ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ಮಾತಿನಲ್ಲಿರಲಿ ಸೊಗಸು

Last Updated 14 ಸೆಪ್ಟೆಂಬರ್ 2020, 0:57 IST
ಅಕ್ಷರ ಗಾತ್ರ

ಅಲ್ಪಾಕ್ಷರರಮಣೀಯಂ ಯಃ ಕಥಯತಿ ನಿಶ್ಚಿತಂ ಸ ಖಲು ವಾಗ್ಗ್ಮೀ ।

ಬಹುವಚನಮಲ್ಪಸಾರಂ ಯಃ ಕಥಯತಿ ವಿಪ್ರಲಾಪೀ ಸಃ ।।

ಇದರ ತಾತ್ಪರ್ಯ ಹೀಗೆ:

‘ಯಾವನು ಕೆಲವೇ ಮಾತುಗಳಲ್ಲಿ ನಿರ್ಣಯಾತ್ಮಕವಾಗಿ ಹೇಳಬಲ್ಲನೋ ಅವನೇ ವಾಗ್ಮೀ; ಹೆಚ್ಚು ಮಾತುಗಳನ್ನು ನುಡಿದೂ, ಸಾರವಿಲ್ಲದ್ದನ್ನು ಹೇಳುವವನು ಬಾಯಿಬಡಕ ಅಷ್ಟೇ!’

ಹಲವು ಭಾಷಣಗಳಲ್ಲಿ ನಮಗೆ ಈ ಅನುಭವ ಆಗಿರುತ್ತದೆ.

ಕೆಲವರು ಮಾತನಾಡಲು ಆರಂಭಿಸುತ್ತಾರೆ. ಮಾತನಾಡುತ್ತಲೇ ಇರುತ್ತಾರೆ. ಕೇಳುತ್ತಿರುವ ನಮಗೆ ‘ಇವರು ಯಾವಾಗ ನಿಲ್ಲಿಸುತ್ತಾರಪ್ಪಾ!‘ ಎಂದು ಅನಿಸುವಂತೆ ಮಾಡಿ, ನಮ್ಮ ಬೇವರನ್ನೇ ಇಳಿಸಿಬಿಡುತ್ತಾರೆ! ಹೋಗಲಿ, ಅಷ್ಟು ಮಾತನಾಡಿ ಅರ್ಥವತ್ತಾಗಿಯಾದರೂ ಮಾತನಾಡಿರುತ್ತಾರೋ, ಅದೂ ಇಲ್ಲ! ಕೈಲಾಸಂ ಇಂಥವರನ್ನು ಕುರಿತೇ ಹೇಳಿದ್ದು: ’ಮಾತೂ ಆಡಬೇಕು, ಮೀನಿಂಗೂ ಇರಬಾರದು!’ ಇಂಥವರನ್ನು ಸುಭಾಷಿತ ಬಾಯಿಬಡಕರು ಎಂದು ಕರೆದಿದೆ.

ಇನ್ನು ಕೆಲವರು ಮಾತನಾಡಲು ತೊಡಗಿದರೆ ಇನ್ನೂ ಸ್ವಲ್ಪ ಹೊತ್ತು ಕೇಳೋಣ ಎಂದೆನಿಸುತ್ತದೆ. ಆದರೆ ಅವರು ಹೆಚ್ಚು ಸಮಯ ಮಾತನಾಡುವುದೇ ಇಲ್ಲ; ತಮ್ಮ ಮಾತನ್ನು ಬೇಗ ಮುಗಿಸಿಬಿಡುತ್ತಾರೆ. ಹೀಗಿದ್ದರೂ ಅವರು ಏನು ಹೇಳಬೇಕೋ ಅದನ್ನು ಸ್ಪಷ್ಟವಾಗಿ, ಸಮರ್ಥವಾಗಿ ಹೇಳಿರುತ್ತಾರೆ. ಸುಭಾಷಿತ ಇಂಥವರನ್ನು ವಾಗ್ಮೀ ಎಂದು ಕರೆದಿದೆ.

ಮಾತು ನಮ್ಮ ವ್ಯಕ್ತಿತ್ವದ ಭಾಗವೂ ಹೌದು. ಹೀಗಾಗಿ ಅದನ್ನು ಸಮರ್ಥವಾಗಿ ಬಳಸುವುದನ್ನು ರೂಢಿಸಿಕೊಳ್ಳಬೇಕು. ವಾಗ್ಮಿತೆ ಎನ್ನುವುದು ಗುಣವೇ ಹೌದು. ಕಡಿಮೆ ಮಾತುಗಳಲ್ಲಿ ಸ್ಪಷ್ಟವಾಗಿ ನಾವು ಹೇಳಬೇಕಾಗಿರುವುದನ್ನು ಹೇಳುವಂಥದ್ದು ಕಲೆಯೂ ಹೌದು.

ಬಸವಣ್ಣನವರ ವಚನವೊಂದು ಮಾತು ಹೇಗಿರಬೇಕೆಂದು ಸೊಗಸಾಗಿ ವರ್ಣಿಸಿದೆ:

ನುಡಿದರೆ ಮುತ್ತಿನ ಹಾರದಂತಿರಬೇಕು

ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು

ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು

ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು

ನುಡಿಯೊಳಗಾಗಿ ನಡೆಯದಿದ್ದಡೆ

ಕೂಡಲಸಂಗಮದೇವನೆಂತೊಲಿವನಯ್ಯಾ?

ನಾವು ಮಾತನಾಡುವಾಗ ಎಚ್ಚರದಿಂದ ಮಾತನಾಡೋಣ. ಇತರರಿಗೆ ಬೇಸರವಾಗದ ಹಾಗೆ ಮಾತನಾಡೋಣ. ಶಬ್ದಗಳನ್ನು‍ಪೋಲು ಮಾಡದೆ ಅರ್ಥವತ್ತಾಗಿ ಮಾತನಾಡೋಣ. ಮಾತು ಕತ್ತಿಯಿದ್ದಂತೆ, ಅದು ನಮ್ಮನ್ನು ರಕ್ಷಿಸಲೂಬಹುದು, ಅಪಾಯಕ್ಕೆ ನೂಕಲೂಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT