ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು ದಸರಾ | 508 ತಂಡ, 6,500 ಕಲಾವಿದರಿಗೆ ವೇದಿಕೆ– ಸಚಿವ ಡಾ. ಮಹದೇವಪ್ಪ

Published : 30 ಸೆಪ್ಟೆಂಬರ್ 2024, 12:55 IST
Last Updated : 30 ಸೆಪ್ಟೆಂಬರ್ 2024, 12:55 IST
ಫಾಲೋ ಮಾಡಿ
Comments

ಮೈಸೂರು: ‘ಅ.3ರಿಂದ 12ವರೆಗೆ ನಡೆಯಲಿರುವ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಭರದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಬಾರಿ 508 ಕಲಾತಂಡಗಳ 6,500 ಕಲಾವಿದರಿಗೆ ವಿವಿಧ 11 ವೇದಿಕೆಗಳಲ್ಲಿ ಅವಕಾಶ ನೀಡಲಾಗಿದೆ’ ಎಂದು ಜಿಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್‌.ಸಿ. ಮಹದೇವಪ್ಪ ತಿಳಿಸಿದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಅರಮನೆ ಆವರಣದ ಸೇರಿದಂತೆ ಹಲವೆಡೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಬಾರಿ ವೈಮಾನಿಕ ಪ್ರದರ್ಶನ (ಏರ್‌ಶೋ) ಅನುಮಾನ’ ಎಂದು ಹೇಳಿದರು.

‘ಎಲ್ಲ 19 ಉಪ ಸಮಿತಿಗಳೂ ಕಾರ್ಯಕ್ರಮ ಪಟ್ಟಿ ಸಿದ್ಧಪಡಿಸಿವೆ. ಅ. 3ರಂದು ಚಾಮುಂಡಿಬೆಟ್ಟದಲ್ಲಿ ಉತ್ಸವಕ್ಕೆ ಚಾಲನೆ ದೊರೆಯಲಿದೆ. ಸಂಜೆ ಅರಮನೆ ಮುಂಭಾಗ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಅರಮನೆ ವೇದಿಕೆಯಲ್ಲಿ ಅ. 3ರಿಂದ ಅ.10ರವರೆಗೆ ಹಾಗೂ ಜಗನ್ಮೋಹನ ಅರಮನೆ, ನಾದಬ್ರಹ್ಮ ಸಂಗೀತ ಸಭಾ, ಕಲಾಮಂದಿರದ ಕಿರುರಂಗ ಮಂದಿರ, ರಮಾಗೋವಿಂದ ರಂಗಮಂದಿರ, ನಟನ ರಂಗಶಾಲೆ, ನಂಜನಗೂಡು ನಂಜುಂಡೇಶ್ವರ ದೇವಸ್ಥಾನದ ಆವರಣ ಮೊದಲಾದ ವೇದಿಕೆಗಳಲ್ಲಿ ಅ.11ರವರೆಗೆ ಸಂಗೀತ, ನೃತ್ಯ, ನಾಟಕ, ಪೌರಾಣಿಕ, ರಂಗಭೂಮಿ ಮೊದಲಾದ ಕಲಾಪ್ರಾಕಾರಗಳನ್ನು ಸಾರ್ವಜನಿಕರು ವೀಕ್ಷಿಸಬಹುದಾಗಿದೆ’ ಎಂದರು.

‘ಸಂಗೀತ ಕ್ಷೇತ್ರದ ಖ್ಯಾತನಾಮರನ್ನು ಈ ಬಾರಿಯ ಯುವದಸರೆಗೆ ಆಹ್ವಾನಿಸಿದ್ದು, ಬಹಳ ಮಂದಿ ಸೇರುವ ಸಾಧ್ಯತೆ ಇರುವುದರಿಂದ ಉತ್ತನಹಳ್ಳಿ ಬಳಿಯ 80 ಎಕರೆ ವಿಶಾಲವಾದ ಜಾಗದಲ್ಲಿ ಹಮ್ಮಿಕೊಳ್ಳಲಾಗಿದೆ. ಅಲ್ಲಿ ಸಮರ್ಪಕ ಸೌಲಭ್ಯ ಕಲ್ಪಿಸಲು ಕ್ರಮ ವಹಿಸಲಾಗಿದೆ. ಭದ್ರತೆ ಹಾಗೂ ವಿಶೇಷ ಬಸ್ ಕಾರ್ಯಾಚರಣೆಗೂ ಸೂಚಿಸಿದ್ದೇನೆ. ಮುಂಜಾಗ್ರತಾ ಕ್ರಮ ವಹಿಸುವಂತೆಯೂ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯಿತ್ರಿ, ಭೂ ದಾಖಲೆಗಳ ಇಲಾಖೆ ಉಪ ನಿರ್ದೇಶಕಿ ರಮ್ಯಾ, ಆಯುಷ್ ಅಧಿಕಾರಿ ಡಾ.ಪುಷ್ಪಾ ಹಾಗೂ ಶಿಕ್ಷಣಾಧಿಕಾರಿ ಅನಂತರಾಜು ಇದ್ದರು.

‘ಯುವ ದಸರಾ: ಮತ್ತೆರಡು ಪ್ರವರ್ಗದ ಟಿಕೆಟ್’

ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ಮಾತನಾಡಿ, ‘ಜಂಬೂಸವಾರಿ ಮೆರವಣಿಗೆ ಮತ್ತು ಬನ್ನಿಮಂಟಪದ ಪಂಜಿನ ಕವಾಯತು ಟಿಕೆಟ್, ಗೋಲ್ಡ್ ಕಾರ್ಡ್ ಮಾರಾಟ ಮುಂದುವರಿದಿದೆ. ನಾಲ್ಕು ದಿನಗಳಿಂದಲೂ ಆನ್‌ಲೈನ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ. ಇನ್ನೂ ಒಂದು ಸಾವಿರ ಗೋಲ್ಡ್ ಕಾರ್ಡ್ ದೊರೆಯಲಿದೆ. ಒಬ್ಬರೇ ಬಹಳಷ್ಟು ಟಿಕೆಟ್‌ ಖರೀದಿಸುವುದನ್ನು ತಪ್ಪಿಸಲು ಒಟಿಪಿ ಆಧಾರಿತವಾಗಿ ಮಾರಲಾಗುತ್ತಿದೆ. ಒಬ್ಬರಿಗೆ 4 ಟಿಕೆಟ್‌ ಮಾತ್ರವೇ ದೊರೆಯುತ್ತದೆ. ಜಂಬೂಸವಾರಿಯ 2ಸಾವಿರ ಸಾಮಾನ್ಯ ಟಿಕೆಟ್‌ಗಳು ಕೂಡ ಲಭ್ಯ ಇವೆ’ ಎಂದು ತಿಳಿಸಿದರು.

‘ಯುವದಸರಾ ಟಿಕೆಟ್ ಮೊತ್ತ ಜಾಸ್ತಿಯಾಗಿರುವ ಬಗ್ಗೆ ಅಭಿಪ್ರಾಯ ಬಂದಿದ್ದರಿಂದ ಮತ್ತೆರಡು ಪ್ರವರ್ಗದ ಟಿಕೆಟ್‌ಗಳನ್ನು ಪರಿಚಯಿಸಲಾಗಿದೆ. ₹8ಸಾವಿರ ಹಾಗೂ ₹ 5ಸಾವಿರದ ಜೊತೆಗೆ ₹ 1,500 ಮತ್ತು ₹ 2,500ರ ಟಿಕೆಟ್‌ಗಳೂ ಲಭ್ಯ ಇವೆ. ಒಟ್ಟು 10ಸಾವಿರ ಟಿಕೆಟ್‌ಗಳನ್ನು ಮಾತ್ರ ಮಾರಲಾಗುವುದು. ಉಳಿದ 80ಸಾವಿರದಿಂದ 90ಸಾವಿರ ಮಂದಿಗೆ ಮುಕ್ತ ಪ್ರವೇಶವಿದೆ. ವೇದಿಕೆಯ ಮುಂದೆಯೇ ಹಾಗೂ ವಿಶೇಷ ಆಸನದ ವ್ಯವಸ್ಥೆ ಬಯಸುವವರು ಟಿಕೆಟ್‌ ಖರೀದಿಸಬಹುದು’ ಎಂದು ಹೇಳಿದರು.

‘ವಾಹನ ನಿಷೇಧ ವಲಯ;ಪ್ರಾಯೋಗಿಕ ಜಾರಿ’

ದಸರಾ ವೇಳೆ ಡಿ.ದೇವರಾಜ ಅರಸು ರಸ್ತೆ, ಅರಮನೆ ಸುತ್ತ ಅರ್ಧ ಭಾಗದಷ್ಟು ರಸ್ತೆಯಲ್ಲಿ ಅ.3 ಹಾಗೂ 4ರಂದು ವಾಹನಗಳ ಸಂಚಾರವನ್ನು ನಿಷೇಧಿಸಿ ಪ್ರಾಯೋಗಿಕವಾಗಿ ಕ್ರಮ ವಹಿಸಲಾಗುವುದು. ಯಶಸ್ವಿಯಾದರೆ ಉತ್ಸವ ಮುಗಿಯುವವರೆಗೂ ಮುಂದುವರಿಸಲಾಗುವುದು. ಪೊಲೀಸರು ಈ ನಿಟ್ಟಿನಲ್ಲಿ ಚರ್ಚಿಸಿ ಕ್ರಮ ವಹಿಸಲಿದ್ದಾರೆ’ ಎಂದು ಲಕ್ಷ್ಮೀಕಾಂತ ರೆಡ್ಡಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT