ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ಸ್ವಾಭಿಮಾನಿಗಳಾಗಿ

Last Updated 23 ಡಿಸೆಂಬರ್ 2020, 1:39 IST
ಅಕ್ಷರ ಗಾತ್ರ

ಉತ್ತಮಾ ಆತ್ಮನಾ ಖ್ಯಾತಾಃ ಪಿತ್ರಾ ಖ್ಯಾತಾಶ್ಚ ಮಧ್ಯಮಾಃ ।

ಮಾತುಲೇನಾಧಮಾಃ ಖ್ಯಾತಾಃ ಶ್ವಶುರೇಣಾಧಮಾಧಮಾಃ ।।

ಇದರ ತಾತ್ಪರ್ಯ ಹೀಗೆ:

‘ತನ್ನ ಕಾರಣದಿಂದ ತಾನೇ ಖ್ಯಾತಿಯನ್ನು ಗಳಿಸಿದವರು ಉತ್ತಮರು; ತಂದೆಯಿಂದ ಖ್ಯಾತಿಗೆ ಬಂದವರು ಮಧ್ಯಮರು; ಸೋದರಮಾವನಿಂದ ಖ್ಯಾತರಾದವರು ಅಧಮರು. ಹೆಣ್ಣು ಕೊಟ್ಟ ಮಾವನಿಂದ ಖ್ಯಾತಿಯನ್ನು ಗಳಿಸಿದವರು ಅಧಮರಲ್ಲಿಯೇ ಅಧಮರು!’

ಸ್ವಂತಿಕೆ ಎನ್ನುವುದು ನಮ್ಮ ವ್ಯಕ್ತಿತ್ವದ ಪ್ರಧಾನ ಗುಣ ಆಗಬೇಕು; ಹೀಗಲ್ಲದೆ ಬೇರೊಬ್ಬರ ಹೆಸರನ್ನು ಬಳಸಿಕೊಂಡು ಮೆರೆಯವುದು ನಮ್ಮ ವ್ಯಕ್ತಿತ್ವಕ್ಕೆ ಭೂಷಣವಲ್ಲ – ಎಂಬುದನ್ನು ಸುಭಾಷಿತ ಹೇಳುತ್ತಿದೆ.

ಮಂತ್ರಿಯೋ ಎಂಪಿಯೋ ಎಂಎಲ್‌ಎಯೋ ಅಲ್ಲ, ಅವರ ಬಂಧುಗಳು, ಅವರ ಬಂಧುಗಳ ಬಂಧುಗಳು ಸಮಾಜದಲ್ಲಿ ಉಂಟುಮಾಡುವ ಉಪದ್ವ್ಯಾಪಗಳನ್ನು ನಾವು ಆಗಾಗ ಅನುಭವಿಸುತ್ತಲೇ ಇರುತ್ತೇವೆ. ಹೀಗೆಯೇ ಅಧಿಕಾರಿಗಳು, ಅವರ ಮಕ್ಕಳ, ಅವರ ಸ್ನೇಹಿತರು – ಇವರ ದರ್ಪಗಳನ್ನೂ ನಾವು ಅನುಭವಿಸಿರುತ್ತೇವೆ. ಇಂಥ ಹಲವು ರೀತಿಯ ಪರಾವಲಂಬಿಗಳನ್ನು ಸುಭಾಷಿತ ಇಲ್ಲಿ ಟೀಕೆ ಮಾಡುತ್ತಿದೆ.

ತನ್ನದೇ ಕಾರ್ಯಶೀಲತೆಯಿಂದ ಕೀರ್ತಿಯನ್ನು ಸಂಪಾದಿಸಿದವರು ಉತ್ತಮ ವ್ಯಕ್ತಿತ್ವದವರು ಎಂದು ಅದು ಘೋಷಿಸಿದೆ. ಹೀಗೆ ಹೆಸರನ್ನು ಸಂಪಾದಿಸಿದಾಗ ನಮಗೆ ಸಂತೋಷ, ಆತ್ಮತೃಪ್ತಿಗಳು ಉಂಟಾಗುವುದು ಸುಳ್ಳಲ್ಲ. ಶ್ರೀರಾಮ ಅವನ ವ್ಯಕ್ತಿತ್ವದ ಮೂಲಕವೇ ಲೋಕದಲ್ಲಿ ಕೀರ್ತಿಯನ್ನು ಸಂಪಾದಿಸಿದ್ದು.

ತಂದೆಯ ಕಾರಣದಿಂದ ಅಥವಾ ಸೋದರಮಾವ – ಎಂದರೆ ತಾಯಿಯ ಕಡೆಯಿಂದ ಅಥವಾ ಮಾವನ ಆಶ್ರಯದಲ್ಲಿ ಹೆಸರನ್ನು ಪಡೆದು, ಮೆರೆಯುವವರನ್ನು ಸುಭಾಚಿತ ಚೆನ್ನಾಗಿಯೇ ಟೀಕಿಸಿದೆ. ಆತ್ಮಾಭಿಮಾನ ಎಂಬುದು ನಮ್ಮ ವ್ಯಕ್ತಿತ್ವದ ಸ್ವಭಾವವಾಗಬೇಕು. ಹೀಗಲ್ಲದೆ ಬೇರೊಬ್ಬರ ನೆರಳಿನಲ್ಲಿ ನಮ್ಮ ಅಸ್ತಿತ್ವವನ್ನು ಕಂಡುಕೊಳ್ಳುವುದು ಉತ್ತಮರ ಲಕ್ಷಣವಲ್ಲವಷ್ಟೆ.

ನಮ್ಮ ಕಾರಣದಿಂದ ನಮ್ಮ ಕುಟುಂಬಕ್ಕಾಗಲೀ, ಬಂಧುಗಳಿಗಾಗಲೀ ಅಥವಾ ಸ್ನೇಹಿತರಿಗಾಗಲೀ ಒಳ್ಳೆಯ ಹೆಸರು ದಕ್ಕಬೇಕು. ಹೀಗಲ್ಲದೆ ಅವರ ಹೆಸರನ್ನು ಬಳಸಿಕೊಂಡು, ನಾವು ಮೀಸೆ ತಿರುಗಿಸುವುದು ಅಯೋಗ್ಯತನವೇ ಆಗುತ್ತದೆ.

ಜಗತ್ತಿನಲ್ಲಿ ಹಲವರು ಸಾಧಕರು ಅವರ ತಂದೆ–ತಾಯಿಗಳ ಹೆಸರನ್ನು ತಮ್ಮ ಸಾಧನೆಯ ಮೂಲಕವಾಗಿಯೇ ಶಾಶ್ವತಗೊಳಿಸಿದ್ದಾರೆ. ಶ್ರೀನಿವಾಸ ರಾಮಾನುಜನ್‌, ಐಸಾಕ್‌ ನ್ಯೂಟನ್‌, ಐನ್‌ಸ್ಟೈನ್‌, ಎಸ್‌. ಪಿ. ಬಾಲಸುಬ್ರಹ್ಮಣ್ಯಂ, ಗಾಂಧೀಜಿ, ಸ್ವಾಮಿ ವಿವೇಕಾನಂದ, ಬಿ. ಆರ್‌. ಅಂಬೇಡ್ಕರ್‌ – ಹೀಗೆ ಸಾವಿರಾರು ಮಹಾಪುರುಷರು ತಮ್ಮ ಸಾಧನೆಯಿಂದಲೇ ಅವರ ಕುಟುಂಬಕ್ಕೆ ಕೀರ್ತಿ ತಂದಿದ್ದಾರೆ. ಇಂಥದ್ದು ಧನ್ಯಜೀವನದ ಲಕ್ಷಣ. ಹೀಗಲ್ಲದೆ, ‘ನಾನು ಯಾರು ಗೊತ್ತಾ, ನಮ್ಮ ತಂದೆ ಆ ಆಫೀಸರ್‌, ನಮ್ಮ ಮಾವ ಈ ಮಂತ್ರಿ, ನಮ್ಮ ಅಜ್ಜ ಎಂಪಿ, ನಮ್ಮ ಭಾವಮೈದ ಎಂಎಲ್‌ಎ‘ – ಹೀಗೆ ಹೇಳಿಕೊಂಡು ಜೀವನವನ್ನು ನಡೆಸುವುದು ಅತ್ಯಂತ ಹೇಯವಾದುದು.

ನಾವೆಲ್ಲರೂ ಸ್ವಾಭಿಮಾನದಿಂದ ಬದುಕೋಣ; ನಿಜವಾದ ನಮ್ಮ ಜೀವನವನ್ನು ಜೀವಿಸೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT