಿಸಂಸ್ಥೆಗೆ ಹೇಳಿಕೆ ನೀಡಿದ್ದಾರೆ. ‘ಕೋವಿಡ್–19 ಕಾಯಿಲೆಯ ಕಳಂಕವನ್ನು ಮುಸ್ಲಿಮರ ಮೇಲೆ ಹೊರಿಸುವ ಕೆಲಸ ನಡೆದಿದೆ. ಮುಸ್ಲಿಮರನ್ನು ಹತ್ತಿಕ್ಕುವ ಕೆಲಸಕ್ಕೆ ಚುರುಕು ನೀಡಲು ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಈ ಸಾಂಕ್ರಾಮಿಕವನ್ನು ಬಳಸಿಕೊಳ್ಳುತ್ತಿದೆ’ ಎಂದೂ ಅವರು ಹೇಳಿದ್ದಾರೆ.

ಟೈಫಸ್ ಜ್ವರ ಹರಡಿದ್ದಕ್ಕೆ ಕಾರಣ ಯಹೂದಿಗಳು ಎಂದು ಬಿಂಬಿಸಲು ಜರ್ಮನಿಯ ನಾಜಿಗಳು ಜನಾಂಗೀಯ ನಿರ್ಮೂಲನೆಯ ಸಂದರ್ಭದಲ್ಲಿ ನಡೆಸಿದ ಯತ್ನದ ಜೊತೆ ಕೇಂದ್ರ ಸರ್ಕಾರದ ಯತ್ನಗಳನ್ನು ಹೋಲಿಸಿದ್ದಾರೆ ರಾಯ್. ಕೊನೆಯಲ್ಲಿ, ‘ಭಾರತದ ಟಿ.ವಿ. ನಿರೂಪಕರು ಜನರನ್ನು ಬೀದಿಯಲ್ಲಿ ಸಾಯುಹೊಡೆದ ಏಕವ್ಯಕ್ತಿ ಗುಂಪುಗಳಂತೆ ಇದ್ದಾರೆ’ ಎಂದೂ ಆರೋಪಿಸಿದ್ದಾರೆ.

ವಿಶ್ವದ ಅತಿದೊಡ್ಡ ಪ್ರಜಾತಂತ್ರವಾದ, ಅತ್ಯಂತ ವೈವಿಧ್ಯಮಯವಾದ ಭಾರತದ ಬಗ್ಗೆ ಯಾವುದೇ ವ್ಯಕ್ತಿ ಮಾಡಿದ ಆರೋಪಗಳ ಪೈಕಿ ಅತ್ಯಂತ ಹೆಚ್ಚು ಛೀಮಾರಿಗೆ ಸೂಕ್ತವಾದ ಹೇಳಿಕೆ ಇದೇ ಆಗಿರಬೇಕು. ಭಾರತದ ಕುರಿತು ಮತ್ಸರದಿಂದ ಮಾಡಿದ ಆರೋಪಕ್ಕೆ ಜರ್ಮನಿಯ ಸರ್ಕಾರಿ ಸ್ವಾಮ್ಯದ ಈ ಸಂಸ್ಥೆ ಕಿವಿಗೊಟ್ಟಿದ್ದು ಆಘಾತಕಾರಿ. ಜನಾಂಗೀಯ ಹತ್ಯಾಕಾಂಡಗಳ ಭಯಾನಕ ಪರಿಣಾಮಗಳು ಏನಿರುತ್ತವೆ ಎಂಬುದು ಜರ್ಮನಿಗೆ ಗೊತ್ತಿರುತ್ತದೆ ಎಂದು ನಾವು ತಿಳಿದಿದ್ದೇವೆ. ತನ್ನ ಕೆಟ್ಟ ಇತಿಹಾಸದಿಂದ ಬಿಡಿಸಿಕೊಳ್ಳಲು, ಗಟ್ಟಿಯಾದ ಪ್ರಜಾತಂತ್ರವನ್ನು ಕಟ್ಟಲು ಆ ದೇಶ 75 ವರ್ಷಗಳ ಕಾಲ ಹೆಣಗಾಡಿದೆ. ಭಾರತವು ತನ್ನ ಸ್ವಾತಂತ್ರ್ಯಕ್ಕಾಗಿ ನಡೆಸಿದ ಭವ್ಯ ಹೋರಾಟದ ಬಗ್ಗೆ, ಈ ದೇಶವನ್ನು ಮುನ್ನಡೆಸುತ್ತಿರುವ ಧರ್ಮನಿರಪೇಕ್ಷ, ಉದಾರವಾದಿ ಹಾಗೂ ಪ್ರಜಾತಂತ್ರವಾದಿ ಸಂವಿಧಾನದ ಬಗ್ಗೆ ಆ ಸಂಸ್ಥೆಯ ಸಂಪಾದಕೀಯ ವಿಭಾಗದ ಹಿರಿಯ ಸಿಬ್ಬಂದಿಗೆ, ನಿರೂಪಕರಿಗೆ ಗೊತ್ತಿರುತ್ತದೆ. ಹಾಗಾಗಿ, ಭಾರತದ ಬಗ್ಗೆ ಇಷ್ಟೆಲ್ಲ ಮಾತನಾಡಲು ಅದು ಅವಕಾಶ ಕೊಟ್ಟಿದ್ದಕ್ಕೆ ಕಾರಣ ತಿಳಿಯುತ್ತಿಲ್ಲ.

ರಾಯ್ ಅವರ ಆರೋಪಗಳು ಆಧಾರರಹಿತ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಭಾರತದಲ್ಲಿ ಒಂದು ಮುಸ್ಲಿಂ ಸಂಘಟನೆಯು (ತಬ್ಲೀಗ್‌ ಜಮಾತ್) ಹಿಂದಿನ ತಿಂಗಳು ಮಾಡಿದ ಬೇಜವಾಬ್ದಾರಿಯ ಕೆಲಸದಿಂದಾಗಿ ಸುದ್ದಿಯಲ್ಲಿದೆ ಎಂಬುದು ಸತ್ಯ. ಇದು ಸರ್ಕಾರದ ಆದೇಶಗಳನ್ನು ಉಲ್ಲಂಘಿಸಿತು. ಸಮಾವೇಶವೊಂದನ್ನು ನಡೆಸಿತು. ಇದರಲ್ಲಿ ಮಲೇಷ್ಯಾ, ಇಂಡೊನೇಷ್ಯಾ ಸೇರಿದಂತೆ ಹಲವು ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಇದಾದ ನಂತರ, ನೂರಾರು ಜನರಿಗೆ ಕೊರೊನಾ ಸೋಂಕು ತಗಲಿದೆ, ಅವರೆಲ್ಲ ದೇಶದ ವಿವಿಧೆಡೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೆಲವು ಧಾರ್ಮಿಕ ಮುಖಂಡರು ಹಾಗೂ ರಾಯ್ ಅವರಂತಹ ವ್ಯಕ್ತಿಗಳಿಂದ ತಪ್ಪು ಮಾಹಿತಿ ಪಡೆದು ಈ ರೋಗಿಗಳು ಆರೋಗ್ಯ ಕಾರ್ಯಕರ್ತರ ಮೇಲೆ ದಾಳಿ ನಡೆಸುತ್ತಿದ್ದಾರೆ, ಚಿಕಿತ್ಸೆಗೆ ಪ್ರತಿರೋಧ ತೋರುತ್ತಿದ್ದಾರೆ. ಆ ಮೂಲಕ ತಮ್ಮನ್ನು, ತಮ್ಮ ಕುಟುಂಬದ ಸದಸ್ಯರನ್ನು, ಇಡೀ ದೇಶವನ್ನು, ಇಡೀ ಮನುಕುಲವನ್ನು ಅಪಾಯಕ್ಕೆ ಒಡ್ಡುತ್ತಿದ್ದಾರೆ. ಇದು ರಾಯ್‌ ಅವರಿಗೆ ‘ಹತ್ಯಾಕಾಂಡ’ದಂತೆ ಕಾಣುತ್ತಿದೆ. ಇಂತಹ ಹಸಿ ಸುಳ್ಳು ಹೇಳಿಕೆಗಳನ್ನು ಡಿಡಬ್ಲ್ಯೂ ಪ್ರಸಾರ ಮಾಡಿದ್ದು ದುರದೃಷ್ಟಕರ ವಿಚಾರ.

ಈಗ ನಾವು ಬಿಬಿಸಿ ಕಡೆ ನೋಡೋಣ. ಕೊರೊನಾ ವೈರಾಣು ಹರಡುವಿಕೆಯ ಪ್ರಮಾಣ ತನ್ನಲ್ಲಿ ಕಡಿಮೆ ಎಂದು ಭಾರತ ತೋರಿಸುತ್ತಿದೆ ಎನ್ನುವ ವರದಿಯನ್ನು ಬಿಬಿಸಿ ಏಪ್ರಿಲ್ 14ರಂದು ಪ್ರಸಾರ ಮಾಡಿತು. ಇದಕ್ಕೆ ಆಧಾರ ಏನು? ತಮ್ಮ ಮುಖ, ಹೆಸರು ಬಹಿರಂಗಪಡಿಸದ ಇಬ್ಬರು ವೈದ್ಯರು. ಇವರು ತಮ್ಮ ಅನಿಸಿಕೆ ಹೇಳಲು ಸಿದ್ಧರಿದ್ದರು. ಆದರೆ ತಾವು ಯಾರು ಎಂಬುದನ್ನು ಹೇಳುವ ಧೈರ್ಯ ಇವರಲ್ಲಿರಲಿಲ್ಲ.

‘ವಾಸ್ತವವು ಅಂಕಿ–ಅಂಶಗಳು ಹೇಳುತ್ತಿರುವುದಕ್ಕಿಂತ ಹೆಚ್ಚು ಗಂಭೀರವಾಗಿದೆ’ ಎಂದು ಬಿಬಿಸಿ ಹೇಳಿತು. ‘ಉಸಿರಾಟದ ತೊಂದರೆ ಇರುವ ಆರು ಜನ ಆಸ್ಪತ್ರೆಗೆ ಕರೆತರುವ ವೇಳೆಗಾಗಲೇ ಮೃತಪಟ್ಟಿದ್ದರು. ಆದರೆ ಅವರನ್ನು ಕೋವಿಡ್–19 ಪರೀಕ್ಷೆಗೆ ಒಳಪಡಿಸಲಿಲ್ಲ’ ಎನ್ನುವ ಮೂಲಕ ಒಬ್ಬ ವೈದ್ಯ ಅವರೆಲ್ಲರೂ ಕೋವಿಡ್–19 ಪೀಡಿತರಾಗಿದ್ದಿರಬಹುದು ಎಂಬ ಸೂಚನೆ ನೀಡಿದರು. ಇದು ಗಂಭೀರ ಆರೋಪ. ಆ ವೈದ್ಯ ತಾನು ಯಾರು ಎಂಬುದನ್ನು ಸಾರ್ವಜನಿಕರಿಗೆ ತಿಳಿಸಬೇಕು. ಅವರ ಹೇಳಿಕೆಯನ್ನು ಪರಿಶೀಲಿಸಿ, ಆರೋಗ್ಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲು ಅನುವು ಮಾಡಿಕೊಡಬೇಕು. ಇಲ್ಲವಾದರೆ, ವೈರಾಣು ಹರಡುವಿಕೆಗೆ ನೆರವಾದ ಆರೋಪಕ್ಕೆ ಆ ವೈದ್ಯ ಗುರಿಯಾಗಬೇಕಾಗುತ್ತದೆ.

ವೈದ್ಯಕೀಯ ಸಂಶೋಧನಾ ಕ್ಷೇತ್ರದಲ್ಲಿ ಭಾರತದಲ್ಲಿ ದೊಡ್ಡ ವೈದ್ಯರು, ತಜ್ಞರು ಇದ್ದಾರೆ. ಆದರೂ ಬಿಬಿಸಿಗೆ ಸಿಕ್ಕಿದ್ದು ಮಾತ್ರ ಹೆಸರಿಲ್ಲದ ಇಬ್ಬರು ವೈದ್ಯರು. ಸರ್ಕಾರ ತಮ್ಮ ಮೇಲೆ ಪ್ರತೀಕಾರ ತೆಗೆದುಕೊಳ್ಳಬಹುದಾದ ಕಾರಣ ತಮ್ಮ ಹೆಸರು ಗೋಪ್ಯವಾಗಿ ಇರಲಿ ಎಂದು ಮಹಾರಾಷ್ಟ್ರದಲ್ಲಿ ಕೆಲಸ ಮಾಡುವ ವೈದ್ಯರೊಬ್ಬರು ಬಯಸಿದ್ದರು ಎಂದು ಬಿಬಿಸಿ ಹೇಳಿತು. ಯಾವ ಸರ್ಕಾರ ಹಾಗೆ ಮಾಡುತ್ತಿತ್ತು?

ಭಾರತವೆಂಬುದು ಒಂದು ಒಕ್ಕೂಟ. ಒಕ್ಕೂಟ ಸರ್ಕಾರವನ್ನು, 29 ರಾಜ್ಯಗಳನ್ನು ಇಲ್ಲಿ ಎರಡು ಡಜನ್ನಿಗೂ ಹೆಚ್ಚಿನ ಪಕ್ಷಗಳು ಮುನ್ನಡೆಸುತ್ತಿವೆ ಸಂಗತಿಯನ್ನು ಡಿಡಬ್ಲ್ಯೂ ಹಾಗೂ ಬಿಬಿಸಿ ಸೇರಿದಂತೆ ಪಾಶ್ಚಿಮಾತ್ಯ ಮಾಧ್ಯಮಗಳು ಓದುಗರು, ವೀಕ್ಷಕರಿಂದ ಮುಚ್ಚಿಡುತ್ತವೆ. ಇದಕ್ಕೆ ಕಾರಣ: ಪ್ರಜಾತಾಂತ್ರಿಕ ಸಂಪ್ರದಾಯವನ್ನು ಮುರಿದ ಸೂಚನೆ ಸಿಕ್ಕಾಗಲೆಲ್ಲ, ದೇಶವನ್ನು ಆಳುತ್ತಿರುವ ನರೇಂದ್ರ ಮೋದಿ ಅದಕ್ಕೆ ಕಾರಣ ಎಂಬ ರೀತಿಯಲ್ಲಿ ಅವರ ವಿರುದ್ಧ ಬೊಟ್ಟು ಮಾಡಬಹುದು ಎಂಬುದು.

‘ಭಾರತದ ಪ್ರಜಾತಂತ್ರದ ಕುರಿತು ಮೂಲಭೂತ ಮಾಹಿತಿಯನ್ನು ಮುಚ್ಚಿಡುವ ನೀವು ಎಷ್ಟು ಜವಾಬ್ದಾರಿಯಿಂದ ವರ್ತಿಸುತ್ತೀರಿ’ ಎನ್ನುವ ಪ್ರಶ್ನೆಯನ್ನು ಬಿಬಿಸಿಯವರಿಗೆ ಕೇಳಬೇಕು. 130 ಕೋಟಿ ಜನ ಇರುವ, ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ ಅತ್ಯುತ್ತಮ ತಜ್ಞರು ಇರುವ ಈ ದೇಶದಲ್ಲಿ ವೃತ್ತಿಪರವಲ್ಲದ ನಂಬಿಕೆಗೆ ಇಂಬು ಕೊಡಲು ಇವರಿಗೆ ಸಿಕ್ಕಿದ್ದು ಇಬ್ಬರು ಅನಾಮಧೇಯರು ನೀಡಿದ ಹೇಳಿಕೆಗಳು.

ಬಿಬಿಸಿಯು ಮುಂದಿನ ದಿನಗಳಲ್ಲಿ ತನ್ನ ಗಮನವನ್ನು ಬ್ರಿಟನ್ನಿನ ಕಡೆ ತಿರುಗಿಸಿ, ಅಲ್ಲಿ ಕೋವಿಡ್–19 ಕಾರಣದಿಂದಾಗಿ ಆಗುತ್ತಿರುವ ದುರಂತವನ್ನು, ಅಲ್ಲಿನ ಹಿರಿಯ ನಾಗರಿಕರು ಸೂಕ್ತ ಸೌಲಭ್ಯಗಳಿಲ್ಲದೆ ಸಾಯುತ್ತಿರುವುದನ್ನು ಕಾಣುತ್ತದೆ ಎಂದು ಆಶಿಸಬಹುದು.

ಸಂಪೂರ್ಣವಾಗಿ ಲಾಕ್‌ಡೌನ್‌ ಜಾರಿಗೊಳಿಸುವ ಭಾರತದ ತೀರ್ಮಾನವನ್ನು ಕೆಟ್ಟದ್ದಾಗಿ ಬಿಂಬಿಸಲು ನ್ಯೂಯಾರ್ಕ್‌ ಟೈಮ್ಸ್‌ ಕೂಡ ಅಪಾರ ಶ್ರಮಪಡುತ್ತಿದೆ. ಲಾಕ್‌ಡೌನ್‌ ಪರಿಣಾಮವಾಗಿ ‘ಭಾರತದ ಶಿಥಿಲ ಅರ್ಥವ್ಯವಸ್ಥೆಯು ಕುಸಿದುಬೀಳಲಿದೆ’ ಎಂದು ಈ ಪತ್ರಿಕೆಯ ನವದೆಹಲಿ ವರದಿಗಾರರು ಪ್ರತಿಪಾದಿಸುತ್ತಿದ್ದಾರೆ. ಅದೆಷ್ಟು ಪಕ್ಷಪಾತ ಧೋರಣೆಯಿಂದ ಈ ರೀತಿ ಬಿಂಬಿಸಲಾಗುತ್ತಿದೆ ಎಂದು ತೋರಿಸುವ ಎರಡು ಬೆಳವಣಿಗೆಗಳು ನಡೆದಿವೆ.

ಜಿ–20 ರಾಷ್ಟ್ರಗಳ ಪೈಕಿ ಭಾರತದ ಜಿಡಿಪಿ ಬೆಳವಣಿಗೆ ದರವು 2020–21ರಲ್ಲಿ ಅತಿಹೆಚ್ಚು ಇರಲಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ ಸೇರಿದಂತೆ ಇತರ ಹಣಕಾಸು ಸಂಸ್ಥೆಗಳು ಏಕಕಂಠದಿಂದ ಹೇಳುತ್ತಿವೆ. ಭಾರತವು ತನ್ನಿಂದಾದ ಒಂದಿಷ್ಟು ಕೆಲಸಗಳನ್ನು ಮಾಡುತ್ತಿದೆ, ಅಲ್ಲವೇ?

ಈ ಮಾಧ್ಯಮ ಸಂಸ್ಥೆಗಳು ಮಾಡುವ ಪ್ರತೀ ವರದಿಯನ್ನೂ ಪರಿಶೀಲಿಸಿ, ಅದರಲ್ಲಿ ಇರುವ ಪೂರ್ವಗ್ರಹಗಳನ್ನು ಗುರುತಿಸಬೇಕಾದ ಸಮಯ ಬಂದಿದೆ. ಇಂತಹ ಕೆಲಸಗಳ ಹಿಂದೆ ಬೇಜವಾಬ್ದಾರಿಯ ಪತ್ರಿಕಾವೃತ್ತಿಗೂ ಮೀರಿದ ಇನ್ನೇನೋ ಇದೆ. ವಿಶ್ವದ ಅತಿದೊಡ್ಡ ಪ್ರಜಾತಂತ್ರ ವ್ಯವಸ್ಥೆಯನ್ನು ಶಿಥಿಲಗೊಳಿಸುವ ಉದ್ದೇಶ ಪೂರ್ವಕ ಯತ್ನ ಇಲ್ಲಿದೆ. ಇಲ್ಲಿನ ವರದಿಗಳು ದೇಶದ ಪ್ರಜೆಗಳನ್ನು ನಿಂದಿಸುವುದಕ್ಕೆ ಸಮ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು