ಗುರುವಾರ , ಆಗಸ್ಟ್ 11, 2022
23 °C

ದಿನದ ಸೂಕ್ತಿ: ಸಜ್ಜನರ ಮನೆ

ಎಸ್. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ತೃಣಾನಿ ಭೂಮಿರುದಕಂ ವಾಕ್‌ ಚತುರ್ಥೀ ಚ ಸೂನೃತಾ ।

ಏತಾನಿ ತು ಸತಾಂ ಗೇಹೇ ನೋಚ್ಛಿದ್ಯಂತೇ ಕದಾಚನ ।।

ಇದರ ತಾತ್ಪರ್ಯ ಹೀಗೆ:

‘ಹುಲ್ಲು, ನೆಲ, ನೀರು, ನಾಲ್ಕನೆಯದಾಗಿ ಒಳ್ಳೆಯ ಮಾತು – ಇವು ಸಜ್ಜನರ ಮನೆಗಳಲ್ಲಿ ಎಂದಿಗೂ ಇರದೇ ಇರುವುದಿಲ್ಲ.‘

ಸಜ್ಜನರು ಯಾರು, ಅವರ ಮನೆ ಹೇಗಿರುತ್ತದೆ – ಎನ್ನುವುದನ್ನು ಸುಭಾಷಿತ ಹೇಳುತ್ತಿದೆ. ಯಾರ ಮನೆ ಹೀಗಿರುತ್ತದೆಯೋ ಅವರೇ ಸಜ್ಜನರು ಅಥವಾ ಸಜ್ಜನರ ಮನೆ ಎಂದರೆ ಹೀಗಿರುತ್ತದೆ – ಎಂದೂ ಹೇಳಬಹುದು. 

ನಮ್ಮ ಜೀವನ ಕೇವಲ ನಮಗಾಗಿ ಮಾತ್ರವೇ ಅಲ್ಲ. ನಾಲ್ಕು ಜನರಿಗೆ ಅನುಕೂಲವಾಗುವಂಥ ರೀತಿಯಲ್ಲಿ ನಮ್ಮ ಜೀವನಶೈಲಿಯನ್ನು ರೂಪಿಸಿಕೊಳ್ಳಬೇಕು. ಇದೇ ಸಜ್ಜನಿಕೆಯ ಲಕ್ಷಣ ಕೂಡ.

ಸಜ್ಜನರ ಮನೆಯಲ್ಲಿ ಸದಾ ಕಾಲ ಹುಲ್ಲು ಸಿಗುವುದಂತೆ. ಹುಲ್ಲು ಏಕೆ – ಎಂಬ ಪ್ರಶ್ನೆ ಏಳುತ್ತದೆ. ಮನುಷ್ಯ ಕೇವಲ ಮನುಷ್ಯರಿಗಷ್ಟೆ ಅಲ್ಲ, ಪ್ರಾಣಿಗಳಿಗೂ ಉಪಕಾರಿಯಾಗಿ ಬದುಕಬೇಕು. ಇದನ್ನು ಸುಭಾಷಿತ ಹೇಳುತ್ತಿದೆ. ಹುಲ್ಲು ಬೇಕಾಗಿರುವುದು ಪ್ರಾಣಿಗಳಿಗೆ ಅಲ್ಲವೆ? ಹಿಂದಿನ ಕಾಲದಲ್ಲಿ ಜನರು ಗಾಡಿಗಳಲ್ಲಿ ಸಂಚಾರ ಮಾಡುತ್ತಿದ್ದರಷ್ಟೆ. ಆಗ ಕುದುರೆಗಳಿಗೆ, ಎತ್ತುಗಳಿಗೆ ಹುಲ್ಲು ಬೇಕಾಗುತ್ತಿತ್ತು. ಹೀಗೆ ತಮ್ಮ ಮನೆಗಳಿಗೆ ಬರುವಂಥವರ ಗಾಡಿಗಳಿಗೆ ಉಪಯೋಗಿಸುತ್ತಿರುವ ಪ್ರಾಣಿಗಳಿಗೆ ಹುಲ್ಲನ್ನು ಕೊಡುವುದು ಅತಿಥಿಗಳಿಗೆ ಸತ್ಕಾರ ಕೊಡುವುದಷ್ಟೇ ಕರ್ತವ್ಯವಾಗಿತ್ತು. ಇಂದು ಇಂಥ ಗಾಡಿಗಳ ಬಳಕೆ ಇಲ್ಲದಿರಬಹುದು. ಆದರೆ ಪ್ರಾಣಿಗಳ ಬಗ್ಗೆ ದಯೆ–ಕಾರುಣ್ಯಗಳನ್ನು ಉಳ್ಳವನೇ ಸಜ್ಜನ ಎಂದು ನಮ್ಮ ಕಾಲಕ್ಕೆ ಈ ಮಾತನ್ನು ಅನ್ವಯಿಸಿಕೊಳ್ಳಬೇಕಾಗುತ್ತದೆ.

ಮನೆಗೆ ಬಂದವರಿಗೆ ಕುಳಿತುಕೊಳ್ಳಲು ಆಸನವನ್ನು ನೀಡಬೇಕಾದ್ದು ಆದ್ಯಕರ್ತವ್ಯ. ಬಳಿಕ ಆಯಾಸ ಪರಿಹಾರಕ್ಕಾಗಿ ನೀರನ್ನು ಕೊಡಬೇಕು. ಮನೆಗೆ ಬಂದವರಿಗೆ ಅಷ್ಟನ್ನೂ ಮಾಡದಿದ್ದರೆ ಮನುಷ್ಯಸಂಬಂಧಗಳಿಗೆ ಬೆಲೆಯಾದರೂ ಏನು?

ಇಷ್ಟು ಮಾತ್ರವಲ್ಲ, ಒಳ್ಳೆಯ ಮಾತುಗಳನ್ನು ಆಡಬೇಕು. ನಮಗೆ ಊಟ ಹಾಕಲು ಬಡತನ ಇರಬಹುದು. ಆದರೆ ಒಳ್ಳೆಯ ಮಾತನ್ನು ಆಡಲು ನಮ್ಮ ಬಡತನ ಅಡ್ಡಿ ಬಾರದಲ್ಲವೆ? ಆತಿಥ್ಯದ ಕನಿಷ್ಠ ಉಪಚಾರಗಳನ್ನಾದರೂ ಮಾಡಬೇಕು ಎನ್ನುವುದನ್ನು ಸುಭಾಷಿತ ಬಯಸುತ್ತಿದೆ.

ಆದರೆ ಇಂದಿನ ದಿನಗಳು ವಿಪರೀತವಾಗಿವೆ. ಯಾರೂ ಕೂಡ ಯೊರೊಬ್ಬರನ್ನೂ ಧೈರ್ಯವಾಗಿ ಮನೆಗೆ ಕರೆಯವಂಥ ಪರಿಸ್ಥಿತಿ ಮಾಯವಾಗಿದೆ. ಮನೆಗೆ ಬಂದವರಿಗೆ ಸತ್ಕಾರ ಮಾಡುವುದಿರಲಿ, ಬಾಗಿಲಿಗೆ ಬಂದವರನ್ನು ‘ಒಳಗೆ ಬನ್ನಿ’ ಎಂದು ಕರೆಯುವುದಕ್ಕೂ ಆತಂಕ ಪಡುವಂಥ ವಿಷಮಕಾಲ ಎದುರಾಗಿದೆ. ಆದಷ್ಟು ಬೇಗ ಈ ವಾತಾವರಣ ತಿಳಿಯಾಗಲಿ. ನಮ್ಮ ಈ ಮೊದಲಿನ ಜೀವನವಿಧಾನ ಮತ್ತೆ ಬೇಗ ಒದಗಬೇಕಾದರೆ ನಾವೆಲ್ಲರೂ ಒಟ್ಟಾಗಿ ಇಂದಿನ ಪರಿಸ್ಥಿತಿಯನ್ನು ವಿವೇಕದಿಂದ ಎದುರಿಸಬೇಕು; ಸರ್ಕಾರ ಮತ್ತು ಜನರು – ಇನ್ನಾದರೂ ಎಚ್ಚೆತ್ತುಕೊಳ್ಳಲಿ. ನಮ್ಮ ಜೀವನ ಸಹಜಸ್ಥಿತಿಗೆ ಮರಳಲಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು