ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ನಿಜವಾದ ಬುದ್ಧಿವಂತ

Last Updated 8 ನವೆಂಬರ್ 2020, 1:04 IST
ಅಕ್ಷರ ಗಾತ್ರ

ಭವಂತಿ ಬಹವೋ ಮೂರ್ಖಾಃ ಕ್ವಚಿದೇಕೋ ವಿಶುದ್ಧಧೀಃ ।

ತ್ರಾಸಿತೋsಪಿ ಸದಾ ಮೂರ್ಖೈರಚಲೋ ಯಸ್ಯ ಬುದ್ಧಿಮಾನ್ ।।

ಇದರ ತಾತ್ಪರ್ಯ ಹೀಗೆ:

‘ಮೂರ್ಖರು ಬಹಳ ಮಂದಿ ಇರುತ್ತಾರೆ. ಒಳ್ಳೆಯ ಪ್ರಜ್ಞಾಶಕ್ತಿಯುಳ್ಳವನು ಅಪರೂಪ. ಮೂರ್ಖರಿಂದ ಹೆದರಿಸಲ್ಪಟ್ಟರೂ ಯಾರು ನಿಶ್ಚಲನಾಗಿರುವನೋ ಅವನೇ ಬುದ್ಧಿವಂತ.’

ಸುಭಾಷಿತ ಇಲ್ಲಿ ಎರಡು ಸಂಗತಿಗಳನ್ನು ಹೇಳುತ್ತಿದೆ. ಸಮಾಜದಲ್ಲಿ ಮೂರ್ಖರ ಸಂಖ್ಯೆಯೇ ಹೆಚ್ಚು; ಇದು ಒಂದು. ಇನ್ನೊಂದು: ನಿಜವಾದ ಬುದ್ಧಿವಂತ ಯಾರು?

ಮೂರ್ಖರ ಸಂಖ್ಯೆಯೇ ಹೆಚ್ಚು. ಇದರಲ್ಲಿ ಅನುಮಾನವೇ ಬೇಡ. ಏಕೆಂದರೆ ಎಲ್ಲರೂ ಹುಟ್ಟಿನಿಂದ ಮೂರ್ಖರೇ ಆಗಿರುತ್ತಾರೆ. ಬುದ್ಧಿಯನ್ನು ಹಂತಹಂತವಾಗಿ ಸಂಪಾದಿಸಿಕೊಂಡು ಪ್ರಜ್ಞಾಶಾಲಿಗಳಾಗಿ ಬೆಳೆಯಬೇಕಾಗುತ್ತದೆ. ಇದಕ್ಕಾಗಿ ತುಂಬ ಶ್ರಮ ಪಡಬೇಕು. ನಮಗ್ಯಾರಿಗೂ ಶ್ರಮಪಡುವುದು ಇಷ್ಟವಾಗದು. ಹೀಗಾಗಿ ನಾವು ಹುಟ್ಟಿದಾಗ ಹೇಗಿರುತ್ತೇವೆಯೋ ಕೊನೆಯ ತನಕವೂ ಹಾಗೆಯೇ ಉಳಿಯುತ್ತೇವೆ. ಯಾರೋ ಕೆಲವರು ಮಾತ್ರ ಬುದ್ಧಿವಂತರಾಗುತ್ತಾರೆ, ಶ್ರಮ ವಹಿಸಿ.

ಬುದ್ಧಿವಂತರಾಗುವುದಕ್ಕೆ ಶ್ರಮಪಡಬೇಕು ಎಂದರೆ ಏನು ಮಾಡಬೇಕು ಎಂದು ಅರ್ಥ? ಬೆಟ್ಟವನ್ನು ಕಿತ್ತಿಡಬೇಕೆ? ಸಾಗರದ ನೀರನ್ನೆಲ್ಲ ಕುಡಿಯಬೇಕೆ? ಗಾಳಿಯಲ್ಲಿ ಹಾರಬೇಕೆ? ಬೆಂಕಿಯಲ್ಲಿ ನಡೆಯಬೇಕೆ? ಇಂಥ ಸಾಹಸಗಳನ್ನೇನೂ ಮಾಡಬೇಕಾಗಿಲ್ಲ. ಮೊದಲಿಗೆ ನಮ್ಮನ್ನು ನಾವು ಚೆನ್ನಾಗಿ ಪರೀಕ್ಷಿಸಿಕೊಳ್ಳಬೇಕು; ಆಮೇಲೆ ಜಗತ್ತನ್ನು ಪರೀಕ್ಷಿಸಬೇಕು. ಹಿರಿಯರ ಮಾರ್ಗದರ್ಶನವನ್ನು ಪಡೆಯಬೇಕು. ಪುಸ್ತಕಗಳನ್ನು ಓದಬೇಕು. ಲೋಕವನ್ನು ಸುತ್ತಬೇಕು. ಜನರೊಂದಿಗೆ ಬೆರೆಯಬೇಕು. ಮಾತಿನ ಬೆಲೆಯನ್ನೂ ಮೌನದ ಬೆಲೆಯನ್ನೂ ಕಂಡುಕೊಳ್ಳಬೇಕು. ಇವು, ಇಂಥವು ನಮ್ಮನ್ನು ಬುದ್ಧಿವಂತರನ್ನಾಗಿಸಬಲ್ಲ ಪ್ರಕ್ರಿಯೆಗಳು.

ಈಗ ನಮಗೆ ಇಷ್ಟೆಲ್ಲ ಸಾಧನೆಗಳ ಕಾರಣದಿಂದ ಬುದ್ಧಿಯೇನೋ ಬಂದಿರಬಹುದು, ಎಂದು ಊಹಿಸೋಣ. ಆದರೆ ನಾವು ನಿಜವಾದ ಬುದ್ಧಿವಂತರು ಯಾವಾಗ ಆಗುತ್ತೇವೆ – ಎಂಬುದನ್ನೂ ಸುಭಾಷಿತ ಹೇಳುತ್ತಿದೆ. ಮೂರ್ಖರಿಂದ ಹೆದರಿಸಲ್ಪಟ್ಟರೂ ಯಾರು ಹೆದರದೆ ನಿಶ್ಚಲವಾಗಿರುತ್ತಾರೋ ಅವರೇ ನಿಜವಾದ ಬುದ್ಧಿವಂತರು – ಎಂದು ಅದು ಹೇಳಿದೆ.

ಮೂರ್ಖರಿಗೆ ಬುದ್ಧಿವಂತರನ್ನು ಕಂಡರೆ ಹೆದರಿಕೆ ಇರುತ್ತದೆ. ಈ ಕಾರಣದಿಂದಲೇ ಅವರು ಬುದ್ಧಿವಂತರನ್ನು ಹೆದರಿಸಲು ಮುಂದಾಗುತ್ತಾರೆ. ಆದರೆ ನಿಜವಾದ ಬುದ್ಧಿವಂತರು ಆ ಹೆದರಿಕೆಗೆ ಬಗ್ಗುವವರಲ್ಲ. ಇದನ್ನೇ ಸುಭಾಷಿತ ಹೇಳುತ್ತಿರುವುದು. ದಡ್ಡರಿಗೆ ಬುದ್ಧಿವಂತರನ್ನು ಕಂಡರೆ ಅಸೂಯೆಯೂ ಇರುತ್ತದೆ. ಏನಾದರೂ ಮಾಡಿ ಬುದ್ಧಿವಂತರನ್ನು ನಮ್ಮ ಮಟ್ಟಕ್ಕೆ ಇಳಿಸಬೇಕೆಂದು ಪ್ರಯತ್ನಿಸುತ್ತಲೇ ಇರುತ್ತಾರೆ. ಉದಾಹರಣೆಗೆ: ಕೋವಿಡ್‌ ಎಂಬುದೇ ಇಲ್ಲ; ಸುಮ್ಮನೇ ಮಾಸ್ಕನ್ನು ಯಾಕೆ ಹಾಕಿಕೊಳ್ಳುತ್ತಿರೀ – ಎಂದು ಮೂರ್ಖರು ನಮಗೆ ಹೇಳುತ್ತಾರೆ. ನಾವು ಅಂಥ ಮಾತುಗಳನ್ನು ಕೇಳಿ ದಡ್ಡರಂತೆ ನಡೆದುಕೊಳ್ಳುತ್ತೇವೆಯೋ ಅಥವಾ ಬುದ್ಧಿವಂತರಾಗಿ ನಡೆದುಕೊಳ್ಳುತ್ತೇವೆಯೋ – ಎಂಬುದನ್ನು ನಿರ್ಧರಿಸಬೇಕಾದವರು ನಾವೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT