ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವರಾತ್ರಿ ಉತ್ಸವ: ಜಾನಪದ ಲೋಕದಲ್ಲಿ ಗೊಂಬೆಗಳ ಪ್ರದರ್ಶನ

ತಿಂಗಳ ಕಾಲ ಸಾರ್ವಜನಿಕರ ವೀಕ್ಷಣೆಗೆ ಅವಕಾಶ
Last Updated 11 ಅಕ್ಟೋಬರ್ 2018, 12:28 IST
ಅಕ್ಷರ ಗಾತ್ರ

ರಾಮನಗರ: ಇಲ್ಲಿನ ಜಾನಪದ ಲೋಕದ ಆವರಣದಲ್ಲೀಗ ಗೊಂಬೆಗಳೇ ಆಕರ್ಷಣೆಯಾಗಿವೆ. 800ಕ್ಕೂ ಹೆಚ್ಚು ಗೊಂಬೆಗಳನ್ನು ಅಚ್ಚುಕಟ್ಟಾಗಿ ಜೋಡಿಸಿ ಪ್ರದರ್ಶಿಸಲಾಗಿದ್ದು, ಎಲ್ಲರ ಕಣ್ಮನ ಸೆಳೆಯುತ್ತಿವೆ.

ನವರಾತ್ರಿ ಉತ್ಸವದ ಅಂಗವಾಗಿ ಈ ಗೊಂಬೆಗಳ ಪ್ರದರ್ಶನ ಆಯೋಜಿಸಲಾಗಿದೆ. ರಾಮ–ಲಕ್ಷ್ಮಣ, ರಾಧಾ– ಕೃಷ್ಣರ ಆದಿಯಾಗಿ ಎಲ್ಲ ಬಗೆಯ ಪೌರಾಣಿಕ ಹಾಗೂ ಐತಿಹಾಸಿಕ ಪಾತ್ರಗಳನ್ನು ಒಂದೇ ವೇದಿಕೆಯ ಮೇಲೆ ಸೃಜಿಸಲಾಗಿದೆ.

ಇಡೀ ಪ್ರದರ್ಶನಕ್ಕೆ ಮುಕುಟವಿದ್ದಂತೆ ಶಿವನ ಮೂರ್ತಿಯನ್ನು ಮೇಲೆ ಕೂರಿಸಲಾಗಿದೆ. ವೇದಿಕೆಯ ನಂತರದಲ್ಲಿ ಪಟ್ಟದ ಗೊಂಬೆಗಳು ವಿರಾಜಮಾನವಾಗಿವೆ, ಅದಕ್ಕೂ ತುಸು ಕೆಳಗೆ ಮೈಸೂರು ಅರಮನೆ, ಚಾಮುಂಡಿಬೆಟ್ಟದ ಮಾದರಿ ಗಮನ ಸೆಳೆಯುತ್ತಿದೆ. ಗಣೇಶ–ಸುಬ್ರಮಣ್ಯ, ಆದಿಲಕ್ಷ್ಮಿನಾರಾಯಣ ಮೊದಲಾದ ಗೊಂಬೆಗಳನ್ನು ಇಡಲಾಗಿದೆ. ಪಟ್ಟಾಭಿಷಕ್ತನಾದ ಶ್ರೀರಾಮ, ಆತನ ಮಡದಿ ಸೀತೆ, ರಾಮಲಕ್ಷ್ಮಣರ ಮೂರ್ತಿಗಳು ಒಂದೆಡೆ ಇದ್ದು, ವಿಷ್ಣುವಿನ ಒಂಭತ್ತು ಅವತಾರಗಳನ್ನು ಬಿಂಬಿಸುವ ಗೊಂಬೆಗಳನ್ನು ಇಡಲಾಗಿದ್ದು ಇಂತಹವುಗಳನ್ನು ಕಾಣುವುದು ಅಪರೂಪವೇ ಸರಿ ಎನ್ನುತ್ತಾರೆ ಆಯೋಜಕರು.

ಸ್ವಾತಂತ್ರ್ಯ ಹೋರಾಟಗಾರರ ನೆನಪು: ಹಿರಿಯ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸುವ ಗೊಂಬೆಗಳೂ ಪ್ರದರ್ಶನದಲ್ಲಿವೆ. ಗಾಂಧಿ, ನೆಹರೂ ಸಹಿತ ಮಹಾತ್ಮರ ಪ್ರತಿಕೃತಿಗಳನ್ನು ಇಡಲಾಗಿದೆ. ಸಣ್ಣ–ಸಣ್ಣ ಗೊಂಬೆಗಳೂ ಸಾಕಷ್ಟು ಸಂಖ್ಯೆಯಲ್ಲಿ ಇವೆ. ಆದಿವಾಸಿಗಳ ಸಂಸ್ಕೃತಿಯನ್ನು ಬಿಂಬಿಸುವ ಪುಟ್ಟ ಗೊಂಬೆಗಳು ವಿಶೇಷ ಆಕರ್ಷಣೆಯಾಗಿವೆ. ಮಹಾರಾಷ್ಟ್ರದ ಶೈಲಿಯ ನರ್ತಿಸುವ ಗೊಂಬೆಗಳು, ನರ್ತನ, ಮದುವೆ ಮೆರವಣಿಗೆ ಮೊದಲಾದ ಸಮಾರಂಭಗಳನ್ನು ಜ್ಞಾಪಿಸುವಂತೆ ಇವೆ.

ಎರಡು ದಶಕದ ಪ್ರಯತ್ನ: ಜಾನಪದ ಲೋಕವು 1994ರಲ್ಲಿ ಉದ್ಘಾಟನೆಗೊಂಡಿದ್ದು, 1996ರಿಂದ ಇಲ್ಲಿ ನವರಾತ್ರಿ ಸಂದರ್ಭದಲ್ಲಿ ಗೊಂಬೆಗಳ ಪ್ರದರ್ಶನವನ್ನು ಆಯೋಜಿಸುತ್ತಾ ಬರಲಾಗಿದೆ.

‘ಜಾನಪದ ಲೋಕದ ನಿರ್ಮಾರ್ತೃ ಎಚ್.ಎಲ್‌. ನಾಗೇಗೌಡರ ಒತ್ತಾಸೆಯಿಂದ ಈ ಪ್ರದರ್ಶನವು ಆರಂಭಗೊಂಡಿತು. ಆರಂಭದಲ್ಲಿ 15–20 ಗೊಂಬೆಗಳನ್ನು ಕೂರಿಸುತ್ತಿದ್ದೆವು. ಈಗ 700–800 ಗೊಂಬೆಗಳನ್ನು ಒಂದೇ ವೇದಿಕೆಯಲ್ಲಿ ಕಾಣಬಹುದಾಗಿದೆ’ ಎನ್ನುತ್ತಾರೆ ಈ ಪ್ರದರ್ಶನದ ಉಸ್ತುವಾರಿ ಹೊತ್ತಿರುವ ರಂಗ ನಿರ್ದೇಶಕ ಬೈರ್ನಳ್ಳಿ ಶಿವರಾಮು.

ದಾನಿಗಳೇ ಕೊಟ್ಟದ್ದು: ಪ್ರದರ್ಶನಕ್ಕೆ ಇಡಲಾಗಿರುವ ಗೊಂಬೆಗಳ ಪೈಕಿ ಹೆಚ್ಚಿನವುಗಳನ್ನು ದಾನಿಗಳು ಕೊಡುಗೆಯಾಗಿ ನೀಡಿರುವುದು ವಿಶೇಷ. ಸುಮಾರು 250 ವರ್ಷಗಳಷ್ಟು ಹಳೆಯದಾದ ಕೆಲವು ಗೊಂಬೆಗಳು ಇಲ್ಲಿವೆ.

ನೀತಿಕಥೆಗಳ ಪಾಠ: ಗೊಂಬೆಗಳ ಪ್ರದರ್ಶನವು ಮಕ್ಕಳಿಗೆ ಆಕರ್ಷಣೆ ಆಗುವ ಜೊತೆಗೆ ಅವರಿಗೆ ನೀತಿ ಕಥೆಗಳನ್ನು ಹೇಳುವ ಉದ್ದೇಶವನ್ನೂ ಒಳಗೊಂಡಿದೆ. ಪೋಷಕರು ತಮ್ಮ ಮಕ್ಕಳಿಗೆ ಕಥೆಗಳನ್ನು ಹೇಳುವುದಕ್ಕೆ ಇಲ್ಲಿನ ರೂಪಕಗಳನ್ನು ಬಳಸಿಕೊಳ್ಳಬಹುದಾಗಿದೆ ಎನ್ನುತ್ತಾರೆ ಆಯೋಜಕರು.

ಚಾಲನೆ
ಜಾನಪದ ಲೋಕದಲ್ಲಿ ಗೊಂಬೆಗಳ ಪ್ರದರ್ಶನಕ್ಕೆ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಟಿ. ತಿಮ್ಮೇಗೌಡ ಗುರುವಾರ ಚಾಲನೆ ನೀಡಿದರು. ಆಡಳಿತಾಧಿಕಾರಿ ಕುರುವ ಬಸವರಾಜು, ರಂಗ ನಿರ್ದೇಶಕ ಬೈರ್ನಳ್ಳಿ ಶಿವರಾಮು, ಜಾನಪದ ಲೋಕದ ಸಿಬ್ಬಂದಿ ಜೊತೆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT