ಭಾನುವಾರ, ಆಗಸ್ಟ್ 14, 2022
20 °C

ದಿನದ ಸೂಕ್ತಿ| ಸಂತೋಷ ಹೇಗಿರುತ್ತದೆ?

ಎಸ್. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ವಿಭೂಷಣಾಯ ಮಹತೇ ತೃಷ್ಣಾತಿಮಿರಹಾರಿಣೇ ।

ನಮಃ ಸಂತೋಷರತ್ನಾಯ ಸೇವಾವಿಷವಿನಾಶಿನೇ ।।

ಇದರ ತಾತ್ಪರ್ಯ ಹೀಗೆ:

‘ಮಹತ್ತರವಾದ ಅಲಂಕಾರವೂ, ಆಸೆಯೆಂಬ ಕತ್ತಲೆಯನ್ನು ಹೋಗಲಾಡಿಸತಕ್ಕದ್ದೂ, ಸೇವಾವಿಷವನ್ನು ನಾಶಮಾಡತಕ್ಕದ್ದೂ ಆದ ಸಂತೋಷವೆಂಬ ರತ್ನಕ್ಕೆ ನಮಸ್ಕಾರ.’

ಸಂತೋಷದ ಮಹತ್ವವನ್ನು ಈ ಸುಭಾಷಿತ ಸೊಗಸಾಗಿ ನಿರೂಪಿಸಿದೆ.

ನಮಗೆಲ್ಲರಿಗೂ ಸಂತೋಷ ಬೇಕು. ಆದರೆ ಸಂತೋಷ ಎಂದರೆ ಏನು – ಎಂಬುದು ನಮಗೆ ಮನವರಿಕೆ ಆಗುತ್ತಿಲ್ಲ. ಸಂತೋಷ ಎಂದರೆ ಏನು ಎಂಬುದನ್ನು ಸುಭಾಷಿತ ಹೇಳುತ್ತಿದೆ.

ಸಂತೋಷವನ್ನು ಅದು ರತ್ನಕ್ಕೆ ಹೋಲಿಸಿದೆ. ರತ್ನ ತುಂಬ ಬೆಲೆಯುಳ್ಳದ್ದು; ಅದು ಸಾಮಾನ್ಯ ಕಲ್ಲು ಅಲ್ಲವಷ್ಟೆ. ಆದರೆ ರತ್ನವನ್ನು ಗುರುತಿಸುವ ಕಲೆಗಾರಿಕೆಯೂ ನಮಗೆ ಗೊತ್ತಿರಬೇಕು. ಕಲ್ಲುಗಳ ರಾಶಿಯ ನಡುವೆ ರತ್ನವನ್ನು ಗುರುತಿಸುವುದು ಸುಲಭವಲ್ಲ. ಹೀಗೆಯೇ ನಾವು ಸಂತೋಷವನ್ನು ಗುರುತಿಸುವುದಕ್ಕೂ ವಿಶೇಷ ಶಕ್ತಿಯನ್ನು, ವಿವೇಕವನ್ನು ದಕ್ಕಿಸಿಕೊಂಡಿರಬೇಕಾಗುತ್ತದೆ. ಇಲ್ಲವಾದಲ್ಲಿ ಸಂತೋಷ ನಮ್ಮ ಬಳಿ ಇದ್ದರೂ ಅದು ನಮಗೆ ಗೊತ್ತಾಗದೆ ಹೋಗಬಹುದು.

ಹೀಗಾಗಿ ಸುಭಾಷಿತವು ಸಂತೋಷವನ್ನು ಗುರುತಿಸಲು ನೆರವಾಗುವುದಕ್ಕೆ ಅದರ ಗುಣಲಕ್ಷಣ–ಪ್ರಯೋಜನಗಳನ್ನು ಹೇಳಿದೆ.

ರತ್ನವನ್ನು ನಾವು ಆಭರಣವಾಗಿ ಧರಿಸುತ್ತೇವೆ; ಅದು ನಮ್ಮ ಅಲಂಕಾರವಾಗಿ ನಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ. ಹೀಗೆ ನಮ್ಮ ಜೀವನಕ್ಕೆ ಸಂತೋಷವೂ ಅಲಂಕಾರವಾಗಿ ಒದಗುತ್ತದೆ; ನಮ್ಮ ಜೀವನದ ಸೌಂದರ್ಯವನ್ನು ಹೆಚ್ಚಿಸುತ್ತದೆ. 

ರತ್ನಕ್ಕೆ ಬೆಳಕನ್ನು ನೀಡುವ ಶಕ್ತಿಯೂ ಇದೆ. ಕತ್ತಲೆಯನ್ನು ಬೆಳಕು ದೂರ ಮಾಡುತ್ತದೆ. ನಮ್ಮ ಜೀವನದಲ್ಲಿ ಕತ್ತಲೆ ಯಾವುದೆಂದರೆ ಆಸೆ. ಆಸೆ ಎಂಬ ಕತ್ತಲೆಯನ್ನು ಹೋಗಲಾಡಿಸುವ ಬೆಳಕೇ ಸಂತೋಷ. ಸಂತೋಷದ ಬೆಳಕಿನಲ್ಲಿ ನಮ್ಮ ಜೀವನದ ದಾರಿಯನ್ನು ಸ್ಪಷ್ಟವಾಗಿಸಿಕೊಳ್ಳಬಹುದು. ಆಸೆಗೆ ಕೊನೆಯೇ ಇರದು. ಆದರೆ ನಮಗೆ ಸಿಕ್ಕಿರುವ ವಿವರಗಳ ಮೂಲಕ ಸಂತೋಷವನ್ನು ಪಡೆಯುವುದು ಹೇಗೆ ಎಂಬುದರ ಬಗ್ಗೆ ಆಲೋಚಿಸಬೇಕೆ ವಿನಾ ಆಸೆಗೆ ಇನ್ನೊಂದು ಆಸೆ, ಅದಕ್ಕೆ ಇನ್ನೊಂದು  – ಹೀಗೆ ಹೆಚ್ಚಿಸಿಕೊಳ್ಳುತ್ತಹೋದರೆ ಕತ್ತಲೆಯ ಜೊತೆಗೆ ಇನ್ನೊಂದು ಕತ್ತಲೆ ಸೇರಿಕೊಂಡಂತಾಗುತ್ತದೆಯಷ್ಟೆ.

ಈ ಆಸೆಗಳ ಪರಂಪರೆ ಮುಂದುವರೆದರೆ ಏನಾಗುತ್ತದೆ? ಅವುಗಳನ್ನು ಪೂರೈಸಿಕೊಳ್ಳಲು ನಿರಂತರವಾಗಿ ಹೋರಾಡುತ್ತಲೇ ಇರಬೇಕು. ಜೀವನದಲ್ಲಿ ವಿಶ್ರಾಂತಿಗೂ ಸಮಯವಿಲ್ಲದಂತೆ, ದಕ್ಕಿರುವ ಸಂತೋಷನ್ನು ಅನುಭವಿಸಲೂ ಆಗದಂತೆ ನಿರಂತರವಾಗಿ ದುಡಿಯುತ್ತಲೇ ಇರಬೇಕಾಗುತ್ತದೆ. ದುಡಿಮೆ ಎಂದರೆ ಏನು? ಒಬ್ಬರಲ್ಲೋ ಅಥವಾ ಹಲವರಲ್ಲೋ ಸೇವೆ ಮಾಡುವುದೇ ಅಲ್ಲವೆ? ನಾವು ವ್ಯಾಪಾರ ಮಾಡಿದರೂ, ಉದ್ಯೋಗ ಮಾಡಿದರೂ – ಇನ್ನೊಬ್ಬರ ಸೇವೆ ಮಾಡಿದಂತೆಯೇ ಹೌದಲ್ಲವೆ? ಸೇವೆಯನ್ನು ಸುಭಾಷಿತ ವಿಷಕ್ಕೆ ಹೋಲಿಸಿದೆ. ವಿಷ ನಮ್ಮ ಜೀವನಕ್ಕೆ ಮಾರಕವಾದುದು. ಸಂತೋಷದ ಬೆಲೆಯನ್ನು ತಿಳಿದುಕೊಂಡರೆ ಆಗ ಈ ಸೇವೆಯ ಅನಿರ್ವಾಯತೆಯೂ ತಗ್ಗುತ್ತದೆ; ಜೀವನವು ಅಪಾಯದಿಂದಲೂ ಪಾರಾದಂತಾಗುತ್ತದೆ.

ಸಂತೋಷ ಎಂದರೆ ಏನು ನಾವು ಚೆನ್ನಾಗಿ ಆಲೋಚಿಸಿ, ಅದನ್ನು ಸಾಕ್ಷಾತ್ಕರಿಸಿಕೊಂಡು, ಜೀವನದಲ್ಲಿ ಅದರ ಬೆಳಕಿನಲ್ಲಿ ನಡೆಯುವ ಸಂಕಲ್ಪವನ್ನು ಇಂದೇ ಮಾಡೋಣ.

 

 

 

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು