ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಹಿ ಮಾತು, ಕಹಿ ಮಾತು

Last Updated 2 ಮಾರ್ಚ್ 2021, 3:15 IST
ಅಕ್ಷರ ಗಾತ್ರ

ಪೇಶಲಮಪಿ ಖಲವಚನಂ ದಹತಿತರಾಂ ಮಾನಸಂ ಸುತತ್ತ್ವವಿದಾಮ್‌ ।

ಪರುಷಮಪಿ ಸುಜನವಾಕ್ಯಂ ಮಲಯಜರಸವತ್‌ ಪ್ರಮೋದಯತಿ ।।

ಇದರ ತಾತ್ಪರ್ಯ ಹೀಗೆ:

‘ದುರ್ಜನರ ಮಾತು ಮೃದುವಾಗಿದ್ದರೂ ತತ್ತ್ವಜ್ಞರ ಮನಸ್ಸನ್ನು ಅತಿಯಾಗಿ ಸುಡುತ್ತದೆ. ಸಜ್ಜನರ ಮಾತು ನಿಷ್ಠುರವಾಗಿದ್ದರೂ ಚಂದನದ ರಸದಂತೆ ಆನಂದಗೊಳಿಸುತ್ತದೆ.’

‘ತಲೆಯವನ ಮಾತು ಮುಂದಕ್ಕೆ ಉಪ್ಪು; ಆದರೆ ಹಿಂದಕ್ಕೆ ಬೆಲ್ಲ‘ – ಎಂಬ ಮಾತೊಂದು ಇದೆ. ಬುದ್ಧಿವಂತರು, ಎಂದರೆ ಸಜ್ಜನರ ಮಾತುಗಳು ಮೇಲ್ನೋಟಕ್ಕೆ ಉಪ್ಪಾಗಿರುತ್ತವೆ, ಎಂದರೆ ಅವನ್ನು ಸ್ವೀಕರಿಸಲು ಕಷ್ಟವಾಗಿರುತ್ತವೆ; ನಿಜ, ಆದರೆ ಅದರ ಫಲ ಮಾತ್ರ ಬೆಲ್ಲ, ಎಂದರೆ ಸಿಹಿಯಾಗಿರುತ್ತವೆ, ನಮ್ಮ ಜೀವನಕ್ಕೆ ಹಿತವಾಗಿರುತ್ತವೆ. ಇದಕ್ಕೆ ವಿರುದ್ಧವಾಗಿ, ದುರ್ಜನರ ಮಾತುಗಳು ಕೇಳಲು ತುಂಬ ಸಿಹಿಯಾಗಿರುತ್ತವೆ; ಆದರೆ ಅದರಿಂದ ನಮಗೆ ಕಾಲಾಂತರದಲ್ಲಿ ತೊಂದರೆಗಳೇ ಎದುರಾಗುತ್ತವೆ. ಇದು ಇಲ್ಲಿ ಸುಭಾಷಿತ ನೀಡುತ್ತಿರುವ ಸಂದೇಶ.

ಇನ್ನೊಂದು ಸುಭಾಷಿತದ ಈ ಮಾತನ್ನು ಕೇಳಿ:

ಪರೋಕ್ಷೇ ಕಾರ್ಯಹಂತಾರಂ ಪ್ರತ್ಯಕ್ಷೇ ಪ್ರಿಯವಾದಿನಮ್‌ ।

ವರ್ಜಯೇತ್ತಾದೃಶಂ ಮಿತ್ರಂ ವಿಷಕುಂಭಂ ಪಯೋಮುಖಮ್‌ ।।

’ಎದುರಿಗೆ ಒಳ್ಳೆಯ ಮಾತನ್ನು ಆಡುತ್ತ, ಮರೆಯಲ್ಲಿ ಕೆಲಸವನ್ನು ಕೆಡಿಸುವ ಮಿತ್ರನು ಮೇಲೆ ಹಾಲಿರುವ ಒಳಗೆ ವಿಷವಿರುವ ಮಡಕೆಯಂತೆ ನಂಬಿಕೆಗೆ ಅರ್ಹನಲ್ಲ.‘

ನಾವು ಸಿಹಿಯನ್ನೇ ಇಷ್ಟಪಡುತ್ತೇವೆಯಷ್ಟೆ. ಹೀಗೆಯೇ ಸಿಹಿಯಾದ ಮಾತುಗಳನ್ನೇ ಇಷ್ಟಪಡುತ್ತೇವೆ. ದುಷ್ಟನಾದವನು ನಮ್ಮ ಮುಂದೆ ರುಚಿರುಚಿಯಾದ ಮಾತುಗಳನ್ನೇ ಆಡುತ್ತಾನೆ; ಆದರೆ ಅವನ ಮನಸ್ಸಿನ ತುಂಬ ವಿಷವೇ ತುಂಬಿರುತ್ತದೆ. ಅವನು ಒಳ್ಳೆಯ ಮಾತುಗಳ ಮೂಲಕ ನಮ್ಮ ಮುಂದೆ ನಟಿಸುವುದು ನಾವು ಅವನ ಬಲೆಯಲ್ಲಿ ಬೀಳಬೇಕು ಎಂಬು ಉದ್ದೇಶದಿಂದಲೇ. ನಾವು ಆ ಸಂದರ್ಭದಲ್ಲಿ ವಿವೇಕವನ್ನು ಕಳೆದುಕೊಳ್ಳುತ್ತೇವೆ; ಅವನ ಮೋಸದ ಮಾತುಗಳಿಗೆ ಸೋತುಹೋಗುತ್ತೇವೆ.

ನಮ್ಮ ಹಿತವನ್ನು ಬಯಸುವ ಸಜ್ಜನರು ನಮಗೆ ಒಳ್ಳೆಯದಾಗಲೆಂದು ಎಚ್ಚರಿಕೆಯ ಮಾತುಗಳನ್ನು ಆಡುತ್ತಾರೆ. ಆದರೆ ಅದು ನಮಗೆ ಹಿಡಿಸುವುದಿಲ್ಲ; ನಾವು ಅವರಿಂದ ದೂರ ಸರಿಯುತ್ತೇವೆ.

ಇನ್ನೊಂದು ಸುಭಾಷಿತ ಮಾತು ಹೀಗಿದೆ:

ಸ್ಪೃಶನ್ನಪಿ ಗಜೋ ಹಂತಿ ಜಿಘ್ರನ್ನಪಿ ಭುಜಂಗಮಃ ।

ಹಸನ್ನಪಿ ನೃಪೋ ಹಂತಿ ಮಾನಯನ್ನಪಿ ದುರ್ಜನಃ ।।

’ಕೇವಲ ಸ್ಪರ್ಶದಿಂದಲೇ ಆನೆಯು ಕೊಲ್ಲುತ್ತದೆ; ಹಾವು ಮೂಸಿನೋಡುವ ಮೂಲಕವೇ ಕೊಲ್ಲಬಲ್ಲದು; ರಾಜನಾದವನು ನಗುನಗುತ್ತಲೇ ಕೊಲ್ಲುತ್ತಾನೆ. ಅಂತೆಯೇ ದುರ್ಜನನಾದವನು ಗೌರವವನ್ನು ಪ್ರಟಕಮಾಡುತ್ತಲೇ ಕೊಲ್ಲುವನು.‘

ದುಷ್ಟರು ಆಡುವ ಒಳ್ಳೆಯ ಮಾತುಗಳ ಬಗ್ಗೆ, ಅವರು ತೋರಿಸುವ ಗೌರವದ ಬಗ್ಗೆ ನಾವು ಎಚ್ಚರಿಕೆಯಿಂದ ಇರಬೇಕು. ಸಿಹಿಯಾದ ಮಾತುಗಳನ್ನು ಆಡುವವರು ಹಲವರು ದೊರೆಯುತ್ತಾರೆ. ಆದರೆ ನಮಗೆ ಒಳಿತಾಗುವಂಥ ಮಾತುಗಳನ್ನು ಆಡುವವರು ಸಿಗುವುದು ಕಷ್ಟ ಎಂಬುದನ್ನು ನಾವು ಮರೆಯಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT