ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ | ಹನುಮಂತ: ಭಕ್ತಿ ಜ್ಞಾನಗಳ ಸಂಗಮ

Last Updated 26 ಡಿಸೆಂಬರ್ 2020, 21:03 IST
ಅಕ್ಷರ ಗಾತ್ರ

ಅವಿಸ್ತರಮಸಂದಿಗ್ಧಮವಿಲಂಬಿತಮದ್ರುತಮ್‌ ।
ಉರುಃಸ್ಥಂ ಕಂಠಗಂ ವಾಕ್ಯಂ ವರ್ತತೇ ಮಧ್ಯಮೇ ಸ್ವರೇ ।।
ಸಂಸ್ಕಾರಕ್ರಮಸಂಪನ್ನಾಮದ್ರುತಾಮವಿಲಂಬಿತಾಮ್‌ ।
ಉಚ್ಚಾರಯತಿ ಕಲ್ಯಾಣೀಂ ವಾಚಂ ಹೃದಯಹಾರಿಣೀಮ್‌ ।।

ಇದರ ತಾತ್ಪರ್ಯ ಹೀಗೆ:‘(ಮಾತನ್ನು) ಅನಾವಶ್ಯಕವಾಗಿ ವಿಸ್ತರಿಸಿಲ್ಲ; ಸಂದೇಹಕ್ಕೆ ಎಡೆಯಾಗುವ ಅಸ್ಫುಟವಾದ ಉಚ್ಚಾರಣೆ ಇಲ್ಲ; ಸ್ವಲ್ಪವೂ ತಡವರಿಸಲಿಲ್ಲ; ವೇಗವಾಗಿಯೂ ಮಾತನಾಡಲಿಲ್ಲ; ಮಾತು ಉರಸ್ಥವೂ ಕಂಠಗವೂ ಆಗಿ ಮಧ್ಯಮಸ್ವರದಲ್ಲಿಯೇ ತೋರಿಕೊಂಡಿದೆ; ವಾಕ್ಯರಣಶುದ್ಧವಾಗಿಯೂ ಇದೆ; ಮಾತಿನಲ್ಲಿ ಓಟವೂ ಇಲ್ಲ, ನಿಧಾನವೂ ಇಲ್ಲ; ಮಾತಿನ ಶೈಲಿ ಮಧುರವೂ ಮನಸ್ಸನ್ನು ಸೂರೆಗೊಳ್ಳುವಂತೆಯೂ ಇದೆ.’

ಇದು ರಾಮಾಯಣದಲ್ಲಿಯ ಮಾತುಗಳು; ಹನುಮಂತನ ಮಾತುಗಾರಿಕೆಯ ಬಗ್ಗೆ ರಾಮನು ಲಕ್ಷ್ಮಣನೊಂದಿಗೆ ಹೇಳುವ ಮಾತುಗಳು.

ಇಂದು ಹನುಮಜಯಂತಿ.

ನಮ್ಮ ದೇಶದಲ್ಲಿ ಹನುಮನ ಗುಡಿಯಿಲ್ಲದ ಹಳ್ಳಿಯೇ ಇಲ್ಲ ಎನ್ನಬಹುದು. ಹನುಮ, ಆಂಜನೇಯ, ಮಾರುತಿ, ಬಜರಂಗಿ, ಹನುಮಂತ – ಹೀಗೆ ಹಲವು ಹೆಸರುಗಳಲ್ಲಿ ಅವನು ಸರ್ವವ್ಯಾಪಕ ದೇವತೆಯಾಗಿದ್ದಾನೆ. ಹನುಮನನ್ನು ನೆನಪಿಸಿಕೊಂಡ ಕೂಡಲೇ ನೆನಪಾಗುವುದು ಡಿವಿಜಿ ಅವರ ಕಗ್ಗದ ಈ ಪದ್ಯವೇ:

ಘನತತ್ತ್ವವೊಂದಕ್ಕೆ ದಿನರಾತ್ರಿ ಮನಸೋತು ।
ನೆನೆಯದಿನ್ನೊಂದನೆಲ್ಲವ ನೀಡುತದರಾ ॥
ಅನುಸಂಧಿಯಲಿ ಜೀವಭಾರವನು ಮರೆಯುವುದು ।
ಹನುಮಂತನುಪದೇಶ – ಮಂಕುತಿಮ್ಮ ॥

ಹನುಮಂತ ನಮಗೆ ಇಂದಿಗೂ, ಎಂದಿಗೂ ಏಕೆ ಪ್ರಸ್ತುತ ಎಂಬುದನ್ನು ಈ ಪದ್ಯ ಎತ್ತಿಹಿಡಿಯುತ್ತಿದೆ.

ಜೀವನದಲ್ಲಿ ಒಂದು ಮಹಾತತ್ತ್ವದಲ್ಲಿ ಅಚಲವಾಗಿ ಮನಸ್ಸನ್ನು ನಿಲ್ಲಿಸಬೇಕು; ಅದರ ಸಾಕ್ಷಾತ್ಕಾರಕ್ಕೆ ನಿರಂತರ ಪ್ರಯತ್ನಶೀಲರಾಗತಕ್ಕದ್ದು. ಇಂಥ ಕ್ರಿಯಾಶೀಲತೆಯೇ ನಮ್ಮ ಜೀವನದ ನೆಮ್ಮದಿಗೆ ಕಾರಣವಾಗುವಂಥದ್ದು. ಇದೇ ಹನುಮಂತನ ಉಪದೇಶ.

ಹನುಮಂತ ಕಂಡುಕೊಂಡ ಮಹಾತತ್ತ್ವವೇ ಶ್ರೀರಾಮ. ರಾಮ ಎಂದರೆ ಆನಂದ, ಸತ್ಯ, ಧರ್ಮ, ಋಜುಮಾರ್ಗ. ನಮ್ಮ ಜೀವನದ ಗುರಿ ಏನಾಗಿರಬೇಕೆಂಬ ಸಂದೇಶವನ್ನು ಹನುಮಂತನು ರಾಮಾಯಣದ ಕಾಲದಿಂದಲೂ ಹಾಡುತ್ತಲೇ ಇದ್ದಾನೆ. ಅವನು ಚಿರಂಜೀವಿಗಳಲ್ಲಿ ಒಬ್ಬ ಎಂಬುದು ಸಂಪ್ರದಾಯದ ಎಣಿಕೆ. ಎಂದರೆ ಅವನಿಂದ ನಿರಂತರವಾಗಿ ರಾಮಭಜನೆ ನಡೆಯುತ್ತಲೇ ಇರುತ್ತದೆ ಎಂಬುದು ಇದರ ಧ್ವನಿ; ಅಷ್ಟು ಮಾತ್ರವೇ ಅಲ್ಲ, ಎಲ್ಲೆಲ್ಲಿ ರಾಮಧ್ಯಾನ ನಡೆಯುತ್ತಿರುತ್ತದೆಯೋ ಅಲ್ಲೆಲ್ಲ ಅವನು ಕೈಮುಗಿದುಕೊಂಡು ತನ್ನ ಸ್ವಾಮಿಯಾದ ರಾಮನ ಆರಾಧನೆಯಲ್ಲಿ ನಿರತನಾಗಿರುತ್ತಾನೆ; ಆನಂದದಲ್ಲಿ ತಲ್ಲೀನನಾಗಿರುತ್ತಾನೆ.

ಹನುಮಂತನು ವಾಲ್ಮೀಕಿ ರಾಮಾಯಣದಲ್ಲಿ ಪ್ರಮುಖ ಪಾತ್ರ. ಅವನು ಮೊದಲಿಗೆ ಕಾಣಿಸಿಕೊಳ್ಳುವುದು ಕಿಷ್ಕಿಂಧಾಕಾಂಡದಲ್ಲಿ. ರಾಮಲಕ್ಷ್ಮಣರು ಸೀತೆಯನ್ನು ಹುಡುಕಿಕೊಂಡು ಕಾಡಿನಲ್ಲಿ ಅಲೆದಾಡುತ್ತಿರುವಾಗ ಹನುಮಂತನ ಭೇಟಿ ಏರ್ಪಡುತ್ತದೆ. ಹನುಮಂತ ಹುಟ್ಟಿನಿಂದ ವಾನರ. ಅವನು ತನ್ನ ನಿಜರೂಪವನ್ನು ತ್ಯಜಿಸಿ, ಭಿಕ್ಷುವಿನ ವೇಷದಲ್ಲಿ ರಾಮಲಕ್ಷ್ಮಣರಲ್ಲಿಗೆ ಬರುತ್ತಾನೆ. ಲಕ್ಷ್ಮಣನಿಗೆ ಅವನ ಬಗ್ಗೆ ಸಂಶಯ. ಆದರೆ ರಾಮನು ಮಾತ್ರ ಅವನನ್ನು ಸಂದೇಹಿಸುವುದಿಲ್ಲ. ಅದಕ್ಕೆ ಪ್ರಮುಖ ಕಾರಣ ಎಂದರೆ ಹನುಮಂತನು ಆಗ ಮಾತನಾಡಿದ ರೀತಿ. ವಾಲ್ಮೀಕಿ ಮಹರ್ಷಿಯು ಹನುಮಂತನ ವಾಕ್‌ಕೌಶಲವನ್ನು ವಿಸ್ತಾರವಾಗಿಯೂ ಸುಂದರವಾಗಿಯೂ ವರ್ಣಿಸಿದ್ದಾನೆ; ರಾಮನು ಲಕ್ಷ್ಮಣನಿಗೆ ಹೇಳುತ್ತಾನೆ:

’ಈ ಹನುಮಂತನು ಸಮಸ್ತ ವ್ಯಾಕರಣವನ್ನೂ ಚೆನ್ನಾಗಿ ಕಲಿತಿದ್ದಾನೆ. ಇಷ್ಟು ಮಾತನಾಡಿದರೂ ಇವನಿಂದ ಒಂದೇ ಒಂದು ಅಪಶಬ್ದ ಹೊರಡಲಿಲ್ಲ. ಇವನು ಮಾತನಾಡುವಾಗ ಅವನ ಮುಖ, ಕಣ್ಣು, ಹಣೆ, ಹುಬ್ಬುಗಳಲ್ಲಾಗಲೀ ಇತರ ಅಂಗಗಳಲ್ಲಾಗಲೀ ಸ್ವಲ್ಪವೂ ವಿಕಾರ ಕಾಣಲಿಲ್ಲ. ಸಂದೇಹಕ್ಕೆ ಅವಕಾಶ ಆಗುವ ರೀತಿಯಲ್ಲಿ ಅಸ್ಫುಟವಾದ ಉಚ್ಚಾರಣೆ ಇಲ್ಲ; ಸ್ವಲ್ಪವೂ ತಡವರಿಸಲಿಲ್ಲ. ಅರ್ಥವಾಗದಂತೆ ವೇಗವಾಗಿಯೂ ಮಾತನಾಡಲಿಲ್ಲ; ಮಧ್ಯಮಸ್ವರದಲ್ಲಿ ಕ್ರಮುಬದ್ಧವಾಗಿ ಮಾತನಾಡಿದ್ದಾನೆ. ಇವನ ಮಾತಿನ ಶೈಲಿಯೇ ಚೇತೋಹಾರಿಯಾದುದು. ಕತ್ತರಿಸಲು ಕತ್ತಿಯನ್ನು ಎತ್ತಿದ ಶತ್ರುವಿನ ಮನಸ್ಸನ್ನೂ ಇದು ಪ್ರಸನ್ನಗೊಳಿಸುವುದು ದಿಟ’.

ಇಂದು ಮಾತು ನಮ್ಮ ಎಲ್ಲ ವ್ಯವಹಾರಗಳನ್ನೂ ಆಳುತ್ತಿದೆ. ಆದರೆ ಮಾತಿನ ದಿಟವಾದ ಸೌಂದರ್ಯ ಮಾತ್ರ ಅದರ ಮೌಲ್ಯವನ್ನು ಕಳೆದುಕೊಂಡು ಅಳುತ್ತಿರುವಂತಿದೆ. ಇಂಥ ಸಂದರ್ಭದಲ್ಲಿ ಹನುಮಂತನ ಮಾತಿನ ವೈಖರಿ ಮತ್ತೆ ನಮಗೆ ವಾಕ್‌ಶಕ್ತಿಯ ಸತ್ಯ ಶಿವ ಸುಂದರಗಳನ್ನು ಕಾಣಿಸಬಲ್ಲದು. ನಾವು ವರ್ಷದುದ್ದಕ್ಕೂ ಆಚರಿಸುವ ವ್ರತ–ಹಬ್ಬ–ಪರ್ವಗಳ ಉದ್ದೇಶವಾದರೂ ಇದೇ; ವಿಸ್ಮೃತಿಗೆ ಒಳಗಾಗಿರುವ ನಮ್ಮ ಅಂತರಂಗದ ಸತ್ವವನ್ನು ಸ್ಮರಿಸಿಕೊಂಡು, ಪುನಃ ಅದನ್ನು ದಕ್ಕಿಸಿಕೊಂಡು, ಅದರ ಮೂಲಕ ನಮ್ಮ ಜೀವನವನ್ನು ಸಾರ್ಥಕತೆ ಮಾಡಿಕೊಳ್ಳುವುದು.

ರಾಮಾಯಣದ ಸುಂದರಕಾಂಡದ ನಾಯಕನೇ ಹನುಮಂತ. ಕಳಾಹೀನವಾಗಿದ್ದ ರಾಮ ಮತ್ತು ಸೀತೆಯರ ಬದುಕಿನಲ್ಲಿ ಮತ್ತೆ ಸೌಂದರ್ಯವನ್ನು ತುಂಬಿದವನೇ ಹನುಮಂತ. ರಾಮಾಯಣದುದ್ದಕ್ಕೂ ಅವನ ಹಿರಿಮೆ–ಗರಿಮೆಗಳನ್ನು ಕಾಣಬಹುದು. ಕೇವಲ ತನ್ನ ಗುಣಗಳ ಕಾರಣದಿಂದಾಗಿಯೇ ಶ್ರೀರಾಮಪರಿವಾರದಲ್ಲಿ ಸ್ಥಾನವನ್ನು ಸಂಪಾದಿಸಿದ ಹನುಮಂತ, ನಮಗೆ ಶಕ್ತಿಗೂ ಯುಕ್ತಿಗೂ ಬುದ್ಧಿಗೂ ಜ್ಞಾನಕ್ಕೂ ಭಕ್ತಿಗೂ ಭಾವಕ್ಕೂ ಮಾತ್ರವಲ್ಲದೆ, ಮುಕ್ತಿಗೂ ಆದರ್ಶನಾಗಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT