ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ಉಪಕಾರಬುದ್ಧಿ

Last Updated 21 ಸೆಪ್ಟೆಂಬರ್ 2020, 1:57 IST
ಅಕ್ಷರ ಗಾತ್ರ

ಕಿಮತ್ರ ಚಿತ್ರಂ ಯತ್ಸಂತಃ ಪರಾನುಗ್ರಹತತ್ಪರಾಃ ।

ನ ಹಿ ಸ್ವದೇಹಸೌಖ್ಯಾಯ ಜಾಯಂತೇ ಚಂದನದ್ರುಮಾಃ ।।

ಇದರ ತಾತ್ಪರ್ಯ ಹೀಗೆ:

‘ಸಜ್ಜನರಾದವರು ಸದಾ ಬೇರೆಯವರಿಗೆ ಉಪಕಾರ ಮಾಡುವುದರಲ್ಲಿಯೇ ತತ್ಪರರಾಗಿರುತ್ತಾರೆ. ಇದರಲ್ಲಿ ಆಶ್ಚರ್ಯವೇನಿದೆ? ಶ್ರೀಗಂಧದ ಮರಗಳು ಬೇರೆಯವರಿಗೆ ಸುಗಂಧವನ್ನು ನೀಡುವುದಕ್ಕಾಗಿಯೇ ಹೊರತು ತಮ್ಮ ಸುಖಕ್ಕಾಗಿ ಅಲ್ಲವಲ್ಲ!’

ದಿನದ ಸೂಕ್ತಿ ಕೇಳಿ: ಉಪಕಾರಬುದ್ಧಿ

ನಾವು ಯಾರೊಬ್ಬರ ನೆರವೂ ಇಲ್ಲದೆ ನಮ್ಮ ಜೀವನವನ್ನು ರೂಪಿಸಿಕೊಳ್ಳುವುದಕ್ಕೆ ಆಗದು. ಹೀಗಾಗಿ ನಾವೆಲ್ಲರೂ ಹಲವರ ಉಪಕಾರದಿಂದ ಬದುಕುತ್ತಿರುತ್ತೇವೆ. ಯಾರೆಲ್ಲರ ಉಪಕಾರ ನಮಗೆ ಸಿಕ್ಕಿದೆ ಎಂದು ಕಂಡುಕೊಳ್ಳುವುದೂ ಸುಲಭವಲ್ಲ. ಆದರೆ ನಾವು ಯಾರಿಂದ ಉಪಕಾರ ಪಡೆದಿದ್ದೇವೆಯೋ ಅವರಿಗೆ ಕೃತಜ್ಞತೆ ಸಲ್ಲಿಸುವ ಬಗೆಯಾದರೂ ಏನು? ನಾವು ಈ ಉಪಕಾರಪರಂಪರೆಯನ್ನು ಮುಂದುವರಿಸುವುದೇ ನಮ್ಮ ಮುಂದಿರುವ ಆಯ್ಕೆ. ಸುಭಾಷಿತ ಇದನ್ನೇ ಇಲ್ಲಿ ಹೇಳುತ್ತಿರುವುದು. ಹೀಗೆ ಉಪಕಾರ ಮಾಡುವುದನ್ನೇ ಸಜ್ಜನರ ಲಕ್ಷಣ ಎಂದು ಕೂಡ ಅದು ಹೇಳುತ್ತಿದೆ.

ಉಪಕಾರ ಮಾಡುವುದೇ ಸಜ್ಜನರ ಸಹಜ ಲಕ್ಷಣ ಎಂದು ಸುಭಾಷಿತ ಹೇಳಿರುವುದು ಮನನೀಯ. ಈ ಉಪಕಾರಬುದ್ಧಿಗೆ ನಾವು ಆಶ್ಚರ್ಯಪಡಬೇಕಾದ ಆವಶ್ಯಕತೆ ಇಲ್ಲ ಎಂದೂ ಅದು ಹೇಳಿದೆ.

ಹೌದು, ಮನುಷ್ಯನಲ್ಲಿ ಸಹಜವಾಗಿಯೇ ಒಳ್ಳೆಯತನ ಇರುತ್ತದೆ. ಹೀಗಲ್ಲದಿದ್ದರೆ ನಮ್ಮ ಜೀವನಗಳು ಇಷ್ಟು ಸುಂದರವಾಗಿಯೂ ಇರುತ್ತಿರಲಿಲ್ಲ; ನೆಮ್ಮದಿಯಾಗಿಯೂ ಇರುತ್ತಿರಲಿಲ್ಲ. ಸದ್ಯದ ಒಂದು ಉದಾಹರಣೆಯನ್ನೇ ನೋಡಬಹುದು: ಈಗ ಎಲ್ಲೆಲ್ಲೂ ಮಳೆಯ ಆರ್ಭಟ ಜೋರಾಗಿದೆ. ಈ ಸಂದರ್ಭದಲ್ಲಿ ಸ್ಥಳೀಯರು ಕಷ್ಟದಲ್ಲಿ ಸಿಕ್ಕಿರುವವರನ್ನು ಸ್ವಪ್ರೇರಣೆಯಿಂದ ರಕ್ಷಿಸುತ್ತಿದ್ದಾರೆ. ಹೀಗೆ ರಕ್ಷಿಸುತ್ತಿರುವವರಲ್ಲಿ ಸಹಜವಾಗಿರುವಂಥದ್ದು ಕಷ್ಟದಲ್ಲಿರುವವರ ನೆರವಿಗೆ ಧಾವಿಸುವುದು ಮನುಷ್ಯಧರ್ಮ ಎಂಬ ಸಹಜಸ್ವಭಾವವೇ ಹೌದು. ನಮಗೆ ಪ್ರಚಾರ ಸಿಗಬೇಕು; ನಮ್ಮನ್ನು ಜನರು ಹೊಗಳಬೇಕು; ನಮ್ಮಿಂದ ರಕ್ಷಿತರಾದವರು ನಾಳೆ ನಮ್ಮನ್ನು ಗುರುತಿಸಿ ನಮಸ್ಕಾರ ಹೇಳಬೇಕು – ಹೀಗೆಲ್ಲ ಯೋಚಿಸಿ ಇವರಾರು ಸಹಾಯಕ್ಕೆ ನಿಂತವರಲ್ಲ. ಉಪಕಾರ ಮಾಡುವುದು ಮನುಷ್ಯನ ಸಹಜಸ್ವಭಾವವೇ ಹೌದು ಎಂಬುದಕ್ಕೆ ಇಂಥ ಘಟನೆಗಳು ಉದಾಹರಣೆಗಳಾಗಿವೆ.

ನಾವು ಯಾವುದೇ ಕೆಲಸವನ್ನು ಸರಿಯಾಗಿ ನಿರ್ವಹಿಸಿದರೆ ಅದು ಸಹಜವಾಗಿಯೇ ಇನ್ನೊಬ್ಬರಿಗೆ ಉಪಕಾರವನ್ನು ಉಂಟುಮಾಡುತ್ತಿರುತ್ತದೆ. ಈ ಮಾತು ಎಲ್ಲ ಹುದ್ದೆಗಳಿಗೂ ಎಲ್ಲ ಕರ್ತವ್ಯಗಳಿಗೂ ಅನ್ವಯವಾಗುತ್ತದೆ. ನಾವು ನಮ್ಮ ಜೀವಿಕೆಗಾಗಿ ಆರಿಸಿಕೊಂಡಿರುವ ಉದ್ಯೋಗವನ್ನಾದರೂ ನಾವು ಪ್ರಾಮಾಣಿಕವಾಗಿ ಮಾಡಿದರೆ ಅದು ಕೂಡ ಇನ್ನೊಬ್ಬರಿಗೆ ಖಂಡಿತವಾಗಿಯೂ ನೆರವಾಗುತ್ತದೆ, ಉಪಕಾರವಾಗುತ್ತದೆ.

ಶ್ರೀಗಂಧದ ಸುಗಂಧ ಇರುವುದೇ ಇನ್ನೊಬ್ಬರಿಗೆ ಅದನ್ನು ಹಂಚುವುದಕ್ಕಾಗಿ. ಇಂಥ ಆದರ್ಶ ಸಜ್ಜನರ ಆದರ್ಶವೂ ಆಗಿರುತ್ತದೆ ಎನ್ನುತ್ತಿದೆ ಸುಭಾಷಿತ. ನಮ್ಮ ಪಾಲಿನ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸೋಣ. ಅದು ಸಹಜವಾಗಿಯೇ ಇನ್ನೊಬ್ಬರಿಗೆ ನೆರವಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT