ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ಬಾಯಿಯ ಖಡ್ಗ, ನಂಬುವುದು ಹ್ಯಾಂಗ?

Last Updated 5 ಮೇ 2016, 19:30 IST
ಅಕ್ಷರ ಗಾತ್ರ

ಕಳೆದ ವಾರ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ವರ್ಧನೆಗೆ ಪೂರಕ ಎನಿಸುವ ಕೆಲವು ಬೆಳವಣಿಗೆಗಳಾದವು. ‘ಆರ್ಟ್ ಆಫ್ ಏಷ್ಯಾ’ ಸಮಾವೇಶದಲ್ಲಿ ಭಾಗವಹಿಸಲು ಭಾರತಕ್ಕೆ ಬಂದಿದ್ದ ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿ ಐಜಾಜ್ ಅಹಮದ್ ಚೌಧರಿ, ಭಾರತದ ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್ ಅವರನ್ನು ಭೇಟಿಯಾದರು.

ಇದನ್ನು ‘ಸೌಹಾರ್ದಯುತ ಭೇಟಿ’ ಎಂದು ಕರೆಯಲಾಯಿತು. ಆದರೆ ಎರಡು ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಮಾತುಕತೆ ಬಿದ್ದುಹೋಗಿರುವ, ಸಂಬಂಧ ಬಿಗಡಾಯಿಸಿರುವ ಸಂದರ್ಭದಲ್ಲಿ, ವಿದೇಶಾಂಗ ಕಾರ್ಯದರ್ಶಿಗಳು ಭೇಟಿಯಾಗಿ ಕೈ ಕುಲುಕುವುದು ಎಂದರೆ ಅದು ಸಾಮಾನ್ಯ ಸಂಗತಿಯೇನಲ್ಲ.

ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ, ಪಾಕಿಸ್ತಾನದ ವಿಷಯದಲ್ಲಿ ಭಾರತ ಆಕ್ರಮಣಕಾರಿ ನಿಲುವು ತಳೆಯಬಹುದೇ ಎಂಬ ಅನುಮಾನ ಅನೇಕರಿಗಿತ್ತು. ಆದರೆ ಮೋದಿ ತಮ್ಮ ಪ್ರಮಾಣವಚನ ಸಮಾರಂಭದಿಂದಲೇ ಪಾಕಿಸ್ತಾನದೊಂದಿಗೆ ಸಂಬಂಧ ಸುಧಾರಿಸಿಕೊಳ್ಳುವ ನಿಟ್ಟಿನಲ್ಲಿ ಅಡಿಯಿಟ್ಟರು.

ಕಳೆದ ಡಿಸೆಂಬರ್‌ನಲ್ಲಿ ಆಫ್ಘಾನಿಸ್ತಾನದಿಂದ ಭಾರತಕ್ಕೆ ಮರಳುವ ದಾರಿಯಲ್ಲಿ ಲಾಹೋರ್‌ಗೆ ಅನಿರೀಕ್ಷಿತ ಭೇಟಿ ಕೊಟ್ಟು ನವಾಜ್ ಷರೀಫ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿ, ಅವರ ಮೊಮ್ಮಗಳ ಮದುವೆ ಕಾರ್ಯಕ್ರಮಕ್ಕೂ ಹಾಜರಾಗಿ ಬಂದರು. ಇದನ್ನು ಭಾರತ ಪಾಕಿಸ್ತಾನಗಳಷ್ಟೇ ಅಲ್ಲ, ಈ ಎರಡು ದೇಶಗಳ ನಡುವಿನ ಆರು ದಶಕಗಳ ಹಗೆತನ ಬಲ್ಲ ಇತರ ದೇಶಗಳೂ ಅಚ್ಚರಿಯಿಂದಲೇ ನೋಡಿದ್ದವು.

ಭಾರತ- ಪಾಕಿಸ್ತಾನ ಸಂಬಂಧ ಮತ್ತಷ್ಟು ಉತ್ತಮಗೊಳ್ಳಲಿದೆ ಎಂದೇ ಭಾವಿಸಲಾಗಿತ್ತು. ಆದರೆ ಆ ಆಶಾಭಾವ ಹೆಚ್ಚು ದಿನ ಉಳಿಯಲಿಲ್ಲ. 2016ರ ವರ್ಷಾರಂಭದಲ್ಲಿ ಪಠಾಣ್‌ಕೋಟ್ ವಾಯುನೆಲೆಯ ಮೇಲೆ ಭಯೋತ್ಪಾದನಾ ದಾಳಿ ನಡೆದು, ಭಾರತ ಮತ್ತು ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ಮಾತುಕತೆ ನೆಲಕಚ್ಚಿತ್ತು. ಹಾಗಾಗಿ ಮೊನ್ನಿನ ವಿದೇಶಾಂಗ ಕಾರ್ಯದರ್ಶಿಗಳ ಭೇಟಿ ದ್ವಿಪಕ್ಷೀಯ ಮಾತುಕತೆಗೆ ಪುನರ್‌ಚಾಲನೆ ನೀಡುವ ನಿಟ್ಟಿನಲ್ಲಿ ಅನುವಾಗಬಹುದು. 

ಜೊತೆಗೆ ಅಪರೂಪದ ಸಮಾಗಮ, ಚರ್ಚೆಯೊಂದು ಭಾರತ ಮತ್ತು ಪಾಕಿಸ್ತಾನದ ಮಾಜಿ ರಾಯಭಾರಿಗಳ ನಡುವೆ ನಡೆಯಿತು. ಪಾಕಿಸ್ತಾನದ ರಾಯಭಾರಿಯಾಗಿ ದೆಹಲಿಯಲ್ಲಿ ಸೇವೆ ಸಲ್ಲಿಸಿದ ಸಲ್ಮಾನ್ ಬಶೀರ್, ರಿಯಾಜ್ ಕೋಖರ್, ಅಶ್ರಫ್ ಜಹಂಗೀರ್ ಖ್ವಾಸಿ, ಅಜೀಜ್ ಅಹ್ಮದ್ ಖಾನ್, ಡಾ. ಹುಮಾಯೂನ್ ಖಾನ್ ಮತ್ತು ಸೈಯದ್ ಮಲಿಕ್,

ಭಾರತದ ರಾಯಭಾರಿಯಾಗಿ ಇಸ್ಲಾಮಾಬಾದ್‌ನಲ್ಲಿ ಸೇವೆ ಸಲ್ಲಿಸಿದ ಶರತ್ ಸಬರ್ವಾಲ್, ಶಂಕರ್ ಭಾಜಪೈ, ಸತೀಶ್ ಚಂದ್ರ, ಎಸ್.ಕೆ.ಲಾಂಭಾ, ಶಿವಶಂಕರ್ ಮೆನನ್, ಸತ್ಯಭ್ರತ್ ಪಾಲ್, ಜಿ.ಪಾರ್ಥಸಾರಥಿ ಮತ್ತು ಟಿ.ಸಿ.ಎ.ರಾಘವನ್ ಒಂದೆಡೆ ಸೇರಿ ಭಾರತ, ಪಾಕ್ ಸಂಬಂಧ ಸುಧಾರಣೆ ಕುರಿತು ಚರ್ಚಿಸಿರುವುದು ಕೂಡ ಮಹತ್ವದ ವಿದ್ಯಮಾನ.

ಹೀಗೆ ರಾಜತಾಂತ್ರಿಕ ವಲಯದಲ್ಲಿ ನಡೆಯುವ ಮಾತುಕತೆ ಒಂದು ಹಂತದವರೆಗೆ ಸಂಬಂಧ ವರ್ಧನೆಗೆ ಅವಕಾಶ ಮಾಡಿಕೊಡಬಹುದು. ಆದರೆ ಮಾತುಕತೆ ಇತರ ವಲಯಗಳಲ್ಲೂ ನಡೆಯಬೇಕಾದ ಜರೂರು ಇದೆ. ಆಗಷ್ಟೇ ಮುನಿಸಿಕೊಂಡ ಎರಡು ರಾಷ್ಟ್ರಗಳು ಮುಕ್ತವಾಗಿ ಬೆರೆಯಲು, ಒಂದಾಗಲು ಸಾಧ್ಯ ಎಂಬ ಅಭಿಪ್ರಾಯವನ್ನು ಹಲವು ರಾಜತಂತ್ರಜ್ಞರು ವ್ಯಕ್ತಪಡಿಸಿದ್ದಾರೆ.

ಹಾಗಾಗಿ ಜನರ ನಡುವಿನ ಸಂಪರ್ಕ, ಸಂವಹನ ಬಾಂಧವ್ಯ ವೃದ್ಧಿಗೆ ಸಹಕಾರಿಯಾಗಬಹುದು. ವ್ಯಾಪಾರ, ಸರಕು ಸಾಗಾಣಿಕೆಗೆ ಪೂರಕವಾದ ಒಡಂಬಡಿಕೆಗಳಾದರೆ, ಎರಡು ದೇಶಗಳ ಗುಪ್ತಚರ ಇಲಾಖೆ ಅಧಿಕಾರಿಗಳು ಎದುರು ಬದುರು ಕುಳಿತುಕೊಳ್ಳುವ ವಾತಾವರಣ ಸೃಷ್ಟಿಯಾದರೆ, ಭಾರತ, ಪಾಕ್ ಸೇನಾ ಮುಖ್ಯಸ್ಥರು ಮುಖ ಸಡಿಲಿಸಿ ಮಾತನಾಡಲು ಅವಕಾಶವಾದರೆ, ವಿಶ್ವಾಸಾರ್ಹತೆ ಹೆಚ್ಚುತ್ತದೆ, ಕಗ್ಗಂಟು ಎನಿಸಿಕೊಂಡಿರುವ ಹಲವು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸಾಧ್ಯ ಎಂಬ ಅನಿಸಿಕೆಯೂ ಇದೆ.

ನಿಜ, ರಷ್ಯಾ ಮತ್ತು ಅಮೆರಿಕ ನಡುವಿನ ಶೀತಲ ಯುದ್ಧದ ದಿನಗಳಲ್ಲಿ ರಷ್ಯಾದ ಭದ್ರತಾ ಸಂಸ್ಥೆ ಕೆಜಿಬಿ ಮತ್ತು ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ತಮ್ಮ ನಡುವಿನ ಮಾತುಕತೆಗಳನ್ನು ಚಾಲ್ತಿಯಲ್ಲಿಟ್ಟಿದ್ದವು. ಹಾಗಾಗಿ ಪ್ರಕ್ಷುಬ್ಧತೆಯನ್ನು ತಿಳಿಗೊಳಿಸಲು ಸಾಧ್ಯವಾಯಿತು ಎನ್ನುವುದನ್ನು ಇತಿಹಾಸ ಹೇಳುತ್ತದೆ.

ಆದರೆ ಇಂತಹ ಮಾತುಕತೆ ಭಾರತ ಮತ್ತು ಪಾಕಿಸ್ತಾನದ ನಡುವೆ ಸಾಧ್ಯವೇ ಎನ್ನುವುದು ಹಿರಿದಾದ ಪ್ರಶ್ನೆ. ಕಾರಣವಿಷ್ಟೆ, ಭಾರತ ಮತ್ತು ಪಾಕಿಸ್ತಾನದ ನಡುವಿನ ರಾಜತಾಂತ್ರಿಕ ಕಸರತ್ತು ಇಂದು ನಿನ್ನೆಯದಲ್ಲ.

ವಿಭಜನೆಯ ನಂತರ ಭಾರತ, ಪಾಕಿಸ್ತಾನದ ನಡುವೆ ನಾಲ್ಕು ಯುದ್ಧಗಳು ನಡೆದಿವೆ. ಹಲವು ಸುತ್ತಿನ ಶಾಂತಿ, ಸಂಧಾನದ ಮಾತುಕತೆ, ಸ್ನೇಹ ಬೆಸೆದುಕೊಳ್ಳುವ ಪ್ರಯತ್ನಗಳು ಆಗಿವೆ. ಆದರೆ ಯಾವುದೂ ಸಫಲವಾಗಿಲ್ಲ.

ಮುಖ್ಯವಾಗಿ ಇಂದಿರಾ ಗಾಂಧಿ ಮತ್ತು ವಾಜಪೇಯಿ ಅವರ ಅವಧಿಯಲ್ಲಾದ ಪ್ರಯತ್ನಗಳನ್ನು ನೆನಪಿಸಿಕೊಳ್ಳಬೇಕು. ಬಾಂಗ್ಲಾ ಯುದ್ಧದಲ್ಲಿ ತಮ್ಮ ಚಾಣಾಕ್ಷ ನಡೆಯಿಂದ, ದಿಟ್ಟ ನಿರ್ಧಾರಗಳಿಂದ ಪಾಕಿಸ್ತಾನದ ಸೊಕ್ಕು ಮುರಿದಿದ್ದ ಇಂದಿರಾ ಗಾಂಧಿ, ಮಾತುಕತೆಯ ಮೇಜಿಗೆ ಜುಲ್ಫಿಕರ್ ಅಲಿ ಭುಟ್ಟೊ ಅವರನ್ನು ಎಳೆದುತರುವಲ್ಲಿಯೂ ಸಫಲರಾಗಿದ್ದರು. ಯುದ್ಧ ಜಯಿಸಿದ ನಂತರವೂ ನೆರೆಯ ರಾಷ್ಟ್ರದೊಂದಿಗೆ ಸ್ನೇಹ ಬಯಸಿ ಭಾರತ ದೊಡ್ಡತನ ಪ್ರದರ್ಶಿಸಿತ್ತು.

ಶಿಮ್ಲಾ ಒಪ್ಪಂದ ಏರ್ಪಟ್ಟು ‘1971ರ ಡಿಸೆಂಬರ್ 17ರಂದು ನಡೆದ ಕದನವಿರಾಮದ ಬಳಿಕ ಗುರುತು ಮಾಡಲಾಗಿದ್ದ ಗಡಿರೇಖೆಯನ್ನು ನಿಯಂತ್ರಣ ರೇಖೆಯನ್ನಾಗಿ ಯಾವುದೇ ತಕರಾರಿಲ್ಲದೆ ಒಪ್ಪಿಕೊಳ್ಳಬೇಕು’ ಎಂಬ ನಿಬಂಧನೆಗೆ ಎರಡು ದೇಶಗಳು ಅಂಕಿತ ಹಾಕಿದವು.

ಮಾತುಕತೆಯ ‘ಕೊಟ್ಟು ತೆಗೆದುಕೊಳ್ಳುವ’ ಆತುರದಲ್ಲಿ ಇಂದಿರಾ ಗಾಂಧಿ ಬಾಂಗ್ಲಾ ಯುದ್ಧದ ವೇಳೆ ಭಾರತದ ಸೇನೆ ಆಕ್ರಮಿಸಿಕೊಂಡಿದ್ದ ಈಗಿನ ಪಾಕ್ ಆಕ್ರಮಿತ ಕಾಶ್ಮೀರದಿಂದ (ಪಿಒಕೆ) ಸೇನೆಯನ್ನು ಹಿಂತೆಗೆದುಕೊಳ್ಳಲು ಒಪ್ಪಿಕೊಂಡರು. ಪರಿಣಾಮ ಆ ಪ್ರದೇಶ ಪಾಕ್ ಉಗ್ರರ ತರಬೇತಿ ಕೇಂದ್ರವಾಗಿ ಮಾರ್ಪಟ್ಟಿತು. ಭಾರತಕ್ಕೆ ಕೆಡುಕೇ ಆಯಿತು.

ಇಂದಿರಾ ಗಾಂಧಿ ನಂತರ ಪಾಕಿಸ್ತಾನದೊಂದಿಗಿನ ಸ್ನೇಹಕ್ಕೆ ಉತ್ಸುಕತೆ ತೋರಿದವರು ವಾಜಪೇಯಿ. ಸ್ನೇಹ ಬೆಳೆಸಲು ಹೊಸದಾರಿ ತುಳಿದ ವಾಜಪೇಯಿ ‘ಬಸ್ ಡಿಪ್ಲೊಮಸಿ’ಗೆ ಮುಂದಾದರು. ಭಾರತದಿಂದ ಲಾಹೋರಿಗೆ ಬಸ್ ಹೊರಟಿತು. ಶ್ರೀನಗರ- ಮುಜಾಫರ್‌ ನಗರದ ನಡುವೆ ಬಸ್‌ ಸಂಚಾರ ಆರಂಭವಾಯಿತು, ವೀಸಾ ಕ್ಯಾಂಪ್ ತೆರೆಯಲಾಯಿತು.

ಉಭಯ ದೇಶಗಳ ನಡುವಿನ ಕ್ರಿಕೆಟ್ ಆಟಕ್ಕೆ ಚಾಲನೆ ಕೊಡಲಾಯಿತು. ಆದರೆ ಈ ಎಲ್ಲ ಪ್ರಯತ್ನಗಳನ್ನೂ ಕಾರ್ಗಿಲ್ ಯುದ್ಧ ಅಳಿಸಿ ಹಾಕಿತು. ಆದರೂ ಸ್ನೇಹ ಹಸ್ತ ಮುಂದೆ ತಂದ ವಾಜಪೇಯಿ, ಆಗ್ರಾ ಶೃಂಗಸಭೆ ಆಯೋಜಿಸಿದರು, ಮುಷರಫ್ ಅವರನ್ನು ಆಹ್ವಾನಿಸಿದರು.

ಭಯೋತ್ಪಾದನೆಯ ವಿರುದ್ಧ ಗಟ್ಟಿನಿಲುವು ತಾಳಲು ಒಲ್ಲೆ ಎಂದ ಪಾಕಿಸ್ತಾನ, ಕಾಶ್ಮೀರದ ವಿಷಯವನ್ನಷ್ಟೇ ಮುಂದೆ ಮಾಡಿತು. ಶೃಂಗಸಭೆ ವಿಫಲವಾಯಿತು. ನಂತರ ಅಕ್ಷರಧಾಮ ಮತ್ತು ಸಂಸತ್ ಭವನದ ಮೇಲೆ ಭಯೋತ್ಪಾದಕ ದಾಳಿಗಳಾದವು.

ಹೀಗೆ ಶಾಂತಿ ಪತಾಕೆ ಹಿಡಿದು ಭಾರತ ಹೊರಟಾಗಲೆಲ್ಲಾ ಅತ್ತಿಂದ ಸಿಡಿಗುಂಡುಗಳೇ ಹಾರಿವೆ. ಇಂದಿಗೂ ಪಾಕಿಸ್ತಾನ ಭಾರತದೊಂದಿಗೆ ಮನಃಪೂರ್ವಕವಾಗಿ ಸ್ನೇಹ ಬಯಸುವಂತೆ ತೋರುವುದಿಲ್ಲ. ಒಂದೊಮ್ಮೆ ಅದು ಮಾತುಕತೆಗೆ ಉತ್ಸುಕತೆ ತೋರಿದರೂ ಅದು ಬಾಹ್ಯ ಒತ್ತಡಗಳಿಂದಷ್ಟೆ. ಅದರಲ್ಲೂ ಅಮೆರಿಕ, ಮಾತುಕತೆಯ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವಂತೆ ಪಾಕಿಸ್ತಾನದ ಮೇಲೆ ಒತ್ತಡ ಹೇರುತ್ತಿದೆ.

ರಾಜತಾಂತ್ರಿಕವಾಗಿ ಮೋದಿ ನೇತೃತ್ವದ ಸರ್ಕಾರ ಇಟ್ಟ ನಿರ್ಣಾಯಕ ಹೆಜ್ಜೆಗಳು, ಮುಖ್ಯವಾಗಿ ಅಮೆರಿಕ, ಫ್ರಾನ್ಸ್, ಆಫ್ಘಾನಿಸ್ತಾನ, ಇರಾನ್, ಸೌದಿ ಅರೇಬಿಯಾ ದೇಶಗಳ ಜೊತೆ ಗಟ್ಟಿಯಾದ ಭಾರತದ ಸ್ನೇಹ, ಆದ ಒಪ್ಪಂದಗಳು ಪಾಕಿಸ್ತಾನವನ್ನು ಬಗ್ಗಿಸಿವೆ. ಹಾಗಂತ ಪಾಕ್ ಸರ್ಕಾರಕ್ಕೆ ಭಾರತದೊಂದಿಗೆ ಕೈಕುಲುಕಲು ಹಲವು ಆಂತರಿಕ ತೊಡಕುಗಳಿವೆ.

ಪಾಕಿಸ್ತಾನದ ಆಡಳಿತ ಪ್ರಧಾನಿ ನವಾಜ್ ಷರೀಫ್ ಅವರ ಕೈಯಲ್ಲಷ್ಟೇ ಇಲ್ಲ. ಇಸ್ಲಾಮಾಬಾದ್‌ನ ಷರೀಫ್ ಕಚೇರಿ ಮತ್ತು ರಾವಲ್ಪಿಂಡಿಯ ಸೇನಾ ದಂಡನಾಯಕನ ಕಚೇರಿ ಪಾಕಿಸ್ತಾನವನ್ನು ನಿಯಂತ್ರಿಸುತ್ತಿದೆ.

ಅದರಲ್ಲೂ ಪಾಕಿಸ್ತಾನದ ವಿದೇಶಾಂಗ ಮತ್ತು ಭದ್ರತಾ ನೀತಿಯನ್ನು ನಿರ್ದೇಶಿಸುವುದು ರಾವಲ್ಪಿಂಡಿಯ ಸೇನಾ ಕಚೇರಿಯೇ. ಹಿಂದಿನಿಂದಲೂ ಮತೀಯ ಸಂಘಟನೆಗಳು, ಐಎಸ್ಐ ಮತ್ತು ಸೇನೆ, ಪಾಕಿಸ್ತಾನದ ಪ್ರಜಾಸರ್ಕಾರ ಭಾರತದೊಂದಿಗಿನ ರಾಜತಾಂತ್ರಿಕ ಸಂಬಂಧವನ್ನು ಬಲಪಡಿಸಿಕೊಳ್ಳಲು ಹೊರಟಾಗಲೆಲ್ಲಾ ತೊಡರುಗಾಲು ಹಾಕಿವೆ.

ನವಾಜ್ ಷರೀಫ್ 1999ರಲ್ಲಿ ಶಾಂತಿ ಮಾತುಕತೆಗಳಲ್ಲಿ ಭಾಗಿಯಾದ ಕಾರಣ ಅಧಿಕಾರವನ್ನೇ ಕಳೆದುಕೊಂಡಿದ್ದರು. ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್ಐ ಇಂದಿಗೂ ತನ್ನ ಪ್ರಧಾನಿಯ ಮೇಲೆಯೇ ಬೇಹುಗಾರಿಕೆ ನಡೆಸುತ್ತದೆ. ಜುಲ್ಫಿಕರ್ ಅಲಿ ಭುಟ್ಟೊ ಶಿಮ್ಲಾ ಮಾತುಕತೆಗೆ ಬಂದಾಗ, ಐಎಸ್ಐ ಮಾತು ಕದ್ದಾಲಿಕೆಯ ಉಪಕರಣಗಳನ್ನು ಮಾತುಕತೆಗೆ ನಿಗದಿಯಾಗಿದ್ದ ಬಂಗಲೆಯಲ್ಲಿ ಜೋಡಿಸಿಟ್ಟಿದ್ದು ವರದಿಯಾಗಿತ್ತು.

ಆ ಕಾರಣದಿಂದಲೆ ಭುಟ್ಟೊ ಇಂದಿರಾ ಗಾಂಧಿಯವರನ್ನು ವಾಯುವಿಹಾರಕ್ಕೆ ಕರೆದೊಯ್ದು ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿದ್ದರು. ಪಾಕಿಸ್ತಾನದ ಸೇನೆ ಮತ್ತು ಐಎಸ್ಐ ಕಾಶ್ಮೀರ ಕುರಿತಾಗಿ ಪಾಕಿಸ್ತಾನದ ಪ್ರಧಾನಿ ಯಾವ ನಿರ್ಣಯವನ್ನೂ ತೆಗೆದುಕೊಳ್ಳದಂತೆ ತಡೆಯುತ್ತವೆ. ಒಂದೊಮ್ಮೆ ಎಚ್ಚರಿಕೆ ಮೀರಿ ಮುಂದುವರೆದರೆ ಸರ್ಕಾರ ಪತನವಾಗುತ್ತದೆ.

ಈ ಬಗ್ಗೆ ಅಮೆರಿಕದ ಥಿಂಕ್ ಟ್ಯಾಂಕ್ ಸಂಸ್ಥೆ, ಬ್ರೂಕಿಂಗ್ ಇನ್‌ಸ್ಟಿಟ್ಯೂಷನ್‌ನ ದಕ್ಷಿಣ ಏಷ್ಯಾ ರಾಜಕೀಯ ತಜ್ಞ ಡಾ. ಸ್ಟೀಫನ್ ಕೋಹೆನ್ ತಮ್ಮ ಕೃತಿ Shooting for a Century: The India- Pakistan Conundrum ನಲ್ಲಿ ‘ಪಾಕಿಸ್ತಾನದ ಒಂದು ಭಾಗ ನಿರಂಕುಶ ಪ್ರಭುತ್ವ ಮತ್ತೊಂದು ಭಾಗ ಪ್ರಜಾ ಸರ್ಕಾರ. ಹೊರಗಿನವರಿಗೆ ತಾವು ಯಾರೊಂದಿಗೆ ವ್ಯವಹರಿಸುತ್ತಿದ್ದೇವೆ ಎಂದು ತಿಳಿಯುವುದು ಕಷ್ಟ’ ಎನ್ನುತ್ತಾರೆ.

ಜೊತೆಗೆ ಭಾರತ, ಪಾಕ್ ಸಂಬಂಧಕ್ಕೆ ಬಾಧಕವಾಗುವ ಮತ್ತೊಂದು ಸಂಗತಿಯನ್ನೂ ಪ್ರಸ್ತಾಪಿಸುತ್ತಾ ‘ಸರ್ವಾಧಿಕಾರದ ಸೇನಾ ಆಡಳಿತ ತನ್ನ ಮುಷ್ಟಿಯನ್ನು ಬಿಗಿಗೊಳಿಸುತ್ತಲೇ ಇದೆ.

ನೆಪಕ್ಕೆ ಪ್ರಜಾ ಸರ್ಕಾರವಿದ್ದರೂ ಜನರ ಮಾನಸಿಕತೆಯನ್ನು ರೂಪಿಸುತ್ತಿರುವುದು ಸೇನಾ ಆಡಳಿತವೇ. ಭಾರತ ಕುರಿತು ಋಣಾತ್ಮಕ ಅಂಶಗಳನ್ನೇ ಪಾಕಿಸ್ತಾನಿಗಳ ತಲೆಯಲ್ಲಿ ತುಂಬುವ ಕೆಲಸವನ್ನು ಅದು ವ್ಯವಸ್ಥಿತವಾಗಿ ಮಾಡುತ್ತಿದೆ. ಮತೀಯ ಭಾವನೆಗಳನ್ನೇ ಮುಂದು ಮಾಡಿ ತನ್ನದು ಇಸ್ಲಾಮಿಕ್ ದೇಶ ಎಂಬುದನ್ನು ಒತ್ತಿ ಹೇಳುತ್ತದೆ. ತನ್ನ ಪಠ್ಯಗಳಲ್ಲಿ ದೇಶಪ್ರೇಮದ ವ್ಯಾಖ್ಯಾನವನ್ನೇ ಬದಲಿಸಿ, ಭಾರತ ದ್ವೇಷವನ್ನೇ ತುಂಬಿದೆ.

‘ಇಸ್ಲಾಮಿಕ್ ರಿಪಬ್ಲಿಕ್ ಪಾಕಿಸ್ತಾನ’ದ ಅಸ್ತಿತ್ವವನ್ನು ಭಾರತ ಸಹಿಸುವುದಿಲ್ಲ ಎಂಬ ಭಾವನೆ ಮೂಡಿಸುವ ಕೆಲಸವನ್ನು ಮಾಡುತ್ತಿದೆ’ ಎಂದು ಉಲ್ಲೇಖಿಸಿದ್ದಾರೆ. ಭಾರತ ವಿರೋಧಿ ಮನೋಭಾವ ಕೇವಲ ಶಿಕ್ಷಣ ವ್ಯವಸ್ಥೆಯಲ್ಲಷ್ಟೇ ಅಲ್ಲ, ಸೈನ್ಯವೂ ಸೇರಿದಂತೆ ಪಾಕಿಸ್ತಾನದ ಇತರ ಸಂಸ್ಥೆಗಳಲ್ಲೂ ಇಂದು ಆಳವಾಗಿ ಬೇರುಬಿಟ್ಟಿದೆ.

ಸಾಮಾನ್ಯವಾಗಿ ನಮ್ಮ ಅಕಾಡೆಮಿಕ್ ಚರ್ಚೆಗಳಲ್ಲಿ, ಏಷ್ಯಾದ ಈ ಎರಡು ದೊಡ್ಡ ರಾಷ್ಟ್ರಗಳು ಹಗೆತನ ಮರೆತು ಒಂದಾದರೆ ಏನೆಲ್ಲಾ ಪ್ರಗತಿ ಸಾಧಿಸಬಹುದು, ರಕ್ಷಣಾ ವೆಚ್ಚವನ್ನು ಬಡತನ ನಿರ್ಮೂಲನೆಗೆ ಬಳಸಬಹುದು, ಮಕ್ಕಳ ಶಿಕ್ಷಣಕ್ಕೆ ವ್ಯಯಿಸಬಹುದು ಎಂಬಿತ್ಯಾದಿ ಮಾತುಗಳು ಕ್ಲೀಷೆಯಾಗಿ ಬಿಟ್ಟಿವೆ. ಸಂಘ ಪರಿವಾರವಂತೂ ಅಖಂಡ ಭಾರತದ ಕನಸನ್ನು ಇನ್ನೂ ಜೀವಂತವಾಗಿರಿಸಿಕೊಂಡಿದೆ. ಆದರೆ ಪರಿಸ್ಥಿತಿ ಈ ಯಾವುದಕ್ಕೂ ಪೂರಕವಾಗಿಲ್ಲ ಎನ್ನುವುದಂತೂ ವಾಸ್ತವ.

ಕೆ.ನಟವರ್ ಸಿಂಗ್, ತಮ್ಮ ಆತ್ಮಕತೆ ‘One Life is Not enough’ ಕೃತಿಯಲ್ಲಿ ಭಾರತದ ರಾಯಭಾರಿಯಾಗಿ ಇಸ್ಲಾಮಾಬಾದ್‌ನಲ್ಲಿದ್ದ ಎರಡು ವರ್ಷದ ಅನುಭವವನ್ನು ಸವಿಸ್ತಾರವಾಗಿ ವಿವರಿಸಿದ್ದಾರೆ.

ತಾವು ಇಸ್ಲಾಮಾಬಾದಿಗೆ ತೆರಳುವ ಮುನ್ನ ತಮ್ಮ ಸ್ನೇಹಿತ ಮತ್ತು ಭಾರತದಲ್ಲಿದ್ದ ಪಾಕಿಸ್ತಾನದ ರಾಯಭಾರಿ ಅಬ್ದುಸ್ ಸತ್ತಾರ್ ಅವರನ್ನು ನಟವರ್ ಸಿಂಗ್ ಕೇಳಿದರಂತೆ ‘I know what to say to our friends across the border. Tell me what I should not say’.

ಆಗ ಸತ್ತಾರ್ ‘Never say that we are the same people. We are not. If we were, then why did we part company in 1947?’ ಎಂದಿದ್ದರು. ಯಾವ ಹಂತದವರೆಗೆ ನಾವು ಶಾಂತಿ ಪತಾಕೆ ಹಿಡಿದು ನಡೆಯಬಹುದು ಎಂಬ ಪ್ರಶ್ನೆಗೂ ಸತ್ತಾರ್ ಮಾತಿನಲ್ಲಿ ಉತ್ತರವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT