ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ಹಣಕ್ಕೆ ದಾಸರು ಎಲ್ಲರೂ

Last Updated 20 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ವಯೋವೃದ್ಧಾಸ್ತಪೋವೃದ್ಧಾ

ಜ್ಞಾನವೃದ್ಧಾಸ್ತಥಾಪರೇ ।

ತೇ ಸರ್ವೇ ಧನವೃದ್ಧಸ್ಯ

ದ್ವಾರೇ ತಿಷ್ಠಂತಿ ಕಿಂಕರಾಃ ।।

ಈ ಸುಭಾಷಿತದ ಅನುವಾದವನ್ನು ಪಾವೆಂ ಅಚಾರ್ಯ ಅವರು ಹೀಗೆ ಮಾಡಿದ್ದಾರೆ:

ವಯದಲ್ಲಿ ಹಿರಿಯರೂ ತಪದಲ್ಲಿ ಹಿರಿಯರೂ

ಅರಿವಲ್ಲಿ ಹಿರಿಯರಾದವರೂ

ಹಣದಲ್ಲಿ ಹಿರಿಯನಾದವನ ಬಾಗಿಲ ಮುಂದೆ

ಕೈಕಟ್ಟಿ ನಿಂತು ಕಾಯುವವರು

ನಮ್ಮಲ್ಲಿ ದೊಡ್ಡದಾದುದಕ್ಕೂ ದೊಡ್ಡವರಿಗೂ ಗೌರವ ಇದೆ. ದೊಡ್ಡದು ಅಥವಾ ದೊಡ್ಡವರು ಎಂಬುದನ್ನು ನಾವು ಹೇಗೆ ಗ್ರಹಿಸುತ್ತೇವೆ? ಗಾತ್ರದ ಮೂಲಕ ಗುರುತಿಸುತ್ತೇವೆ; ವಯಸ್ಸಿನ ಆಧಾರದಿಂದ ಗುರುತಿಸುತ್ತೇವೆ. ಸಾಮಾನ್ಯವಾಗಿ ಎಲ್ಲರ ಪ್ರತ್ಯಕ್ಷಾನುಭವಕ್ಕೂ ಬರುವ ವಿದ್ಯಮಾನವಿದು. ಆದರೆ ಭಾವದ ದೃಷ್ಟಿಯಿಂದಲೂ ಸಾಧನೆಯ ದೃಷ್ಟಿಯಿಂದಲೂ ಹಿರಿತನ ಎಂಬುದು ಹಲವು ಆಯಾಮಗಳನ್ನು ಪಡೆದುಕೊಳ್ಳುತ್ತೇವೆ. ಗಾತ್ರದಿಂದೋ ವಯಸ್ಸಿನಿಂದಲೋ ದೊಡ್ಡದು ಅಥವಾ ದೊಡ್ಡವರು ಎನಿಸಿಕೊಳ್ಳುವುದು ಸಹಜಾಭಿವ್ಯಕ್ತಿ. ಆದರೆ ಗುಣದಿಂದಲೋ ಸಾಧನೆಯಿಂದಲೋ ಹಿರಿತನವನ್ನು ಪಡೆದುಕೊಳ್ಳುವುದಕ್ಕೆ ಗಾತ್ರದ ದೊಡ್ಡತನವೋ ಅಥವಾ ವಯಸ್ಸಿನ ಹಿರಿತನವೋ ಮುಖ್ಯವೂ ಆಗವುದಿಲ್ಲ; ಅವು ನೆರವಿಗೂ ಬರುವುದಿಲ್ಲ. ನಾವು ಶ್ರಮದಿಂದ ಪಡೆಯಬಹುದಾದ ಹಲವು ಹಿರಿತನಗಳ ಬಗ್ಗೆ ಸುಭಾಷಿತ ಇಲ್ಲಿ ಮೊದಲಿಗೆ ಹೇಳುತ್ತಿದೆ.

ವಯಸ್ಸಿನ ಹಿರಿತನದಿಂದಲೇ ಅದು ಆರಂಭ ಮಾಡಿದೆ. ಅನಂತರ ತಪಸ್ಸಿನ ಮೂಲಕ ಹಿರಿತನವನ್ನು ಪಡೆಯಬಹುದೆಂದು ಹೇಳಿದೆ. ತಪಸ್ಸು ಎಂಬುದು ನಮ್ಮ ದೇಹವನ್ನೂ ಮನಸ್ಸನ್ನೂ ಒಂದು ಗೊತ್ತಾದ ಕ್ರಮದಲ್ಲಿ ಸಿದ್ಧಗೊಳಿಸಿಕೊಳ್ಳುವುದು. ಅನಂತರ ಹೇಳಿರುವ ಹಿರಿತನ ಎಂದರೆ ಜ್ಞಾನದ ಮೂಲಕ ಒದಗುವಂಥದ್ದು.

ಇಲ್ಲಿ ಹೇಳಿರುವ ಹಿರಿತನಗಳು ಕ್ರಮವಾಗಿ ಒಂದು ಇನ್ನೊಂದಕ್ಕಿಂತಲೂ ಹೆಚ್ಚು ಮೌಲ್ಯಯುತ; ಮಾತ್ರವಲ್ಲ, ಅವುಗಳನ್ನು ಪಡೆಯಲು ಮಾಡಬೇಕಾದ ಸಾಧನೆಯ ತೀವ್ರತೆಯೂ ಒಂದಕ್ಕಿಂತಲೂ ಇನ್ನೊಂದಕ್ಕಿಂತಲೂ ಹೆಚ್ಚಾಗಿರುತ್ತದೆ. ವಯಸ್ಸಿನ ಹಿರಿತನ ದೊಡ್ಡದು; ಇದಕ್ಕಿಂತಲೂ ತಪಸ್ಸಿನ ಮೂಲಕ ಒದಗುವ ಹಿರಿತನ ದೊಡ್ಡದು; ಇದಕ್ಕಿಂತಲೂ ಜ್ಞಾನದ ಮೂಲಕ ಒದಗುವ ಹಿರಿತನ.

ಸುಭಾಷಿತ ಕೊನೆಯಲ್ಲಿ ಈ ಎಲ್ಲ ಹಿರಿತನಗಳನ್ನೂ ನಿರರ್ಥಕ ಎಂಬಂತೆ ನಿರೂಪಿಸಿರುವುದು ಗಮನೀಯವಾದುದು.

ಹಣದ ಮೂಲಕ ಒದಗುವ ಹಿರಿತನದ ಮುಂದೆ ಎಲ್ಲ ಹಿರಿತನಗಳೂ ಅವುಗಳ ಮಹತ್ವವನ್ನು ಕಳೆದುಕೊಳ್ಳುತ್ತವೆ – ಎನ್ನುವುದನ್ನು ಅದು ಮಾರ್ಮಿಕವಾಗಿ ನಿರೂಪಿಸಿದೆ. ವಯಸ್ಸಿನ ಹಿರಿತನ, ತಪಸ್ಸಿನ ಹಿರಿತನ ಅಥವಾ ಅರಿವಿನ ಹಿರಿತನ – ಈ ಎಲ್ಲ ಹಿರಿತನಗಳೂ ಹಣದ ಹಿರಿತನದ ಮುಂದೆ ಕೈ ಕಟ್ಟಿ ನಿಲ್ಲಬೇಕಾಗುತ್ತದೆ ಎನ್ನುವ ದುರಂತವನ್ನು ಅದು ಹೇಳುತ್ತ, ನಮ್ಮ ಆತ್ಮಾವಲೋಕನಕ್ಕೂ ಪ್ರೇರಿಸುತ್ತದೆ.

ನಾವು ಎಲ್ಲ ಹಿರಿತನಗಳನ್ನೂ ನಿರಾಕರಿಸಿ, ಹಣದ ಮುಂದೆ ಹಲ್ಲು ಕಿರಿಯುತ್ತ, ಕೈ ಕಟ್ಟಿ ನಿಲ್ಲುವುದು ಏಕೆ – ಎಂಬುದನ್ನು ನಮಗೆ ನಾವೇ ಕೇಳಿಕೊಳ್ಳಬೇಕಾದ ಪ್ರಶ್ನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT