ಮಂಗಳವಾರ, ಮೇ 18, 2021
30 °C
ಭಾರತದ ಬಗೆಗಿನ ಅಂತರರಾಷ್ಟ್ರೀಯ ವರದಿಗಳ ಅಭಿಪ್ರಾಯದಲ್ಲಿ ಹುರುಳೆಷ್ಟು?

ಕ್ಯಾ. ಜಿ.ಆರ್. ಗೋಪಿನಾಥ್ ಅಂಕಣ| ಸರ್ವಾಧಿಕಾರವೂ ಇಲ್ಲ; ಧರ್ಮನಿರಪೇಕ್ಷವೂ ಅಲ್ಲ

ಕ್ಯಾ‍‌ಪ್ಟನ್ ಜಿ.ಆರ್.ಗೋಪಿನಾಥ್ Updated:

ಅಕ್ಷರ ಗಾತ್ರ : | |

ಭಾರತವು ಒಂದು ಸರ್ವಾಧಿಕಾರಿ ದೇಶವೂ ಅಲ್ಲ, ನಿಜ ಅರ್ಥದ ಪ್ರಜಾತಂತ್ರ ರಾಷ್ಟ್ರವೂ ಅಲ್ಲ; ಅಭಿವೃದ್ಧಿ ಹೊಂದಿದ ಅರ್ಥ ವ್ಯವಸ್ಥೆಯೂ ಅಲ್ಲ, ಹಿಂದುಳಿದ ದೇಶವೂ ಅಲ್ಲ ಎಂಬಂತೆ ಕಾಣುತ್ತಿದೆ. ದೇಶವು ವೈಜ್ಞಾನಿಕವಾಗಿ ಭಾರಿ ಸಾಧನೆಗಳನ್ನು ಮಾಡಿದೆ. ಆದರೆ ಹಲವರು ಪುರಾತನ ಮೂಢನಂಬಿಕೆಗಳನ್ನು ಇಂದಿಗೂ ನೆಚ್ಚಿಕೊಂಡಿದ್ದಾರೆ. ಇದು ಸರ್ವಾಧಿಕಾರದ ಹಿಂದೂ ರಾಷ್ಟ್ರವೂ ಅಲ್ಲ, ಧರ್ಮನಿರಪೇಕ್ಷ ತತ್ವಗಳನ್ನು ಆಧರಿಸಿದ ಆಧುನಿಕ ರಾಷ್ಟ್ರವೂ ಅಲ್ಲ. ಭಾರತ ಮತ್ತು ಭಾರತದ ಪರಿಕಲ್ಪನೆಯು ಯಾವತ್ತಿಗೂ ಸಂಪೂರ್ಣವಾಗಿ ಒಂದು ಚೌಕಟ್ಟಿನಲ್ಲಿ ಕುಳಿತುಕೊಳ್ಳುವಂಥದ್ದಾಗಿರಲಿಲ್ಲ. ಇದು ಯಾವತ್ತಿಗೂ ಒಂದು ನಿಗೂಢವೇ.


ಕ್ಯಾಪ್ಟನ್ ಜಿ.ಆರ್. ಗೋಪಿನಾಥ್

ಚಲನಶೀಲ ಪ್ರಜಾತಂತ್ರ ವ್ಯವಸ್ಥೆಗಳನ್ನು ಅಳತೆ ಮಾಡುವ ಅಂತರರಾಷ್ಟ್ರೀಯ ವರದಿಗಳು ಭಾರತದ ಸ್ಥಾನವನ್ನು ಕೆಳಕ್ಕೆ ತಂದಿರುವುದು ಪೂರ್ತಿಯಾಗಿ ಸರಿಯಲ್ಲದಿರಬಹುದು. ಆದರೆ, ಭಾರತದ ಪ್ರಜಾತಂತ್ರವು ಕುಗ್ಗುವ, ದುರ್ಬಲವಾಗುವ ಅಪಾಯ ಎದುರಿಸುತ್ತಿದೆ. ಸೋವಿಯತ್ ರಷ್ಯಾದ ಸ್ಟಾಲಿನ್, ಜರ್ಮನಿಯ ಹಿಟ್ಲರ್‌ಗೆ ಹೋಲಿಕೆ ಮಾಡಬಹುದಾದ ಸರ್ವಾಧಿಕಾರಿಯೇ ನರೇಂದ್ರ ಮೋದಿ? ಅಥವಾ ಮೋದಿ ಅವರನ್ನು ಆಧುನಿಕ ಕಾಲಘಟ್ಟದ ನಿರಂಕುಶ ಆಡಳಿತಗಾರರಾದ ರಷ್ಯಾದ ಪುಟಿನ್, ಟರ್ಕಿಯ ಎರ್ಡೋಗನ್, ಚೀನಾದ ಷಿ ಜಿನ್‌ಪಿಂಗ್‌ ಅವರಿಗೆ ಹೋಲಿಸಬಹುದೇ? ಇಂತಹ ಹೋಲಿಕೆಗಳು ಒಪ್ಪುವಂಥವಲ್ಲ.

ಮೋದಿ ಅವರ ಕಡು ಟೀಕಾಕಾರರು– ರಾಜಕಾರಣಿಗಳು ಹಾಗೂ ಬುದ್ಧಿಜೀವಿಗಳು– ಮುಕ್ತವಾಗಿ ಓಡಾಡಿಕೊಂಡಿದ್ದಾರೆ, ತಮಗೆ ಇಷ್ಟಬಂದಾಗ ಮೋದಿ ಅವರ ಮೇಲೆ ವಾಗ್ದಾಳಿ ನಡೆಸುತ್ತಿದ್ದಾರೆ, ಅವರ ವಿರುದ್ಧ ಬಹಳಷ್ಟು ಬರೆಯುತ್ತಿದ್ದಾರೆ. ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ, ಪ್ರತಾಪ್ ಭಾನು ಮೆಹ್ತಾ ಅಥವಾ ರಾಮಚಂದ್ರ ಗುಹಾ ಅವರು ಚೀನಾ ಅಥವಾ ರಷ್ಯಾದಲ್ಲಿ ಮುಕ್ತವಾಗಿ ಓಡಾಡಿಕೊಂಡು ಇರಬಹುದಿತ್ತೇ? ಊಹಿಸಿ ಕೊಳ್ಳಿ. ಹಾಗಾದರೆ ಮೋದಿ ಅವರು ಉದಾರವಾದಿ, ಪ್ರಜಾತಂತ್ರವಾದಿ ವ್ಯಕ್ತಿಯೇ? ಅವರಿಗೆ ಅಂತಹ ಪ್ರಮಾಣಪತ್ರವನ್ನು ಯಾರೂ ಕೊಡಲಿಕ್ಕಿಲ್ಲ. ಅವರನ್ನು ಆರಾಧಿಸುವ ಕೋಟ್ಯಂತರ ಅಭಿಮಾನಿಗಳು ಅವರ ಸರ್ವಾಧಿಕಾರಿ ನಡೆಗಳನ್ನು ಅನುಮೋದಿಸುತ್ತಾರೆ. ಮೋದಿ ಅವರ ಹಿಂದೆ ಇದ್ದವರು ದುರ್ಬಲರಾಗಿದ್ದರು. ದೇಶಕ್ಕೊಬ್ಬ ಉದ್ಧಾರಕ ಬೇಕಿತ್ತು, ಮೋದಿ ಆ ಜಾಗಕ್ಕೆ ಬಂದರು.

ಮೋದಿ ಅವರು ಆಧುನಿಕರೂ ಹೌದು, ಮೂಢ ನಂಬಿಕೆ ಹೊಂದಿರುವವರೂ ಹೌದು. ಸೌರವಿದ್ಯುತ್, ರಫೇಲ್ ಯುದ್ಧ ವಿಮಾನದ ಪರ ಮಾತನಾಡುತ್ತಾರೆ. ಕೊರೊನಾ ವೈರಾಣು ಓಡಿಸಲು ಶುಭ ವೇಳೆಯಲ್ಲಿ ಶಂಖ ಊದುವ, ಗಂಟೆ ಬಾರಿಸುವ ಕ್ರಿಯೆಯನ್ನೂ ನೆಚ್ಚಿಕೊಳ್ಳುತ್ತಾರೆ. ದೇಶದ ವೈಜ್ಞಾನಿಕ ಮುನ್ನಡೆಯನ್ನು ತೋರಿಸುತ್ತ, ಭಾರತವು ವಿಶ್ವದಲ್ಲಿನ ಅತಿದೊಡ್ಡ ಲಸಿಕೆ ತಯಾರಿಕಾ ರಾಷ್ಟ್ರ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಆದರೆ ಕೋವಿಡ್ ಶಮನಕ್ಕೆ ಒಬ್ಬ ಬಾಬಾ ತಯಾರಿಸಿದ, ಆಧಾರವಿಲ್ಲದ ಔಷಧವನ್ನು ತಮ್ಮ ಸಂಪುಟದ ಸಹೋದ್ಯೋಗಿಗಳು ಬಿಡುಗಡೆ ಮಾಡಿದಾಗ ಅವರನ್ನು ಮೋದಿ ಖಂಡಿಸುವುದಿಲ್ಲ. ಮೋದಿ ಅವರು ಒಂದರ್ಥದಲ್ಲಿ, ಮೂಢನಂಬಿಕೆಗಳನ್ನು ಬಿಡದೆಯೇ ಆಧುನಿಕತೆಯನ್ನು ಅಪ್ಪಿಕೊಳ್ಳುವ ಅಸಂಖ್ಯ ಭಾರತೀಯರಂತೆಯೇ.

ಭಾರತದ ಹಲವು ಬುದ್ಧಿಜೀವಿಗಳು ಹೇಳುತ್ತಿರು ವಂತಹ ಸರ್ವಾಧಿಕಾರಿ ಮೋದಿ ಅಲ್ಲ; ಆದರೆ, ಮೋದಿ ಅವರ ಭಕ್ತರಿಗೆ ಅವರ ಮೇಲಿರುವ ‘ಸರ್ವಾಧಿಕಾರಿ’ ಎಂಬ ಆರೋಪಗಳನ್ನು ಪರಿಣಾಮಕಾರಿಯಾಗಿ ಅಲ್ಲಗಳೆಯಲೂ ಆಗಿಲ್ಲ. ಅಗತ್ಯ ಸಮಾಲೋಚನೆಗಳು ಇಲ್ಲದೆ ಸುಗ್ರೀವಾಜ್ಞೆ ತರುವುದು, ಅವರ ತೀಕ್ಷ್ಣ ಭಾಷಣಗಳು, ಅವರ ಪಕ್ಷವು ರಾಷ್ಟ್ರೀಯತೆಯ ಕುರಿತು ನೀಡುವ ಸಂಕುಚಿತ ವ್ಯಾಖ್ಯಾನ, ಟೀಕೆಗಳಿಗೆ ಅಸಹಿಷ್ಣುವಾಗಿರುವುದು, ಸಿಎಎ (ಪೌರತ್ವ ತಿದ್ದುಪಡಿ ಕಾಯ್ದೆ), ಬಹುಸಂಖ್ಯಾತವಾದಿ ರಾಜಕಾರಣ... ಇವೆಲ್ಲವುಗಳ ಪರಿಣಾಮವಾಗಿ ಕೆಲವರು ಕಾನೂನನ್ನು ಕೈಗೆತ್ತಿಕೊಂಡು ಅಲ್ಪಸಂಖ್ಯಾತ ಸಮುದಾಯದ ಅಮಾಯಕರನ್ನು ಹೊಡೆದು ಸಾಯಿಸಿದ ಪ್ರಸಂಗಗಳು ವರದಿಯಾಗಿವೆ.

ಹೀಗಿದ್ದರೂ, ಭಾರತದ್ದು ಸರ್ವಾಧಿಕಾರಿ ಪ್ರಭುತ್ವವೇ? ಇಲ್ಲಿನ ಜನ ಸಂತಸದಿಂದ ಇದ್ದಾರೆಯೇ? ಅವರು ಮುಕ್ತರಾಗಿ ಇದ್ದಾರೆಯೇ?

ಬೇರೆ ಬೇರೆ ದೇಶಗಳಲ್ಲಿ ಪ್ರಜಾತಂತ್ರದ ಸ್ಥಿತಿ ಹೇಗಿದೆ ಎಂಬುದನ್ನು ವಾರ್ಷಿಕ ವರದಿಯ ರೂಪದಲ್ಲಿ ಪ್ರಕಟಿಸುವ ಸ್ವೀಡನ್ನಿನ ವಿ–ಡೆಮ್ ಇನ್‌ಸ್ಟಿಟ್ಯೂಟ್‌, ತನ್ನ 2021ರ ವರದಿಯಲ್ಲಿ, ಭಾರತದ್ದು ‘ಚುನಾಯಿತ ಸರ್ವಾಧಿಕಾರ’ ಎಂದು ಬಣ್ಣಿಸಿದೆ. ಇದು ಸತ್ಯವೇ ಆಗಿದ್ದಿದ್ದರೆ, ಭಾರತದ ಚುನಾವಣಾ ವ್ಯವಸ್ಥೆ ಹಾಗೂ ಚುನಾವಣೆ ನಡೆಸುವ ಸಂಸ್ಥೆಗಳು ಸಂಪೂರ್ಣ ಶರಣಾಗಿ, ಅದರ ಅಧಿಕಾರಿಗಳು ಆಡಳಿತ ಪಕ್ಷದ ಅಡಿಯಾಳುಗಳಾಗಿ ಬದಲಾಗಿ ದ್ದಿದ್ದರೆ ದೆಹಲಿಯಲ್ಲಿ ಅರವಿಂದ ಕೇಜ್ರಿವಾಲ್ ನೇತೃತ್ವದ ಸರ್ಕಾರ, ಪಂಜಾಬ್‌ನಲ್ಲಿ ಅಮರಿಂದರ್ ಸಿಂಗ್‌‌ ನೇತೃತ್ವದ ಸರ್ಕಾರ, ಆಂಧ್ರಪ್ರದೇಶದಲ್ಲಿ ಜಗನ್ಮೋಹನ್‌ ರೆಡ್ಡಿ ನೇತೃತ್ವದ ಸರ್ಕಾರ, ತೆಲಂಗಾಣದಲ್ಲಿ ಕೆ. ಚಂದ್ರಶೇಖರ ರಾವ್ ನೇತೃತ್ವದ ಸರ್ಕಾರ ಇರುತ್ತಿರಲಿಲ್ಲ. ಭಾರತದ ಸರಿಸುಮಾರು ಶೇಕಡ 70ರಷ್ಟು ಪ್ರದೇಶವನ್ನು ಬಿಜೆಪಿಯೇತರ ಪಕ್ಷಗಳು ಆಳುತ್ತಿವೆ. 

ವಾಷಿಂಗ್ಟನ್ ಮೂಲದ ‘ಫ್ರೀಡಂ ಹೌಸ್‌’ ಸೂಚ್ಯಂಕವು ಭಾರತದ ಪ್ರಜಾತಂತ್ರ ‘ಭಾಗಶಃ ಮುಕ್ತ’ ವಾಗಿದೆ ಎಂದು ಹೇಳಿದೆ. ಇಲ್ಲಿನ ಪ್ರಜಾತಂತ್ರ ವ್ಯವಸ್ಥೆಯನ್ನು ಬಾಂಗ್ಲಾದೇಶದ ವ್ಯವಸ್ಥೆಗಿಂತ ಕಡಿಮೆ ಮಟ್ಟದಲ್ಲಿ ಇರಿಸಿದೆ. ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ವರದಿಯ ‘ಜಗತ್ತಿನಲ್ಲಿನ ಸಂತಸದ ಪ್ರಮಾಣವನ್ನು ಹೇಳುವ ವರದಿ’ಯು 149 ದೇಶಗಳ ಪೈಕಿ ಭಾರತಕ್ಕೆ 139ನೆಯ ಸ್ಥಾನವನ್ನು ನೀಡಿದೆ. ಲಿಬಿಯಾ (80), ಬೆಲಾರಸ್ (75), ವೆನೆಜುವೆಲಾ (107), ನೈಗರ್ (96), ಪಾಕಿಸ್ತಾನ (105), ಸೌದಿ ಅರೇಬಿಯಾ (21) ದೇಶಗಳಿಗಿಂತ ಕಡೆಯ ಸ್ಥಾನ ಭಾರತಕ್ಕೆ ದೊರೆತಿದೆ.

ಸೌದಿ ಅರೇಬಿಯಾದಲ್ಲಿ ಭಿನ್ನಮತ ವ್ಯಕ್ತಪಡಿ ಸಿದ್ದ ಪತ್ರಕರ್ತರೊಬ್ಬರನ್ನು ಕತ್ತರಿಸಿ ಹಾಕಲಾಯಿತು. ಅವರ ಮೃತದೇಹದ ತುಂಡುಗಳನ್ನು ಆ್ಯಸಿಡ್‌ನಲ್ಲಿ ಕರಗಿಸಲಾಯಿತು. ಸೌದಿ ಅರೇಬಿಯಾದಲ್ಲಿ ಇಸ್ಲಾಮಿಕ್ ಕಾನೂನು ಉಲ್ಲಂಘಿಸಿದವರ ತಲೆಯನ್ನು ಸಾರ್ವಜನಿಕ ವಾಗಿ ಕಡಿದುಹಾಕಲಾಗುತ್ತದೆ. ‘ವ್ಯಭಿಚಾರ’ ನಡೆಸಿ ದವಳನ್ನು ಕಲ್ಲು ಹೊಡೆದು ಸಾಯಿಸಲಾಗುತ್ತದೆ. ಸಂತಸದ ಸೂಚ್ಯಂಕದಲ್ಲಿ ಇಂತಹ ದೇಶಕ್ಕಿಂತಲೂ ಕಡಿಮೆ ಸ್ಥಾನ ಭಾರತಕ್ಕೆ ದೊರೆತಾಗ, ವರದಿಯ ಬಗ್ಗೆ ಅಪನಂಬಿಕೆ ಮೂಡುತ್ತದೆ, ವರದಿಯನ್ನು ಹರಿದು ಎಸೆಯಬೇಕು ಅನ್ನಿಸುತ್ತದೆ. ಹೀಗಿದ್ದರೂ, ಎಲ್ಲ ವರದಿಗಳನ್ನು ಅಲ್ಲಗಳೆಯುವುದು ವಿವೇಕದ ಕೆಲಸ ಆಗುವುದಿಲ್ಲ.

ಬರ್ಟ್ರಂಡ್‌ ರಸೆಲ್ ಹೇಳಿದಂತೆ, ಬಲಿಷ್ಠ ಆಡಳಿತ ಗಾರರಲ್ಲಿ ಹಲವರು ಕೆಲವು ತಪ್ಪು ನಂಬಿಕೆಗಳನ್ನು ಬೆಳೆಸಿಕೊಳ್ಳುವುದಿದೆ. ತಾವು ಆಡಳಿತ ನಡೆಸುತ್ತಿರುವ ದೇಶವು ಏಕರೂಪದ್ದಾಗಿದೆ, ಇಲ್ಲಿ ಬಹುತ್ವ ಇಲ್ಲ ಎಂದು ಭಾವಿಸುವುದಿದೆ. ಇಂತಹ ಆಡಳಿತಗಾರರು ಜನರಿಗೆ ಬೇಕಿರುವಂತಹ ವ್ಯವಸ್ಥೆಯನ್ನು ಕಟ್ಟುವ ಬದಲು, ಜನರೇ ವ್ಯವಸ್ಥೆಗೆ ಹೊಂದಿಕೊಳ್ಳಬೇಕು ಎಂದು ಬಯಸುತ್ತಾರೆ. ಮನುಷ್ಯರು ಹಾಗೂ ಅವರು ಕಟ್ಟಿಕೊಳ್ಳುವ ಸಮುದಾಯಗಳು ಅತ್ಯಂತ ಸಂಕೀರ್ಣವೂ ಅತ್ಯಂತ ವೈವಿಧ್ಯಮಯವೂ ಹೌದು. ಬಹುತ್ವ, ಸೃಜನಶೀಲತೆ, ಸ್ವಾತಂತ್ರ್ಯ, ನಿರ್ಬಂಧಗಳಿಂದ ಮುಕ್ತವಾಗಿರುವುದು ಅಭಿವೃದ್ಧಿ ಮತ್ತು ಸಂತಸಕ್ಕೆ ಅತ್ಯಗತ್ಯ. ಪ್ರಜಾತಂತ್ರ ಹಾಗೂ ನಾಗರಿಕತೆ ಅರಳಲು ಕೂಡ ಇವು ಬೇಕು.

ಶಾಂತಿ ಮಾತುಕತೆಗಿಂತ ಕದನವೇ ಲೇಸು ಎಂಬ ಸಲಹೆಗಳು, ಸ್ವಾವಲಂಬನೆ ಹೆಸರಿನಲ್ಲಿ ಸಂಕುಚಿತ ನೋಟ ಹೊಂದುವುದು ಒಳಿತು ಎಂಬ ಮಾತುಗಳು ತಮ್ಮ ಸುತ್ತ ಇರುವವರಿಂದ ಬಂದಾಗಲೂ ಆಡಳಿತದಲ್ಲಿ ಇರುವವರು ಆ ಮಾತುಗಳಿಗೆ ಮಾರುಹೋಗಬಾರದು. ಆ ರೀತಿಯ ಮಾರ್ಗವನ್ನು ಹಿಡಿದರೆ ಅದು ಆರ್ಥರ್ ಕೋಸ್ಲರ್ ಹೇಳಿದಂತೆ ಭಾರತವನ್ನು ಬೌದ್ಧಿಕವಾಗಿ ತ‍ಪ್ಪುದಾರಿಗೆ ಒಯ್ಯಬಹುದು. ದೇಶಗಳ ಒಕ್ಕೂಟದಲ್ಲಿ ಮಾರ್ಗದರ್ಶಕ ಆಗುವ ಸಾಮರ್ಥ್ಯ ಭಾರತಕ್ಕಿದೆ. ಪ್ರಧಾನಿ ಮೋದಿ ಅವರು ತಮಗೆ ಸಿಕ್ಕಿರುವ ಜನಾದೇಶ ಹಾಗೂ ಅವರಿಗೆ ಇರುವ ಸ್ಥಾನಮಾನ ಬಳಸಿಕೊಂಡು ಅಂತಹ ಸ್ಥಾನಕ್ಕೆ ಭಾರತವನ್ನು ಒಯ್ದರೆ, ಅದು ಅವರು ನೀಡುವ ದೊಡ್ಡ ಕೊಡುಗೆಯಾಗುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು