ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ | ಹುಟ್ಟುಗುಣ ಸುಟ್ಟರೂ ಹೋಗದು

Last Updated 12 ಜೂನ್ 2020, 19:30 IST
ಅಕ್ಷರ ಗಾತ್ರ

ಯಶ್ಚ ನಿಂಬಂ ಪರಶುನಾ ಯಶ್ಚೈನಂ ಮಧುಸರ್ಪಿಷಾ ।
ಯಶ್ಚೈನಂ ಗಂಧಮಾಲ್ಯಾದ್ಯೈಃ ಸರ್ವತ್ರ ಕಟುರೇವ ಸಃ ।।

ಇದರ ತಾತ್ಪರ್ಯ ಹೀಗೆ:

‘ಬೇವಿನ ಗಿಡವನ್ನು ಒಬ್ಬ ಕೊಡಲಿಯಿಂದ ಕಡಿಯಲು ಸಿದ್ಧನಾಗಿದ್ದಾನೆ, ಇನ್ನೊಬ್ಬ ನಿತ್ಯವೂ ಅದಕ್ಕೆ ಜೇನು–ತುಪ್ಪಗಳನ್ನು ಎರೆಯುತ್ತಿದ್ದಾನೆ, ಮತ್ತೊಬ್ಬ ಗಂಧದ ಹಾರದಿಂದ ಅದಕ್ಕೆ ಪೂಜೆ ಸಲ್ಲಿಸಲು ಸಿದ್ಧನಿದ್ದಾನೆ. ಇವರೆಲ್ಲರಿಗೂ ಆ ಬೇವಿನ ಗಿಡ ಒಂದೊಂದು ರುಚಿಯನ್ನು ಒದಗಿಸುತ್ತದೆಯೆ? ಎಲ್ಲರಿಗೂ ಸಮಾನವಾಗಿ ದಕ್ಕುವುದು ಕಹಿ ತಾನೆ?

‘ಹುಟ್ಟುಗುಣ ಸುಟ್ಟರೂ ಹೋಗದು’ಎಂಬ ಗಾದೆಯನ್ನು ಈ ಸುಭಾಷಿತ ನೆನಪಿಗೆ ತರುತ್ತಿದೆ.

ಇಲ್ಲಿ ಬೇವಿನ ಗಿಡದ ಕಹಿಯನ್ನು ದುಷ್ಟನೊಂದಿಗೆ ಸಮೀಕರಣ ಮಾಡಲಾಗಿದೆ. ದುಷ್ಟ, ಅವನು ಎಲ್ಲಿದ್ದರೂ ದುಷ್ಟನೇ!

ಈ ಸುಭಾಷಿತದ ಜಾಡಿನಲ್ಲೇ ಕ್ರಮಿಸಿ ಪ್ರಸ್ತುತ ಕಾಲದ ವಿದ್ಯಮಾನವನ್ನು ವಿಶ್ಲೇಷಿಸೋಣ.

ಒಬ್ಬ ರಾಜಕಾರಣಿ ಇದ್ದಾನೆ; ಅವನು ಅಂಥಿಂಥ ರಾಜಕಾರಣಿ ಅಲ್ಲ, ದುಷ್ಟ ರಾಜಕಾರಣಿ, ಭ್ರಷ್ಟ ರಾಜಕಾರಣಿ. ಈ ’ಪುಣ್ಯಾತ್ಮ‘ ನೆನ್ನೆಯವರೆಗೂ ಯಾವುದೋ ಒಂದು ಪಕ್ಷದಲ್ಲಿದ್ದ; ಇಂದು ಅದನ್ನು ತೊರೆದು ಇನ್ನೊಂದು ಪಕ್ಷವನ್ನು ಸೇರಿದ್ದಾನೆ. ಹೀಗೆ ಅವನು ಪಕ್ಷಾಂತರವನ್ನು ಮಾಡಿದ್ದರಿಂದ, ರಾತ್ರೋರಾತ್ರಿ ಅವನಲ್ಲಿ ಸದ್ಗುಣಗಳ ಹೊಳೆಯೇ ತುಂಬಿಕೊಂಡು ಅವನು ಈಗ ಬದಲಾಗಿದ್ದಾನೆಯೆ? ಆಗಬಾರದು ಎಂದೇನಿಲ್ಲ; ಆದರೆ ಹಾಗೆ ಆಗುವ ಸಾಧ್ಯತೆ ತುಂಬ ತುಂಬ ಕಡಿಮೆ ಎನ್ನುತ್ತಿದೆ ಸುಭಾಷಿತ. ಏಕೆಂದರೆ ಭ್ರಷ್ಟಾಚಾರ ಎನ್ನುವುದು ಅವನ ಹುಟ್ಟುಗುಣ; ಅದು ಅವನೊಂದಿಗೇ ಬಂದಿರುವ ಕವಚ. ಹೀಗಾಗಿ ಅವನು ಎಲ್ಲಿದ್ದರೂ ಅದು ಅವನೊಂದಿಗೆ ಇದ್ದೇ ಇರುತ್ತದೆ. ಆದರೆ ಅವನು ಯಾವ ಪಕ್ಷದಲ್ಲಿರುತ್ತಾನೋ, ಆ ಪಕ್ಷದ ಕಾರ್ಯಕರ್ತರ ಪಾಲಿಗೆ ಮಾತ್ರ ಅವನು ದೇವತಾಮನುಷ್ಯ! ಆದರೆ ಅವನು ಪಕ್ಷ ಬದಲಿಸಿದ ಕೂಡಲೇ ಏನೂ ಬದಲಾವಣೆಯೆ ಆಗದೆ? ಆಗುತ್ತದೆ; ಆದರೆ ಅದು ಅವನಲ್ಲಿ ಅಲ್ಲ, ಆಯಾ ಪಕ್ಷದ ಕಾರ್ಯಕರ್ತರಲ್ಲಿ. ನೆನ್ನೆಯವರಿಗೂ ಅವನು ಯಾವ ಕಾರ್ಯಕರ್ತರಿಗೆ ‘ಮಹಾತ್ಮ’ಆಗಿದ್ದನೋ ಅವರಿಗೆ ಈಗ ‘ದುಷ್ಟ’; ಯಾರಿಗೆ ‘ದುಷ್ಟ’ನಾಗಿ ಕಾಣಿಸುತ್ತಿದ್ದನೋ ಅವರಿಗೆ ಈಗ ’ಮಹಾತ್ಮ‘! ಆದರೆ ಅವನು ಮಾತ್ರ ಅವನೇ!! ಏಕೆಂದರೆ ಅವನ ಸ್ವ–ಭಾವ ಅವನಲ್ಲೇ ಇರುವಂಥದ್ದು.

ಕಹಿ ಎನ್ನುವುದು ಬೇವಿನ ಸ್ವ–ಭಾವ. ಸಿಹಿಯಾದ ಬೇವು ಇರುವುದಕ್ಕೆ ಸಾಧ್ಯವೇ ಇಲ್ಲ; ಏಕೆಂದರೆ ಕಹಿ ಎಂದರೆ ಬೇವು, ಬೇವು ಎಂದರೆ ಕಹಿ. ಇದು ನಿಸರ್ಗಸಿದ್ಧ ತತ್ತ್ವ. ಕಹಿಗಳಲ್ಲಿ ತರತಮಗಳಿರಬಹುದು; ಆದರೆ ಕಬ್ಬಿನಂತೆ ಸಿಹಿಯಾಗಿರುವ ಬೇವಿರಲು ಸಾಧ್ಯವೇ ಇಲ್ಲ!

ಹಾಗಿದ್ದರೆ ಇನ್ನೊಂದು ಕೆಲಸ ಮಾಡೋಣ. ಬೇವಿನ ಗಿಡಕ್ಕೆ ದಿನವೂ ನೀರಿನ ಬದಲಿಗೆ ಜೇನುತುಪ್ಪದ ಹೊಳೆಯನ್ನೇ ಹರಿಸೋಣ. ಆಗ ಬೇವಿನ ಗಿಡ ಅದರ ಕಹಿಯನ್ನು ಕಳೆದುಕೊಂಡು ಸಿಹಿಯನ್ನು ಪಡೆದುಕೊಂಡೀತೆ? ಹೋಗಲಿ, ಶ್ರೀಗಂಧವನ್ನು ತೇದು, ಅದರಿಂದಲೇ ಬೇವಿನ ಗಿಡಕ್ಕೆ ಅಭಿಷೇಕ ಮಾಡೋಣ. ಆಗಲಾದರೂ ಅದು ತನ್ನ ಕಹಿಯನ್ನು ಕಳಚಿಕೊಂಡೀತೆ? ದಾಸರು ಕೂಡ ಇದೇ ಭಾವವನ್ನು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ:

ಬೆಲ್ಲದ ಕಟ್ಟೆಯ ಕಟ್ಟಿ ಬೇವಿನ ಬೀಜವ ಬಿತ್ತಿ
ಜೇನು ಮಳೆಗರೆದರೆ ವಿಷ ಹೋಗುವುದೇನಯ್ಯ?

ದಾಸರು ಇಲ್ಲಿ ‘ಕಹಿ‘ಯನ್ನು ನೇರವಾಗಿ ’ವಿಷ‘ದೊಂದಿಗೆ ಸಮೀಕರಿಸಿದ್ದಾರೆ; ಎಂದರೆ ಅವರ ಆಕ್ಷೇಪ ಇರುವುದು ಬೇವಿನ ಕಹಿಯಲ್ಲಿ ಅಲ್ಲ ಎನ್ನುವುದನ್ನು ಗ್ರಹಿಸಬೇಕು; ಏಕೆಂದರೆ ಬೇವು ಎನ್ನುವುದು ದುಷ್ಟಜನರಿಗೆ ಬಳಸುತ್ತಿರುವ ’ಪ್ರತಿಮೆ‘ಯಷ್ಟೆ; ’ಕಹಿ‘ಯನ್ನು ಹೇಳದೆ ಅವರು ಅದರ ಪರಿಣಾಮವನ್ನು ’ವಿಷ‘ದಲ್ಲಿ ತೋರಿಸಿರುವುದರಿಂದ ಇದು ಸ್ಪಷ್ಟವಾಗುತ್ತದೆ. ಮಾತ್ರವಲ್ಲ, ಇಲ್ಲಿ ಇನ್ನೂ ಒಂದು ಸ್ವಾರಸ್ಯವುಂಟು. ಬೇವಿನ ಕಹಿ ಹಲವು ಸಂದರ್ಭದಲ್ಲಿ ಔಷಧವಾಗಿಯೂ ಒದಗುತ್ತದೆ; ಆ ಮೂಲಕ ರೋಗವನ್ನು ಉಪಶಮನಗೊಳಿಸಿ ನಮ್ಮ ಪ್ರಾಣವನ್ನೂ ಉಳಿಸುತ್ತದೆ. ಆದರೆ ವಿಷಕ್ಕೆ ಗೊತ್ತಿರುವ ಉಪಚಾರ ಎಂದರೆ ಪ್ರಾಣವನ್ನು ಅಪಹರಿಸುವುದು ಮಾತ್ರ! ದುಷ್ಟರನ್ನು ಯಾರು ಆಶ್ರಯಿಸಿದರೂ ಅವರ ಮೇಲೆ ವಿನಾಶ ಎರಗುವುದು ಖಂಡಿತ.

ಬೇವಿನ ಕಹಿಯ ಮೂಲಕ ದುಷ್ಟರ ಕೇಡುತನವನ್ನು ಸುಭಾಷಿತದಲ್ಲಿ ಸೂಚಿಸಲಾಗಿದೆಯಲ್ಲವೆ? ಹೀಗೆ ಒಂದು ವಸ್ತುವನ್ನು ಇನ್ನೊಂದು ವಸ್ತುವಿನ ವರ್ಣನೆಗಳ ಮೂಲಕ ಪರೋಕ್ಷವಾಗಿ ಸೂಚಿಸುವ ಉಕ್ತಿವೈಚಿತ್ರ್ಯವನ್ನು ‘ಅನ್ಯೋಕ್ತಿ‘ ಎಂದು ಕಾವ್ಯಮೀಮಾಂಸಕರು ಗುರುತಿಸುತ್ತಾರೆ.

ಈ ಸುಭಾಷಿತಕಾರನು ದುಷ್ಟರ ಬಗ್ಗೆ ಹೇಳಲು ಅನ್ಯೋಕ್ತಿಯನ್ನು ಬಳಸಿರುವುದರಲ್ಲೂ ಧ್ವನಿ ಏನಾದರೂ ಇರಬಹುದೆ? ’ದುಷ್ಟ‘ ಎಂಬ ಪದದ ಉಚ್ಚಾರಣೆಯಿಂದಲೇ ದುಷ್ಟತ್ವವೂ ಹೆಗಲೇರಿಬಿಟ್ಟೀತು ಎಂಬ ಎಚ್ಚರಿಕೆ ಇರಬಹುದೆ? ಅಥವಾ ದುಷ್ಟನನ್ನು ನೇರವಾಗಿ ತಂದರೆ ಅವನು ಏನಾದರೂ ಅಪಾಯ ತಂದಾನು ಎಂಬ ಹೆದರಿಕೆ ಕಾರಣವಾಗಿರಬಹುದೆ? ಒಟ್ಟಿನಲ್ಲಿ, ’ದುಷ್ಟನನ್ನು ಕಂಡರೆ ದೂರ ಇರು‘ ಎಂಬ ಜಾಣ್ಮೆಯಂತೂ ಇಲ್ಲಿ ಎದ್ದುಕಾಣುತ್ತದೆಯೆನ್ನಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT