ಶುಕ್ರವಾರ, ಆಗಸ್ಟ್ 19, 2022
22 °C
ಕಾದ ಭೂಮಿಗೆ ತಂಪೂಡಿಸಲು ಪೆಟ್ರೋಲಿಗೆ ಎಷ್ಟೆಲ್ಲ ಪರ್ಯಾಯಗಳು ಬರುತ್ತಿವೆ

ನಾಗೇಶ ಹೆಗಡೆ ಲೇಖನ: ಚೀನಾ ಹೊತ್ತಿಸಿದ ಕೂಲ್‌ ಕಿಡಿ

ನಾಗೇಶ ಹೆಗಡೆ Updated:

ಅಕ್ಷರ ಗಾತ್ರ : | |

ಆ ‘ಚೀನೀಯರೆಲ್ಲ ಒಟ್ಟಾಗಿ ಒಮ್ಮೆ ಕುಪ್ಪಳಿಸಿದರೆ ಸಾಕು, ಭೂಕಂಪನವಾಗುತ್ತದೆ’ ಎಂಬ ಮಾತು ಪಾಶ್ಚಿಮಾತ್ಯ ದೇಶಗಳಲ್ಲಿ ಆಗಾಗ ಕೇಳಿಬರುತ್ತದೆ. ಯಾಕೊ, ಭಾರತದ ಬಗ್ಗೆ ಯಾರೂ ಹಾಗೆಲ್ಲ ಹೇಳುವುದಿಲ್ಲ. ಜನಸಂಖ್ಯೆಯಲ್ಲಿ ಚೀನೀಯರನ್ನು ಹಿಂದಿಕ್ಕುವ ಸನ್ನಾಹದಲ್ಲಿ ನಾವಿದ್ದೇವೆ. ಆದರೂ ‘ಭಾರತೀಯರೆಲ್ಲ ಒಂದಾಗಿ ಕುಪ್ಪಳಿಸಿದರೆ...’ ಎಂಬ ವಿಹ್ವಲದ ಮಾತು ಯಾರಿಂದಲೂ ಬರುವುದಿಲ್ಲ. ಏಕೆ ಹೇಳಿ? ಚೀನೀಯರ ಹಾಗೆ ಒಂದಾಗಿ ನೆಗೆಯಲು ನಮಗೆ ಬರುವುದಿಲ್ಲವಲ್ಲ!

ಚೀನೀ ಅಧ್ಯಕ್ಷ ಷೀ ಝಿನ್‌ಪಿಂಗ್‌ ಆರು ತಿಂಗಳ ಹಿಂದೆ ವಿಶ್ವಸಂಸ್ಥೆಯ ಆನ್‌ಲೈನ್‌ ಸಮಾವೇಶದಲ್ಲಿ ಒಂದು ಮಾತನ್ನು ಹೇಳಿ ಇಡೀ ಪ್ರಪಂಚಕ್ಕೆ ಸಂಚಲನ ಮೂಡಿಸಿದರು: ‘ಕ್ರಿ.ಶ. 2060ರೊಳಗೆ ನಾವು ಝೀರೋ ಕಾರ್ಬನ್‌ ದೇಶವಾಗಲಿದ್ದೇವೆ’ ಅಂತ. ಅಂದರೆ ಇನ್ನು 40 ವರ್ಷಗಳಲ್ಲಿ ಚೀನಾದ ಎಲ್ಲ ಕಲ್ಲಿದ್ದಲ ಸ್ಥಾವರಗಳೂ ಹೊಗೆ ಮುಕ್ತ ಆಗಲಿವೆ. ಎಲ್ಲ ಪೆಟ್ರೋಲ್‌, ಡೀಸೆಲ್‌ ವಾಹನಗಳೂ ಗುಜರಿಗೆ ಸೇರಲಿವೆ. ಸಿಮೆಂಟ್‌, ಉಕ್ಕು, ಪ್ಲಾಸ್ಟಿಕ್‌ ಮುಂತಾದ ಎಲ್ಲ ಕಾರ್ಖಾನೆಗಳೂ ಫಾಸಿಲ್‌ ಇಂಧನಗಳಿಗೆ ವಿದಾಯ ಹೇಳಲಿವೆ. ಪೃಥ್ವಿಯ ಬಹುದೊಡ್ಡ ಭೂಭಾಗವೊಂದು ಬಿಸಿಪ್ರಳಯಕ್ಕೆ ಶೂನ್ಯ ಕೊಡುಗೆ ನೀಡಲಿದೆ.

ಅವರು ಅಷ್ಟು ಹೇಳಿದ್ದೇ ತಡ, ಎಲ್ಲ ಶಕ್ತ ರಾಷ್ಟ್ರಗಳು, ಎಲ್ಲ ಬಹುರಾಷ್ಟ್ರೀಯ ಸಶಕ್ತ ಕಂಪನಿಗಳು ಮೈಕೈ ಕೊಡವಿ ನಿಲ್ಲುತ್ತಿರುವುದು ಈಗ ಸ್ಪಷ್ಟ ಗೊತ್ತಾಗತೊಡಗಿದೆ. ಬಿಸಿಪ್ರಳಯವನ್ನು ತಡೆಗಟ್ಟಲು ತಾವೆಲ್ಲ ಏನೇನು ಪ್ಲಾನ್‌ ಹಾಕಿಕೊಳ್ಳುತ್ತಿದ್ದೇವೆ ಎಂಬುದನ್ನು ಅವು ದೊಡ್ಡದಾಗಿ ಹೇಳತೊಡಗಿವೆ. ಅಲ್ಲಿ ಇಲ್ಲಿ ಏಕೆ, ನಮ್ಮ ಬೆಂಗಳೂರಲ್ಲೂ ಸದ್ದಿಲ್ಲದೆ ಓಡಬಲ್ಲ ವಿದ್ಯುತ್‌ ವಾಹನಗಳು ಭಾರೀ ಸುದ್ದಿ ಮಾಡುತ್ತಿವೆ. ಬ್ಯಾಟರಿಚಾಲಿತ ‘ಟೆಸ್ಲಾ’ ಕಾರುಗಳ ದೊರೆ ಎನ್ನಿಸಿದ ಈಲಾನ್‌ ಮಸ್ಕ್‌ ಬೆಂಗಳೂರಿನಲ್ಲಿ ತನ್ನ ಕಂಪನಿಯ ಪುಟ್ಟ ಶಾಖಾ ಕಚೇರಿಯನ್ನು ತೆರೆದಿದ್ದೇ ತಡ, ಇನ್ನೇನು ಆತನ ಕಾರ್‌ ಕಾರ್ಖಾನೆ ಇಲ್ಲಿ ಆರಂಭ ವಾಗೇಬಿಟ್ಟಿತು ಎಂಬಂತೆ ಸಂಭ್ರಮದ ಸುದ್ದಿಗಳು ಹೊರಬಿದ್ದಿವೆ. ಪೆಟ್ರೋಲಿಯಂ ಮತ್ತು ಕಲ್ಲಿದ್ದಲನ್ನೇ ಚಿನ್ನದ ನಿಕ್ಷೇಪವೆಂಬಂತೆ ಪರಿಗಣಿಸುತ್ತಿದ್ದ ಭಾರತೀಯ ಕಂಪನಿಗಳು ಸಹ ಬದಲೀ ಶಕ್ತಿಯ ಉತ್ಪಾದನೆಗೆ ತಾವೂ ಸಿದ್ಧ ಎಂಬುದನ್ನು ವಾರ್ತಾಗೋಷ್ಠಿಯ ಮೂಲಕ, ಜಾಹೀರಾತುಗಳ ಮೂಲಕ ಹೇಳತೊಡಗಿವೆ. ಅವರಿವರು ಹಾಗಿರಲಿ, ಜಗತ್ತಿನ ಅತಿ ಪ್ರಸಿದ್ಧ ಕಲ್ಲಿದ್ದಲ ಗಣಿಗಳನ್ನೆಲ್ಲ ಬಾಚಿಕೊಳ್ಳುವ ಹವಣಿಕೆಯಲ್ಲಿರುವ ಅದಾನಿ ಕಂಪನಿ ಕೂಡ ರಾಜಸ್ತಾನದ ತನ್ನ ಗಾಳಿ ವಿದ್ಯುತ್‌ ಸ್ಥಾವರ ತನ್ನ ನಿಗದಿತ ಸಮಯಕ್ಕಿಂತ ಐದು ತಿಂಗಳ ಮೊದಲೇ 100 ಮೆಗಾವಾಟ್‌ ತಲುಪಿದೆ ಎಂಬ ಸುದ್ದಿಯನ್ನೂ ಹೊಮ್ಮಿಸಿದೆ. ವಿಶ್ವವ್ಯಾಪಿ ತೈಲ ಕಂಪನಿಗಳಾದ ಶೆಲ್‌, ಆರ್ಮಾಕೊ, ಬಿಪಿ, ಎಕ್ಸನ್‌ ಮೊಬಿಲ್‌ ಎಲ್ಲವೂ ಕಡಲಂಚಿಗೆ ಗಾಳಿಕಂಬಗಳನ್ನು ನೆಡಲು, ಬಿಸಿಲನ್ನು ಬಾಚಿಕೊಳ್ಳಲು ಆರಂಭಿಸಿವೆ.

ಹೀಗೆ ಎಲ್ಲೆಲ್ಲೂ ಹೊಸ ಹೊಸ ತಂತ್ರಜ್ಞಾನದ ಘೋಷಣೆ ಆಗಲು ಮುಖ್ಯ ಕಾರಣವೇನು ಗೊತ್ತೆ? ನಿಶ್ಚಲ ಕೊಳಕ್ಕೆ ಆನೆ ಧುಮುಕಿದಂತೆ ಚೀನಾ ಹೀಗೆ ಹಠಾತ್ತಾಗಿ ಝೀರೋ ಕಾರ್ಬನ್‌ ಕಡೆ ಹೊರಳುತ್ತೇನೆಂದು ಜಗತ್ತಿಗೆ ಘೋಷಿಸಿದ್ದು. ಇಷ್ಟು ವರ್ಷ ಯಾವ ಟೀಕೆಗೂ ಕ್ಯಾರೇ ಎನ್ನದೆ, ದಿನಕ್ಕೊಂದರಂತೆ ಹೊಸ ಹೊಸ ಕಲ್ಲಿದ್ದಲ ಸ್ಥಾವರಗಳನ್ನು ಸ್ಥಾಪಿಸುತ್ತ, ಜಗತ್ತಿನ ಅತಿ ದೊಡ್ಡ ಎರಡು ತೈಲ ಕಂಪನಿಗಳನ್ನು ಮುಷ್ಟಿಯಲ್ಲಿಟ್ಟುಕೊಂಡು ವಾಯುಮಂಡಲಕ್ಕೆ ಕೊಳಕು ತುಂಬುವಲ್ಲಿ ಅಮೆರಿಕವನ್ನೂ ಮೀರಿಸುತ್ತಿದ್ದ ದೇಶ ಅದಾಗಿತ್ತು. ಈಗ ಹೀಗೆ ಪಲ್ಟಿಹೊಡೆದು ನಿಂತಿದ್ದು ಹೇಗೆ, ಏಕೆ?

ಉತ್ತರ ಇಲ್ಲಿದೆ: ಬದಲೀ ಶಕ್ತಿಮೂಲಗಳಿಗೆ ಬೇಕಾದ ತಂತ್ರಜ್ಞಾನವನ್ನು ಅದು ಮೆಲ್ಲಗೆ ತನ್ನ ಹಿತ್ತಿಲಲ್ಲಿ ರೂಪಿಸಿಕೊಳ್ಳತೊಡಗಿತ್ತು. ಬಿಸಿಲು, ಗಾಳಿಯನ್ನು ವಿದ್ಯುತ್ತನ್ನಾಗಿ ಮಾರ್ಪಡಿಸಬಲ್ಲ ತಂತ್ರಜ್ಞಾನದಲ್ಲಿ ಅದು ಈಗ ಜಗತ್ತಿಗೇ ನಂಬರ್‌ ಒನ್‌. ಉಕ್ಕು, ಸಿಮೆಂಟ್‌ ಕಾರ್ಖಾನೆಗಳಿಂದ ಹೊಮ್ಮುವ ಕಾರ್ಬನ್ನನ್ನು ಗಾಳಿಗೆ ತೂರುವ ಬದಲು ಅದನ್ನೇ ಘನ ಸುಣ್ಣವನ್ನಾಗಿ ಪರಿವರ್ತಿಸಿ ಭೂಗತ
ಗೊಳಿಸುವಲ್ಲಿ ಚೀನಾ ಈಗ ಪರಿಣತ. ಭಾರೀ ಲೀಥಿಯಂ ಬ್ಯಾಟರಿಯ ಬದಲು ಹಗುರ ಜಲಜನಕದ ಅನಿಲದಿಂದ ರೈಲು- ವಿಮಾನಗಳನ್ನು ಓಡಿಸುವ ತಂತ್ರಜ್ಞಾನವೂ ಅದಕ್ಕೀಗ ಕರತಲಾಮಲಕ. ತಾನು ರೂಪಿಸಿದ ಹೊಸ ತಂತ್ರಜ್ಞಾನವನ್ನು ಅದು ಈಗ ವಿದೇಶಗಳಿಗೆ ಮಾರಬೇಕಿದೆ. ಚೀನಾದ ಈ ಹೆಚ್ಚುಗಾರಿಕೆಯನ್ನು ಒಪ್ಪಿಕೊಳ್ಳಲು ಪಶ್ಚಿಮದ ಉದ್ಯಮಗಳು ಒಪ್ಪುತ್ತಿಲ್ಲ. ತಮ್ಮಲ್ಲೂ ತಂತ್ರಜ್ಞಾನ ವಿಕಾಸವಾಗುತ್ತಿದೆ ಎಂದು ಅವೂ ಹೇಳತೊಡಗಿವೆ.

ಈ ನಡುವೆ ಬಿಲ್‌ ಗೇಟ್ಸ್‌ ಇದೀಗಷ್ಟೇ ಬರೆದು ಪ್ರಕಟಿಸಿದ ಗ್ರಂಥ ‘ಹೌ ಟು ಅವೊಯ್ಡ್‌ ಎ ಕ್ಲೈಮೇಟ್‌ ಡಿಸಾಸ್ಟರ್‌’ (ಹವಾಗುಣ ದುರಂತವನ್ನು ತಪ್ಪಿಸುವುದು ಹೇಗೆ?) ಎಂಬ ಪುಸ್ತಕ ಎಲ್ಲ ದೇಶಗಳಲ್ಲಿ ಸುದ್ದಿ ಮಾಡಿದೆ. ನಾವು ಪ್ರತಿವರ್ಷ ಕಕ್ಕುತ್ತಿರುವ 51 ಶತಕೋಟಿ ಟನ್‌ ಕಾರ್ಬನ್ನನ್ನು ಶೂನ್ಯಕ್ಕೆ ತರುವುದು ಹೇಗೆ ಎಂಬುದನ್ನು ವಿವರಿಸುವ ಈ ಗ್ರಂಥದ ಬಗ್ಗೆ ಎನ್‌ಡಿಟಿವಿಯ ಪ್ರಣೊಯ್‌ ರಾಯ್‌ ಮತ್ತು ಬಿಲ್ ಗೇಟ್ಸ್‌ ನಡುವೆ ಮೊನ್ನೆ ಸಂವಾದ ಕೂಡ ನಡೆಯಿತು. ಆಫ್ರಿಕಾದ ಸೆನೆಗಾಲ್‌ ದೇಶದ ರಾಜಧಾನಿ ಡಕಾರ್‌ ನಗರದ ಚರಂಡಿ ರೊಚ್ಚೆಯನ್ನು ಒಂದು ಯಂತ್ರದ ಮೂಲಕ ಹಾಯಿಸಿ ಅದರ ಇನ್ನೊಂದು ತುದಿಯಲ್ಲಿ ಬಸಿಯುವ ಶುದ್ಧ ನೀರನ್ನು ಬಿಲ್‌ ಗೇಟ್ಸ್‌ ಗ್ಲಾಸಿನಲ್ಲಿ ಎತ್ತಿ ಕುಡಿಯುವುದನ್ನೂ ತೋರಿಸಲಾಯಿತು. ಗೇಟ್ಸ್‌ ಕುಟುಂಬದ ದತ್ತಿನಿಧಿಯಿಂದಲೇ ಸೃಷ್ಟಿಯಾದ ಆ ಯಂತ್ರ ತನಗೆ ಬೇಕಿದ್ದ ವಿದ್ಯುತ್ತನ್ನು ರೊಚ್ಚೆಯಲ್ಲೇ ಉತ್ಪಾದಿಸುತ್ತದೆ; ಆಚೆ ಮಾರುವಷ್ಟು ಹೆಚ್ಚುವರಿ ವಿದ್ಯುತ್ತನ್ನೂ ಅದು ಹೊಮ್ಮಿಸುತ್ತದೆ.


ನಾಗೇಶ ಹೆಗಡೆ

ಅಂತೂ ಒಂದು ಸರ್ವವ್ಯಾಪೀ ತಂತ್ರಕ್ರಾಂತಿಯ ಹೊಸ್ತಿಲಲ್ಲಿ ನಾವಿದ್ದೇವೆ. ಇನ್ನು ಕೆಲವೇ ವರ್ಷ: ನಿಮಗಿಷ್ಟು ಹೊಲವಿದ್ದರೆ ಆ ಹೊಲದ ಬಿಸಿಲೇ ನಿಮಗೆ ಬಹುಮುಖ್ಯ ಆದಾಯ ತರಬಹುದು. ಹೊಲದ ಬದುವಿನ ಗಿಡಮರಗಳಿಂದಲೇ ನಿಮಗೆ ಬೇಕಾದ ಬಯೊ ಡೀಸೆಲ್‌ ಸಿಗಬಹುದು. ನಿಮ್ಮ ಕೃಷಿತ್ಯಾಜ್ಯ, ಗೋಅನಿಲದಿಂದಲೂ ವಿದ್ಯುತ್‌ ಉತ್ಪಾದನೆ ಮಾಡಿ, ಅದನ್ನು ಪುಟ್ಟ ಯಂತ್ರದ ಮೂಲಕ ಹೈಡ್ರೊಜನ್‌ ಇಂಧನವನ್ನಾಗಿ ಪರಿವರ್ತಿಸಿ, ಅದನ್ನು ಟೂಥ್‌ಪೇಸ್ಟ್‌ನ ಹಾಗೆ ದೊಡ್ಡ ಡಬ್ಬಿಗಳಲ್ಲಿ ತುಂಬಿ ನಗರಕ್ಕೆ ಮಾರಬಹುದು. ಪೆಟ್ರೋಲ್‌ ಬೆಲೆ ಏರಿಕೆಯ ಬಿಸಿಮಾತುಗಳೆಲ್ಲ ಗತಕಾಲದ ಕತೆಗಳಾಗಬಹುದು.

ತುಸು ಬೇಸರದ ಸಂಗತಿ ಏನೆಂದರೆ, ಇವೆಲ್ಲ ಕ್ರಾಂತಿಕಾರಿ ತಂತ್ರಜ್ಞಾನಗಳೂ ಬೇರೆ ದೇಶಗಳಲ್ಲಿ, ಅದೂ ಖಾಸಗಿ ಕಂಪನಿಗಳ ಮುಷ್ಟಿಯಲ್ಲಿ ವಿಕಾಸವಾಗುತ್ತಿವೆ. ನಾವದಕ್ಕೆ ದುಬಾರಿ ಬೆಲೆ ತೆರಬೇಕು. ನಮ್ಮಲ್ಲೇ ಅಂಥ ತಾಂತ್ರಿಕ ಸಂಶೋಧನೆಗಳಿಗೆ ಆದ್ಯತೆ ಕೊಟ್ಟಿದ್ದಿದ್ದರೆ ಭಾರತವೇ ಜಗತ್ತಿಗೆ ಬೆಳಕು ತೋರಲು ಸಾಧ್ಯವಿತ್ತು. ಆದರೆ ಹವಾಗುಣ ಸಂಕಷ್ಟ ಪರಿಹಾರಕ್ಕೆ ನಮ್ಮಲ್ಲಿ ಆದ್ಯತೆ ತೀರ ಕಡಿಮೆ. ಕೇಂದ್ರದ ಈಚಿನ ಮುಂಗಡಪತ್ರದಲ್ಲಿ ಕಾಟಾಚಾರಕ್ಕೆ ಎಂಬಂತೆ 80 ಕೋಟಿ ಇಟ್ಟರೆ (ಕಳೆದ ವರ್ಷ 100 ಕೋಟಿ ಇಟ್ಟಿದ್ದನ್ನು ನಂತರ 40 ಕೋಟಿಗೆ ಇಳಿಸಲಾಗಿತ್ತು) ರಾಜ್ಯ ಬಜೆಟ್‌ನಲ್ಲಿ ಇದರ ಪ್ರಸ್ತಾಪವೇ ಇಲ್ಲ. ಹಾಗೆ ನೋಡಿದರೆ, ಯಾವ ಹೈಟೆಕ್‌ ತಂತ್ರಜ್ಞಾನವೂ ಇಲ್ಲದೆ, ಬಿಗ್‌ ಬಜೆಟ್‌ ಬೆಂಬಲವೂ ಇಲ್ಲದೆ ನಾವು ಹವಾಗುಣ ಸಮತೋಲ ಸಾಧಿಸಲು ತೀರ ಸುಲಭ ಉಪಾಯವೊಂದಿತ್ತು: ಅದು ಗಿಡಮರ ಬೆಳೆಸುವುದು! ಚೀನೀಯರು ಅಲ್ಲೂ ನಮಗೆ ಮಾದರಿಯಾಗಿ ನಿಲ್ಲುತ್ತಾರೆ.

ಇದ್ದುದರಲ್ಲಿ ಸಂತಸದ ಸಂಗತಿ ಏನೆಂದರೆ, ನಮ್ಮ ಮುಂಗಡಪತ್ರದಲ್ಲಿ ಜಾತಿವಾರು ನಿಗಮಗಳಿಗೆ ಘೋಷಿಸಲಾದ ದೊಡ್ಡ ಮೊತ್ತದ ಅನುದಾನಗಳ ಮಧ್ಯೆ ಎರಡು ಚಿಕ್ಕ ಸ್ಮೃತಿವನಗಳಿಗೂ ನಾಲ್ಕು ಕೋಟಿ ಹಂಚಿಕೆಯಾಗಿದೆ. ಪರವಾಗಿಲ್ಲ, ಆ ವನಗಳನ್ನೇ ಮಾದರಿಯಾಗಿಟ್ಟುಕೊಂಡು ಎಲ್ಲೆಡೆ ಗಿಡಮರಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಸಬಹುದಾಗಿದೆ- ಅದು ಜಾತಿವಾರು ಆದರೂ ಪರವಾಗಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು