ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ಕಾಲದ ಮಹತ್ವ

Last Updated 4 ಜುಲೈ 2021, 7:33 IST
ಅಕ್ಷರ ಗಾತ್ರ

ಪ್ರತಿಕ್ಷಣಮಯಂ ಕಾಲಃ ಕ್ಷೀಯಮಾಣೋ ನ ಲಕ್ಷ್ಯತೇ ।

ಆಮಕುಂಭ ಇವಾಂಭಃಸ್ಥೋ ವಿಕೀರ್ಣೋ ನ ವಿಭಾವ್ಯತೇ ।।

ಇದರ ತಾತ್ಪರ್ಯ ಹೀಗೆ:

‘ಪ್ರತಿಕ್ಷಣದಲ್ಲಿಯೂ ಕಾಲವು ಕಳೆಯುತ್ತಿದ್ದರೂ ಗೊತ್ತಾಗುವುದಿಲ್ಲ. ಹಸಿಯಾದ ಮಡಿಕೆಯು ನೀರಿನಲ್ಲಿ ಕರಗುತ್ತಿರುತ್ತದೆ; ಆದರೆ ಅದು ಗೊತ್ತಾಗುವುದಿಲ್ಲ.’

ನಮ್ಮೆಲ್ಲರ ಸ್ಥಿತಿಯನ್ನು ಈ ಸುಭಾಷಿತ ಸೊಗಸಾಗಿ ನಿರೂಪಿಸಿದೆ.

ನಮಗೆ ಕಾಲದ ಬಗ್ಗೆ ಅರಿವಿಲ್ಲ; ಹೀಗಾಗಿಯೇ ಅದನ್ನು ನಾವು ಅಪವ್ಯಯ ಮಾಡುತ್ತಿದ್ದೇವೆ. ಕಾಲಕ್ಕೆ ನಾವು ಯಾರು ಬೆಲೆಯನ್ನು ಪಾವತಿಸುತ್ತಿಲ್ಲ; ಹೀಗಾಗಿಯೇ ಅದರ ಬೆಲೆಯೇ ನಮಗೆ ಗೊತ್ತಾಗುತ್ತಿಲ್ಲ.

ಕಾಲ ನಿರಂತರವಾಗಿ ಹರಿದುಹೋಗುತ್ತಲೇ ಇರುತ್ತದೆ. ಹೀಗೆ ಹರಿದುಹೋದ ಒಂದೇ ಒಂದು ಕ್ಷಣವನ್ನೂ ನಾವು ಹಿಂದಕ್ಕೆ ತರಲು ಆಗುವುದಿಲ್ಲ. ಕಾಲ ಹರಿದುಹೋಗುತ್ತಿದೆ ಎಂದರೆ ಅದರ ಅರ್ಥ ನಮ್ಮ ಜೀವನದ ಕ್ಷಣಗಳು ಖರ್ಚಾಗುತ್ತಿವೆ ಎಂದು. ನಾವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಬೇಕಾಬಿಟ್ಟಿಯಾಗಿ ಖರ್ಚುಮಾಡುವುದಿಲ್ಲವಷ್ಟೆ! ಹೀಗೆಯೇ ಕಾಲವನ್ನು ಕೂಡ ನಾವು ಎಚ್ಚರಿಕೆಯೆಯಿಂದ ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು. ಆದರೆ ಕಾಲವನ್ನು ನಾವು ’ಸಂಪಾದಿಸಿ‘ ಪಡೆದುಕೊಂಡಿರುವುದು ಅಲ್ಲ; ಹೀಗಾಗಿ ಅದನ್ನು ಉಪಯೋಗಿಸುವಾಗ ಎಚ್ಚರಿಕೆ ನಮಗೆ ಇರುವುದಿಲ್ಲ.

ಹಗಲು–ರಾತ್ರಿ ಒಂದಾದಮೇಲೊಂದರಂತೆ ಸುತ್ತುತ್ತಿದೆ ಎಂದರೆ ನಮ್ಮ ಆಯುಷ್ಯದಲ್ಲಿ ಒಂದೊಂದು ದಿನ ಕರಗುತ್ತಿದೆ ಎಂದೇ ಅರ್ಥ. ಆದರೆ ಈ ಸತ್ಯವನ್ನು ಗಮನಕ್ಕೇ ತಂದುಕೊಳ್ಳುವುದಿಲ್ಲ. ಅದನ್ನೇ ಸುಭಾಷಿತ ಹೇಳುತ್ತಿರುವುದು: ‘ಪ್ರತಿಕ್ಷಣದಲ್ಲಿಯೂ ಕಾಲವು ಕಳೆಯುತ್ತಿದ್ದರೂ ಗೊತ್ತಾಗುವುದಿಲ್ಲ.‘’ ಇದನ್ನು ಕಣ್ಣಿಗೆ ಕಟ್ಟುವಂತೆ ಹೇಳಲು ಅದು ಉಪಯೋಗಿಸಿಕೊಂಡಿರುವ ಹೋಲಿಕೆಯೂ ಚೆನ್ನಾಗಿದೆ: ‘ಹಸಿಯಾದ ಮಡಿಕೆಯು ನೀರಿನಲ್ಲಿ ಕರಗುತ್ತಿರುದ್ದರೂ ನಮಗೆ ಅದು ಗೊತ್ತಾಗುವುದಿಲ್ಲ.’

ಕರಗುತ್ತಿರುವ ನಮ್ಮ ಆಯುಷ್ಯದ ಒಂದೊಂದು ಕ್ಷಣದ ಬಗ್ಗೆ ನಾವು ಎಚ್ಚರದಿಂದ ಇರಬೇಕು. ಅದನ್ನು ಸಾರ್ಥಕವಾಗಿ ಉಪಯೋಗಿಸಿಕೊಳ್ಳುವುದರ ಬಗ್ಗೆ ಕಾರ್ಯಪ್ರವೃತ್ತರಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT