ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ಆನಂದದ ಗುಟ್ಟು

Last Updated 18 ಜನವರಿ 2021, 0:49 IST
ಅಕ್ಷರ ಗಾತ್ರ

ಪ್ರಾಸಾದಿಕತ್ವಮಾರೋಗ್ಯಂ ಪ್ರಾಮೋದ್ಯಂ ಚಿರಜೀವಿತಮ್‌ ।
ಚಕ್ರವರ್ತಿಸುಖಂ ಸ್ಫೀತಂ ಶಾತಂ ಪ್ರಾಪ್ನೋತಿ ಸಂಸರನ್‌ ।।

ಇದರ ತಾತ್ಪರ್ಯ ಹೀಗೆ:‘ಸಂಸಾರದಲ್ಲಿದ್ದರೂ ಶಾಂತವಾಗಿರುವವನು ಮಾನಸಿಕ ತೃಪ್ತಿಯನ್ನೂ ಆರೋಗ್ಯವನ್ನೂ ಸಂತೋಷವನ್ನೂ ದಿರ್ಘಾಯುಷ್ಯವನ್ನೂ ರಾಜಭೋಗಗಳನ್ನೂ ಪಡೆಯುತ್ತಾನೆ.’

ನಮ್ಮ ಆನಂದಕ್ಕೂ ನಮ್ಮ ಶಾಂತಸ್ಥಿತಿಗೂ ನೇರ ಸಂಬಂಧವಿದೆ ಎಂಬುದನ್ನು ಸುಭಾಷಿತ ಹೇಳುತ್ತಿದೆ.

ನಮ್ಮಲ್ಲೊಂದು ಕಲ್ಪನೆಯಿದೆ, ಸನ್ಯಾಸಿಗಳು ಸದಾ ನೆಮ್ಮದಿಯಾಗಿರುತ್ತಾರೆ; ಸಂಸಾರಿಗಳಿಗೆ ಆ ಭಾಗ್ಯವಿಲ್ಲ ಎಂದು. ಆದರೆ ಸುಭಾಷಿತ ಈ ಕಲ್ಪನೆಯಲ್ಲಿ ಹುರುಳಿಲ್ಲ ಎಂದು ಹೇಳುತ್ತಿದೆ. ಯಾರು ಶಾಂತಸ್ಥಿತಿಯಲ್ಲಿರುತ್ತಾರೋ ಅಂಥವರೇ ಸುಖಿಗಳು; ಅವರೇ ನೆಮ್ಮದಿಯಾಗಿರಬಲ್ಲರು ಎಂದೂ ಅದು ಇಲ್ಲಿ ಹೇಳಿದೆ. ಸಂಸಾರಿಯಾಗಿದ್ದೂ ಸನ್ಯಾಸಿಯಂತೆ ಸುಖಿಯಾಗಿರಬಹುದು; ಸನ್ಯಾಸಿಯಾಗಿದ್ದೂ ಸಂಸಾರಿಯಾಗಿ ಬಂಧನಗಳಲ್ಲಿ ಸಿಕ್ಕಿಹಾಕಿಕೊಂಡು ದುಃಖದಲ್ಲಿ ಮುಳುಗಬಹುದು.

ನಾವು ನೆಮ್ಮದಿಯಾಗಿರುವುದಕ್ಕೆ ಏನೆಲ್ಲ ಬೇಕು? ಮನಸ್ಸು ತೃಪ್ತಿಯಲ್ಲಿ ಇರಬೇಕು; ಆರೋಗ್ಯ ಇರಬೇಕು; ಸಂತೋಷ ಇರಬೇಕು; ಆಯುಸ್ಸು ಇರಬೇಕು; ಭೋಗಭಾಗ್ಯಗಳು ಇರಬೇಕು. ಇವೆಲ್ಲವನ್ನೂ ನಾವು ಹೇಗೆ ಸಂಪಾದಿಸಬಹುದು?

ನಾವು ಅಂದುಕೊಳ್ಳುತ್ತೇವೆ, ಇವೆಲ್ಲವನ್ನು ಸಂಪಾದಿಸಲು ನಾವು ಮೊದಲಿಗೆ ಏಕಾಂತವಾಗಿರಬೇಕು; ಎಲ್ಲೋ ದೂರದಲ್ಲಿ ಹಿಮಾಲಯಕ್ಕೆ ಓಡಿಹೋಗಬೇಕು; ಯಾವುದೇ ಹೊಣೆಗಾರಿಕೆಗಳು, ಹೊರೆಗಳು, ಕರ್ತವ್ಯಗಳು ಇಲ್ಲದೇ ಸ್ವತಂತ್ರವಾಗಿರಬೇಕು. ಹೀಗೆಲ್ಲ ಯೋಚಿಸುತ್ತೇವೆ. ಈ ಕಾರಣದಿಂದಲೇ ನಾವು ಸಂಸಾರವನ್ನು ಬಯಸುವುದಿಲ್ಲ, ಸನ್ಯಾಸವನ್ನು ಬಯಸುತ್ತೇವೆ.

ಆದರೆ ನಾವು ಸನ್ಯಾಸಿಯೋ ಅಥವಾ ಸಂಸಾರಿಯೋ ಎಂಬುದು ಮುಖ್ಯವಲ್ಲ; ನಮ್ಮ ಮನಸ್ಸು ಹೇಗಿದೆ ಎಂಬುದು ಮುಖ್ಯ. ಏಕೆಂದರೆ ನಮ್ಮ ಆನಂದವನ್ನು ನಿಯಂತ್ರಿಸುವುದು ನಮ್ಮ ಮನಸ್ಸೇ ಹೊರತು ನಾವು ಹಾಕಿರುವ ಬಟ್ಟೆಯಲ್ಲ ಎಂಬುದು ಇಲ್ಲಿರುವ ಧ್ವನಿ.

ನಮ್ಮ ಮನಸ್ಸು ನಮ್ಮ ನಿಯಂತ್ರಣದಲ್ಲಿದ್ದರೆ ಆಗ ಅದು ಶಾಂತವಾಗಿದೆ ಎಂದೇ ಅರ್ಥ. ಮನಸ್ಸು ಶಾಂತವಾಗಿದ್ದರೆ ನಾವು ಸಂಸಾರದಲ್ಲಿದ್ದರೂ ಸನ್ಯಾಸಿಯಾಗಿದ್ದರೂ ಒಂದೇ. ಶಾಂತಸ್ಥಿತಿಯಲ್ಲಿರುವ ಮನಸ್ಸು ನಮಗೆ ಆನಂದವನ್ನು ಕೊಡಬಲ್ಲದು; ಜೊತೆಗೆ ತೃಪ್ತಿಯನ್ನೂ ಆರೋಗ್ಯವನ್ನೂ ಸಂತೋಷವನ್ನೂ ದಿರ್ಘಾಯುಷ್ಯವನ್ನೂ ಸುಖಗಳನ್ನೂ ಒದಗಿಸಬಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT