ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ಸುಖಮಯ ಜೀವನ

Last Updated 15 ಜುಲೈ 2021, 5:58 IST
ಅಕ್ಷರ ಗಾತ್ರ

ನ ಪುತ್ರಾತ್ಪರಮೋ ಲಾಭೋ ನ ಭಾರ್ಯಾಯ ಪರಂ ಸುಖಮ್‌ ।
ನ ಧರ್ಮಾತ್ಪರಮಂ ಮಿತ್ರಂ ನಾನೃತಾತ್ಪಾತಕಂ ಪರಮ್‌ ।।

ಇದರ ತಾತ್ಪರ್ಯ ಹೀಗೆ:‘ಪುತ್ರಲಾಭಕ್ಕಿಂತಲೂ ದೊಡ್ಡ ಲಾಭ ಮತ್ತೊಂದಿಲ್ಲ; ಹೆಂಡತಿಗೆ ಸಮನಾದ ಸುಖ ಇನ್ನೊಂದಿಲ್ಲ; ಧರ್ಮಕ್ಕಿಂತಲೂ ದೊಡ್ಡ ಮಿತ್ರನಿಲ್ಲ; ಸುಳ್ಳಿಗಿಂತಲೂ ದೊಡ್ಡ ಪಾಪ ಮತ್ತೊಂದಿಲ್ಲ.’

ನಾವು ಜೀವನದಲ್ಲಿ ಏನನ್ನು ಸಂಪಾದಿಸಲು ಬಯಸುತ್ತೇವೆ? ಲಾಭ, ಸುಖ, ಸ್ನೇಹ – ಇವನ್ನೇ ತಾನೆ? ಹೀಗೆಯೇ ನಾವು ಯಾವುದನ್ನು ಸಂಪಾದಿಸಲು ಬಯಸುವುದಿಲ್ಲ? ಪಾಪವನ್ನೇ ಅಲ್ಲವೆ? ಸುಭಾಷಿತ ಇವುಗಳ ಬಗ್ಗೆಯೇ ಇಲ್ಲಿ ಹೇಳುತ್ತಿರುವುದು.

ನಿಜವಾದ ಲಾಭ, ಸುಖ ಮತ್ತು ಸ್ನೇಹ ಎಲ್ಲಿದೆ ಎಂಬ ಗುಟ್ಟನ್ನು ರಟ್ಟುಮಾಡಿದೆ ಸುಭಾಷಿತ.

ಪುತ್ರಲಾಭಕ್ಕಿಂತಲೂ ದೊಡ್ಡ ಲಾಭ ಮತ್ತೊಂದಿಲ್ಲವಂತೆ. ಮಕ್ಕಳು ನಮ್ಮ ಭಾಗ್ಯವೇ ಹೌದು. ಅದೂ ನಮ್ಮ ಕೀರ್ತಿಯನ್ನು ಹೆಚ್ಚಿಸುವಂಥ, ನಮ್ಮ ಸುಖವನ್ನು ಕಾಪಾಡುವಂಥ ಮಕ್ಕಳು ನಮ್ಮ ಜೀವನಕ್ಕೆ ಲಾಭವೇ ಅಲ್ಲವೆ?

ನಮಗೆ ನಿಜವಾದ ಸುಖ ಸಿಗಬೇಕಾದರೆ ನಮ್ಮ ಮನೆಯ ವಾತಾವರಣ ಚೆನ್ನಾಗಿರಬೇಕು. ಒಳ್ಳೆಯ ಮಕ್ಕಳ ಜೊತೆಗೆ ಒಳ್ಳೆಯ ಹೆಂಡತಿಯೂ ದೊರಕಿದರೆ ಆಗ ನಮ್ಮ ಜೀವನ ಸಹಜವಾಗಿಯೇ ಸುಖಮಯವಾಗಿರುತ್ತದೆ.

ಹೆಂಡತಿ ಮತ್ತು ಮಕ್ಕಳ ಜೊತೆಗೆ ನಮ್ಮ ಜೀವನವನ್ನು ಸುಖಮಯಗೊಳಿಸುವಲ್ಲಿ ನಮ್ಮ ಸ್ನೇಹಿತರ ಪಾತ್ರವೂ ದೊಡ್ಡದು. ಸುಭಾಷಿತ ಅಂಥ ಸ್ನೇಹಿತನನ್ನೂ ಗುರುತಿಸಿದೆ. ಸ್ನೇಹಿತ ಎಂದರೆ ನಮ್ಮನ್ನು ಒಳ್ಳೆಯದರಲ್ಲಿ ತೊಡಗಿಸಬೇಕು, ಕೆಟ್ಟ ಕೆಲಸಗಳಿಂದ ದೂರಮಾಡಬೇಕು. ಹೀಗೆ ನಮ್ಮ ಏಳಿಗೆಗೆ ಕಾರಣವಾಗಬಲ್ಲ ನಿಜವಾದ ಸ್ನೇಹಿತ ಎಂದರೆ ಅದು ಧರ್ಮವೇ ಹೌದು ಎನ್ನುತ್ತಿದೆ ಅದು. ಕೇಡಿನಿಂದ ನಮ್ಮನ್ನು ರಕ್ಷಿಸಿ, ಒಳಿತನ್ನು ಉಂಟುಮಾಡುವುದೇ ಧರ್ಮದ ಉದ್ದೇಶ.

ನಮ್ಮ ಸುಖಮಯವಾದ ಜೀವನವನ್ನು ದುರಂತಕ್ಕೆ ನೂಕುವುದೇ ಪಾಪ. ಈ ಪಾಪದ ಮೂಲ ಯಾವುದು ಎಂಬುದನ್ನೂ ಸುಭಾಷಿತ ಹೇಳಿದೆ. ಸುಳ್ಳಿಗಿಂತ ದೊಡ್ಡ ಪಾಪ ಇನ್ನೊಂದಿಲ್ಲ ಎಂದು ಅದು ಘೋಷಿಸಿದೆ.

ನಮ್ಮ ಬದುಕನ್ನು ಸತ್ಯವಾಗಿಯೂ ಸುಖವಾಗಿಯೂ ಲಾಭಕರವಾಗಿಯೂ ಸ್ನೇಹಪರವಾಗಿಯೂ ರೂಪಿಸಿಕೊಳ್ಳುವ ಜಾಣ್ಮೆ ನಮ್ಮಲ್ಲಿಯೇ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT