ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನಕ್ಕೊಂದು ಸೂಕ್ತಿ | ಪರೋಪಕಾರವೇ ಸಜ್ಜನರ ಲಕ್ಷಣ

Last Updated 4 ಜೂನ್ 2020, 3:22 IST
ಅಕ್ಷರ ಗಾತ್ರ

ಪಿಬಂತಿ ನದ್ಯಃ ಸ್ವಯಮೇವ ನಾಂಭಃ
ಖಾದಂತಿ ನ ಸ್ವಾದುಫಲಾನಿ ವೃಕ್ಷಾಃ ।
ಪಯೋಧರೋ ನ ಕ್ವಚಿದತ್ತಿ ಸಸ್ಯಂ
ಪರೋಪಕಾರಾಯ ಸತಾಂ ವಿಭೂತಯಃ ।।

ಇದರ ತಾತ್ಪರ್ಯ ಹೀಗೆ: ‘ನದಿಗಳು ನೀರನ್ನು ತಾವೇ ಕುಡಿಯುವುದಿಲ್ಲ; ಮರಗಳು ತಮ್ಮ ಸಿಹಿಯಾದ ಹಣ್ಣುಗಳನ್ನು ತಾವೇ ತಿನ್ನುವುದಿಲ್ಲ; ಮೋಡ ಎಲ್ಲಿಯೂ ಸಸ್ಯವನ್ನು ತಿನ್ನುವುದಿಲ್ಲ; ಸಜ್ಜನರ ಸಂಪತ್ತು ಮತ್ತೊಬ್ಬರ ಉಪಕಾರಕ್ಕಾಗಿಯೇ.’

ಮನುಷ್ಯ ಎಂದರೆ ಅವನು ಸ್ವಾರ್ಥದ ಮೂರ್ತಿ. ಇದು ಈ ಕಾಲದಲ್ಲಿ ಎದ್ದುಕಾಣುವ ಸಂಗತಿ. ಆದರೆ ಸೃಷ್ಟಿಯ ಎಲ್ಲ ವಿವರಗಳೂ ಸ್ವಾರ್ಥರಹಿತವಾಗಿಯೇ ನಡೆದುಕೊಳ್ಳುತ್ತಿರುತ್ತವೆ. ಇದನ್ನು ಪ್ರಕೃತಿಯ ಒಂದೊಂದು ವಿದ್ಯಮಾನದಲ್ಲೂ ನೋಡಬಹುದಾಗಿದೆ. ಒಂದು ವೇಳೆ ಪ್ರಕೃತಿ ಸ್ವಾರ್ಥದಿಂದಲೇ ತನ್ನೆಲ್ಲ ನಡೆವಳಿಕೆಗಳನ್ನು ರೂಪಿಸಿಕೊಂಡಿದಿದ್ದರೆ ಆಗ ಮನುಷ್ಯ ಒಂದು ಕ್ಷಣವೂ ಬದುಕಲು ಆಗುತ್ತಿರಲಿಲ್ಲವಷ್ಟೆ! ಈ ವಾಸ್ತವವನ್ನು ಇಲ್ಲಿ ಸುಭಾಷಿತ ಸೊಗಸಾದ ಉದಾಹರಣೆಗಳ ಮೂಲಕ ನಿರೂಪಿಸುತ್ತಿದೆ.

ನದಿಗಳು ಇಲ್ಲದಿದ್ದರೆ ನಮಗೆ ನೀರು ಸಿಗುತ್ತಿರಲಿಲ್ಲ. ನೀರಿಲ್ಲದೆ ನಮ್ಮ ಜೀವನವೇ ಇಲ್ಲ. ನದಿಗಳು ನೀರನ್ನು ’ಸಂಪಾದಿಸುವುದೇ‘ ಬೇರೊಬ್ಬರಿಗಾಗಿ; ಅದು ತನ್ನ ನೀರು – ಎಂದು ನದಿಯೇ ನೀರನ್ನು ಕುಡಿಯದು. ಹಾಗೆ ನದಿಯೇ ನೀರನ್ನು ಕುಡಿದರೆ ಆಗ ನಮಗೆ ನೀರು ಸಿಗುತ್ತಲೇ ಇರಲಿಲ್ಲವೆನ್ನಿ! ಆದರೆ ಮನುಷ್ಯ ಏನನ್ನು ಕೂಡಿಟ್ಟರೂ ಅದು ಅವನಿಗಾಗಿಯೇ ಹೌದಷ್ಟೆ? ಅಂತೆಯೇ ಮರಗಳಲ್ಲಿ ಬಿಡುವ ಹಣ್ಣನ್ನು ಮರವೇ ಎಂದಾದರೂ ತಿಂದ ಉದಾಹರಣೆ ಇದೆಯೇ? ಮೋಡಗಳು ಸುರಿಸುವ ಮಳೆಯಿಂದ ನಾವು ಭತ್ತವನ್ನು ಬೆಳೆಯುತ್ತೇವೆ; ಭತ್ತದಿಂದ ಅಕ್ಕಿ, ಅಕ್ಕಿಯಿಂದ ನಮ್ಮ ಅನ್ನ. ಆದರೆ ’ನನ್ನ ನೀರಿನಿಂದ ಬೆಳೆದ ಪೈರು‘ ಎಂದು ಎಂದಾದರೂ ಮೋಡಗಳು ಪೈರನ್ನು ತಿನ್ನುತ್ತವೆಯೆ?

ಹೀಗೆ ತಮ್ಮಲ್ಲಿರುವ ಸಂಪತ್ತನ್ನು ಇತರರ ಜೀವನಕ್ಕೆ ಮೀಸಲಾಗಿಡುವುದೇ ಸಜ್ಜನರ ಗುಣ. ಈ ಪರೋಪಕಾರದ ಗುಣವನ್ನು ಪ್ರಕೃತಿಯೇ ಕಲಿಸುತ್ತಿದೆ. ಆದರೆ ಮನುಷ್ಯ ಮಾತ್ರ ಈ ಪಾಠವನ್ನು ಕಲಿಯುತ್ತಿಲ್ಲ. ನಿರಂತರವಾಗಿ ಅವನು ಸ್ವಾರ್ಥದಿಂದ ಪ್ರಕೃತಿಯನ್ನು ಶೋಷಿಸುತ್ತಲೇ ಇದ್ದಾನೆ. ಮನುಷ್ಯ ನಿಜವಾಗಿಯೂ ’ಮನುಷ್ಯ‘ನಾಗಬೇಕಾದರೆ ಅವನು ಮೊದಲು ಸ್ವಾರ್ಥವನ್ನು ತಗ್ಗಿಸಿಕೊಳ್ಳಬೇಕು; ಇತರರ ಸುಖ–ದುಃಖದಲ್ಲಿಯೂ ಪಾಲುಗೊಳ್ಳಬೇಕು. ಇದರಲ್ಲಿಯೇ ಅವನ ಮತ್ತು ಅವನ ಸಂತತಿಯ ಹಿತ ಅಡಗಿದೆ ಎಂಬ ಸಂದೇಶವನ್ನು ಸುಭಾಷಿತ ಸಾರುತ್ತಿದೆ.

ಸೃಷ್ಟಿಯಲ್ಲಿರುವ ಪ್ರತಿ ಚರಾಚರವಸ್ತುವೂ ಒಂದು ಮತ್ತೊಂದನ್ನು ಆಶ್ರಯಿಸಿಕೊಂಡೇ ಇರುತ್ತದೆ. ಈ ವಾಸ್ತವವನ್ನು ಅರಿತಾಗ ಸಹಜವಾಗಿಯೇ ನಮ್ಮಲ್ಲಿ ಕೃತಜ್ಞತೆಯ ಬುದ್ಧಿ ಮೂಡಿಕೊಳ್ಳುತ್ತದೆ. ಇಷ್ಟಕ್ಕೂ ನಾವು ಸಂಗ್ರಹಿಸುವುದೆಲ್ಲವನ್ನೂ ನಾವೊಬ್ಬರೇ ಅನುಭವಿಸುವುದಕ್ಕೂ ಸಾಧ್ಯವಿಲ್ಲವಷ್ಟೆ! ಮಾತ್ರವಲ್ಲ, ನಾವು ನೆಟ್ಟ ಸಸಿಯ ಫಲವನ್ನು ನಾನೇ ತಿನ್ನಬೇಕು ಎಂಬ ಸ್ವಾರ್ಥವೇ ಪ್ರಕೃತಿಧರ್ಮಕ್ಕೆ ವಿರುದ್ಧವಾದುದು.

‘ನನ್ನ ಬೀಜದ ಫಲ ನನಗೆ ಮಾತ್ರ’ ಎಂದು ನಮ್ಮ ಅಜ್ಜಂದಿರು ಯೋಚಿಸಿದಿದ್ದರೆ ನಮಗೆ ಇಂದು ಒಂದೇ ಒಂದು ಹಣ್ಣು ಕೂಡ ಸಿಗುತ್ತಿರಲಿಲ್ಲ, ಅಲ್ಲವೆ? ನಾವು ಮನೆ ಕಟ್ಟುವುದು ನಾವು ವಾಸಮಾಡಲು ಮಾತ್ರ – ಎಂದು ಕಾರ್ಮಿಕರು ಯೋಚಿಸಿದರೆ ನಮಗೆ ವಾಸಿಸಲು ಮನೆಯಾದರೂ ಎಲ್ಲಿರುತ್ತಿತ್ತು? ಹೀಗೆ ಸೃಷ್ಟಿಯು ನೆಲೆ ನಿಂತಿರುವುದೇ ಪರಸ್ಪರ ಆಲಂಬನದ ತಳಹದಿಯ ಮೇಲೆ. ಈ ಅಡಿಪಾಯ ಗಟ್ಟಿಯಾಗಿರಲು ಮನುಷ್ಯ–ಮನುಷ್ಯರ ನಡುವೆ ಪರೋಪಕಾರದ ಬುದ್ಧಿ ಗಟ್ಟಿಯಾಗಿ ನೆಲೆಯಾಗಬೇಕು. ಈ ಆಲಂಬನ–ಪರೋಪಕಾರ–ಕೃತಜ್ಞತೆಗಳ ಚಕ್ರವೇ ನಿಸರ್ಗದಲ್ಲೂ ಸಮಾಜದಲ್ಲೂ ಸೌಹಾರ್ದವನ್ನು ಶಾಶ್ವತವಾಗಿ ನೆಲೆಗೊಳಿಸುವಂಥದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT