ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ಸಮುದ್ರವೋ ಬಾವಿಯೋ

Last Updated 8 ಡಿಸೆಂಬರ್ 2020, 10:27 IST
ಅಕ್ಷರ ಗಾತ್ರ

ದಾತಾ ಲಘುರಪಿ ಸೇವ್ಯೋ ಭವತಿ ನ ಕೃಪಣೋ ಮಹಾನಪಿ ಸಮೃದ್ಧ್ಯಾ ।
ಕೂಪೋsತಃ ಸ್ವಾದುಜಲಃ ಪ್ರೀತ್ಯೈ ಲೋಕಸ್ಯ ನ ಸಮುದ್ರಃ ।।

ಇದರ ತಾತ್ಪರ್ಯ ಹೀಗೆ:

‘ದಾನಮಾಡುವವನು ಅಲ್ಪನಾದರೂ ಸೇವಿಸಲು ತಕ್ಕವನು. ಐಶ್ವರ್ಯದಿಂದ ದೊಡ್ಡವನೇ ಆಗಿದ್ದರೂ ಜಿಪುಣನು ಸೇವಿಸಲು ಅರ್ಹನಲ್ಲ. ಇದು ಹೇಗೆಂದರೆ, ಬಾವಿಯೊಳಗಿನ ಸಿಹಿನೀರು ಲೋಕಕ್ಕೆ ಪ್ರೀತಿಯನ್ನು ಉಂಟುಮಾಡುತ್ತದೆಯೆ ಹೊರತು ಸಮುದ್ರ ಹಾಗೆ ಮಾಡುವುದಿಲ್ಲ.’

ನಮ್ಮಲ್ಲಿ ಯಾವ ಪ್ರಮಾಣದಲ್ಲಿ ವಸ್ತುಸಂಗ್ರಹವೋ ಐಶ್ವರ್ಯಸಂಗ್ರಹವೋ ಇದೆ – ಎಂಬುದು ಮುಖ್ಯವಲ್ಲ; ಅದು ನಮಗೆ ಎಷ್ಟು ಒದಗುತ್ತದೆ, ಪ್ರಯೋಜನಕ್ಕೆ ಬರುತ್ತದೆ ಎಂಬುದೇ ಮುಖ್ಯ. ಸುಭಾಷಿತ ಇದನ್ನೇ ಹೇಳುತ್ತಿರುವುದು.

ನಮ್ಮಲ್ಲಿ ಕೋಟಿಗಟ್ಟಲೇ ಹಣ ಇರಬಹುದು. ಹೀಗೆ ಹಣ ಇರುವುದೇ ಮುಖ್ಯವಲ್ಲ. ಅದು ನಮ್ಮ ಸಹಾಯಕ್ಕೆ ಬರಬೇಕು; ನಮ್ಮನ್ನು ನಂಬಿರುವವರ ಸಹಾಯಕ್ಕೂ ಬರಬೇಕು. ಆಗ ಮಾತ್ರವೇ ಅದರ ಸಾರ್ಥಕತೆ. ಹೀಗಲ್ಲದೆ ಅದು ಸುಮ್ಮನೆ ನಮ್ಮ ಬ್ಯಾಂಕ್‌ ಅಕೌಂಟ್‌ನಲ್ಲಿ ಶೇಖರಣೆಯಾಗಿದ್ದರೆ ಅದರಿಂದ ಏನು ಪ್ರಯೋಜನ?

ಸುಭಾಷಿತ ಇಲ್ಲಿ ನೀಡಿರುವ ಉದಾಹರಣೆಯನ್ನೇ ನೋಡಬಹುದು.

ಒಬ್ಬನಲ್ಲಿ ಹೇರಳವಾದ ಸಂಪತ್ತು ಇದೆ; ಆದರೆ ಅವನು ಜಿಪುಣ. ಇನ್ನೊಬ್ಬನಲ್ಲಿ ಹಣ ಸಾಕಷ್ಟು ಇಲ್ಲ; ಆದರೆ ಅವನು ಬೇರೊಬ್ಬರ ಕಷ್ಟಕ್ಕೆ ಸ್ಪಂದಿಸುತ್ತಾನೆ. ಇವರಿಬ್ಬರಲ್ಲಿ ನಮಗೆ ಯಾರು ಮುಖ್ಯ ಎಂದರೆ ಸಹಾಯಬುದ್ಧಿ ಇರುವವನೇ. ಈ ವಿವರವನ್ನು ಅರ್ಥಮಾಡಿಸಲು ಸುಭಾಷಿತ ಬಳಸಿಕೊಂಡಿರುವ ಹೋಲಿಕೆಯೂ ಸೊಗಸಾಗಿದೆ.

ನಮಗೆ ಈಗ ಬಾಯಾರಿಕೆ; ಕುಡಿಯಲು ನೀರು ಬೇಕು. ನಾವು ಸಮುದ್ರದ ಸಮೀಪದಲ್ಲಿಯೇ ಇದ್ದೇವೆ. ಸಮುದ್ರದ ನೀರಿನ ಪ್ರಮಾಣ ನಮ್ಮ ಊಹೆಗೂ ನಿಲುಕದ್ದು. ಹೀಗಿದ್ದರೂ ನಾವು ನಮ್ಮ ಬಾಯಾರಿಕೆಯನ್ನು ಸಮುದ್ರದ ನೀರಿನ್ನು ಕುಡಿದು ಹೋಗಲಾಡಿಸಿಕೊಳ್ಳಲು ಸಾಧ್ಯವೆ? ನಮ್ಮ ಬಾಯಾರಿಕೆಯನ್ನು ತಣಿಸುವುದು ಬಾವಿಯ ನೀರೇ ಹೊರತು ಸಮುದ್ರದ ನೀರಲ್ಲ. ಹೌದು, ಸಮುದ್ರದ ನೀರಿನ ಪ್ರಮಾಣಕ್ಕೆ ಹೋಲಿಸಿದರೆ ಬಾವಿಯ ನೀರು ಸ್ವಲ್ಪವೇ ಸ್ವಲ್ಪ. ಆದರೆ ನಮಗೆ ಒದಗುವುದು ಬಾವಿಯ ನೀರೇ ಹೊರತು ಸಮುದ್ರದ ನೀರಲ್ಲ.

ಹೀಗಾಗಿ ನಮ್ಮ ಬಳಿ ಅದಿದೆ, ಇದಿದೆ; ಅದು ಅಷ್ಟಿದೆ, ಇದು ಅಷ್ಟಿದೆ – ಎಂದೆಲ್ಲ ಲೆಕ್ಕಾಚಾರ ಹಾಕುವ ಮೊದಲು ಅವು ನಮ್ಮ ಆವಶ್ಯಕತೆಯನ್ನು ಎಷ್ಟು ಪೂರೈಸುತ್ತಿದೆ – ಎಂಬುದು ಮುಖ್ಯ. ಗುಣದಲ್ಲಿರುವ ಸಿರಿತನವೇ ದಿಟವಾದ ಐಶ್ವರ್ಯ, ಬ್ಯಾಂಕ್‌ನಲ್ಲಿರುವ ನೋಟಿನ ಕಂತೆಗಳು ಅಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT