ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ಮಕ್ಕಳ ಶಿಕ್ಷಣ

Last Updated 27 ನವೆಂಬರ್ 2020, 19:30 IST
ಅಕ್ಷರ ಗಾತ್ರ

ಬಾಲಃ ಪುತ್ರೋ ನೀತಿವಾಕ್ಯೋಪಚಾರೈಃ
ಕಾರ್ಯೇ ಕಾರ್ಯೇ ಯತ್ನತಃ ಶಿಕ್ಷಣೀಯಃ ।
ಲೇಖಾ ಲಗ್ನಾ ಯಾssಮಪಾತ್ರೇ ವಿಚಿತ್ರಾ
ನಾಸೌ ನಾಶಂ ಪಾಕಕಾಲೇsಪಿ ಯಾತಿ ।।

ಇದರ ತಾತ್ಪರ್ಯ ಹೀಗೆ:

‘ಇನ್ನೂ ಚಿಕ್ಕವನಾಗಿದ್ದಾಗಲೇ ತನ್ನ ಪುತ್ರನಿಗೆ ನೀತಿಯನ್ನು ಹೇಳಿ ಪ್ರತಿಯೊಂದು ಕಾರ್ಯದಲ್ಲಿಯೂ ಶಿಕ್ಷಣವನ್ನು ಕೊಡಬೇಕು. ಹಸಿಯ ಗಡಿಗೆಯಲ್ಲಿ ರಚಿಸಿದ ವಿಚಿತ್ರವಾದ ರೇಖೆಗಳು ಗಡಿಗೆಯನ್ನು ಸುಟ್ಟಾಗಲೂ ಅಳಿಸದೇ ಇರುತ್ತದೆ.’

ಮಕ್ಕಳಿಗೆ ಹೇಗೆ ಶಿಕ್ಷಣವನ್ನು ನೀಡಬೇಕು – ಎಂಬುದರ ಬಗ್ಗೆ ತುಂಬ ಮುಖ್ಯವಾದ ಸಂದೇಶವನ್ನು ನೀಡುತ್ತಿದೆ ಸುಭಾಷಿತ.

ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ – ಎಂಬ ಗಾದೆಯನ್ನು ನಾವೆಲ್ಲರೂ ಕೇಳಿರುತ್ತೇವೆ. ಸುಭಾಷಿತದ ತಾತ್ಪರ್ಯ ಕೂಡ ಇದೇ.

ಸಮಾಜದ ಕೆಡಕುಗಳಿಗೆ ಕಾರಣ ಏನು? ಸಾಮಾಜಿಕರ ಕೆಟ್ಟ ವರ್ತನೆಯೇ ಅಲ್ಲವೆ? ಸಾಮಾಜಿಕರು ಎಂದರೆ ನಾಗರಿಕರು; ನಾವು ನೀವೆಲ್ಲರೂ. ಕೆಟ್ಟ ವರ್ತನೆಯನ್ನು ಯಾರೂ ಮಾಡದಿದ್ದರೆ ಸಮಾಜದಲ್ಲಿ ಯಾವುದೇ ತೊಂದರೆಗಳು ಕಾಣಿಸಿಕೊಳ್ಳುವುದೇ ಇಲ್ಲ. ಹೀಗೆ ಆಗುತ್ತದೆ ಎನ್ನುವುದು ಆದರ್ಶಸ್ಥಿತಿ; ಆದರೆ ಎಂದಿಗೂ ಆಗಲಾರದು ಎಂಬುದು ವಾಸ್ತವ.

ಏಕೆ ಎಲ್ಲರೂ ಒಳ್ಳೆಯ ದಾರಿಯಲ್ಲಿಯೇ ನಡೆಯುವುದಿಲ್ಲ? ಸಮಾಜದ ಬಗ್ಗೆ, ಜೀವನದ ಬಗ್ಗೆ, ಒಳಿತು–ಕೆಡಕುಗಳ ಬಗ್ಗೆ ಒಬ್ಬೊಬ್ಬರ ಮನಸ್ಸಿನಲ್ಲಿ, ಮೆದುಳಿನಲ್ಲಿ ಒಂದೊಂದು ರೀತಿಯ ಭಾವ–ಬುದ್ಧಿಗಳು ಕೆಲಸ ಮಾಡುತ್ತಿರುತ್ತಿವೆ. ಇದಕ್ಕೆ ಕಾರಣಗಳು ಹತ್ತುಹಲವು. ಮುಖ್ಯವಾಗಿ ನಮ್ಮೆಲ್ಲರ ಬಾಲ್ಯದಲ್ಲಿ ನಾವು ತುಂಬಿಸಿಕೊಂಡಿರುವ ವಿವರಗಳೇ ಜೀವನದುದ್ದಕ್ಕೂ ನಮ್ಮ ಮೇಲೆ ಪ್ರಭಾವವನ್ನು ಬೀರುತ್ತಿರುತ್ತವೆ. ಒಳ್ಳೆಯ ವಿವರಗಳನ್ನು ನಾವು ಆಗ ತುಂಬಿಸಿಕೊಂಡಿದ್ದರೆ ನಮ್ಮ ಆಲೋಚನೆಗಳು ಒಳ್ಳೆಯ ಮಾರ್ಗವನ್ನೇ ಹಿಡಿಯುತ್ತವೆ; ಕೆಟ್ಟ ವಿವರಗಳನ್ನು ತುಂಬಿಸಿಕೊಂಡಿದ್ದರೆ ನಮ್ಮ ಆಲೋಚನೆಗಳು ಕೆಟ್ಟ ಮಾರ್ಗವನ್ನೇ ಹಿಡಿಯುತ್ತವೆ. ಸುಭಾಷಿತ ಹೀಗಾಗಿಯೇ ಹೇಳುತ್ತಿರುವುದು: ಚಿಕ್ಕವಯಸ್ಸಿನಲ್ಲಿರುವಾಗಲೇ ನೈತಿಕತೆಯ ವಿವರಗಳನ್ನು ಮಕ್ಕಳಲ್ಲಿ ತುಂಬಬೇಕು; ಜೀವನದ ಒಳಿತಿಗಾಗಿ ಬೇಕಾದ ಎಲ್ಲ ವಿಧದ ಕಾರ್ಯದಲ್ಲಿಯೂ ಅವರಿಗೆ ಶಿಕ್ಷಣವನ್ನು ನೀಡಬೇಕು.

ಸುಭಾಷಿತ ಇದಕ್ಕೆ ನೀಡಿರುವ ಉದಾಹರಣೆಯೂ ಸೊಗಸಾಗಿದೆ. ಒಂದು ಗಡಿಗೆ ಇದೆ; ಅದರ ಮೇಲೆ ಒಂದಿಷ್ಟು ಚಿತ್ತಾರಗಳನ್ನು ಮೂಡಿಸಬೇಕೆಂಬ ಆಸೆ ನಮ್ಮದು. ಆದರೆ ಈ ಚಿತ್ತಾರಗಳನ್ನು ಯಾವಾಗ ಕೆತ್ತಬಹುದು? ಗಡಿಗೆಯನ್ನು ಮಾಡಿ, ಒಣಗಿಸಿದ ಮೇಲೆ ಮೂಡಿಸಲು ಆಗುತ್ತದೆಯೆ? ಹಾಗೇನಾದರೂ ಮಾಡಲು ಹೊರಟರೆ ಗಡಿಗೆ ಒಡೆದುಹೋಗುವ ಸಂಭವವೂ ಇರುತ್ತದೆ. ಹೀಗಲ್ಲದೆ ಇನ್ನೂ ಗಡಿಗೆಯ ನಿರ್ಮಾಣದ ಸಮಯದಲ್ಲಿಯೇ, ಎಂದರೆ ಅದು ಹಸಿ ಇರುವಾಗಲೇ ಈ ಚಿತ್ತಾರಗಳನ್ನು ಮೂಡಿಸಿ, ಅದನ್ನು ಸುಟ್ಟರೆ ಆಗ ಅದು ಆ ಗಡಿಗೆಯ ಮೇಲೆ ಸದಾ ಇರುತ್ತದೆ, ಅಲ್ಲವೆ?

ಹೀಗೆಯೇ ಮಕ್ಕಳ ಮನಸ್ಸು ಇನ್ನೂ ಹಸಿ ಇರುವಾಗಲೇ ಅವರಿಗೆ ಒಳ್ಳೆಯ ಸಂಸ್ಕಾರವನ್ನು ಕಲಿಸಬೇಕು; ಅವರು ಬೆಳೆದಮೇಲೆ ರೀತಿ–ನೀತಿಗಳನ್ನು ಕಲಿಸಲು ಸಾಧ್ಯವಾಗದು. ಇದನ್ನೇ ಸುಭಾಷಿತ ಹೇಳುತ್ತಿರುವುದು.

ಆದರೆ ನಾವು ನಮ್ಮ ಮಕ್ಕಳಿಗೆ ಎಂಥ ಶಿಕ್ಷಣವನ್ನು ನೀಡುತ್ತಿದ್ದೇವೆ – ಎಂಬುದನ್ನು ನಾವೇ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT