ಮೈಸೂರು: ಇಲ್ಲಿ ಅಕ್ಟೋಬರ್ 3ರಿಂದ 12ರವರೆಗೆ ನಡೆಯಲಿರುವ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಕಾರ್ಯಕ್ರಮಗಳಲ್ಲಿ ಸಂವಿಧಾನದ ಮಹತ್ವ ಮತ್ತು ಪ್ರಜಾಪ್ರಭುತ್ವದ ಆಶಯವು ಬಿಂಬಿತಗೊಳ್ಳಲಿದೆ. ರಾಜ್ಯ ಸರ್ಕಾರದ ‘ಪಂಚ ಗ್ಯಾರಂಟಿ’ ಯೋಜನೆಗಳ ಪ್ರಚಾರಕ್ಕೂ ಉತ್ಸವವು ವೇದಿಕೆಯಾಗಲಿದೆ.
ಉತ್ಸವದ ಸಲುವಾಗಿ ರಚಿಸಿರುವ 19 ಉಪ ಸಮಿತಿಗಳು ಆಯೋಜಿಸುವ ಕಾರ್ಯಕ್ರಮಗಳಲ್ಲಿ ಸಂವಿಧಾನವನ್ನು ಪ್ರಮುಖ ವಿಷಯವನ್ನಾಗಿರಿಸಿಕೊಂಡಿರುವುದು ವಿಶೇಷ.
ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಇದೇ 25ರಿಂದ ಆರಂಭಗೊಂಡಿರುವ ‘ಯುವ ಸಂಭ್ರಮ’ದಲ್ಲಿ ಕಾಲೇಜುಗಳ ವಿದ್ಯಾರ್ಥಿ–ವಿದ್ಯಾರ್ಥಿನಿಯರ ತಂಡಗಳು ಸಂವಿಧಾನ, ಪ್ರಜಾಪ್ರಭುತ್ವ, ಸಮಾನತೆ, ವಿವಿಧತೆಯಲ್ಲಿ ಏಕತೆಯನ್ನು ಬಿಂಬಿಸುವ ನೃತ್ಯ ಪ್ರದರ್ಶನಗಳನ್ನು ನೀಡುತ್ತಿವೆ. ‘ಅನ್ನಭಾಗ್ಯ’, ‘ಶಕ್ತಿ’ ಸೇರಿದಂತೆ ಗ್ಯಾರಂಟಿ ಯೋಜನೆಗಳ ಅನುಕೂಲಗಳನ್ನು ಕಟ್ಟಿಕೊಡುವ ನೃತ್ಯವನ್ನು ವಾತ್ಸಲ್ಯ ಶಿಕ್ಷಣ ಕಾಲೇಜಿನ ವಿದ್ಯಾರ್ಥಿಗಳು ಪ್ರಸ್ತುತಪಡಿದರು. ವಿದ್ಯಾರ್ಥಿಯೊಬ್ಬ ಸಿದ್ದರಾಮಯ್ಯ ಅವರನ್ನು ಹೋಲುವಂತೆ ವೇಷಭೂಷಣದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಸೆ.30ರವರೆಗೆ ನಡೆಯಲಿರುವ ‘ಯುವ ಸಂಭ್ರಮ’ದಲ್ಲಿ ನಿತ್ಯವೂ ಒಂದೆರಡು ನೃತ್ಯಗಳನ್ನು ಸಂವಿಧಾನದ ಆಶಯ ಸಾರಿ ಹೇಳುವ ‘ಥೀಮ್’ನಲ್ಲೇ ಸಿದ್ಧಪಡಿಸಲಾಗಿದೆ.
ಡ್ರೋನ್‌ನಲ್ಲೂ:
ದೀಪಾಲಂಕಾರದಲ್ಲೂ ‘ಸಂವಿಧಾನದ ಪ್ರಸ್ತಾವನೆ’ಯ ರೂಪ ಹೊಳೆಯಲಿದೆ. ದಸರೆಯಲ್ಲಿ ಇದೇ ಮೊದಲ ಬಾರಿಗೆ ₹3.50 ಕೋಟಿ ವೆಚ್ಚದಲ್ಲಿ ಪಂಜಿನ ಕವಾಯತು ಮೈದಾನದಲ್ಲಿ ಡ್ರೋನ್ ಶೋ ನಡೆಯಲಿದ್ದು, ಗ್ಯಾರಂಟಿ ಯೋಜನೆಗಳ ಪ್ರಚಾರಕ್ಕೆ ನಿರ್ಧರಿಸಲಾಗಿದೆ.
ನಗರದ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಸಂಚರಿಸಲಿರುವ ವರ್ಣರಂಜಿತ ದೀಪಾಲಂಕಾರದ ‘ವಿದ್ಯುತ್ ರಥ’ವು, 200 ಯುನಿಟ್‌ಗಳವರೆಗೆ ಉಚಿತ ವಿದ್ಯುತ್ ಪೂರೈಕೆ ಸೇರಿದಂತೆ ‘ಗ್ಯಾರಂಟಿ’ಗಳ ಮೇಲೆ ‘ಬೆಳಕು’ ಚೆಲ್ಲಲಿದೆ. ನಗರದ ವಿವಿಧೆಡೆ ಸ್ಥಾಪಿಸಲಾಗುವ 65 ವಿದ್ಯುದ್ದೀಪದ ಪ್ರತಿಕೃತಿಗಳಲ್ಲೂ, ಭಾರತದಲ್ಲಿ ಪ್ರಜಾಪ್ರಭುತ್ವ ಸಾಗಿಬಂದ ಹಾದಿ, ಸಂವಿಧಾನದ ಪ್ರಸ್ತಾವನೆಯನ್ನು ಬಿಂಬಿಸಲಾಗುವುದು ಎಂದು ಸೆಸ್ಕ್ ತಿಳಿಸಿದೆ.
ಪ್ರಜಾಪ್ರಭುತ್ವಕ್ಕಾಗಿ ಯೋಗ;
ಅಕ್ಟೋಬರ್ 7ರಂದು ಅಂಬಾವಿಲಾಸ ಅರಮನೆ ಆವರಣದಲ್ಲಿ ‘ಪ್ರಜಾಪ್ರಭುತ್ವಕ್ಕಾಗಿ ಯೋಗ’ ಕಾರ್ಯಕ್ರಮವನ್ನೂ ಆಯೋಜಿಸಿದ್ದು, ಸಾವಿರಾರು ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಮಾನವ ಸರಪಳಿಯ ಚಕ್ರಗಳನ್ನು ರಚಿಸಿ ಯೋಗಾಸನಗಳನ್ನು ಪ್ರದರ್ಶನಗೊಳ್ಳಲಿವೆ. ಸಂವಿಧಾನ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಸಾರುವ ಭಿತ್ತಿಚಿತ್ರ ಹಾಗೂ ಫೋಷವಾಕ್ಯಗಳನ್ನು ಯೋಗಪಟುಗಳು ರಚಿಸಲಿದ್ದಾರೆ. ಕುಪ್ಪಣ್ಣ ಉದ್ಯಾನದಲ್ಲಿ ನಡೆಯುವ ಫಲ–ಪುಷ್ಪ ಪ್ರದರ್ಶನದಲ್ಲಿ ‘ಸಂವಿಧಾನ ಪೀಠಿಕೆ’ಯು ಫಲ–ಪುಷ್ಪಗಳಲ್ಲೂ ಅರಳಲಿದೆ.
ಅರಮನೆ ಸೇರಿದಂತೆ ವಿವಿಧ ವೇದಿಕೆಗಳಲ್ಲಿ ಸಂವಿಧಾನದ ಆಶಯಗಳನ್ನು ಕಟ್ಟಿಕೊಡುವ ರೀತಿಯಲ್ಲೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ವಿನ್ಯಾಸ ಮಾಡಲಾಗಿದೆ. ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ ಮೆರವಣಿಗೆಯಲ್ಲಿ ಸಾಗಲಿರುವ ಸ್ತಬ್ಧಚಿತ್ರದಲ್ಲೂ ಸಂವಿಧಾನವನ್ನು ಪ್ರತಿಬಿಂಬಿಸಲಾಗುವುದು.
ಅ.3ರಿಂದ 12ರವರೆಗೆ ಮೈಸೂರು ದಸರಾ ಅಲ್ಲಲ್ಲಿ ಸಂವಿಧಾನದ ಪ್ರಸ್ತಾವನೆ ಪ್ರದರ್ಶನ ಫಲ–ಪುಷ್ಪದಲ್ಲೂ ಅರಳಲಿದೆ ಸಂವಿಧಾನ ಪೀಠಿಕೆ
‘ಹಿಂದಿನದ್ದೇ ಆಶಯದಲ್ಲಿ...’
‘ಮೈಸೂರು ಮಹಾರಾಜರ ಕಾಲದಲ್ಲೂ ಪ್ರಜಾಸತ್ತಾತ್ಮಕ ಆಡಳಿತವಿತ್ತು. ಅವರು ನಡೆಸುತ್ತಿದ್ದ ಉತ್ಸವವನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೂ ಮುಂದುವರಿಸುತ್ತಿದ್ದೇವೆ. ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವ ಹಾಗೂ ಸಂವಿಧಾನವನ್ನು ರಕ್ಷಿಸಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ. ಆ ಆಶಯವನ್ನೇ ಪ್ರಮುಖವಾಗಿಟ್ಟುಕೊಂಡು ನಾಡಹಬ್ಬದ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.