ಶಿವಮೊಗ್ಗ: ಅಕ್ಕಪಕ್ಕದಲ್ಲಿ ಹೆಣ್ಣಾನೆಗಳ ಸಾಂಗತ್ಯ ಇಲ್ಲದೇ ಗಂಡಾನೆ ಸಾಗರನ ಹೆಗಲ ಮೇಲೆ ಅಂಬಾರಿ ಹೊರಿಸುವ ರಿಸ್ಕ್ ತೆಗೆದುಕೊಳ್ಳಲು ಅರಣ್ಯ ಇಲಾಖೆ ಹಿಂದೇಟು ಹಾಕುತ್ತಿದೆ. ಹೀಗಾಗಿ ಈ ಬಾರಿ ಶಿವಮೊಗ್ಗದ ದಸರಾ ಮೆರವಣಿಗೆಯಲ್ಲಿ ಸಾಗರ ಅಂಬಾರಿ ಹೊರುವುದು ಅನುಮಾನ.
ಪ್ರತೀ ವರ್ಷ ಶಿವಮೊಗ್ಗ ದಸರಾದಲ್ಲಿ ಅಂಬಾರಿ ಹೊರುತ್ತಿದ್ದ ಸಾಗರನ ಅಕ್ಕಪಕ್ಕದಲ್ಲಿ ಹೆಣ್ಣಾನೆಗಳಾದ ನೇತ್ರಾವತಿ, ಭಾನುಮತಿ ಇಲ್ಲವೇ ಕುಂತಿ ಹೆಜ್ಜೆ ಹಾಕುತ್ತಿದ್ದವು. ಆದರೆ, ಈಗ ಆ ಮೂರು ಆನೆಗಳ ಹೆರಿಗೆ ಆಗಿದ್ದು, ಮರಿ ಹಾಕಿ ಬಾಣಂತನದ ಸುಖದಲ್ಲಿವೆ. ಅಂತೆಯೇ ದಸರಾ ಮೆರವಣಿಗೆಗೆ ಅವುಗಳನ್ನು ಕಳುಹಿಸಲು ಅರಣ್ಯ ಇಲಾಖೆ ಅನುಮತಿ ಕೊಟ್ಟಿಲ್ಲ. ಇದರಿಂದ ವಿಜಯ ದಶಮಿ ಮೆರವಣಿಗೆ ಹತ್ತಿರ ಬಂದರೂ ಸಂಪ್ರದಾಯದಂತೆ ಆನೆಗಳಿಗೆ ಅಂಬಾರಿ ಹೊರುವ ತಾಲೀಮು ಆರಂಭವಾಗಿಲ್ಲ.
ಕಳೆದ ವರ್ಷದಂತೆ ಈ ಬಾರಿಯ ದಸರಾ ಮೆರವಣಿಗೆಯಲ್ಲೂ ನಾಡ ದೇವತೆ ಚಾಮುಂಡೇಶ್ವರಿ ಪುತ್ಥಳಿಯನ್ನು ವಾಹನದಲ್ಲಿಯೇ ಕೊಂಡೊಯ್ಯಬೇಕಿದೆ ಎಂದು ಮೂಲಗಳು ಹೇಳುತ್ತವೆ.
ರಿಸ್ಕ್ ತೆಗೆದುಕೊಳ್ಳುವುದು ಕಷ್ಟ:
ಮೆರವಣಿಗೆಯಲ್ಲಿ 750 ಕೆ.ಜಿಯ ಬೆಳ್ಳಿಯ ಮಂಟಪ ಸೇರಿದಂತೆ ಸುಮಾರು 900 ಕೆ.ಜಿ ತೂಕದ ಅಂಬಾರಿ ಹೊತ್ತು ಸಾಗರ ಸಾಗುತ್ತಾನೆ. ಆಗ ಅವನ ಅಕ್ಕಪಕ್ಕದಲ್ಲಿ ಹೆಣ್ಣಾನೆಗಳು ಹೆಜ್ಜೆ ಹಾಕಿ ಭಾವನಾತ್ಮಕ ಬೆಂಬಲ ನೀಡಬೇಕಾಗುತ್ತದೆ. ಇಲ್ಲದಿದ್ದರೆ ಅಂಬಾರಿ ಹೊತ್ತ ಸಲಗ ಮಾವುತರ ಮಾತು ಕೇಳುವುದಿಲ್ಲ. ನಿಭಾಯಿಸುವುದು ಕಷ್ಟ. ಅದು ಮೆರವಣಿಗೆಯಲ್ಲಿ ಜನಸಂದಣಿಯ ನಡುವೆ ಹೆಜ್ಜೆ ಹಾಕಬೇಕಿದೆ. ಹೆಣ್ಣಾನೆಗಳ ನೆರವು ಇಲ್ಲದೇ ಸಾಗರನಿಗೆ ಭಾರ ಹೊರಿಸುವ ರಿಸ್ಕ್ ತೆಗೆದುಕೊಳ್ಳಲು ಇಲಾಖೆ ಸಿದ್ಧವಿಲ್ಲ ಎಂದು ಅರಣ್ಯಾಧಿಕಾರಿಯೊಬ್ಬರು ಹೇಳುತ್ತಾರೆ.
ಮೆರವಣಿಗೆಯಲ್ಲಿ ಏನಾದರೂ ಹೆಚ್ಚು ಕಮ್ಮಿ ಆದರೆ ಕೊನೆಗೆ ನಮ್ಮನ್ನೇ (ಅರಣ್ಯ ಇಲಾಖೆ) ದೂರಲಾಗುತ್ತದೆ. ಅದರ ಬದಲಿಗೆ ಈ ಬಾರಿಯೂ ವಾಹನದಲ್ಲಿಯೇ ಚಾಮುಂಡೇಶ್ವರಿ ಪುತ್ಥಳಿ ಮೆರವಣಿಗೆ ಮಾಡಬಹುದು. ಭಾರ ಹೊರದೇ ಮೆರವಣಿಗೆಯಲ್ಲಿ ಹೆಜ್ಜೆ ಹಾಕಲು ಸಾಗರನ ಜೊತೆ ಇನ್ನೂ ಎರಡು ಗಂಡಾನೆಗಳನ್ನು ಕಳುಹಿಸಿಕೊಡಬಹುದು ಎನ್ನುತ್ತಾರೆ.
ತಾಲೀಮು ಆರಂಭವಾಗಿಲ್ಲ:
ಪ್ರತೀ ವರ್ಷ ಗಣೇಶೋತ್ಸವದ ಹೊತ್ತಿಗೆ ದಸರಾ ಮೆರವಣಿಗೆಗೆ ಆನೆಗಳ ತಾಲೀಮು ಆರಂಭವಾಗುತ್ತಿತ್ತು. ನಿತ್ಯ ಬೆಳಿಗ್ಗೆ ಸಕ್ರೆಬೈಲು ಆನೆ ಕ್ಯಾಂಪ್‌ನಿಂದ ಗಾಜನೂರು ಜಲಾಶಯದವರೆಗೆ ಸಾಗರ ಸೇರಿದಂತೆ ಅಂಬಾರಿ ಹೊರಲು ಶಕ್ತವಾಗಿರುವ ಆನೆಗಳ ಹೆಗಲ ಮೇಲೆ ಮರಳಿನ ಚೀಲ ಹಾಕಿ ತಾಲೀಮು ಮಾಡಿಸಲಾಗುತ್ತಿತ್ತು. ಈ ಬಾರಿ ಆ ಪ್ರಕ್ರಿಯೆ ಆರಂಭವಾಗಿಲ್ಲ. ಮೆರವಣಿಗೆ ಆರಂಭವಾಗುವ ಒಂದು ವಾರದ ಮೊದಲು ಶಿವಮೊಗ್ಗಕ್ಕೆ ಕರೆತಂದು ಅಂಬಾರಿ ಹೊತ್ತು ಸಾಗುವ ಮಾರ್ಗದಲ್ಲಿ ಆನೆಗಳಿಂದ ತಾಲೀಮು ನಡೆಯುತ್ತಿತ್ತು.
ವರದಿ ಕೇಳಿದ ಪಿಸಿಸಿಎಫ್:
ದಸರಾ ಮೆರವಣಿಗೆಗೆ ಆನೆಗಳನ್ನು ಕಳುಹಿಸಿಕೊಡಲು ಸಕ್ರೆಬೈಲು ಆನೆ ಕ್ಯಾಂಪ್‌ನ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಶಿವಮೊಗ್ಗದ ಕಾಂಗ್ರೆಸ್ ಮುಖಂಡ ಎಚ್.ಸಿ.ಯೋಗೀಶ್ ವಾರದ ಹಿಂದೆ ಅರಣ್ಯ ಸಚಿವ ಈಶ್ವರ ಖಂಡ್ರೆ ಹಾಗೂ ಪ್ರಧಾನ ಮುಖ್ಯ ಅರಣ್ಯಾಧಿಕಾರಿಗೆ (ಪಿಸಿಸಿಎಫ್) ಮನವಿ ಸಲ್ಲಿಸಿದ್ದಾರೆ.
‘ಅಂಬಾರಿ ಹೊರಲು ಆನೆ ಕಳುಹಿಸಲು ಸಾಧ್ಯವಾಗಲಿದೆಯೇ?’ ಎಂದು ಪಿಸಿಸಿಎಫ್ ಅವರು ಡಿಸಿಎಫ್ ಮೂಲಕ ಸಕ್ರೆಬೈಲು ವಲಯ ಅರಣ್ಯಾಧಿಕಾರಿಗೆ ವರದಿ ಕೇಳಿದ್ದಾರೆ ಎಂದು ತಿಳಿದುಬಂದಿದೆ.
ದಸರಾ ಮೆರವಣಿಗೆಯಲ್ಲಿ ಅಂಬಾರಿ ಹೊತ್ತು ಸಾಗಲು ಆನೆಗಳನ್ನು ಕಳುಹಿಸಿಕೊಡುವಂತೆ ಅರಣ್ಯ ಇಲಾಖೆಗೆ ಪತ್ರ ಬರೆದಿದ್ದೇವೆ. ಇನ್ನೂ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.ಕವಿತಾ ಯೋಗಪ್ಪನವರ ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತೆ
ಈ ಬಾರಿ ದಸರಾ ಮೆರವಣಿಗೆಗೆ ಹೆಣ್ಣಾನೆಗಳು ಲಭ್ಯವಿಲ್ಲ. ಸಾಗರನಿಗೆ ಅಂಬಾರಿ ಹೊರಿಸಲು ಸಾಧ್ಯವೇ ಎಂಬುದರ ಬಗ್ಗೆ ಮಂಗಳವಾರ ಸಭೆ ನಡೆಸಿ ಚರ್ಚಿಸಿ ತೀರ್ಮಾನಿಸಲಾಗುವುದುಪ್ರಸನ್ನಕೃಷ್ಣ ಪಟಗಾರ ಶಿವಮೊಗ್ಗ ವನ್ಯಜೀವಿ ವಿಭಾಗದ ಡಿಸಿಎಫ್
ಸಾಗರ ಕಳೆದ ವರ್ಷವೂ ಅಂಬಾರಿ ಹೊತ್ತಿರಲಿಲ್ಲ!
ಕಳೆದ ವರ್ಷ ದಸರಾ ಮೆರವಣಿಗೆಯಲ್ಲಿ ಆನೆಯ ಮೇಲೆ ಅಂಬಾರಿ ಮೆರವಣಿಗೆ ನಡೆದಿರಲಿಲ್ಲ. ಸಕ್ರೆಬೈಲು ಕ್ಯಾಂಪ್‌ನಲ್ಲಿರುವ ಮೂರು ಹೆಣ್ಣಾನೆಗಳ ಪೈಕಿ ಸಾಗರನ ಜೊತೆ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಆಗ ಶಿವಮೊಗ್ಗಕ್ಕೆ ಬಂದಿದ್ದ ಹೆಣ್ಣಾನೆ ನೇತ್ರಾವತಿ ಅಲ್ಲಿಯೇ ಮರಿ ಹಾಕಿತ್ತು. ಹೀಗಾಗಿ ಕೊನೇ ಕ್ಷಣದಲ್ಲಿ ಮೆರವಣಿಗೆ ರದ್ದುಗೊಂಡಿತ್ತು. ಆಗ ನೇತ್ರಾವತಿ ಜೊತೆ ಬಂದಿದ್ದ ಭಾನುಮತಿ ಸಹ ಈಗ ಮರಿಗೆ ಜನ್ಮ ನೀಡಿದ್ದಾಳೆ. ಕ್ಯಾಂಪ್‌ನ ಮತ್ತೊಂದು ಹೆಣ್ಣಾನೆ ಕುಂತಿಗೂ ಈಗ ತಾಯ್ತನದ ಸಂಭ್ರಮ. ಹೀಗಾಗಿ ಸಾಗರನಿಗೆ ಮೆರವಣಿಗೆಯಲ್ಲಿ ಗೆಳತಿಯರ ಸಾಂಗತ್ಯವಿಲ್ಲ. ಕಳೆದ ವರ್ಷದ ಸಮಸ್ಯೆ ಈ ಬಾರಿಯೂ ಪುನರಾವರ್ತನೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.