ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವರಸಮೂರ್ತಿ ಶ್ರೀರಾಮ

Last Updated 12 ಏಪ್ರಿಲ್ 2019, 3:52 IST
ಅಕ್ಷರ ಗಾತ್ರ

ರಸಗಳ ಬಗ್ಗೆ ಮಾತು ಬಂದಿದೆ. ‘ರಸ’ ಎಂದರೇನು? ಈ ಪ್ರಶ್ನೆಯನ್ನು ಆನಂತರದಲ್ಲಿ ನೋಡೋಣವೆನ್ನಿ!

ಬ್ರಹ್ಮಸೃಷ್ಟಿಯ ಆರು ರಸಗಳಿಗೂ ಕವಿಸೃಷ್ಟಿಯ ನವರಸಗಳಿಗೂ ಇರುವ ವ್ಯತ್ಯಾಸವನ್ನು ನೋಡಿದೆವು. ಈ ವ್ಯತ್ಯಾಸಗಳನ್ನು ತೋರಿಸಿದ್ದು ಶಾಸ್ತ್ರವೇ ಹೌದು; ಮಾತ್ರವಲ್ಲ, ಅದೇ ಶಾಸ್ತ್ರ ಇವೆರಡರ ಮಧ್ಯೆ ಇರುವ ನಂಟನ್ನೂ ಹೇಳುತ್ತದೆ. ಪಾನಕರಸದ ಸವಿಗೂ ಕಾವ್ಯರಸಕ್ಕೂ ಇರುವ ಸಾಮ್ಯವನ್ನು ಭರತನ ‘ನಾಟ್ಯಶಾಸ್ತ್ರ’ ಪ್ರತಿಪಾದಿಸಿದೆ. (ನಾನಾದ್ರ್ಯೈರ್ಬಹುವಿವಿಧೈರ್ವ್ಯಂಜನಂ ಭಾವ್ಯತೇ ಯಥಾ | ಏವಂ ಭಾವಾ ಭಾವಯಂತಿ ರಸಾನಭಿನಯೈಃ ಸಹ||) ಅಭಿನವಗುಪ್ತನ ‘ಅಭಿನವಭಾರತಿ’ಯ ಈ ಭಾಗದ ಭಾಷ್ಯವೂ ವಿಚಾರಾರ್ಹವಾದುದು. ಪಾನಕವನ್ನು ತಯಾರಿಸಲು ಬೆಲ್ಲ, ಮೆಣಸು ಮುಂತಾದ ದ್ರವ್ಯಗಳನ್ನು ಬಳಸುತ್ತೇವೆ ಅಲ್ಲವೆ? ಇವೆಲ್ಲವನ್ನೂ ಚೆನ್ನಾಗಿ ಬೆರೆಸಿ, ನಿಷ್ಣಾತನಾದ ಅಡುಗೆಯವನು ಪಾನಕವನ್ನು ತಯಾರಿಸುತ್ತಾನೆ. ಹೀಗೆ ಬೇರೆ ಬೇರೆ ರಸಗಳನ್ನು ಬಳಸಿ ಮಾಡಿದ ಪಾನಕದ ರುಚಿ ಈ ದ್ರವ್ಯಗಳಿಗಿಂತಲೂ ಬೇರೆಯೇ ಆದ ಮತ್ತೊಂದು ಸ್ವಾದವನ್ನು ಪಡೆದುಕೊಳ್ಳುತ್ತದೆಯಷ್ಟೆ! ಪಾನಕವನ್ನು ಸಿಹಿಯೆಂದೋ ಹುಳಿಯೆಂದೋ ಖಾರವೆಂದೋ ಹೇಳಲು ಆಗದು; ಬೇರೆಯೇ ರುಚಿಯೊಂದು ಅದಕ್ಕೆ ದಕ್ಕಿರುತ್ತದೆ. ಹೀಗೆಯೇ ಹಲವು ವಿಭಾವಾದಿಗಳಿಂದಲೂ ಸ್ಥಾಯಿಭಾವಗಳಿಂದಲೂ ರಸ ಎನ್ನುವುದು ಸಿದ್ಧವಾಗುತ್ತದೆ. (ಭಾವ, ವಿಭಾವ, ಸ್ಥಾಯಿಭಾವ – ಇವೆಲ್ಲವೂ ಪಾರಿಭಾಷಿಕಪದಗಳು.) ಹೀಗೆ ಲೌಕಿಕ ಅಂಶಗಳಿಂದ ಅಲೌಕಿಕ ಅನುಭವವೊಂದು ಒದಗುವ ಸ್ಥಿತಿಯೇ ರಸಾನುಭವ – ಎನ್ನುವುದು ಅಭಿನವಗುಪ್ತನ ಮಾತುಗಳ ಸಾರ. ‘ರಸ ಎನ್ನುವುದು ಲೌಕಿಕ–ಅಲೌಕಿಕಗಳ ಸಾಮರಸ್ಯ’ ಎನ್ನುವುದು ಸ್ವಾರಸ್ಯಕರ ಸಂಗತಿಯೇ ಸರಿ.

ಅಲೌಕಿಕವಾದ ರಸಾನುಭೂತಿಯನ್ನು ಒದಗಿಸುವ ಕವಿಗಳು ಹುಟ್ಟು– ಸಾವುಗಳ ಬಂಧನದಿಂದ ಗೆದ್ದವರು ಎಂಬ ಹೇಳಿಕೆಯ ಹಿನ್ನೆಲೆಯಲ್ಲಿ ಮೇಲಣ ಮಾತುಗಳಿವೆ. ನಮಗೆ ಇಂಥ ಲೋಕೋತ್ತರ ಅನುಭವವನ್ನು ನೀಡುವ ರಸಗಳನ್ನು ಒಂಬತ್ತು ಎಂದು ಚೊಕ್ಕವಾಗಿ ಲೆಕ್ಕ ಮಾಡಿರುವುದು ಕೂಡ ಶಾಸ್ತ್ರಪರಂಪರೆಯ ನಿಶಿತತೆಗೆ ನಿದರ್ಶನದಂತಿದೆ. ಕಾವ್ಯವು ಸಹೃದಯನನ್ನು ತಲ್ಲೀನಗೊಳಿಸಿ ಅವನ ಹೃದಯವನ್ನು ಗೆಲ್ಲಬೇಕು. ಇಂಥ ಗೆಲುವಿಗೆ ಕಾರಣವಾಗುವುದೇ ರಸಾನುಭವ. ಹೀಗಾಗಿ ಕಾವ್ಯದ ಯಶಸ್ಸು ರಸಸ್ಥಾಪನೆಯ ಮೇಲೆ ನಿಂತಿದೆ. ಯಾವುದೇ ಕಾವ್ಯವೃಕ್ಷಕ್ಕೂ ‘ಪ್ರಧಾನರಸ’ ಎಂದು ಒಂದಿರಬಹುದಾದರೂ, ಒಂದಲ್ಲ ಒಂದು ವಿಧದಲ್ಲಿ ನವರಸಗಳು ಕೂಡ ಅದರ ಶಾಖೋಪಶಾಖೆಗಳಲ್ಲಿ ಕಾಣಿಸಿಕೊಂಡಿರಬೇಕು; ಆಗಲೇ ಅದು ಮಹಾಕಾವ್ಯವಾಗಿ, ಪರಿಪೂರ್ಣವೂ ಎನಿಸಿಕೊಳ್ಳುತ್ತದೆ.

ವಾಲ್ಮೀಕಿ ರಾಮಾಯಣಕ್ಕೂ ಪ್ರಧಾನರಸವೊಂದಿದೆ ಎಂದು ಅಲಂಕಾರಶಾಸ್ತ್ರ ಗುರುತಿಸಿದೆ. ಕರುಣರಸವೇ ರಾಮಾಯಣದ ಪ್ರಧಾನರಸ. ರಾಮಾಯಣವನ್ನು ಅನುಸಂಧಾನಿಸುವ ಯಾವ ಸಹೃದಯನೇ ಆಗಲಿ ಈ ರಸಾನುಭೂತಿಯಲ್ಲಿ ಮಿಂದು ಧನ್ಯನಾಗುತ್ತಾನೆ. (ಸಹೃದಯ – ಎನ್ನುವುದು ಕೂಡ ಪಾರಿಭಾಷಿಕಪದವೇ.) ರಾಮಾಯಣದ ರಸ ಯಾವುದೆಂದು ಆ ಕಾವ್ಯದ ಹೊರಗೆ ಆದಂಥ ತೀರ್ಮಾನವಲ್ಲ; ಕಾವ್ಯಕ್ಕೇ ಇದು ತಿಳಿದಿದೆ. ‘ಶೋಕಃ ಶ್ಲೋಕತ್ವಮಾಗತಃ’ – ಶೋಕವೇ ಶ್ಲೋಕವಾಯಿತು – ಎಂದು ಹೇಳಿರುವುದರಲ್ಲಿ ಇದರ ಸೂಚನೆಯೂ ಇದ್ದಂತಿದೆ. ‘ಉತ್ತರರಾಮಚರಿತೆ’ಯಲ್ಲಿ ಭವಭೂತಿ ‘ಏಕೋ ರಸಃ ಕರುಣ ಏವ’ (ರಸವು ಇಲ್ಲಿ ಕರುಣವೊಂದೇ) – ಎಂದು ಹೇಳಿರುವುದಾದರೂ ರಾಮಾಯಣದ ಪ್ರಧಾನರಸದ ಉಲ್ಲೇಖದಂತೆಯೇ ಇದೆ. (ಅಲ್ಲಿಯೇ ಹೇಳಿರುವ ‘ರಸದ ವಿವರ್ತವಾದ’ ಕೂಡ ಮನನೀಯ; ಇದರ ವಿವರಣೆ ಮುಂದೆ ಬರುತ್ತದೆ.)

ರಾಮಾಯಣದ ಪ್ರಧಾನರಸ ಕರುಣ ಎನ್ನುವುದು ದಿಟವಾದರೂ, ಈ ಮಹಾಕಾವ್ಯದ ಉದ್ದಕ್ಕೂ ಇದೊಂದೇ ರಸ ಇದೆ ಎಂದೇನಲ್ಲ; ಇತರ ಎಂಟು ರಸಗಳು ಕೂಡ ಉಚಿತವಾಗಿಯೇ ಮೇಳೈಸಿವೆ. ಕಾವ್ಯದಲ್ಲಿ ಮಾತ್ರವೇ ಅಲ್ಲ, ಅದರ ನಾಯಕನಾದ ರಾಮನೇ ನವರಸಗಳ ಮೂರ್ತಿ ಎನ್ನುವುದನ್ನು ನಿರೂಪಿಸಿರುವ ಈ ಶ್ಲೋಕ ಉಲ್ಲೇಖಾರ್ಹವಾದುದು:

ಶೃಂಗಾರಂ ಕ್ಷಿತಿನಂದಿನೀವಿಹರಣೇ ವೀರಂ ಧನುರ್ಭಂಜನೇ

ಕಾರುಣ್ಯಂ ಬಲಿಭೋಜನೇsದ್ಭುತರಸಂ ಸಿಂಧೌ ಗಿರಿಸ್ಥಾಪನೇ |

ಹಾಸ್ಯಂ ಶೂರ್ಪಣಖಾಮುಖೇ ಭಯಮಘೇ ಬೀಭತ್ಸಮನ್ಯಾಮುಖೇ

ರೌದ್ರಂ ರಾವಣಭಂಜನೇ ಮುನಿಜನೇ ಶಾಂತಂ ವಪುಃ ಪಾತು ನಃ ||

‘ಜಾನಕಿಯೊಡನೆ ವಿಹರಿಸುವಾಗ ಶೃಂಗಾರ, ಶಿವಧನುಸ್ಸನ್ನು ಮುರಿಯುವಾಗ ವೀರ, ಕಾಕಾಸುರನ ವಿಷಯದಲ್ಲಿ ಕಾರುಣ್ಯ, ಸಮುದ್ರದಲ್ಲಿ ಬೆಟ್ಟಗಳನ್ನು ತೇಲಿಸಿ ಸೇತುವೆಯನ್ನು ಕಟ್ಟುವಾಗ ಅದ್ಭುತ, ಶೂರ್ಪಣಖೆಯ ಪ್ರಸಂಗದಲ್ಲಿ ಹಾಸ್ಯ, ಪಾಪಕಾರ್ಯದಲ್ಲಿ ಭಯ, ಪರಸ್ತ್ರೀವಿಷಯದಲ್ಲಿ ಬೀಭತ್ಸ, ರಾವಣನನ್ನು ಸಂಹರಿಸುವಾಗ ರೌದ್ರ, ಮುನಿಗಳ ಸಂನಿಧಿಯಲ್ಲಿ ಶಾಂತ – ಹೀಗೆ ನವರಸಗಳಿಗೆ ಆಕರನಾದ ಶ್ರೀರಾಮಚಂದ್ರಮೂರ್ತಿಯು ನಮ್ಮನ್ನು ಕಾಪಾಡಲಿ.’

(ಅನುವಾದ: ಎನ್‌. ರಂಗನಾಥಶರ್ಮಾ)

ಧರ್ಮವಂತ ಯಾರು – ಎಂಬ ಪ್ರಶ್ನೆಗೆ ಉತ್ತರವಾಗಿ ಹುಟ್ಟಿದ ರಾಮಾಯಣ ನವರಸಗಳಿಂದ ಅಲಂಕೃತವಾಗಿರುವ ಶ್ರೇಷ್ಠಕಾವ್ಯ; ಕೇವಲ ಧರ್ಮದ ಪ್ರವಚನಕ್ಕೆ ನಿಂತ ನೀರಸ ಕಾವ್ಯವಲ್ಲ. ದಿಟ, ಅದರ ವಸ್ತು – ಧರ್ಮ; ಅದರ ನಾಯಕ ಧರ್ಮಾತ್ಮಾ. ಆದರೆ ಕಾವ್ಯದಲ್ಲಿ ಹುಟ್ಟುವ ಸಂದರ್ಭದಲ್ಲಿ ಧರ್ಮಾಧರ್ಮಗಳ ಮೀಮಾಂಸೆಯಿದೆಯೇ ಹೊರತು, ಅದನ್ನು ನಿರೂಪಿಸಲು ಕಾವ್ಯದ ಆಚೆಗಿನ ಸಿದ್ಧಾಂತದ ಆಲಂಬನ ಅದಕ್ಕೆ ಬೇಕಾಗಿಲ್ಲ. ಅಷ್ಟೇ ಅಲ್ಲ, ಧರ್ಮಮೀಮಾಂಸೆಗೂ ಕಾವ್ಯಮೀಮಾಂಸೆಗೂ ಸಂಸ್ಕೃತಿಮೀಮಾಂಸೆಗೂ ರಾಮಾಯಣವೇ ಆನಂತರದಲ್ಲಿ ಒಂದು ಮಾನದಂಡವಾದದ್ದನ್ನು ಮರೆಯುವಂತಿಲ್ಲ. ಅಮೂರ್ತವಾದ ಧರ್ಮವನ್ನು ರಾಮನ ಮೂಲಕ ವಿಗ್ರಹರೂಪದಲ್ಲಿ ಕಾಣಿಸಿದ್ದು ಮಾತ್ರವಲ್ಲ, ಧರ್ಮದ ನಡೆಯನ್ನು ನವರಸಗಳಲ್ಲೂ ಕಂಡರಿಸಿ, ರಾಮಾಯಣವನ್ನು ರಸಯಾನವನ್ನಾಗಿಸಿದ್ದು ಆದಿಕವಿಯ ಕಾಣ್ಕೆ. ಹೀಗಾಗಿ ರಾಮಾಯಣದ ಮೀಮಾಂಸೆ ಎಂದರೆ ಅದು ಒಟ್ಟು ಭಾರತೀಯ ಸಂಸ್ಕೃತಿಯ ಅನುಸಂಧಾನವೇ ಹೌದು; ಅಷ್ಟೇಕೆ, ಒಟ್ಟು ಮಾನವಕುಲದ ಏಳು–ಬೀಳುಗಳ ಜಾಡನ್ನು ಕೂಡ ಅಲ್ಲಿ ಕಾಣಬಹುದೆನ್ನಿ.

ರಾಮವೃತ್ತಾಂತದ ಎಲ್ಲ ರಸಗಳನ್ನು, ಎಲ್ಲ ಭಾವಗಳನ್ನು, ಎಲ್ಲ ಆಗುಹೋಗುಗಳನ್ನು ವಾಲ್ಮೀಕಿಯು ಯೋಗಸ್ಥಿತಿಯಲ್ಲಿ ಕಂಡನಷ್ಟೆ. ಹೀಗೆ ಕಂಡದ್ದು ಹೇಗಿತ್ತು ಎಂದರೆ ‘ಅಂಗೈಯಲ್ಲಿರುವ ನೆಲ್ಲಿಕಾಯಿಯಂತೆ’ ಇದ್ದಿತಂತೆ; ‘ಪಾಣಾವಾಮಲಕಂ ಯಥಾ’ – ಇದು ರಾಮಾಯಣದ್ದೇ ಮಾತು. ‘ಅಂಗೈಯಲ್ಲಿರುವ ನೆಲ್ಲಿಕಾಯಿಯಂತೆ’ ಎನ್ನುವುದು ಈಗ ಕನ್ನಡದಲ್ಲೂ ಒಂದು ಸಹಜ ನುಡಿಗಟ್ಟಾಗಿದೆಯಷ್ಟೆ; ‘ಕರತಲಾಮಲಕ’ ಎಂಬ ಇನ್ನೊಂದು ಮಾತು ಕೂಡ ಸಂಸ್ಕೃತದಲ್ಲಿ ಬಳಕೆಯಲ್ಲಿದೆ – ಅದರ ಅರ್ಥ ಕೂಡ ಅದೇ. ನೆಲ್ಲಿಕಾಯಿ ಮರದಲ್ಲಿದ್ದರೆ ಸ್ಪಷ್ಟವಾಗಿ ಕಾಣದು; ಮರದಲ್ಲಿ ಎಲೆಮರೆಯಾಗಿರುವಾಗ ಕಾಯಿ ಯಾವುದು, ಎಲೆ ಯಾವುದು ಎಂದು ಗೊತ್ತಾಗದಂಥ ಗೊಂದಲ. ಆದರೆ ಕೈಯಲ್ಲಿರುವ ಕಾಯಿ ಸ್ಪಷ್ಟವಾಗಿ – ಗಾತ್ರ, ಬಣ್ಣಗಳ ಸಮೇತ – ಕಾಣುತ್ತದೆ, ಅಲ್ಲವೆ? ಜೊತೆಗೆ ಕೈಯಲ್ಲಿರುವ ಕಾಯಿಯು ಮರದಲ್ಲಿರುವ ಕಾಯಿಗಿಂತಲೂ ಹತ್ತಿರವೂ ಇರುತ್ತದೆಯಷ್ಟೆ! ಹೀಗಾಗಿ ‘ಅಂಗೈಯಲ್ಲಿರುವ ನೆಲ್ಲಿ’ ಎನ್ನುವುದು ಸ್ಪಷ್ಟತೆಗೆ ಪರ್ಯಾಯವಾದ ಮಾತಾಗಿ ರೂಪುಗೊಂಡಿದೆ. ಬಹುಶಃ ರಾಮಾಯಣದಲ್ಲಿಯೇ ಅದರ ಮೊದಲ ಪ್ರಯೋಗ ನಡೆದಿರುವುದು. ಪ್ರಾಚೀನ ಕಾಲದಲ್ಲಿ ನೆಲ್ಲಿಕಾಯಿ ಜನರ ನಿತ್ಯದ ಜೀವನದಲ್ಲಿ ತುಂಬ ಮುಖ್ಯವಾದ ವಸ್ತುವಾಗಿತ್ತೆ? ನುಡಿಗಟ್ಟಿನಲ್ಲಿ ಬಳಕೆಯಾಗಬೇಕಾದರೆ ಅದು ಸಾಮಾನ್ಯ ವಸ್ತುವೇ ಆಗಿರಬೇಕಲ್ಲವೆ? ನೆಲ್ಲಿಯ ಬಗ್ಗೆ ಸಂಶೋಧಕರು ಬೆಳಕನ್ನು ಚೆಲ್ಲಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT