ಶನಿವಾರ, ಆಗಸ್ಟ್ 20, 2022
21 °C

ದಿನದ ಸೂಕ್ತಿ| ಕ್ರಿಯಾಶೀಲತೆಯಿಂದಲೇ ಯಶಸ್ಸು

ಎಸ್. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

ಉದ್ಯಮೇನ ಹಿ ಸಿದ್ಧ್ಯಂತಿ ಕಾರ್ಯಾಣಿ ನ ಮನೋರಥೈಃ ।

ನ ಹಿ ಸಿಂಹಸ್ಯ ಸುಪ್ತಸ್ಯ ಪ್ರವಿಶಂತಿ ಮುಖೇ ಮೃಗಾಃ ।।

ಇದರ ತಾತ್ಪರ್ಯ ಹೀಗೆ:

‘ಪ್ರಯತ್ನದಿಂದ ಕಾರ್ಯಗಳು ಸಿದ್ಧಿಸುತ್ತವೆಯೇ ವಿನಾ ಬರಿಯ ಬಯಕೆಗಳಿಂದಲ್ಲ; ನಿದ್ರಿಸುತ್ತಿರುವ ಸಿಂಹದ ಬಾಯಲ್ಲಿ ಮೃಗಗಳು ಬಂದು ತಾವಾಗಿ ಪ್ರವೇಶಿಸುವುದಿಲ್ಲವಷ್ಟೆ!’

ಸೋಮಾರಿತನದ ನಿಂದೆ, ಕ್ರಿಯಾಶೀಲತೆಯ ಪ್ರಶಂಸೆ – ಈ ಸುಭಾಷಿತದ ವಿಷಯ. ಅದಕ್ಕಾಗಿ ಅದು ಬಳಸಿಕೊಂಡಿರುವ ಉದಾಹರಣೆ ಕೂಡ ಸೊಗಸಾಗಿದೆ.

ನಾವು ಸಾಧನೆ ಮಾಡಿದರುವವ ಕೀರ್ತಿಯನ್ನು ಕಂಡು ಅಚ್ಚರಿ ಪಡುತ್ತೇವೆ; ಅದಕ್ಕಿಂತಲೂ ಹೆಚ್ಚಾಗಿ ಆಸೂಯೆ ಪಡುತ್ತೇವೆ. ‘ನೋಡು ಜನರು ಅವನ ಹಿಂದೆ ಹೇಗೆ ಓಡುತ್ತಿದ್ದಾರೆ; ಅವನಿಗೆ ಎಷ್ಟು ಗೊತ್ತಿದೆಯೋ ನನಗೂ ಅಷ್ಟೇ ಗೊತ್ತಿದೆ; ಅವನೆಷ್ಟರ ಕಲಾವಿದನೋ ನಾನೂ ಅಷ್ಟೇ ಮಟ್ಟದ ಕಲಾವಿದ. ಅದರೂ ಜನರು ಅವನ ಹಿಂದೆಯೇ ಇದ್ದಾರಲ್ಲ!’ – ಎಂದು ಸಂಕಟ ಪಡುತ್ತೇವೆ. ಹೀಗೆಯೇ ದೊಡ್ಡ ಪದವಿಯಲ್ಲಿರುವವರಲ್ಲೋ ಸಿರಿವಂತರಲ್ಲೋ ನಮಗೆ ಕಾಣುವುದು ಅವರ ವೈಭವವಷ್ಟೆ. ಈ ವೈಭವವನ್ನು ಕಂಡು ನಮಗೆ ಇದು ದಕ್ಕಿಲ್ಲವಲ್ಲ – ಎಂದು ವಿಷಾದಿಸುತ್ತೇವೆ. 

ಯಾರಿಗೂ ಸಿದ್ಧಿಯಾಗಲೀ ಕೀರ್ತಿಯಾಗಲೀ ಸುಲಭಕ್ಕೆ ಸಿಕ್ಕಿಲ್ಲ ಎಂಬ ವಾಸ್ತವವನ್ನು ನಾವು ಹೆಚ್ಚಿನ ಸಮಯದಲ್ಲಿ ಗಮನಿಸುವುದಿಲ್ಲ. ನಮಗೆ ಅವರಷ್ಟೆ ಪ್ರತಿಭೆಯೋ ಬುದ್ಧಿಶಕ್ತಿಯೋ ಇರಬಹುದು. ಆದರೆ ಒಬ್ಬರ ಯಶಸ್ಸಿಗೆ ಇವು ಮಾತ್ರವೇ ಕಾರಣವಲ್ಲ. ನಿರಂತರ ಪರಿಶ್ರಮವೇ ಎಲ್ಲ ಸಿದ್ಧಿಯ ಹಿಂದಿರುವ ನಿಜವಾದ ಗುಟ್ಟು. ಅವರು ನಿರಂತರ ಸಾಧನೆ ಮಾಡಿರುತ್ತಾರೆ; ತಪಸ್ಸಿನಂತೆ ಹಲವು ವಿಧದ ಪರೀಕ್ಷೆಗಳ ಮೂಲಕ ಹಾದು, ಈಗ ಕೀರ್ತಿಯ ಶಿಖರವನ್ನು ಮುಟ್ಟಿರುತ್ತಾರೆ. ಎಷ್ಟೇ ದೊಡ್ಡ ಪ್ರತಿಭಾಶಾಲಿಯಾದರೂ ಸಾಧನೆ ಮಾಡದೆ, ಪರಿಶ್ರಮ ಪಡದೆ ಸಿದ್ಧಿ–ಕೀರ್ತಿಗಳನ್ನು ಸಂಪಾದಿಸಲು ಆಗದು. ಇದನ್ನು ನಾವು ಅರ್ಥಮಾಡಿಕೊಳ್ಳಬೇಕು. ಸುಭಾಷಿತ ಇದನ್ನು ಸಿಂಹದ ಉದಾಹರಣೆಯ ಮೂಲಕ ಮನಮುಟ್ಟುವಂತೆ ನಿರೂಪಿಸಿದೆ.

ಸಿಂಹ ಅತ್ಯಂತ ಬಲಶಾಲಿಯಾದ ಪ್ರಾಣಿ; ಕಾಡಿನಲ್ಲಿ ಅದೇ ರಾಜ. ಯಾವ ಪ್ರಾಣಿಯೂ ಅದರ ಶಕ್ತಿಯ ಮುಂದೆ ಸೋಲುವುದು ನಿಶ್ಚಯ. ಇಂಥ ಬಲಶಾಲಿಯಾದ ಸಿಂಹವಾದರೂ ಆಹಾರಕ್ಕಾಗಿ ಅದು ಬೇಟೆ ಆಡಲೇಬೇಕು. ಅದಕ್ಕಾಗಿ ಕಷ್ಟ ಪಡಲೇಬೇಕು. ಹೀಗಲ್ಲದೆ, ಸಿಂಹ ಬಲಶಾಲಿಯಾದುದು – ಎಂದು ಯಾವುದೇ ಪ್ರಾಣಿಯೂ ಅದರ ಬಾಯಿಗೆ ತಾನಾಗಿ ಹೋಗಿ ಬೀಳುವುದಿಲ್ಲವಷ್ಟೆ!

ಆದುದರಿಂದ ನಾವು ಕೂಡ ನಿರಂತರ ಪರಿಶ್ರಮಪಟ್ಟರೆ ಮಾತ್ರ ಜೀವನದಲ್ಲಿ ಯಶಸ್ಸನ್ನು ಸಂಪಾದಿಸಲು ಸಾಧ್ಯ. ಇದನ್ನು ಅರ್ಥಮಾಡಿಕೊಂಡು ನಾವು ಕೂಡ ಕ್ರಿಯಾಶೀಲರಾಗೋಣ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.