ಶನಿವಾರ, ಜುಲೈ 24, 2021
27 °C

ದಿನದ ಸೂಕ್ತಿ: ಶಿಕ್ಷಣ ಸರಿ, ಆದರೆ ಸದ್ಗುಣ?

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

ವಿನಯಂತು ಸುತಾನ್‌‌ ಸಂತಃ ಸ್ವಸಂಪಾದ್ಯಾಃ ಪುನರ್ಗುಣಾಃ ।

ಸರ್ವಂ ಕೃಷಾಣಾಃ ಕುರ್ವಂತು ಬೀಜಂ ಸೂತೇsಂಕುರಃ ಸ್ವತಃ ।।

ಇದರ ತಾತ್ಪರ್ಯ ಹೀಗೆ:

’ಸಜ್ಜನರಾದವರು ತಮ್ಮ ಮಕ್ಕಳಿಗೆ ಶಿಕ್ಷಣವನ್ನು ನೀಡುವುದು ಅವರ ಕರ್ತವ್ಯ. ಆದರೆ ಸದ್ಗುಣಗಳನ್ನು ಮಾತ್ರ ಮಕ್ಕಳೇ ಸ್ವತಃ ಸಂಪಾದಿಸಿಕೊಳ್ಳತಕ್ಕದ್ದು. ರೈತರು ಎಲ್ಲ ಕೆಲಸವನ್ನೂ ಮಾಡುತ್ತಾರೆ; ಆದರೆ ಮೊಳೆಯುವುದು ಮಾತ್ರ ಬೀಜಕ್ಕೆ ಸೇರಿದ ಸಂಗತಿ.‘

ಶಿಕ್ಷಣದ ಬಗ್ಗೆ ಹಲವು ತೆರೆದ ಚರ್ಚೆಗಳು ನಡೆಯುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಈ ಸುಭಾಷಿತ ತುಂಬ ಒಪ್ಪುತ್ತದೆ.

ಶಿಕ್ಷಣ ನಮ್ಮ ಜೀವನದ ಅನಿವಾರ್ಯ ಭಾಗವಾಗಿದೆ; ಅನುಮಾನವೇ ಇಲ್ಲ. ಈ ಶಿಕ್ಷಣ ದೊರೆಯುವ ಕೇಂದ್ರವನ್ನು ನಾವು ಶಾಲೆಗಳಿಗೂ ಕಾಲೇಜುಗಳಿಗೂ ಸೀಮಿತಮಾಡಿಕೊಂಡಾಗಿದೆ. ಹೀಗಾಗಿ ಶಾಲಾ–ಕಾಲೇಜುಗಳು ನಮ್ಮ ಸಮಾಜದ ಮುಖ್ಯ ಘಟಕಗಳಾಗಿವೆ. ಇದರ ಸಾಧಕ–ಬಾಧಕಗಳನ್ನು ಸದ್ಯಕ್ಕೆ ಪಕ್ಕಕ್ಕಿಡೋಣ; ಶಿಕ್ಷಣವನ್ನು ಪಡೆಯಲು ಶಾಲಾ–ಕಾಲೇಜುಗಳಿಗಂತೂ ನಮ್ಮ ಮಕ್ಕಳನ್ನು ಕಳುಹಿಸಲೇ ಬೇಕು. ಏಕೆಂದರೆ ಮಕ್ಕಳಿಗೆ ಶಿಕ್ಷಣ ಬೇಕೇ ಬೇಕು. ಶಿಕ್ಷಣವಿಲ್ಲದೆ ಮಕ್ಕಳ ಭವಿಷ್ಯ ನಿರ್ಮಾಣವಾಗದು. ಹೆತ್ತವರು ತಮ್ಮ ಮಕ್ಕಳಿಗೆ ಶಿಕ್ಷಣವನ್ನು ಕೊಡಲೇಬೇಕು; ಆಗಲೇ ಅವರು ಸಜ್ಜನರು ಎನಿಸಿಕೊಳ್ಳುವುದು; ಈ ಕರ್ತವ್ಯವನ್ನು ನಿರ್ವಹಿಸಿದಾಗಲೇ ಅವರು ನಿಜವಾದ ಹೆತ್ತವರು ಎಂದೆನಿಸಿಕೊಳ್ಳುವುದು.

ಶಿಕ್ಷಣವನ್ನು ಕೊಡಲು ಹೆತ್ತವರು ಏನೆಲ್ಲ ಮಾಡಬಹುದು? ಶಾಲೆಗೆ ಕಳುಹಿಸಬಹುದು; ತುಂಬ ಪ್ರತಿಷ್ಠಿತ ಶಾಲೆಯನ್ನೋ ಕಾಲೇಜನ್ನೋ ಆರಿಸಬಹುದೆನ್ನಿ. ಜೊತೆಗೆ ಟ್ಯೂಷನ್‌ಗೂ ಕಳುಹಿಸಬಹುದು. ಶಾಲೆಗೂ ಮನೆಗೂ ಓಡಾಡಲು ಒಂದು ವಾಹನವನ್ನೇ ಗೊತ್ತುಮಾಡಬಹುದು; ಬೇಕಾದ ಪುಸ್ತಕ, ವ್ಯವಸ್ಥೆ – ಎಲ್ಲವನ್ನೂ ಸಮಯಕ್ಕೆ ಸರಿಯಾಗಿ ಒದಗಿಸಬಹುದು. ಇಷ್ಟರಿಂದಲೇ ಮಕ್ಕಳು ಶಿಕ್ಷಿತರಾಗುತ್ತಾರೆಯೋ? 

ಸರಿ, ಮಕ್ಕಳು ಕೂಡ ಚೆನ್ನಾಗಿ ಓದಿ, ಪರೀಕ್ಷೆಗಳನ್ನು ಯಶಸ್ವಿಯಾಗಿ ಜಯಿಸಿ, ಪ್ರಮಾಣಪತ್ರಗಳನ್ನೂ ದಕ್ಕಿಸಿಕೊಳ್ಳಬಹುದು. ಇಷ್ಟಕ್ಕೆ ಅವರ ಶಿಕ್ಷಣ ಮುಗಿದಂತೆಯೆ? ಅವರು ಈಗ ಶಿಕ್ಷಿತರಾದರೆ? ದಿಟ, ನಾವು ಶಿಕ್ಷಣವನ್ನು ಹೇಗೆ ವ್ಯಾಖ್ಯಾನಿಸುತ್ತೇವೆ ಎನ್ನುವುದರ ಮೇಲೆ ಈ ಪ್ರಶ್ನೆಗಳ ಉತ್ತರ ನಿಂತಿದೆಯೆನ್ನಿ. ಆದರೆ ಮೇಲಣ ಸುಭಾಷಿತ ಮಾತ್ರ ಶಿಕ್ಷಣದ ಇನ್ನೊಂದು ಬಹುಮುಖ್ಯ ಆಯಾಮದ ಕಡೆಗೆ ನಮ್ಮ ಗಮನವನ್ನು ಸೆಳೆಯುತ್ತಿದೆ.

ತಂದೆತಾಯಿಗಳು ಮಕ್ಕಳನ್ನು ಶಾಲೆಗೆ ಕಳುಹಿಸಬಹುದು; ಶಾಲೆಗಳು ಅವರಿಗೆ ಅಕ್ಷರಜ್ಞಾನವನ್ನೂ ಕಲಿಸಬಹುದು. ಆದರೆ ಅಷ್ಟಕ್ಕೆ ಅವರ ಶಿಕ್ಷಣ ಮುಗಿದಂತೆ ಆಗಲಿಲ್ಲ; ಒಳ್ಳೆಯ ಗುಣಗಳನ್ನು ವಿದ್ಯಾರ್ಥಿಗಳು ರೂಢಿಸಿಕೊಂಡಾಗಲಷ್ಟೆ ಅವರ ಶಿಕ್ಷಣ ಪೂರ್ಣವಾಗುವುದು ಎಂದು ಸುಭಾಷಿತ ಧ್ವನಿಸುತ್ತಿದೆ. ಹಾಗಾದರೆ ಈ ಸದ್ಗುಣಗಳನ್ನು ಕಲಿತುಕೊಳ್ಳಲು ಮಕ್ಕಳಿಗೆ ಇನ್ನು ಏನೇನು ಸೌಲಭ್ಯಗಳನ್ನು ಕೊಡಬೇಕಾಗುತ್ತದೆ? ಸದ್ಗುಣಗಳು ಹೊರಗಿನವರು ಒದಗಿಸುವ ಸಲಕರಣೆಗಳ ಮೇಲೆ ಅವಲಂಬಿತವಾಗಿಲ್ಲ; ಅವನ್ನು ವಿದ್ಯಾರ್ಥಿಗಳೇ ಸಂಪಾದಿಸಿಕೊಳ್ಳಬೇಕು. ಏಕೆಂದರೆ ಇವು ನಮ್ಮ ಒಳಗಿನ ಅಂತಃಸತ್ವದ ಭಾಗಗಳೇ ಹೊರತು ಹೊರಗಿನ ಅಲಂಕಾರವಲ್ಲ. ಸುಭಾಷಿತ ಈ ವಿವರವನ್ನು ಸುಂದರವಾದ ಉದಾಹರಣೆಯ ಮೂಲಕ ನಿರೂಪಿಸುತ್ತಿದೆ.

ರೈತನೊಬ್ಬ ಬೆಳೆಯನ್ನು ಬೆಳೆಯಲು ತೋಟವನ್ನೋ ಹೊಲವನ್ನೋ ಸಿದ್ಧಗೊಳಿಸುತ್ತಾನೆ. ನೆಲವನ್ನು ಉತ್ತು, ಬೀಜದ ಬಿತ್ತನೆಗೆ ಅದನ್ನು ಹಸನುಗೊಳಿಸುತ್ತಾನೆ. ಬೀಜವನ್ನೂ ಬಿತ್ತುತ್ತಾನೆ. ನೀರನ್ನೂ ಹಾಯಿಸುತ್ತಾನೆ. ಅಲ್ಲಿಗೆ ಅವನ ಕೆಲಸ ಮುಗಿಯಿತು. ಭೂಮಿಯನ್ನು ಸೇರಿದ ಬೀಜಕ್ಕೆ ’ತಾನು ಮೊಳೆಯಬೇಕು‘ ಎಂಬ ಉತ್ಸುಕತೆ, ಬಯಕೆ ಇಲ್ಲದಿದ್ದರೆ ರೈತನ ಅಷ್ಟೂ ಕೆಲಸ ವ್ಯರ್ಥವೇ ಆಗುತ್ತದೆ. ಆ ಬೀಜ ನೆಲದೊಂದಿಗೆ ತಾದಾತ್ಮ್ಯ ಗಳಿಸಬೇಕು, ಹಿಂಗಿದ ನೀರನ್ನು ಹೀರಿ ಅದನ್ನು ಜೀವದ್ರವ್ಯವನ್ನಾಗಿಸಿಕೊಳ್ಳಬೇಕು, ’ನನ್ನ ಅಭಿವ್ಯಕ್ತಿ ಈ ಪುಟ್ಟ ಕಣವಲ್ಲ, ನನ್ನ ಒಳಗಿನ ಚೈತನ್ಯಕ್ಕೆ ಅಗಾಧ ಶಕ್ತಿಯಿದೆ, ಅದು ವಿಶ್ವವ್ಯಾಪಕವಾಗಬಲ್ಲದು‘ ಎಂಬ ಸಂಕಲ್ಪಶಕ್ತಿಯಿಂದ ಭೂಮಿಯ ಜೊತೆಗೆ ಒಲವನ್ನು ಸಂಪಾದಿಸಿ, ಭೂಗರ್ಭದ ಕತ್ತಲಿನಿಂದ ಬಿಡುಗಡೆಯ ದಾರಿಯನ್ನು ಕಂಡುಕೊಳ್ಳಬೇಕು; ಸೂರ್ಯನ ಬೆಳಕಿನ ಕಡೆಗೆ ಉತ್ಸಾಹದಿಂದ ಚಿಮ್ಮಬೇಕು. ಈ ಎಲ್ಲ ವಿದ್ಯಮಾನಗಳು ರೈತನಿಗೆ ಸೇರಿದಂಥವಲ್ಲ; ಇವು ಬೀಜದಲ್ಲಿರುವ ಜೀವಶಕ್ತಿಯನ್ನೇ ಅವಲಂಬಿಸಿರುವಂಥವು. 

ಹೀಗೆಯೇ ಮಕ್ಕಳನ್ನು ಪಾಲಕ–ಪೋಷಕರು ಅಕ್ಷರಶಾಲಿಗಳನ್ನಾಗಿಸಬಹುದೇ ವಿನಾ ಅವರನ್ನು ಸದ್ಗುಣಶಾಲಿಗಳನ್ನಾಗಿಸಲಾರರು; ಅವನ್ನು ಮೈಗೂಡಿಸಿಕೊಳ್ಳಬೇಕಾದವರು ಮಕ್ಕಳೇ. ಸದ್ಗುಣಗಳನ್ನು ಶಾಲಾಕಾಲೇಜುಗಳನ್ನು ಕಲಿಸುತ್ತವೆಯೋ ಇಲ್ಲವೋ – ಹೇಳುವುದು ಕಷ್ಟ; ಆದರೆ ಪ್ರಪಂಚವೇ ನಮ್ಮ ವಿಶ್ವವಿದ್ಯಾಲಯವಾದಾಗ ದಿಟವಾಗಿಯೂ ಜೀವನಸೌಂದರ್ಯಕ್ಕೆ ಬೇಕಾದ ಗುಣಗಳ ಸಂಗ್ರಹ ಸಹಜವೇ ಆದೀತೆನ್ನಿ!

ಇಂದು ಶಾಲಾಕಾಲೇಜುಗಳ ಸಿಲಬಸ್‌ಗಳನ್ನು ಆನ್‌ಲೈನ್‌ ಮೂಲಕ ಮುಗಿಸಬಹುದು; ಆದರೆ ಸದ್ಗುಣಗಳನ್ನು ನಾಟಲು ಆನ್‌ಲೈನ್‌ ಕೃಷಿಗೆ ಸಾಧ್ಯವೆ – ಎಂದು ನಾವು ಮನನ ಮಾಡಬೇಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು