ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ | ಕೂಡಿ ಬಾಳಿದರೆ ಸ್ವರ್ಗಸುಖ

Last Updated 13 ಆಗಸ್ಟ್ 2020, 19:45 IST
ಅಕ್ಷರ ಗಾತ್ರ

ಸಂತುಷ್ಟೋ ಭಾರ್ಯಯಾ ಭರ್ತಾ ಭರ್ತ್ರಾ ಭಾರ್ಯಾ ತಥೈವ ಚ ।
ಯಸ್ಮಿನ್ನೇವ ಕುಲೇ ನಿತ್ಯಂ ಕಲ್ಯಾಣಂ ತತ್ರ ವೈ ಧ್ರುವಮ್ ।।

ಇದರ ತಾತ್ಪರ್ಯ ಹೀಗೆ:

‘ಯಾವ ಕುಟುಂಬದಲ್ಲಿ ಗಂಡನಿಂದ ಹೆಂಡತಿಯೂ, ಹೆಂಡತಿಯಿಂದ ಗಂಡನೂ ತೃಪ್ತರಾಗಿ ಆನಂದವನ್ನು ಪಡೆಯುತ್ತಾರೆಯೋ, ಅಲ್ಲಿ ಯಾವಾಗಲೂ ಮಂಗಳವೇ ಉಂಟಾಗುತ್ತದೆ.‘

ಸುಖವನ್ನು ಹುಡುಕಿಕೊಂಡು ಎಲ್ಲೆಲ್ಲೋ ಅಲೆಯುತ್ತೇವೆ; ಆದರೆ ಸುಖದ ಮೂಲ ಇರುವುದೇ ನಮ್ಮ ಮನೆಯಲ್ಲಿ, ನಮ್ಮ ಕುಟುಂಬದಲ್ಲಿ – ಎನ್ನುವುದನ್ನು ಮರೆಯುತ್ತೇವೆ.

ಮನೆ ಸೌಹಾರ್ದದ ಮೊದಲ ನೆಲೆಯಾಗಬೇಕು. ಮನೆಯಲ್ಲಿಯೇ ನೆಮ್ಮದಿ, ಸಂತೋಷ, ಸೌಹಾರ್ದಗಳು ಇಲ್ಲವಾದಲ್ಲಿ ಅದು ಮತ್ತೆಲ್ಲೂ ಸಿಗಲಾರದು. ವಾಸ್ತವಾಗಿ ಸುಖ–ಸಂತೋಷಕ್ಕಾಗಿ ಯಾರಾದರೂ ಎಲ್ಲೆಲ್ಲೋ ಅಲೆಯುತ್ತಿದ್ದಾರೆ ಎಂದರೆ ಅದರ ಅರ್ಥ ಅವರಿಗೆ ತಮ್ಮ ಮನೆಯಲ್ಲಿ ಅವು ಸಿಗುತ್ತಿಲ್ಲ ಎನ್ನುವುದು ಸ್ಪಷ್ಟ. ಮನೆಯಲ್ಲಿ ಮಂಗಳ, ಎಂದರೆ ಸಂತೋಷಕರ ವಾತಾವರಣ ನೆಲೆಗೊಳ್ಳಲು ಸಾಧ್ಯವಾಗುವುದು ಮನೆಯ ಸದಸ್ಯರಿಂದಲೇ. ಅದರಲ್ಲೂ ಮನೆಯ ಮುಖ್ಯಸ್ಥರಾಗಿರುವ ಗಂಡ–ಹೆಂಡತಿ ಪರಸ್ಪರ ಅನ್ಯೋನ್ಯಭಾವದಲ್ಲಿರಬೇಕು. ಆಗಷ್ಟೇ ಉಳಿದ ಸದಸ್ಯರಿಗೂ ಅದು ಮಾರ್ಗದರ್ಶಕವಾಗಬಲ್ಲದು. ಹೀಗಲ್ಲದೆ, ಅಪ್ಪ–ಮಕ್ಕಳು ಸದಾ ಜಗಳದಲ್ಲಿದ್ದರೆ ಮಕ್ಕಳಿಗೆ ಅದರಿಂದ ಎಂಥ ಪರಿಣಾಮ ಎದುರಾಗಬಹುದು? ಗಂಡ–ಹೆಂಡರ ಜಗಳದಲ್ಲಿ ಕೂಸು ಬಡವಾಯಿತು – ಎಂಬ ಮಾತನ್ನು ಕೇಳಿದ್ದೇವೆ.

ಮನೆ ಎಂದಮೇಲೆ ದಿನವೂ ಹತ್ತಾರು ರೀತಿಯ ಸಮಸ್ಯೆಗಳು ಎದುರಾಗುತ್ತಲೇ ಇರುತ್ತವೆ. ಇವನ್ನು ಪರಿಹರಿಸಿಕೊಳ್ಳುವ ಜಾಣ್ಮೆ–ಪ್ರಬುದ್ಧತೆಗಳು ನಮ್ಮದಾಗಬೇಕೇ ವಿನಾ ಇವಕ್ಕೆ ನಮ್ಮ ಸಂಬಂಧಗಳನ್ನು ಮುರಿಯಬಲ್ಲ ಅವಕಾಶ ನೀಡಬಾರದು.

ಇಲ್ಲಿ ಇನ್ನೊಂದು ಶ್ಲೋಕವನ್ನು ನೋಡಬಹುದು:

ಯಃ ಸ್ವಧರ್ಮೇಣ ಮಾಂ ನಿತ್ಯಂ ನಿರಾಶೀಃ ಶ್ರದ್ಧಯಾನ್ವಿತಃ ।
ಭಜತೇ ಶನಕೈಸ್ತಸ್ಯ ಮನೋ ರಾಜನ್‌ ಪ್ರಸೀದತಿ ।।

‘ಸಾಧ್ವಿ ಮತ್ತು ಪ್ರಿಯವಾದಿನಿಯಾದ ಹೆಂಡತಿ ಯಾವನಿಗಿಲ್ಲವೋ ಅವನು ಕಾಡಿಗೆ ಹೋಗುವುದೇ ಲೇಸು. ಅವನಿಗೆ ಮನೆ ಮತ್ತು ಕಾಡು – ಎರಡೂ ಒಂದೇ‘ – ಎಂಬುದು ಇದರ ತಾತ್ಪರ್ಯ.

ಇಲ್ಲಿ ಬುದ್ಧಿವಾದವನ್ನು ಕೇವಲ ಹೆಂಡತಿಗೆ ಮಾತ್ರವೇ ಹೇಳಿಲ್ಲ; ಹೆಂಡತಿ ಎಂದರೆ ಗಂಡನೂ ಸೇರುತ್ತಾನೆ, ಗಂಡ ಎಂದರೆ ಹೆಂಡತಿಯೂ ಸೇರುತ್ತಾಳೆ. ಹೀಗೆ ತಿಳಿದುಕೊಳ್ಳದೆಯೇ ಅರ್ಥಮಾಡಲು ತೊಡಗುವುದು ಈಜು ಗೊತ್ತಿಲ್ಲದೆ ನದಿಗೆ ಹಾರಿದಂತಾಗುತ್ತದೆಯಷ್ಟೆ!

ಸಂಬಂಧಗಳಲ್ಲಿ ಸೌಹಾರ್ದ ಮೂಡಲು ಸಿದ್ಧವಾಗಬೇಕಾದುದ್ದು ವ್ಯಕ್ತಿತ್ವಗಳಲ್ಲಿ ಪಕ್ವತೆ. ಈ ಪರಿಪಾಕ ನಮ್ಮ ನಡೆ–ನುಡಿಗಳಲ್ಲಿ ಅಭಿವ್ಯಕ್ತವಾಗಬೇಕು. ಮೊದಲಿಗೆ ನಮ್ಮ ನಾಲಗೆಯ ಮೇಲೆ ಹಿಡಿತ ಮುಖ್ಯ. ನಾವಾಡುವ ಮಾತುಗಳು ಹಿತವಾಗಿರಬೇಕು; ಸಂದರ್ಭಕ್ಕೆ ತಕ್ಕ ರೀತಿಯಲ್ಲಿರಬೇಕು; ಉದ್ವೇಗ ಉಂಟಾದಾಗ ಅದನ್ನು ಶಮನಗೊಳಿಸಬಲ್ಲಂಥ ಕುಶಲತೆಯಿಂದಲೂ ಕೂಡಿರಬೇಕು; ನಮ್ಮ ಅರ್ಹತೆ–ಹೊಣೆಗಾರಿಕೆಗಳಿಗೆ ಧಕ್ಕೆ ಬಾರದ ರೀತಿಯಲ್ಲಿ ನಮ್ಮ ಮಾತಿನ ವೈಖರಿ ಇರಬೇಕು. ಪ್ರಿಯವಾಗಿ ಮಾತನಾಡುವುದು ಎಂದರೆ ಇಷ್ಟೆಲ್ಲ ವಿವರಗಳು ಅವುಗಳಲ್ಲಿರಬೇಕು. ಹೀಗೆಂದು ಪ್ರಿಯವಾಗಿ ಹೇಳಬೇಕು ಎಂದು ಸುಳ್ಳು–ಕಪಟಗಳನ್ನು ನುಡಿಯಬೇಕು ಎಂದಲ್ಲ; ಕಠೋರ ಸತ್ಯವನ್ನು ಹೇಳುವಾಗಲೂ ನಯ–ನಾಜೂಕುಗಳನ್ನು ಬಿಡಬಾರದು.

ಸಾಧುತನ ಎಂದರೂ ಇದೇ. ಪರಸ್ಪರ ಗೌರವವನ್ನೂ ಹಿತವನ್ನೂ ಕಾಪಾಡಬಲ್ಲ ನಡೆವಳಿಕೆಗಳೇ ಸಾಧ್ವಿಗಳ ರೀತಿ–ನೀತಿ. ಕುಟುಂಬದ ಸಾಮರಸ್ಯವನ್ನು ಕಾಪಾಡುವುದು ಸಮಾನವಾಗಿ ಗಂಡ–ಹೆಂಡತಿ – ಇಬ್ಬರ ಕರ್ತವ್ಯವೂ ಆಗಿರುತ್ತದೆ ಎನ್ನುವುದನ್ನು ಮರೆಯುವಂತಿಲ್ಲ; ಬದುಕಿನ ಪ್ರೀತಿಯ ಬಂಡಿಗೆ ಇವರಿಬ್ಬರೂ ಜೋಡಿ ಕುದುರೆಗಳು; ಇಬ್ಬರೂ ಒಂದೇ ದಿಕ್ಕಿನಲ್ಲಿ, ಒಂದೇ ವೇಗದಲ್ಲಿ ಹೆಜ್ಜೆ ಹಾಕಿದರಷ್ಟೆ ಕುಟುಂಬದ ಪ್ರಯಾಣವು ಹಿತವೂ ಸುಖಮಯವೂ ಆಗಿರುತ್ತದೆ. ‘ಕೂಡಿ ಬಾಳಿದರೆ ಸ್ವರ್ಗಸುಖ‘ ಎನ್ನುವುದನ್ನು ಮನೆಯ ಸದಸ್ಯರೆಲ್ಲರೂ ಮರೆಯಬಾರದು. ಕೂಡಿ ಬಾಳುವ ಮನಸ್ಸು–ಬುದ್ಧಿಗಳು ಇದ್ದರೆ ಆಗ ಕಾಡು ಕೂಡ ಸ್ವರ್ಗವಾಗುತ್ತದೆ; ಕೂಡಿ ಬಾಳುವ ಮನಸ್ಸು–ಬುದ್ಧಿಗಳು ಇಲ್ಲವಾದಲ್ಲಿ ಆಗ ಮನೆಯೇ ನರಕವಾಗುವುದು ನಿಶ್ಚಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT