ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ | ಮಾಡಿದ್ದುಣ್ಣೋ ಮಹಾರಾಯ!

Last Updated 29 ಜೂನ್ 2020, 12:03 IST
ಅಕ್ಷರ ಗಾತ್ರ

ಶುಭೇನ ಕರ್ಮಣಾ ಸೌಖ್ಯಂ ದುಃಖಂ ಪಾಪೇನ ಕರ್ಮಣಾ ।

ಕೃತಂ ಭವತಿ ಸರ್ವತ್ರ ನಾಕೃತಂ ವಿದ್ಯತೇ ಕ್ವಚಿತ್‌ ।।

ಇದರ ತಾತ್ಪರ್ಯ ಹೀಗೆ:

‘ಪುಣ್ಯಕರ್ಮದಿಂದ ಸೌಖ್ಯ; ಪಾಪಕರ್ಮದಿಂದ ದುಃಖ. ಎಲ್ಲವೂ ಕರ್ಮದ ಫಲ; ಮಾಡದೆ ಯಾವುದೂ ಘಟಿಸುವುದಿಲ್ಲ.‘

ಮಹಾಭಾರತದ ಈ ಶ್ಲೋಕದಲ್ಲಿರುವ‘ಕರ್ಮ‘ ಎಂದರೆ ಏನು ಎಂದು ಸರಿಯಾಗಿ ತಿಳಿದುಕೊಳ್ಳದಿದ್ದರೆ ಈ ಸುಭಾಷಿತದ ತಾತ್ಪರ್ಯವನ್ನೂ ಸರಿಯಾಗಿ ಗ್ರಹಿಸಲಾಗದು.

ನಾವು ಮಾಡುವ ಕೆಲಸವೆಲ್ಲವೂ ’ಕರ್ಮ‘ವೇ. ಶಾಸ್ತ್ರೀಯವಾಗಿ ಈ ವಿವರಣೆಯನ್ನು ಇನ್ನಷ್ಟು ಆಳವಾಗಿಯೂ ಸೂಕ್ಷ್ಮವಾಗಿಯೂ ನಡೆಸಿದ್ದಾರೆ. ಇರಲಿ, ನಮ್ಮ ಸದ್ಯದ ಉದ್ದೇಶಕ್ಕೆ ಆ ಎಲ್ಲ ವಿವರಣೆಗಳ ಸಾರಾಂಶವಾಗಿ ’ನಾವು ಮಾಡುವ, ಮಾಡಿರುವ, ಮಾಡುತ್ತಿರುವ ಕೆಲಸವೇ ಕರ್ಮ‘ ಎಂದು ಸ್ವೀಕರಿಸೋಣ.

ಸುಭಾಷಿತ ಹೇಳುತ್ತಿದೆ: ’ನಾವು ಒಳ್ಳೆಯ ಕೆಲಸದಿಂದ ಸುಖವನ್ನೂ, ಕೆಟ್ಟ ಕೆಲಸದಿಂದ ದುಃಖವನ್ನೂ ಪಡೆಯುತ್ತೇವೆ.‘

ಈ ಮಾತಿಗೆ ಹೆಚ್ಚಿನ ವಿವರಣೆ ಬೇಡವೆನಿಸುತ್ತದೆ. ಆದರೂ ಸದ್ಯದ ಪರಿಸ್ಥಿತಿಯನ್ನು ಈ ಶ್ಲೋಕದ ಹಿನ್ನೆಲೆಯಲ್ಲಿ ನೋಡಬಹುದೆನಿಸುತ್ತದೆ.

ನಮ್ಮಲ್ಲಿ ಕೊರೊನಾ ದಿನದಿಂದ ದಿನಕ್ಕೆ ಹರಡುತ್ತಿದೆ. ಈ ಹರಡುವಿಕೆಗೆ ಕಾರಣ ಯಾರು? ನಾವೇ ಅಲ್ಲವೆ? ಪ್ರಜೆಗಳು ಮತ್ತು ಪ್ರಭುಗಳು – ಇಬ್ಬರು ನಡೆದುಕೊಂಡ, ನಡೆದುಕೊಳ್ಳುತ್ತಿರುವ ರೀತಿಯೇ ಕಾರಣವಲ್ಲವೆ? ನಾವಿಬ್ಬರೂ ಸರಿಯಾಗಿ ನಡೆದುಕೊಂಡಿದ್ದರೆ ಇಂದು ಸುಖವಾಗಿಯೂ ಧೈರ್ಯವಾಗಿಯೂ ಇರುತ್ತಿದ್ದೆವು; ಆದರೆ ನಾವು ದಾರಿ ತಪ್ಪಿ ನಡೆದೆವು; ಅದರ ಪರಿಣಾಮವಾಗಿ ಇಂದು ದುಃಖವನ್ನೂ ಆತಂಕವನ್ನೂ ಅನುಭವಿಸುತ್ತಿದ್ದೇವೆ. 'ಪುಣ್ಯಕರ್ಮದಿಂದ ಸೌಖ್ಯ; ಪಾಪಕರ್ಮದಿಂದ ದುಃಖ'ಎಂದರೆ ಇದೇ ತಾತ್ಪರ್ಯ.

‘ಪುಣ್ಯ‘ ಎಂದರೆ ‘ಒಳ್ಳೆಯದು‘ ಎಂದೂ ಅರ್ಥ; ‘ಪಾಪ‘ ಎಂದರೆ ‘ಕೆಟ್ಟದ್ದು‘ ಎಂದೂ ಅರ್ಥ. ಒಳ್ಳೆಯದು ಎಂದರೆ ನಮ್ಮ ಮತ್ತು ನಮ್ಮ ಪರಿಸರದ ಹಿತವನ್ನು ಕಾಪಾಡುವಂಥದ್ದು. ಕೆಟ್ಟದ್ದು ಎಂದರೆ ನಮ್ಮ ಮತ್ತು ಪರಿಸರದ ಹಿತವನ್ನು ಹಾಳುಮಾಡುವಂಥದ್ದು. ಈ ಹಿತಾಹಿತಗಳಲ್ಲಿ ಆರೋಗ್ಯ–ಅನಾರೋಗ್ಯಗಳೂ ಸೇರುತ್ತದೆಯೆನ್ನಿ! ಈಗ ಹೇಳಿ, ನಮ್ಮ ಇಂದಿನ ಪರಿಸ್ಥಿತಿಗೆ ಕಾರಣ ಯಾರು?

‘ಎಲ್ಲವೂ ಕರ್ಮದ ಫಲ; ಮಾಡದೆ ಯಾವುದೂ ಘಟಿಸುವುದಿಲ್ಲ'– ಎಂದು ಸುಭಾಷಿತ ಹೇಳಿರುವುದನ್ನು ಮತ್ತೆಮ್ಮೊ ಮೆಲುಕು ಹಾಕಬಹುದು. ಇವತ್ತು ನಾವು ಏನನ್ನು ಅನುಭವಿಸುತ್ತಿದ್ದೇವೋ ಅದಕ್ಕೆ ನಾವು ನಡೆದುಕೊಂಡ ರೀತಿಯೇ ಕಾರಣ; ನಮ್ಮ ಕರ್ಮಗಳೇ ಕಾರಣ. ನಾವು ತಪ್ಪಾಗಿ ನಡೆದುಕೊಳ್ಳದಿದ್ದರೆ ಇಂದಿನ ಪರಿಸ್ಥಿತಿ ಎದುರಾಗುತ್ತಿರಲಿಲ್ಲ, ಅಲ್ಲವೆ?

ಈ ’ಕರ್ಮಸಿದ್ಧಾಂತ‘ ನಮ್ಮ ಜೀವನದ ಎಲ್ಲ ಸಂದರ್ಭಗಳಿಗೂ ಹೊಂದುತ್ತದೆ ಎನ್ನಬಹುದು. ಜೀವನದಲ್ಲಿ ಪರಿಶ್ರಮ ಪಡುವ ಗುಣ ನಮ್ಮದಾಗಿದ್ದರೆ ಅದರ ಫಲವಾಗಿ ಸುಖದ ಜೀವನವೂ ನಮಗೆ ದಕ್ಕುತ್ತದೆ; ಸೋಮಾರಿತನವೇ ನಮ್ಮ ಸ್ವಭಾವವಾದರೆ ಆಗ ಅನಾರೋಗ್ಯದ ಜೊತೆಗೆ ಅಸೌಖ್ಯವೂ ನಮ್ಮದಾಗುತ್ತದೆ, ಅಷ್ಟೆ! ಕ್ರಿಯಾಶೀಲತೆಯಿಂದ ಸಂಪತ್ತು ಒಂದು ವೇಳೆ ನಮ್ಮ ಕೈ ಹಿಡಿಯದೆಹೋದೀತು; ಆದರೆ ದೈಹಿಕ ಗಟ್ಟಿತನ ಮತ್ತು ಮನಸ್ಸಿಗೆ ಆಹ್ಲಾದವಂತೂ ನಮ್ಮದಾಗುವುದು ದಿಟ. ’ಕಗ್ಗ‘ದ ಪದ್ಯವೊಂದು ಇಲ್ಲಿ ನೆನಪಾಗುವುದು:

ಜಟ್ಟಿ ಕಾಳಗದಿ ಗೆಲ್ಲದೊಡೆ ಗರಡಿಯ ಸಾಮು ।
ಪಟ್ಟುವರಸೆಗಳೆಲ್ಲ ವಿಫಲವೆನ್ನುವೆಯೇಂ ।।
ಮುಟ್ಟಿನೋಡವನ ಮೈಕಟ್ಟು ಕಬ್ಬಿಣಗಟ್ಟಿ ।
ಗಟ್ಟಿತನ ಗರಡಿಫಲ – ಮಂಕುತಿಮ್ಮ ।।

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT