ಭಾನುವಾರ, ಜುಲೈ 25, 2021
21 °C

ದಿನದ ಸೂಕ್ತಿ: ಅಜೀರ್ಣಕ್ಕೆ ಅನ್ನವೂ ವಿಷ

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

ಅನಭ್ಯಾಸೇ ವಿಷಂ ಶಾಸ್ತ್ರಂ ಅಜೀರ್ಣೇ ಭೋಜನಂ ವಿಷಮ್ ।
ಮೂರ್ಖಸ್ಯ ಚ ವಿಷಂ ಗೋಷ್ಠೀ ವೃದ್ಧಸ್ಯ ತರುಣೀ ವಿಷಮ್‌ ।।

ಇದರ ತಾತ್ಪರ್ಯ ಹೀಗೆ:

‘ಅಭ್ಯಾಸ ಮಾಡದಿದ್ದರೆ ಶಾಸ್ತ್ರವೇ ವಿಷವಾಗುತ್ತದೆ; ಅಜೀರ್ಣವಾಗಿರುವಾಗ ಭೋಜನವೇ ವಿಷ ಎನಿಸುತ್ತದೆ; ಮೂರ್ಖರಿಗೆ ವಿದ್ವತ್ಸಭೆಯೇ ವಿಷವಾಗಿ ಕಾಣಿಸಿಕೊಳ್ಳತ್ತದೆ; ಇನ್ನು ಮುದುಕನಿಗೋ, ತರುಣಿಯೇ ವಿಷವಾಗಿ ತೋರುತ್ತಾಳೆ.’

ನಮಗೆ ವಿಷ ಎಂದರೆ ಗೊತ್ತಿದೆ; ಪ್ರಾಣವನ್ನು ತೆಗೆಯುವಂಥ ಅಪಾಯಕಾರಿ ವಸ್ತು. ಇಲ್ಲಿ ಸುಭಾಷಿತ ಹಲವು ವಿಷಗಳ ಬಗ್ಗೆ ಮಾತನಾಡುತ್ತಿದೆ. ಆದರೆ ಈ ವಿಷಗಳಾವುವೂ ನಮ್ಮ ಪ್ರಾಣಹರಣವನ್ನು ಮಾಡಲಾರವು; ಹೀಗಿದ್ದರೂ ಇವು ಕೂಡ ಪ್ರಾಣಘಾತಕಗಳಂತೆ ಅಪಾಯಕಾರಿಗಳಾಗಬಲ್ಲವು. ಪ್ರಾಣಹೋದರಷ್ಟೆ ಸಾವು – ಎಂದು ನಾವು ತಿಳಿದುಕೊಂಡಿದ್ದೇವೆ. ಆದರೆ ನಮಗೆ ದಕ್ಕಲಾಗದ ಹಲವು ವಿದ್ಯಮಾನಗಳು ಸಹ ಸಾವಿನಷ್ಟೆ ಯಾತನಾಮಯವೂ ದುಃಖಮಯವೂ ಆಗಿರುತ್ತದೆ – ಎಂಬ ವಾಸ್ತವವನ್ನು ಸುಭಾಷಿತ ನಮಗೆ ಕಾಣಿಸಿಕೊಡುತ್ತಿದೆ. ನಮ್ಮ ನಿತ್ಯದ ಹಲವು ವಿವರಗಳು ಅವುಗಳ ಹದವನ್ನು ತಪ್ಪಿದಾಗ, ಎಲ್ಲೆಯನ್ನು ಮೀರಿದಾಗ ಹೇಗೆ ಬಾಧಕಗಳಾಗಬಲ್ಲವು ಎನ್ನುವುದನ್ನು ಮಾರ್ಮಿಕವಾಗಿ ನಿರೂಪಿಸುತ್ತಿದೆ. ಸಿಹಿಯೇ ಕಹಿಯಾಗುವ, ಅಮೃತವೇ ವಿಷವಾಗುವ ಕೆಲವು ಸಂದರ್ಭಗಳನ್ನು ಇದು ಎತ್ತಿತೋರಿಸಿದೆ.

ಶಾಸ್ತ್ರಗಳನ್ನು ಕಷ್ಟಪಟ್ಟು ದಕ್ಕಿಸಿಕೊಳ್ಳಬೇಕಾಗುತ್ತದೆ. ಇವು ನಮ್ಮ ವಿಚಾರಶಕ್ತಿಯನ್ನು ಎಚ್ಚರಗೊಳಿಸುವ, ನಿಶಿತಗೊಳಿಸುವ ವಿದ್ಯಾಸ್ರೋತಗಳು. ನಮ್ಮ ಬದುಕನ್ನು ಹಸನುಗೊಳಿಸುವ ಶಕ್ತಿಯೂ ಶಾಸ್ತ್ರಗಳಿಗೆ ಉಂಟೆನ್ನಿ. ಶಾಸ್ತ್ರಗಳನ್ನು ದಕ್ಕಿಸಿಕೊಳ್ಳಲು ಎಷ್ಟು ಪರಿಶ್ರಮವನ್ನು ಪಡಬೇಕೋ, ಹಾಗೆ ದಕ್ಕಿದ ಶಾಸ್ತ್ರವನ್ನು ಉಳಿಸಿಕೊಳ್ಳುವುದಕ್ಕೂ ಅಷ್ಟೇ ಶ್ರಮವನ್ನು ಪಡಬೇಕಾಗುತ್ತದೆ. ಇಂಥ ನಿರಂತರವಾದ ಪರಿಶ್ರಮವನ್ನೇ ’ಅಭ್ಯಾಸ‘ ಎಂದು ಕರೆಯುವುದು. ಈ ಅಭ್ಯಾಸದ ಲಯ ತಪ್ಪಿತೆಂದರೆ ಆಗ ಶಾಸ್ತ್ರದ ಗತಿ ನಮ್ಮ ಪಾಲಿಗೆ ದಕ್ಕದು. ಇದು ಈಗಾಗಲೇ ನಮಗೆ ಕೈವಶವಾಗಿರುವ ಶಾಸ್ತ್ರದ ವಿಷಯದಲ್ಲೂ ಸಲ್ಲುವ ಮಾತು. ಅಭ್ಯಾಸ ತಪ್ಪಿದರೆ ಮರೆವು ಆವರರಿಸುತ್ತದೆ. ಮರೆವು ಬುದ್ಧಿನೈಶಿತ್ಯವನ್ನು ಹ್ರಾಸಗೊಳಿಸುತ್ತದೆ. ಬುದ್ಧಿಯ ಮೊನಚನ್ನು ಕಳೆದುಕೊಂಡ ಧೀಶಕ್ತಿಯು ಶಾಸ್ತ್ರಸಾಗರದಲ್ಲಿ ಈಜಲು ತ್ರಾಣವನ್ನು ಕಳೆದುಕೊಳ್ಳುತ್ತದೆ. ಹೀಗೆ ಬುದ್ಧಿಮಂಕಾದವನಿಗೆ ಶಾಸ್ತ್ರಪ್ರಕ್ರಿಯೆಗಳು ತಲೆನೋವನ್ನು ಕೊಡಬಲ್ಲದೆ ಹೊರತು ಸಂತೋಷವನ್ನಲ್ಲ. ನಿರಂತರವಾದ ಅಭ್ಯಾಸಶೀಲನಿಗೆ ಗಣಿತವೂ ಕಾವ್ಯವಾಗಬಲ್ಲದು, ಸರಸಕ್ರೀಡೆಯಂತೆ ಮೋದವನ್ನೂ ನೀಡಬಲ್ಲದು; ಜಡಬುದ್ಧಿಯವನಿಗೆ ಕಾವ್ಯವೂ ರಸವಿಲ್ಲದ ಪಾಷಾಣದಂತೆ ಭಾರವಷ್ಟೆ ಆಗಬಲ್ಲದು. ಅಭ್ಯಾಸವಿಲ್ಲದವನ ಪಾಲಿಗೆ ಶಾಸ್ತ್ರ ಎನ್ನುವುದು ಸಂಪತ್ತಲ್ಲ, ಅದು ಮುಳ್ಳಿನ ಹೊರೆ ಮಾತ್ರ!

ಎಲ್ಲ ರುಚಿಗಳಿಗಿಂತಲೂ ನಾಲಗೆಯ ರುಚಿಗೆ ಸೆಳೆತ ಹೆಚ್ಚು; ಬದುಕುವುದಕ್ಕಾಗಿ ತಿನ್ನುತ್ತೇವೆಯೋ, ತಿನ್ನುವುದಕ್ಕಾಗಿಯೇ ಬದುಕುತ್ತೇವೆಯೋ – ಎಂದು ಪ್ರಶ್ನೆ ಕೇಳಿಕೊಳ್ಳುವಷ್ಟು ತೀವ್ರತೆ ಈ ಸೆಳೆತಕ್ಕಿದೆಯೆನ್ನಿ! ನಮ್ಮ ಜಿಹ್ವಾಚಾಪಲ್ಯವನ್ನು ನಿಯಂತ್ರಿಸಿಕೊಳ್ಳುವುದರಿಂದ ನಮ್ಮ ಕಾಲದ ಎಷ್ಟೋ ಕಾಯಿಲೆಗಳನ್ನೂ ನಿಯಂತ್ರಿಸಿಕೊಳ್ಳಬಹುದು. ಆದರೆ ನಾಲಗೆಯ ಗ್ರಂಥಿಗಳು ಉಕ್ಕಿಸುವ ರಸಪ್ರವಾಹದ ಮುಂದೆ ನಮ್ಮ ಸಂಯಮದ ಕಟ್ಟೆ ಒಡೆದುಹೋಗದಿದ್ದೀತೆ? ಮನೆಯಲ್ಲಿ ಸಿಹಿಪದಾರ್ಥಗಳನ್ನು ದಕ್ಕಿಸಿಕೊಳ್ಳುವುದರಲ್ಲಿ ಸೋತ ಮಧುಮೇಹಿಗಳು ನಿಃಶಬ್ದವಾಗಿ ಹೊಟೇಲಿಗೆ ನುಗ್ಗಿ, ಅಲ್ಲಿ ವ್ರತಬುದ್ಧಿಯಿಂದ ಕೇಸರೀಬಾತನ್ನು ಚಪ್ಪರಿಸುವವರನ್ನು ನೋಡಿದರೆ ಮೇಲಿನ ಮಾತಿನ ವಾಸ್ತವ ಮನದಟ್ಟಾಗದಿರದು.  ನಾಲಗೆಯ ದಾಳಿ ಎಷ್ಟು ತೀವ್ರವಾಗಿರಬಹುದು; ಆದರೆ ಅದಕ್ಕೊಂದು ಸರಿಯಾದ ’ಯುದ್ಧಭೂಮಿ‘ಯ ಅವಕಾಶವನ್ನು ಒದಗಿಸುವುದು ನಮ್ಮ ಜಠರರಸ; ಎಂದರೆ ನಮ್ಮ ಜೀರ್ಣಶಕ್ತಿ. ನಾಲಗೆಯ ಸಂಚಾರಕ್ಕೆ ಬೇಕಾದ ತ್ರಾಣವನ್ನು ಒದಗಿಸುವುದೇ ಈ ನಮ್ಮ ಶಕ್ತಿ. ನಾವು ಸೇವಿಸುವ ಎಲ್ಲ ಆಹಾರವೂ ಈ ಜಠರಾಗ್ನಿಯಲ್ಲಿ ಸುಟ್ಟು ಭಸ್ಮವಾಗಬೇಕು. ಒಂದು ವೇಳೆ ನಮ್ಮ ಜೀರ್ಣಶಕ್ತಿ ಏನಾದರೂ ಕೈಕೊಟ್ಟರೆ ಆಗ ನಮ್ಮ ಮುಂದೆ ಕೇಸರೀಬಾತ್ ಅಲ್ಲ, ಪರಮಾನ್ನವನ್ನು ಇಟ್ಟರೂ, ಕಣ್ಣು ಅದನ್ನು ನೋಡಬಹುದೇ ಹೊರತು ನಾಲಗೆ ಅದನ್ನು ಮೂಸಿಯೂ ನೋಡುವುದಿಲ್ಲ! ನೆನ್ನೆಯವರಿಗೂ ನಾವು ಯಾವುದಕ್ಕಾಗಿ ಹಂಬಲಿಸಿದ್ದೇವೋ ಆ ಜಾಮೂನು–ಚಿರೋಟಿಗಳೇ ಇಂದು ಬೇಡವಾಗುತ್ತವೆ; ಅವುಗಳೇ ಈಗ ವಿಷದಂತೆ ನಮ್ಮ ಮನಸ್ಸನ್ನು ಪ್ರಕೋಪಕ್ಕೂ ತಳ್ಳಬಲ್ಲವು.

ನಮ್ಮ ಮನಸ್ಸನ್ನು ಕೆರಳಿಸುವು, ಭಾವುಕರನ್ನಾಗಿಸುವ, ಉದ್ರೇಕರನ್ನಾಗಿಸುವ ಭಾಷಣಗಳಿಗೆ ಜನರು ಧಾವಿಸುವಷ್ಟು ಸೆಮಿನಾರ್‌ಗಳ ವಿಷಯಾಧಾರಿತ ಉಪನ್ಯಾಸಗಳಿಗೆ ಬರುವುದಿಲ್ಲ, ಅಲ್ಲವೆ? ಏಕಿದು? ಇದರ ಅರ್ಥ, ಎಲ್ಲ ಸಾರ್ವಜನಿಕ ಭಾಷಣಗಳೂ ಜೊಳ್ಳು, ಎಲ್ಲ ಸೆಮಿನಾರ್‌ಗಳ ಉಪನ್ಯಾಸಗಳೂ ಭವ್ಯವಾಗಿರುತ್ತವೆ ಎಂದಲ್ಲ! ಇಲ್ಲಿ ಹೇಳಲು ಹೊರಟಿರುವುದು, ಎಲ್ಲಿ ನಾವು ಬುದ್ಧಿಯನ್ನು ಖರ್ಚುಮಾಡಬೇಕಾಗುತ್ತದೋ ಆ ಕಡೆಗೆ ತಲೆಯನ್ನು ಹಾಕುವುದಕ್ಕೂ ನಮ್ಮ ಮನಸ್ಸು ಒಪ್ಪುವುದಿಲ್ಲ. ಗಂಭೀರವಾದ ಚರ್ಚೆಗಳು ಎಲ್ಲರಿಗೂ ಇಷ್ಟವಾಗುವುದಿಲ್ಲ; ಅದಕ್ಕೊಂದಷ್ಟು ಸಿದ್ಧತೆಗಳು, ಅರ್ಹತೆಗಳು ಬೇಕು. ಹುರಿಹಿಟ್ಟನ್ನಷ್ಟೆ ಅಗಿಯಬಲ್ಲ ಹಲ್ಲುಗಳು ಚಕ್ಕಲಿಯನ್ನು ಅಗಿಯಬಲ್ಲವೆ? ಘೋಷಣೆಗಳನ್ನೇ ಮಹಾಜ್ಞಾನ ಎಂದು ಧನ್ಯತೆಯಿಂದ ಸ್ವೀಕರಿಸುವ ಮಂದಬುದ್ಧಿಯು ಗಂಭೀರ ಚರ್ಚೆ–ಮೀಮಾಂಸೆಗಳಲ್ಲಿ ಆಸಕ್ತಿ ವಹಿಸಬಲ್ಲದೆ? ಸುಭಾಷಿತ ಹೇಳುತ್ತಿರುವುದು ಇದನ್ನೇ: ಮೂರ್ಖನಿಗೆ ವಿದ್ವತ್ಸಭೆಯೇ ವಿಷ! ಹಿಂದಿನ ಕಾಲದಲ್ಲಿ ವಿದ್ವಾಂಸರೆಲ್ಲರೂ ಒಂದು ಗೊತ್ತಾದ ಸ್ಥಳದಲ್ಲಿ ಸೇರಿ ಹಲವು ವಿಷಯಗಳ ಬಗ್ಗೆ ಗಂಭೀರವಾದ ಚರ್ಚೆಗಳನ್ನು ನಡೆಸುತ್ತಿದ್ದರು. ಆಯಾ ವಿಷಯಗಳಲ್ಲಿ ತಜ್ಞತೆ ಇಲ್ಲದವರಿಗೆ ಅವು ನೀರಸ ಎನಿಸುತ್ತಿದ್ದುದ್ದರಲ್ಲಿ ಅಚ್ಚರಿಯೇನಿಲ್ಲ. ಇಂದಿನ ಕಾಲದ ವಿದ್ವತ್ಸಭೆಗಳೆಂದರೆ ಸೆಮಿನಾರ್‌ಗಳು ಮಾತ್ರವೇ ಆಗಬೇಕಿಲ್ಲ; ಯಾವುದೇ ಗಂಭೀರ ಚರ್ಚೆ–ಸಂವಾದಗಳೂ ಆಗಬಹುದೆನ್ನಿ! 

ಇನ್ನು ಸುಭಾಷಿತ ಹೇಳುತ್ತಿರುವ ಕೊನೆಯ ವಿಷ: ವೃದ್ಧನಿಗೆ ತರುಣಿಯೇ ವಿಷ. ಆದರೆ ಈ ಮಾತಿಗೆ ವಿರುದ್ಧವಾಗಿರುವ ಹಲವು ಸಾಕ್ಷ್ಯಗಳನ್ನು ನಾವು ಸಮಾಜದಲ್ಲಿ ಸತತವಾಗಿ ನೋಡುತ್ತಲೇ ಇದ್ದೇವೆ. ಹೀಗಾಗಿ ಸುಭಾಷಿತದ ಈ ಮಾತನ್ನು ನಾವು ಅನುಮಾನದಿಂದಲೇ ನೋಡಬೇಕಿದೆಯಷ್ಟೆ!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು