ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಒಳಗಿನ ಕಿವಿಗಳು...

Last Updated 10 ಅಕ್ಟೋಬರ್ 2018, 19:45 IST
ಅಕ್ಷರ ಗಾತ್ರ

ಈಗ ನಾವು ಯಾರ ಮಾತನ್ನೂ ಕೇಳುವುದಿಲ್ಲ. ಏಕೆಂದರೆ ಸುತ್ತಲೂ ಗದ್ದಲವೇ ತುಂಬಿದೆ. ಅಷ್ಟೇಕೆ, ನಮ್ಮ ಒಳಗೂ ಗದ್ದಲವೇ ತುಂಬಿದೆ. ಈ ಗದ್ದಲಕ್ಕೆ ಕಾರಣವಾದರೂ ಏನು – ಎಂದು ನಾವು ಯೋಚಿಸುವಷ್ಟು ವ್ಯವಧಾನವನ್ನು ಉಳಿಸಿಕೊಂಡಿದ್ದೇವೆಯೇ?

ಆಧುನಿಕ ಕಾಲವು ನಾಶ ಮಾಡುತ್ತಿರುವ ನಮ್ಮ ಇಂದ್ರಿಯಶಕ್ತಿಗಳ ಬಗ್ಗೆ ಕೀರ್ತಿನಾಥ ಕುರ್ತಕೋಟಿ ಅವರು ಹೇಳಿರುವ ಮಾತುಗಳು ಮನನೀಯವಾಗಿವೆ:

‘ಯಾವುದೇ ಅನುಭವ ಪೂರ್ಣವಾಗಿ ಅಸ್ವಾದ್ಯವಾಗಬೇಕಾದರೆ ಕನಿಷ್ಠ ಪಕ್ಷ ಎರಡು ಇಂದ್ರಿಯಗಳ ಸಹಕಾರವಾದರೂ ಬೇಕೆಂದು ಹೇಳುತ್ತಾರೆ. ರುಚಿ ತಿಳಿಯವದು ನಾಲಗೆಗಾದರೂ, ಖಾದ್ಯದ ಬಣ್ಣ ವಾಸನೆಗಳೂ ರುಚಿಯ ಅನುಭವವನ್ನು ಹೆಚ್ಚಿಸುತ್ತವೆ. ರತ್ನಾಕರವರ್ಣಿ ಸಂಗೀತವನ್ನು ವರ್ಣಿಸುವ ರೀತಿ ಇದಾಗಿದೆ:

ಹೊಂಗೊರಳದರೊಳು ಭರತರಾಜನ ಶಿಕ್ಷೆ

ಹೆಂಗಳತಿ ಚಲುವೆಯರು

ಸಂಗೀತ ಮೋಹಿಸುತ್ತಿದ್ದಿತು ಕೇಳ್ವರಿ

ಗಿಂಗಡಲೊಳಗೆ ಹೊಕ್ಕಂತೆ

ಕೇಳುವವರ ಕಿವಿಗಳನ್ನು ಮೋಹಿಸುವ ಸಂಗೀತಕ್ಕೂ ಹಾಡುಗಾರ್ತಿಯರ ಸೌಂದರ್ಯಕ್ಕೂ ಸಂಬಂಧವೇನು? ‘ಹೆಂಗಳತಿ ಚಲುವೆಯರು’ ಈ ವಿವರ ತಾರ್ಕಿಕವಾಗಿ ಅ‍ಪ್ರಸ್ತುತ. ಆದರೂ ಅಗತ್ಯ. ಸಂಗೀತದ ಮಾಧುರ್ಯದೊಡನೆ ಹೆಂಗಳೆಯರ ಸೌಂದರ್ಯವೂ ಕೂಡಿಕೊಂಡು ಒಂದು ವಿಶಿಷ್ಟ ಅನುಭವವನ್ನು ಹುಟ್ಟಿಸುತ್ತವೆ.

ಆದರೂ ಉಳಿದ ಇಂದ್ರಿಯಗಳೊಂದಿಗೆ ಹೋಲಿಸಿದರೆ ಶ್ರವಣೇಂದ್ರಿಯ ಸ್ವತಂತ್ರವೆಂದೇ ತೋರುತ್ತದೆ. ಸತ್ಯವನ್ನು ಗುರುತಿಸುವ ಕ್ರಿಯೆಯಲ್ಲಿ ಕಣ್ಣಿಗಿಂತ ಕಿವಿಯೇ ಹೆಚ್ಚು ಶಕ್ತಿಶಾಲಿಯದದ್ದು. ಪ್ರಾಚೀನ ಕಾಲದ ಬೇಟೆಗಾರ ಪ್ರತಿಯೊಬ್ಬ ಮನುಷ್ಯನಲ್ಲಿಯೂ ನಿಹಿತನಾಗಿರುತ್ತಾನೆ. ಶಬ್ದವೇಧಿಯಾದ ದಶರಥನನ್ನು ಅವನ ಕಿವಿ ಮೋಸಮಾಡಿತಂತೆ; ಆದರೆ ಕವಿಯಂತೆ ಕಣ್ಣೂ ಮೋಸಮಾಡಬಲ್ಲದು.

ಕಣ್ಣಿಗೆ ಎದುರಾದದ್ದು ಮಾತ್ರ ಅದರ ವಿಷಯವಾಗಬಲ್ಲದು. ಆದರೆ ಕಿವಿ ಮಾತ್ರ ದೂರದಿಂದಲೇ ತನ್ನ ವಿಷಯವನ್ನು ಗ್ರಹಿಸಬಲ್ಲದು. ಇದಕ್ಕಾಗಿ ಶ್ರವಣೇಂದ್ರಿಯ ಕೇವಲ ಚುರುಕಾಗಿದ್ದರಷ್ಟೇ ಸಾಲದು, ಅದು ಬೌದ್ಧಿಕವೂ ಆಗಿರಬೇಕು. ಕಿವಿ ತಾನು ಗ್ರಹಿಸಿದ್ದನ್ನು ಸತ್ಯವಾಗಿ ಮಾರ್ಪಡಿಸುವ ಬೌದ್ಧಿಕತೆಯನ್ನು ಪಡೆದುಕೊಂಡಿರಬೇಕು.

ನನಗೊಂದು ಸಂಶಯವೆಂದರೆ, ನಾವು ಆಧುನಿಕ ಕಾಲದಲ್ಲಿ ನಮ್ಮ ಇಂದ್ರಿಯಗಳ ಹಿಂದೆ ಇರಬಹುದಾದ ಬೌದ್ಧಿಕತೆಯನ್ನು ಕಳೆದುಕೊಳ್ಳುತ್ತಿದ್ದೇವೆ. ಇಂದಿನ ಕಾಲದಲ್ಲಿ ದೃಶ್ಯ–ಸಂಸ್ಕೃತಿಯೂ ಹೆಚ್ಚಾಗತೊಡಗಿದೆ. ಜೊತೆಗೆ ನಮ್ಮ ಶ್ರವಣಸಂಸ್ಕೃತಿ ನಿರರ್ಥಕವಾಗತೊಡಗಿದೆ. ಬುಡುಬುಡಿಕೆಯವನು ಹಾಲಕ್ಕಿಗಳ ಶಕುನವನ್ನು ಆಲಿಸುವಂತೆ ನಿಸರ್ಗದ ರಹಸ್ಯಗಳನ್ನು ನಾವು ಈಗ ಆಲಿಸುವುದಿಲ್ಲ. ಪ್ರಾಚೀನಕಾಲದ ವೈದ್ಯನಿಗೆ ಮನುಷ್ಯನ ನಾಡಿಮಿಡಿತ ಏನೇನು ಮಾಹಿತಿಯನ್ನು ಕೊಡುತ್ತಿತ್ತೋ, ಅಷ್ಟನ್ನು ಆಧುನಿಕ ಡಾಕ್ಟರ ತಿಳಿದುಕೊಳ್ಳಲಾರ.

‘ನಾಸ್ತಿ ಮೂಲಮಸೌಷಧಂ’ ಎಂದು ಆಯುರ್ವೇದದಲ್ಲಿ ಒಂದು ಮಾತಿದೆ. ಆದರೆ ಈ ಮಾತು ನಿಜವಾಗಬೇಕಾದರೆ ವೈದ್ಯನಾದವನು ಎಲ್ಲ ಗಿಡಮೂಲಿಕೆಗಳ ಪ್ರಯೋಗವನ್ನು ಬಲ್ಲವನಾಗಿರಬೇಕು. ಜ್ಯೋತಿಷಿಯಾದವನು ಗ್ರಹಗಣೀತವನ್ನು ಹೀಗೆಯೇ ಸಮಗ್ರವಾಗಿ ಬಲ್ಲವನಾಗಿರಬೇಕು. ತಿಳುವಳಿಕೆಗೆ ಮಿತಿ ಎನ್ನುವುದು ಇಲ್ಲ; ಮನುಷ್ಯನ ಬುದ್ಧಿಶಕ್ತಿ ಮಾತ್ರ ಪರಿಮಿತವಾದದ್ದು.

ಇಂದ್ರಿಯಗಮ್ಯವಾದ ತಿಳುವಳಿಕೆ ನಾವು ತಿಳಿದುಕೊಂಡಷ್ಟು ಸುಲಭವಾಗಿಲ್ಲ. ನುರಿತ ಬೇಟೆಗಾರ ಕಾಡಿನಲ್ಲಿ ಸದ್ದನ್ನು ಆಲಿಸುತ್ತ ಇಂಥ ಪ್ರಾಣಿ ಬಂದಿತೆಂದು ಸುಲಭವಾಗಿ ಹೇಳಿಬಿಡುತ್ತಾನೆ. ಆದರೆ ಇಲ್ಲಿ ಅವನು ಧ್ವನಿಯ ಮಾಧ್ಯಮದ ಮೂಲಕವಾಗಿ ಇನ್ನೊಂದು ವಸ್ತುವನ್ನು, ಅಥವಾ ಪ್ರಾಣಿಯನ್ನು ತಿಳಿದುಕೊಳ್ಳುತ್ತಾನೆ.’

ನಾವು ಶ್ರವಣಸಂಸ್ಕೃತಿಯಿಂದ ದೂರವಾಗುತ್ತಿದ್ದೇವೆ. ಇದರ ಅರ್ಥ ನಮ್ಮ ಕಿವಿಗಳು ಶ್ರವಣಶಕ್ತಿಯನ್ನು ಕಳೆದುಕೊಳ್ಳುತ್ತಿವೆ ಎಂದೋ ಅಥವಾ ನಮ್ಮ ಕಿವಿಗಳಿಗೆ ಸಂಸ್ಕೃತಿಯ ಸಂಗತಿಗಳು ಬೀಳುತ್ತಿಲ್ಲ ಎಂದೋ ಅಲ್ಲ. ನಾವು ಏನನ್ನು ಕೇಳಬೇಕಿತ್ತೋ ಅದನ್ನು ಕೇಳುತ್ತಿಲ್ಲ – ಎನ್ನುವುದು ಇಲ್ಲಿಯ ತಾತ್ಪರ್ಯ.

ಇದು ಕೇವಲ ಕಿವಿಗಳಿಗೆ ಮಾತ್ರ ಸಲ್ಲುವ ಮಾತಲ್ಲ, ನಮ್ಮ ಎಲ್ಲ ಇಂದ್ರಿಯಗಳು ಕೂಡ ಇಂದು ತಪ್ಪುದಾರಿಯನ್ನು ಹಿಡಿದಿವೆ. ಇದಕ್ಕೆ ಕಾರಣವೂ ಸ್ಪಷ್ಟ; ಒಂದು: ನಮಗೆ ನಮ್ಮ ಇಂದ್ರಿಯಗಳ ಶಕ್ತಿ ಸರಿಯಾಗಿ ತಿಳಿದಲ್ಲ; ಮತ್ತೊಂದು:ನಮ್ಮ ಇಂದ್ರಿಯಗಳ ಹಿಂದೆ ಇರಬಹುದಾದ ಬೌದ್ಧಿಕತೆಯನ್ನು ಕಳೆದುಕೊಳ್ಳುತ್ತಿದ್ದೇವೆ.

ನಗರದಲ್ಲಿ ವಾಸಿಸುತ್ತಿರುವವರಿಗಿಂತೂ ಈ ‘ಇಂದ್ರಿಯಮಾಲಿನ್ಯ’ ತುಂಬ ಸ್ಪಷ್ಟವಾಗಿ ಕಾಣಬಲ್ಲದು. ದಿನದ ಇಪ್ಪತ್ತನಾಲ್ಕು ಗಂಟೆಗಳೂ ನಾವು, ನಗರವಾಸಿಗಳು ಒಂದಲ್ಲ ಒಂದು ಶಬ್ದವನ್ನು ಕೇಳುತ್ತಲೇ ಇರುತ್ತೇವೆ. ಆದರೆ ಈ ಶಬ್ದಜಗತ್ತಿನಲ್ಲಿ ನಮಗೆ ಬೇಕಾಗಿರುವುದು ಎಷ್ಟು, ಬೇಡದಿರುವುದು ಎಷ್ಟು – ಎಂದು ಎಂದಾದರೂ ಯೋಚಿಸಿದ್ದೇವೆಯೆ? ಮಾಲಿನ್ಯ – ಎಂದು ನಾವು ಹೇಳುವುದಾದರೂ ಹೊರಗಿನ ಪರಿಸರವನ್ನು ಕುರಿತು ಆಗಿರುತ್ತದೆಯೆ ಹೊರತು ನಮ್ಮ ಅಂತರಂಗವನ್ನು ಅದು ಕೆಡಿಸುತ್ತಿದೆ ಎಂಬುದನ್ನು ತಿಳಿದುಕೊಳ್ಳುತ್ತಿದ್ದೇವೆಯೆ? ಟಿವಿ ಸದಾ ಸದ್ದನ್ನು ಮಾಡುತ್ತಲೇ ಇರುತ್ತದೆ; ಫೋನ್‌ಗಳು ರಿಂಗಣಿಸುತ್ತಿರುತ್ತವೆ; ರಸ್ತೆಯಲ್ಲಿ ವಾಹನಗಳ ಶಬ್ದ; ಘೋಷಣೆಗಳ ಅರಚಾಟ; ಭಾಷಣಗಳ ಕೂಗಾಟ – ಹೀಗೆ ಕೊನೆಯೇ ಇಲ್ಲದ ಶಬ್ದಜಾಲದಲ್ಲಿ ನಾವು ಸಿಕ್ಕುಹಾಕಿಕೊಂಡಿದ್ದೇವೆ. ಈ ಶಬ್ದಸ್ಫೋಟದಲ್ಲಿ ನಮಗೆ ದಿಟವಾಗಿಯೂ ಬೇಕಾದುದು ಎಷ್ಟಿದ್ದೀತು? ಹಿತೋಪದೇಶದ ಶ್ಲೋಕವೊಂದು ಇಲ್ಲಿ ಉಲ್ಲೇಖಾರ್ಹ:

ಯಸ್ಯ ನಾಸ್ತಿ ಸ್ವಯಂ ಪ್ರಜ್ಞಾ ಶಾಸ್ತ್ರಂ ತಸ್ಯ ಕರೋತಿ ಕಿಂ | ಲೋಚನಾಭ್ಯಾಂ ವಿಹೀನಸ್ಯ ದರ್ಪಣಃ ಕಿಂ ಕರಿಷ್ಯತಿ ||

‘ಯಾರಿಗೆ ಸ್ವಂತ ಬುದ್ಧಿ ಇಲ್ಲವೋ ಅವನಿಗೆ ಶಾಸ್ತ್ರ ತಾನೆ ಏನು ಮಾಡೀತು? ಎರಡು ಕಣ್ಣುಗಳು ಇಲ್ಲದವನಿಗೆ ಕನ್ನಡಿ ತಾನೆ ಏನು ಮಾಡೀತು?’ ಇದು ಈ ಶ್ಲೋಕದ ತಾತ್ಪರ್ಯ.

ನಮಗೆ ಇಂದು ಹಲವು ವಿಷಯಗಳಲ್ಲಿ ಪದವಿಗಳು ಸಿಕ್ಕಿವೆ. ಆದರೆ ಜೀವನದ ಬೆಲೆಯನ್ನು ಕಲಿಸುವಂಥ ಶಿಕ್ಷಣದಿಂದ ದೂರವಾಗುತ್ತಿದ್ದೇವೆ. ಇದು ಸಿಗುವುದು ಶಾಲೆ–ಕಾಲೇಜುಗಳಲ್ಲಿ ಅಲ್ಲ; ಲೋಕವನ್ನು ತಿಳಿದುಕೊಳ್ಳುವುದರಿಂದ ನಮಗೆ ಈ ಅರಿವು ದಕ್ಕಬಲ್ಲದು. ಇದಕ್ಕಾಗಿ ನಾವು ಮಾಡಬೇಕಾಗಿರುವುದು ಏನು? ಮನೆಯಲ್ಲಿ ನಮ್ಮ ತಂದೆ–ತಾಯಿ, ಹೆಂಡತಿ–ಗಂಡ, ಮಕ್ಕಳು–ಬಂಧುಗಳ ಹೃದಯಕ್ಕೆ ಕಿವಿಯಾಗಬೇಕು; ನಮ್ಮ ಸ್ನೇಹಿತರು, ಗುರುಗಳು, ಹಿರಿಯರ ಹೃದಯಕ್ಕೆ ಕಿವಿಯಾಗಬೇಕು. ನಾವು ಹೊರಗಿನ ಕಣ್ಣು–ಕಿವಿಗಳನ್ನು ಮಾತ್ರವೇ ತೆರೆದಿಟ್ಟುಕೊಂಡರೆ ಪ್ರಯೋಜನವಿಲ್ಲ; ನಮ್ಮ ಒಳಗಿನ ಕಿವಿ–ಕಣ್ಣುಗಳನ್ನು ಕೂಡ ಮುಕ್ತವಾಗಿರಿಸಿಕೊಂಡಿರಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT