ಗುರುವಾರ , ಆಗಸ್ಟ್ 11, 2022
23 °C

ದಿನದ ಸೂಕ್ತಿ: ಜೀವನದಲ್ಲಿ ಸುಖ

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

ಕುಟುಂಬ–ಸಾಂದರ್ಭಿಕ ಚಿತ್ರ

ಅರ್ಥಾಗಮೋ ನಿತ್ಯಮರೋಗಿತಾ ಚ
ಪ್ರಿಯಾ ಚ ಭಾರ್ಯಾ ಪ್ರಿಯವಾದಿನೀ ಚ ।
ವಶ್ಯಶ್ಚ ಪುತ್ರೋsರ್ಥಕರೀ ಚ ವಿದ್ಯಾ
ಷಟ್ ಜೀವಲೋಕಸ್ಯ ಸುಖಾನಿ ರಾಜನ್‌ ।।

ಇದರ ತಾತ್ಪರ್ಯ ಹೀಗೆ: ‘ದೈನಂದಿನ ಜೀವನದ ಖರ್ಚುವೆಚ್ಚಗಳಿಗೆ ಬೇಕಾದಷ್ಟು ಸಂಪಾದನೆ: ಯಾವ ರೋಗಬಾಧೆಯೂ ಇಲ್ಲದ ಆರೋಗ್ಯ; ತಾನು ಪ್ರೀತಿಸಿದವಳೇ ಹೆಂಡತಿಯಾಗಿ ದೊರೆಯುವುದು; ಅವಳು ಪ್ರಿಯವಾದದ್ದನ್ನೇ ಮಾತಾಡುವವಳು ಆಗಿರುವುದು; ತನ್ನ ಮಾತನ್ನು ಕೇಳಿ ವಿನಯದಿಂದ ನಡೆಯುವ ಗುಣವಂತನಾದ ಮಗ; ತಾನು ಕಲಿತ ವಿದ್ಯೆಯೇ ಹಣ ಗಳಿಸಲು ಉಪಯೋಗಕ್ಕೆ ಒದಗುವುದು – ಈ ಸೌಕರ್ಯಗಳು ಭಾಗ್ಯದಿಂದ ದೊರೆತರೆ ಜೀವನವು ಸುಖಮಯವಾಗಿರುತ್ತದೆ.’

ನಮ್ಮ ಜೀವನವು ಸುಖಮಯವಾಗಿರುವುದಕ್ಕೆ ಏನೆಲ್ಲ ಬೇಕು – ಎಂಬುದನ್ನು ಈ ಸುಭಾಷಿತ ಚೆನ್ನಾಗಿ ಪಟ್ಟಿ ಮಾಡಿದೆ.

ಮೊದಲಿಗೆ ನಮ್ಮ ಆವಶ್ಯಕತೆಗಳನ್ನು ಪೂರೈಸಿಕೊಳ್ಳುವಷ್ಟು ಹಣ ಇರಬೇಕು; ಜೀವನದ ಸಂತೋಷವನ್ನು ಸವಿಯಲು ಚೆನ್ನಾದ ಆರೋಗ್ಯವೂ ಬೇಕು. ಹಣ–ಆರೋಗ್ಯ ಇದ್ದಮೇಲೆ ಜೀವನಯಾನಕ್ಕೆ ಒಂದು ಒಳ್ಳೆಯ ಜೊತೆ ಬೇಕು. ಇದನ್ನೇ ಸುಭಾಷಿತ ಹೇಳಿರುವುದು: ಪ್ರೀತಿಸಿದವರೇ ನಮ್ಮ ಜೊತೆಯಾಗಿ ದೊರೆತಾಗ ಜೀವನದಲ್ಲಿ ಸಂತೋಷ ಮೂಡುವುದು. ಇದು ಕೇವಲ ಗಂಡಿಗೆ ಹೆಂಡತಿಯ ಬಗ್ಗೆ ಮಾತ್ರವೇ ಹೇಳಿರುವುದಲ್ಲ; ಇದು ಹೆಣ್ಣೊಬ್ಬಳಿಗೆ ಸಿಗಬೇಕಾದ ಗಂಡಿನ ಬಗ್ಗೆಯೂ ಆಗಿದೆ. ಆದರೆ ನಾವು ಪ್ರೀತಿಸಿದವರು ನಮಗೆ ದೊರೆಯುವುದಷ್ಟೆ ಮುಖ್ಯವಲ್ಲ, ಅವರು ಸ್ನೇಹ–ಸೌಹಾರ್ದಗಳಿಂದ ಜೀವನದುದ್ದಕ್ಕೂ ಅದೇ ಪ್ರೀತಿಯಿಂದ ನಮ್ಮೊಂದಿಗೆ ನಡೆದುಕೊಳ್ಳುವುದು ಕೂಡ ಮುಖ್ಯ.

ಸಂಸಾರ ಸುಖಮಯವಾಗಿರಬೇಕಾದರೆ ಮನೆಯ ಎಲ್ಲ ಸದಸ್ಯರೂ ಅನ್ಯೋನ್ಯವಾಗಿರಬೇಕು. ಅದನ್ನೇ ಸುಭಾಷಿತ ವಿನಯವಂತನಾದ ಮಗ – ಎನ್ನುವುದರ ಮೂಲಕ ಸೂಚಿಸಿರುವುದು. 

ತಾನು ಕಲಿತ ವಿದ್ಯೆಯೇ ತನ್ನ ಸಂಪಾದನೆಯ ದಾರಿಯೂ ಆಗಬೇಕು – ಎಂದು ಸುಭಾಷಿತ ಇಲ್ಲಿ ಹೇಳುತ್ತಿರುವುದು ಸ್ವಾರಸ್ಯಕರವಾಗಿದೆ. ತನ್ನ ಜೀವನವನ್ನು ತಾನು ಕಲಿತ ವಿದ್ಯೆಯ ಮೂಲಕವೇ, ತನ್ನ ಸಂಪಾದನೆಯಿಂದಲೇ ರೂಪಿಸಿಕೊಳ್ಳಬೇಕು – ಎಂಬುದನ್ನು ಧ್ವನಿಪೂರ್ಣವಾಗಿ ಹೇಳುತ್ತಿದೆ.

ಹೌದು, ನಮ್ಮೆಲ್ಲರಿಗೂ ನಮ್ಮ ಜೀವನ ಸುಖಮಯವಾಗಿರಬೇಕು ಎಂಬ ಆಸೆ ಇರುತ್ತದೆ. ಅದಕ್ಕೆ ನಮ್ಮದೇ ಆದ ಕಲ್ಪನೆಗಳೂ ಇರುತ್ತವೆ. ಆದರೆ ಅವುಗಳ ಸಾಕ್ಷಾತ್ಕಾರವನ್ನು ನಮ್ಮ ದುಡಿಮೆಯಿಂದಲೇ ಮಾಡಿಕೊಳ್ಳಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು