ಶನಿವಾರ, ಜೂನ್ 25, 2022
21 °C

ದಿನದ ಸೂಕ್ತಿ: ಆಸೆಯ ಬಲೆ

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ಯಥಾ ವ್ಯಾಲಗಲಸ್ಥೋsಪಿ ಭೇಕೋ ದಂಶಾನಪೇಕ್ಷತೇ ।

ತಥಾ ಕಾಲಾಹಿನಾ ಗ್ರಸ್ತೋ ಲೋಕೋ ಭೋಗಾನಪೇಕ್ಷತೇ ।।

ಇದರ ತಾತ್ಪರ್ಯ ಹೀಗೆ:

‘ತನ್ನನ್ನು ನುಂಗುತ್ತಿರುವ ಹಾವಿನ ಗಂಟಲಿನಲ್ಲಿ ಅರ್ಧ ಸಿಕ್ಕಿಕೊಂಡಿದ್ದರೂ ಕಪ್ಪೆಯು ಕೀಟಗಳನ್ನು ತಿನ್ನಲು ಬಯಸುತ್ತಿರುತ್ತದೆ. ಹೀಗೆಯೇ ಕಾಲ ಎಂಬ ಸರ್ಪವು ಬಂದು ಹಿಡಿದುಕೊಂಡಿದ್ದರೂ ಜನರು ಮಾತ್ರ ಸುಖಭೋಗಗಳನ್ನು ಬಯಸುತ್ತಾರೆ.’

ಆಸೆ–ಭೋಗಗಳ ಲಾಲಸೆಗಳ ತೀವ್ರತೆಯ ಬಗ್ಗೆ ಸುಭಾಷಿತ ಹೇಳುತ್ತಿದೆ.

ಭ್ರಷ್ಟರು ಭ್ರಷ್ಟಾಚಾರದಲ್ಲಿ ಯಾಕೆ ತೊಡಗುತ್ತಾರೆ? ಅತಿಯಾಸೆಯ ಮೋಹ ಅವರನ್ನು ಆವರಿಸಿಕೊಂಡಿರುತ್ತದೆ. ನಾನಿನ್ನೂ ಸಾವಿರ ವರ್ಷಗಳು ಬದುಕುತ್ತೇನೆ; ಹೀಗಾಗಿ ಹಣವನ್ನು ಸಂಪಾದಿಸಬೇಕು, ಅಧಿಕಾರವನ್ನು ಹಿಡಿಯಬೇಕು – ಹೀಗೆಂದು ಅವರು ಯೋಚಿಸುತ್ತಾರೆ.

ಎಪ್ಪತ್ತು ವರ್ಷ, ಎಂಬತ್ತು ವರ್ಷಗಳಾಗಿರುತ್ತವೆ. ಇನ್ನು ಎಷ್ಟು ಕ್ಷಣ ಬದುಕುತ್ತೇವೆ ಎಂಬ ಖಾತ್ರಿ ಇರುವುದಿಲ್ಲ. ಆದರೂ ನಿಲ್ಲದು ಹಣದ ಸಂಪಾದನೆ ಸಂಪಾದನೆ ಸಂಪಾದನೆ; ಅದೂ ಅಡ್ಡದಾರಿಯಲ್ಲಿ ಸಂಪಾದನೆ. ಹೋಗಲಿ, ಪ್ರಾಣ ಹೋದಮೇಲೆ ಜೊತೆಯಲ್ಲಿ ಏನಾದರೂ ತೆಗೆದುಕೊಂಡುಹೋಗುತ್ತಾರೆಯೋ? ಇಲ್ಲವಷ್ಟೆ! ಆದರೂ ಸಂಪತ್ತಿನ ವ್ಯಾಮೋಹ ಹೋಗುವುದಿಲ್ಲ, ಆಧಿಕಾರದ ಮದ ತೊಲಗುವುದಿಲ್ಲ. ಮುಂದಿನ ಕ್ಷಣ ಏನಾಗುತ್ತದೆ ಎಂಬುದು ಯಾರಿಗೂ ಗೊತ್ತಿರುವುದಿಲ್ಲ; ಆದರೂ ಅದು ಬೇಕು, ಇದು ಬೇಕು – ಎಂಬ ಹಾರಾಟ ಮಾತ್ರ ನಿಲ್ಲದು; ಹೋಗಲಿ, ಪಡೆದಿರುವುದರ ಬಗ್ಗೆ ತೃಪ್ತಿಯಾದರೂ ಇದೆಯೋ? ಅದೂ ಇಲ್ಲ! ಬೇಕು, ಬೇಕು, ಇನ್ನೂ ಬೇಕು!!

ಸುಭಾಷಿತ ಇಲ್ಲಿ ಕೊಟ್ಟಿರುವ ಉದಾಹರಣೆ ಕಣ್ಣಿಗೆ ಕಟ್ಟುವಂತಿದೆ.

ಕಪ್ಪೆಯೊಂದನ್ನು ಹಾವು ನುಂಗುತ್ತಿದೆ. ಆ ಕಪ್ಪೆಯ ಆಯುಸ್ಸು ಇನ್ನು ಕೆಲವೇ ಕ್ಷಣಗಳಲ್ಲಿ ಮುಗಿಯುತ್ತದೆ. ಹೀಗೆ ಅದರ ಪ್ರಾಣವೇ ಹೋಗುವಂಥ ಸಮಯದಲ್ಲೂ ಅದು ಏನು ಮಾಡುತ್ತಿದೆ? ಅಲ್ಲಿಯೇ ಹಾರಾಡುತ್ತಿರುವ ಕೀಟವನ್ನು ತಿನ್ನಲು ಬಯಸುತ್ತಿದೆ! 

ನಮ್ಮ ಭ್ರಷ್ಟ ಅಧಿಕಾರಿಗಳ ಮತ್ತು ಭ್ರಷ್ಟ ರಾಜಕಾರಣಿಗಳ ವರಸೆಯೂ ಹೀಗೆಯೇ ಇರುವುದು, ಅಲ್ಲವೆ? ಸರಿಯಾಗಿ ಒಂದು ಹೊತ್ತು ಊಟವನ್ನೂ ಮಾಡಲಾಗದಿರುವಷ್ಟು ಅನಾರೋಗ್ಯ ತುಂಬಿಕೊಂಡಿರುತ್ತದೆ. ಯಾವ ಕ್ಷಣ ಬೇಕಾದರೂ ಸಾವು ಎದುರಾಗಬಹುದು. ಅಂಥ ಸ್ಥಿತಿಯಲ್ಲಿಯೂ ಅವರ ಹಣದ ಜಪ ನಿಲ್ಲದು; ಭ್ರಷ್ಟಾಚಾರದ ಲೆಕ್ಕಾಚಾರ ನಿಲ್ಲದು; ಬೇರೊಬ್ಬರಿಗೆ ಮೋಸ ಮಾಡಬಾರದೆಂಬ ಬುದ್ಧಿ ಬರದು; ಸಾವು ಎಲ್ಲವನ್ನೂ ಕೊನೆಗೊಳಿಸುತ್ತದೆ ಎಂಬ ತಿಳಿವಳಿಕೆಯೂ ಬರದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು