ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ಆಸೆಯ ದಾಸರು

Last Updated 16 ಅಕ್ಟೋಬರ್ 2020, 0:44 IST
ಅಕ್ಷರ ಗಾತ್ರ

ಇದಂ ಲಬ್ಧಮಿದಂ ನಷ್ಟಮಿದಂ ಲಪ್ಸ್ಯೇ ಪುರ್ನಧಿಯಾ ।

ಇದಂ ಚಿಂತಯತಾಮೇವ ಜೀರ್ಣಮಾಯುಃ ಶರೀರಿಣಾಮ್‌ ।।

ಇದರ ತಾತ್ಪರ್ಯ ಹೀಗೆ:

‘ಇದು ಸಿಕ್ಕಿತು, ಇದು ಕಳೆದುಹೋಯಿತು, ಇದನ್ನು ಬುದ್ಧಿಶಕ್ತಿಯಿಂದ ಮತ್ತೆ ಗಳಿಸುವೆನು – ಎಂದು ಚಿಂತಿಸುತ್ತಲೇ ಜನರ ಆಯುಸ್ಸು ಮುಗಿದುಹೋಗುತ್ತದೆ.’

ಮನುಷ್ಯನ ಆಸೆಯ ಸೆಳೆತ ಎಷ್ಟು ಎಂಬುದನ್ನು ಸುಭಾಷಿತ ಹೇಳುತ್ತಿದೆ.

ನಮ್ಮ ಜೀವನವು ಚಕ್ರದಂತೆ ಸುತ್ತುತ್ತಲೇ ಇರುತ್ತದೆ; ಒಮ್ಮೆ ಸುಖ, ಇನ್ನೊಮ್ಮೆ ದುಃಖ; ಒಮ್ಮೆ ರಾಗ, ಇನ್ನೊಮ್ಮೆ ದ್ವೇಷ; ಒಮ್ಮೆ ಲಾಭ, ಇನ್ನೊಮ್ಮೆ ನಷ್ಟ – ಹೀಗೆ ಹಗಲು–ರಾತ್ರಿಗಳಂತೆ ಸುತ್ತುತ್ತಲೇ ಇರುತ್ತದೆ.

ಸುಖ ಬಂತು ಎಂದು ನಾವು ಸುಮ್ಮನೇ ಇರುವುದಿಲ್ಲ; ಮತ್ತಷ್ಟು ಸುಖಕ್ಕಾಗಿ ಹಂಬಲಿಸುತ್ತೇವೆ. ಇರುವ ಸುಖವನ್ನೂ ಕಳೆದುಕೊಳ್ಳುತ್ತೇವೆ. ದುಃಖಕ್ಕೆ ನಾವು ಸೋಲುವುದೂ ಇಲ್ಲ. ಮತ್ತೆ ಪ್ರಯತ್ನ ಪಡುತ್ತೇವೆ; ಕಳೆದುಕೊಂಡಿರುವ ಸುಖವನ್ನು ಮರಳಿ ಪಡೆಯಲು ಹೋರಾಟ ಮಾಡುತ್ತೇವೆ. ಒಟ್ಟಿನಲ್ಲಿ ನಿರಂತರವಾಗಿ ಯಾವುದೋ ಒಂದರ ಹಿಂದೆ ಓಡುತ್ತಲೇ ಇರುತ್ತೇವೆ.

ಸುಖ–ದುಃಖ – ಎರಡೂ ಶಾಶ್ವತವಲ್ಲ; ಜೀವನದಲ್ಲಿ ಏರಿಳಿತಗಳು ಸಹಜ. ನಮಗೆ ಆಸೆಯಷ್ಟೇ ಇಲ್ಲ, ದುರಾಸೆಯೇ ನಮ್ಮಲ್ಲಿ ಪ್ರಬಲವಾಗಿರುವುದು. ನಾವು ಇರುವ ಸುಖವನ್ನು ತೃಪ್ತಿಯಿಂದಲೂ ಸಂತೋಷದಿಂದಲೂ ಅನುಭವಿಸುವುದಿಲ್ಲ; ಈಗ ಸಿಕ್ಕಿರುವುದು ಸಾಲದು, ಮತ್ತಷ್ಟು ಬೇಕು – ಎಂಬ ದುರಾಸೆಯಲ್ಲಿ ಇರುವುದನ್ನೂ ಬಿಟ್ಟು, ಇಲ್ಲದುದನ್ನು ಹುಡುಕಿಕೊಂಡುಹೋಗುತ್ತೇವೆ. ಕೊನೆಗೆ ಅದೂ ಇಲ್ಲ, ಇದೂ ಇಲ್ಲ – ಎಂಬ ಸ್ಥಿತಿಯನ್ನು ಎದುರಿಸಬೇಕಾಗುತ್ತದೆ.

ಇದನ್ನೇ ಸುಭಾಷಿತ ಹೇಳುತ್ತಿರುವುದು ಅದನ್ನು ಪಡೆಯಬೇಕು, ಇದನ್ನು ಪಡೆಯಬೇಕೆಂಬ ಹೋರಾಟದಲ್ಲಿಯೇ ನಮ್ಮ ಆಯುಸ್ಸು ಮುಗಿದುಹೋಗುತ್ತದೆ.

ಈ ನಿರಂತರ ಕದನಕ್ಕೆ ನಮ್ಮ ಮನಸ್ಸನ್ನೂ ಬುದ್ಧಿಯನ್ನೂ ಸಿದ್ಧಗೊಳಿಸುವುದೇ ಅತಿಯಾಸೆ. ಈ ಆಸೆಯ ಪಾಶವನ್ನು ಕುರಿತು ಇನ್ನೊಂಧು ಸುಭಾಷಿತ ಸೊಗಸಾಗಿ ಹೇಳಿದೆ:

ಆಶಾಯಾ ಯೇ ದಾಸಾಸ್ತೇ ದಾಸಾಃ ಸರ್ವಲೋಕಸ್ಯ ।

ಆಶಾ ಯೇಷಾಂ ದಾಸೀ ತೇಷಾಂ ದಾಸಾಯತೇ ಲೋಕಃ ।।

‘ಆಸೆಗೆ ಯಾರು ದಾಸರೋ ಅವರು ಸಕಲಲೋಕಕ್ಕೂ ದಾಸರು. ಯಾರಿಗೆ ಆಸೆಯೇ ದಾಸಿಯಾಗಿರುತ್ತದೆಯೋ ಅವರಿಗೆ ಲೋಕವೇ ದಾಸವಾಗುತ್ತದೆ.’

ನಾವು ಆಸೆಗೆ ದಾಸರಾಗಬೇಕೋ ಅಥವಾ ಆಸೆಯೇ ನಮಗೆ ದಾಸಿಯಾಗಬೇಕು – ನಿರ್ಧಾರ ಮಾಡಬೇಕಾದವರು ನಾವೇ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT