ಗುರುವಾರ, 7 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೌಸಲ್ಯಾ ಸುಪ್ರಜಾ ರಾಮ...

Last Updated 10 ಏಪ್ರಿಲ್ 2019, 10:41 IST
ಅಕ್ಷರ ಗಾತ್ರ

ರಾಮನ ಜೊತೆ ಲಕ್ಷ್ಮಣನೂ ವಿಶ್ವಾಮಿತ್ರನ ಜೊತೆ ಹೊರಡಲು ಸಿದ್ಧನಾದನು. ಆಗ ಆಕಾಶದಿಂದ ಪುಷ್ಪವೃಷ್ಟಿಯಾಯಿತು. ದೇವದುಂದುಭಿಗಳು ಮೊಳಗಿದವು. ಶಂಖಗಳು ಶಬ್ದ ಮಾಡಿದವು. ಎರಡು ಹೆಗಲುಗಳ ಮೇಲೂ ಬತ್ತಳಿಕೆಗಳನ್ನು ಏರಿಸಿಕೊಂಡಿದ್ದರಿಂದ ರಾಮಲಕ್ಷ್ಮಣರಿಬ್ಬರೂ ಮೂರು ಹೆಡೆಗಳ ಹಾವಿನಂತೆ ಕಾಣುತ್ತಿದ್ದರಂತೆ. (ಲಕ್ಷ್ಮಣನ ಜೊತೆಯಲ್ಲಿ ಸರ್ಪದ ಪ್ರತೀಕ ಬಂದಿರುವುದನ್ನು ಗಮನಿಸತಕ್ಕದ್ದು. ಕಾಳಿದಾಸನೂ ಆದಿಶೇಷನೊಂದಿಗೆ ಹೋಲಿಸಿದ್ದಾನೆ.) ಈ ಇಬ್ಬರೂ ವಿಶ್ವಾಮಿತ್ರರ ಜೊತೆ ಹೋಗುತ್ತಿರುವಾಗ ಬ್ರಹ್ಮನೊಡನೆ ನಡೆಯುತ್ತಿರುವ ಅಶ್ವಿನೀದೇವತೆಗಳಂತೆಯೂ ಶಿವನನ್ನು ಹಿಂಬಾಲಿಸುವ ಸ್ಕಂದವಿಶಾಖರಂತೆಯೂ ಕಂಡರಂತೆ.

ದಶರಥನು ರಾಮನ ತಲೆಯನ್ನು ಆಘ್ರಾಣಿಸಿ ಕಳುಹಿಸಿದನಷ್ಟೆ. ಈ ಪ್ರಸಂಗವನ್ನು ಕಾಳಿದಾಸ ವರ್ಣಿಸಿರುವುದು ಉಲ್ಲೇಖಾರ್ಹ. ರಾಮ–ಲಕ್ಷ್ಮಣರನ್ನು ಆಲಿಂಗಿಸಿಕೊಂಡು ಕಳುಹಿಸಿಕೊಟ್ಟ ಎಂದಿದ್ದಾನೆ ಅವನು. ಏಕೆ ಈ ಆಲಿಂಗನ? ದಶರಥನು ತನ್ನ ಮಕ್ಕಳ ರಕ್ಷಣೆಗೆ ಸೈನ್ಯವನ್ನು ಕಳುಹಿಸಲಿಲ್ಲವಂತೆ; ಆಶೀರ್ವಾದವೇ ವಜ್ರಕವಚದಂತೆ ಇರಲಿ ಎಂದು ಅವರಿಬ್ಬರನ್ನು ಆಲಿಂಗಿಸಿಕೊಂಡ. ತನ್ನ ಮಕ್ಕಳು ನಡೆಯುವ ಅಯೋಧ್ಯೆಯ ರಸ್ತೆಗಳನ್ನು ಸ್ವಚ್ಛಗೊಳಿಸಲು, ದೂಳು ಏಳದಂತೆ ನೀರನ್ನು ಚಿಮುಕಿಸಲು, ಗಂಧೋದಕವನ್ನು ಸುರಿದು ಪರಿಸರವನ್ನು ಸುಗಂಧಮಯವನ್ನಾಗಿಸಲು, ತೋರಣಗಳಿಂದ ಸಿಂಗರಿಸಲು ಆಜ್ಞಾಪಿಸಿದ್ದ.ಇಬ್ಬರು ಸಹೋದರರು ವಿಶ್ವಾಮಿತ್ರನ ಜೊತೆಯಲ್ಲಿ ಹೋಗುವುದನ್ನು ನೋಡಲು ಅಯೋಧ್ಯೆಯ ಹೆದ್ದಾರಿಯಲ್ಲಿ ಜನರು ಸೇರಿದರು. ರಾಮ–ಲಕ್ಷ್ಮಣರನ್ನು ನೋಡುತ್ತಿರುವಜನರ ಕಣ್ಣುಗಳೇ ತೋರಣದಂತೆ ಕಾಣುತ್ತಿದ್ದವಂತೆ. ಆಗ ಬೀಸಿದ ಗಾಳಿಯೇ ಸುಗಂಧಯುತವಾಗಿದ್ದಿತು; ತುಂತುರುಮಳೆಯೂ ಆಯಿತು. ದೇವತೆಗಳೇ ಹೂಮಳೆ ಸುರಿಸಿದರು. ಎಂದರೆ ದೈವವೇ ಆ ಸಂದರ್ಭವನ್ನು ಹಿತವಾಗಿ ಸಜ್ಜುಗೊಳಿಸಿತು.

ಲೋಕದ ಹಿತಕ್ಕಾಗಿ ತೊಡಗುವ ಕಾರ್ಯಗಳಿಗೆ ಲೋಕೋತ್ತರವಾದ ಶಕ್ತಿಗಳೂ ಸಹಕರಿಸುತ್ತವೆ – ಎನ್ನುವುದು ಇಲ್ಲಿರುವ ತಾತ್ಪರ್ಯ.

***

ವಿಶ್ವಾಮಿತ್ರ, ರಾಮ ಮತ್ತು ಲಕ್ಷ್ಮಣ ಮೂವರೂ ಸರಯೂನದಿಯ ದಕ್ಷಿಣತೀರಕ್ಕೆ ಬಂದಿದ್ದಾರೆ. ವಿಶ್ವಾಮಿತ್ರ ರಾಮನನ್ನು ಇಂಪಾದಧ್ವನಿಯಿಂದ (ಮಧುರಾಂ ವಾಣೀಂ) ‘ರಾಮ’ ಎಂದು ಕರೆದನಂತೆ. ‘ಮಗು ಆಚಮನವನ್ನು ಮಾಡು. ಬಲಾ ಮತ್ತು ಅತಿಬಲಾ ಎಂಬ ಎರಡು ಮಂತ್ರಗಳನ್ನು ಉಪದೇಶಿಸುವೆ’ ಎಂದು ಹೇಳಿ, ರಾಮಲಕ್ಷ್ಮಣರಿಬ್ಬರಿಗೂ ಆ ಮಂತ್ರಗಳನ್ನು ಉಪದೇಶಿಸಿದ. ಈ ಮಂತ್ರಗಳಿಂದ ಪ್ರಯೋಜನ ಏನೆಂಬುದನ್ನೂ ವಿಶ್ವಾಮಿತ್ರನೇ ವಿವರಿಸುತ್ತಾನೆ: ‘ಈ ಮಂತ್ರದ ದೆಸೆಯಿಂದಾಗಿ ಶ್ರಮವಾಗಲಿ, ಜ್ವರದ ಬಾಧೆಯಾಗಲಿ, ಆಯಾಸದಿಂದ ದೇಹರೂಪದಲ್ಲಿ ಬದಲಾವಣೆಯಾಗಲಿ ಆಗುವುದಿಲ್ಲ. ನಿದ್ರಿಸುವಾಗ ಅಥವಾ ಅಜಾಗರೂಕವಾಗಿರುವಾಗ ರಾಕ್ಷಸರು ಕೂಡ ಏನೂ ಮಾಡಲಾರರು. ಎಲ್ಲ ವಿದ್ಯೆಗಳಿಗೂ ಮೂಲ ಈ ಎರಡು ವಿದ್ಯೆಗಳು. ಈ ಮಂತ್ರಗಳನ್ನು ಜಪಿಸುತ್ತಿದ್ದರೆ ಹಸಿವು–ಬಾಯಾರಿಕೆಗಳೂ ಆಗುವುದಿಲ್ಲ.’

ಗುರುವಿನ ಸೇವೆಯನ್ನು ಹೇಗೆ ಮಾಡಬೇಕೆಂದು ರಾಮ–ಲಕ್ಷ್ಮಣರಿಗೆ ವಿಶ್ವಾಮಿತ್ರ ಉಪದೇಶಿಸಿದ. ಇನ್ನು ಕೆಲವು ದಿನಗಳು ಅವರಿಬ್ಬರೂ ವಿಶ್ವಾಮಿತ್ರನ ಜೊತೆಯಲ್ಲಿ ಇರಬೇಕಷ್ಟೆ. ಹೀಗಾಗಿಯಾವಾಗ ಹೇಗೆ ಅವರೊಂದಿಗೆ ನಡೆದುಕೊಳ್ಳಬೇಕು, ಮುಂತಾದ ವಿವರಗಳನ್ನು ತಿಳಿಸಲೇಬೇಕಲ್ಲವೆ?

ರಾತ್ರಿಯಾಯಿತು. ಹುಲ್ಲು–ಸೊಪ್ಪುಗಳ ಹಾಸಿಗೆಯಲ್ಲಿ ರಾಮ–ಲಕ್ಷ್ಮಣರು ಮಲಗಿದರು. ನಿದ್ರೆ ಬರುವವರೆಗೂ ವಿಶ್ವಾಮಿತ್ರ ಹಲವು ಒಳ್ಳೆಯ ಮಾತುಗಳನ್ನು ಹೇಳುತ್ತಿದ್ದ. ಸುಖವಾಗಿ ನಿದ್ರಿಸಿದರು.

***

ಯಾವುದಾದರೊಂದು ದೊಡ್ಡ ಕೆಲಸವನ್ನು ಮಾಡಲು ದೇಹ ಮತ್ತು ಮನಸ್ಸುಗಳು ಸಿದ್ಧವಾಗಬೇಕು. ಅದಕ್ಕೆ ಅನುಕೂಲಕರವಾಗಿ ಹಸಿವು, ಬಾಯಾರಿಕೆ, ನಿದ್ರೆ, ಆಯಾಸಗಳನ್ನು ಗೆಲ್ಲಬೇಕು. ಅದನ್ನೇ ಬಲಾ–ಅತಿಬಲಾ ಮಂತ್ರಗಳು ಸೂಚಿಸುತ್ತಿರುವುದು.

***

ರಾತ್ರಿ ಕಳೆದು ಬೆಳಗಾಗುತ್ತಬಂದಿತು. ರಾಮ–ಲಕ್ಷ್ಮಣರು ಇನ್ನೂ ಸೊಪ್ಪಿನ ಹಾಸಿಗೆಯಲ್ಲಿ ಮಲಗಿದ್ದಾರೆ. ಅವರಿಬ್ಬರನ್ನು ಎಬ್ಬಿಸುತ್ತ ವಿಶ್ವಾಮಿತ್ರ ಹೀಗೆ ಹಾಡಿದ:

ಕೌಸಲ್ಯಾ ಸುಪ್ರಜಾ ರಾಮ ಪೂರ್ವಾ ಸಂಧ್ಯಾ ಪ್ರವರ್ತತೇ |

ಉತ್ತಿಷ್ಠ ನರಶಾರ್ದೂಲ ಕರ್ತವ್ಯಂ ದೈವಮಾಹ್ನಿಕಮ್ ||

‘ರಾಮ, ನಿನ್ನನ್ನು ಹಡೆದ ಕೌಸಲ್ಯೆ ಭಾಗ್ಯಶಾಲಿನಿ. ಬೆಳಗಾಗುತ್ತ ಬಂದಿತು, ಏಳು. ನಿತ್ಯಕರ್ಮಗಳನ್ನು ಮಾಡಬೇಕಿದೆ, ಏಳು ನರಶ್ರೇಷ್ಠನೇ ...’ – ಇದು ಈ ಶ್ಲೋಕದ ತಾತ್ಪರ್ಯ.

ಮೇಲಣ ಶ್ಲೋಕವನ್ನು ನಮ್ಮಲ್ಲಿ ತುಂಬ ಜನರು ಕೇಳಿರುವ ಸಾಧ್ಯತೆ ಇದೆ. ಅದೂ ಎಂ. ಎಸ್‌. ಸುಬ್ಬುಲಕ್ಷ್ಮೀ ಅವರ ಕಂಠದಲ್ಲಿ. ತಿರುಪತಿ ತಿಮ್ಮಪ್ಪನಿಗೆ ಒಪ್ಪಿಸುವ ‘ವೇಂಕಟೇಶಸುಪ್ರಭಾತ’ದ ಪ್ರಥಮ ಶ್ಲೋಕವಿದು; ರಾಮಾಯಣದಿಂದಲೇ ಆರಿಸಿಕೊಂಡಿರುವುದು.

ಇರಲಿ; ಈ ಶ್ಲೋಕದ ವಿವರಣೆಗೆ ಬರೋಣ.

ರಾಮನನ್ನು ಎಬ್ಬಿಸುತ್ತ, ಎದ್ದ ಮೇಲೂ ಮುಂದುವರಿಸಿ ಹೇಳಿದ ಮಾತುಗಳಿವು. ದೇವರನ್ನು ಎಬ್ಬಿಸುವಾಗ ಸುಪ್ರಭಾತವನ್ನು ಹೇಳುವ ಕ್ರಮವೊಂದುಂಟು. ತಿರುಪತಿ ತಿರುಮಲೆಯಲ್ಲಿ ನಡೆಯವ ಸುಪ್ರಭಾತಸೇವೆಯನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. (ದೇವತೆಗಳಿಗೆ ನಿದ್ರೆ ಇದೆಯೆ? ದೇವತೆಗಳೇ ನಿದ್ರೆ ಮಾಡಿದರೆ ಲೋಕವನ್ನು ಕಾಪಾಡಬಲ್ಲವರು ಯಾರು? – ಇಂಥ ಹಲವು ಸಂದೇಹಗಳು ಇಲ್ಲಿ ಹುಟ್ಟಿಕೊಳ್ಳಬಹುದು. ಮುಂದೆ ಅವನ್ನು ನೋಡೋಣ.)

ವಿಶ್ವಾಮಿತ್ರನು ರಾಮನಿಗೆ ಸುಪ್ರಭಾತ ಹಾಡಿದ್ದಾನೆ; ‘ಗುಡ್‌ ಮಾರ್ನಿಂಗ್‌’ ಹೇಳುತ್ತಿದ್ದಾನೆ ಎಂದು ನಮ್ಮ ಕಾಲದ ಪರಿಭಾಷೆಯಲ್ಲಿ ಹೇಳಬಹುದೆನ್ನಿ!

ರಾಮನನ್ನು ಕೌಸಲ್ಯೆಯ ಮಗ ಎಂದು ಕರೆಯುತ್ತಿರುವುದು ಗಮನಾರ್ಹ. ತಾಯಿಯ ಜೋಗುಳವನ್ನೇ ಕೇಳಿ ಮಲಗಿ, ಮತ್ತೆ ಅವಳ ಮಾತಿನ ಹಾಡಿನ ಮೂಲಕವೇ ನಿದ್ರೆಯಿಂದ ಏಳುವುದುಮಕ್ಕಳ ಬೆಳವಣಿಗೆಯ ಸಹಜಚಕ್ರವಲ್ಲವೆ? ರಾಮನನ್ನು ವಾಲ್ಮೀಕಿ ಮತ್ತೆ ಮತ್ತೆ ‘ಕೌಸಲ್ಯೆಯ ಮಗ’ ಎಂದು ಒಕ್ಕಣಿಸಿದ್ದಾನೆ. ತಾಯಿಗೆ ದಿಟವಾದ ಸಂತೋಷವನ್ನು ಉಂಟುಮಾಡುವವನೇ ದಿಟವಾದ ಮಗ – ಎಂಬ ಮಾತಿಗೆ ಎಲ್ಲ ಕಾಲದಿಂದಲೂ ಮನ್ನಣೆ ಇರುವುದು ಸ್ಪಷ್ಟ. ರಾಮನ ಪಾಲಿಗೆ ತಾಯಿಯ ಸ್ಮರಣೆ ಎಂದರೆ ಅದು ಧರ್ಮದ ಸ್ಮರಣೆಯೇ ಹೌದು. ಏಕೆಂದರೆ ಅವನ ಪಾಲಿಗೆ ಧರ್ಮವೇ ತಾಯಿಯಲ್ಲವೆ? ಕರ್ತವ್ಯವನ್ನು ಮಾಡಲು ಏಳು – ಎಂದೇ ಅವನು ಎಬ್ಬಿಸುತ್ತಿರುವುದು. ರಾಮನನ್ನು ವಿಶ್ವಾಮಿತ್ರ ಮೊದಲ ಬಾರಿಗೆ ಜಗತ್ತಿಗೆ ಪರಿಚಯಿಸುತ್ತಿರುವುದೇ ಅವನು ಕೌಸಲ್ಯೆಯ ಮಗ ಎಂದು.

ಕಾಳಿದಾಸನು ರಾಮನಾಮವನ್ನು ಜಗತ್ತಿನ ಪ್ರಥಮ ಮಂಗಳ ಎಂದು ಕರೆದಿರುವನಷ್ಟೆ. ಜಗತ್ತಿನ ಪ್ರಥಮ ಮಂಗಳವು ಮಾತೃವಾತ್ಸಲ್ಯದ ಅಮೃತಸೇಚನದಿಂದ ಪುಷ್ಟವಾಗಿದೆ ಎಂದು ವಾಲ್ಮೀಕಿ ಧ್ವನಿಸುತ್ತಿರಬಹುದು. ತಾಯಿಗಿಂತಲೂ ಹೆಚ್ಚಾಗಿ ಧರ್ಮಸೂಕ್ಷ್ಮವನ್ನು ಯಾರು ತಾನೆ ಅಳವಡಿಸಿಕೊಂಡಿರಲು ಸಾಧ್ಯ? ತನ್ನ ಶರೀರದ ಭಾಗವಾಗಿಯೇ ನಮ್ಮನ್ನು ಬೆಳೆಸುತ್ತ, ನಮ್ಮ ಅಳುವನ್ನೂ ಅರ್ಥಮಾಡಿಕೊಳ್ಳುತ್ತ, ನಮ್ಮ ಮಲ–ಮೂತ್ರಗಳನ್ನು ಸ್ವಚ್ಛಗೊಳಿಸುತ್ತ,ನಮ್ಮ ತೊದಲು ನುಡಿಗಳನ್ನೇ ಸಂಪತ್ತಿನಂತೆ ಸಂಭ್ರಮಿಸುತ್ತ, ನಾವು ಹಟ ಮಾಡುವಾಗ ಓಲೈಸುತ್ತ, ತಪ್ಪು ಮಾಡಿದಾಗ ದಂಡಿಸುತ್ತ, ಬಿದ್ದಾಗ ಎಬ್ಬಿಸುತ್ತ – ಒಟ್ಟಿನಲ್ಲಿ ನಮ್ಮನ್ನು ನಮ್ಮನ್ನಾಗಿ ರೂಪಿಸುವವಳೇ ತಾಯಿ ಅಲ್ಲವೆ? ಧರ್ಮ ಎಂದರೂ ಇದೇ ಅಲ್ಲವೆ? ಹೀಗಾಗಿ ಧರ್ಮಾತ್ಮನನ್ನು ಜಗತ್ತಿಗೆ ಪರಿಚಯಿಸುವಾಗ, ಕರ್ತವ್ಯಕ್ಕೆ ತೊಡಗು ಎಂದು ಹೇಳುವಾಗ ಅವನನ್ನು ಅವನ ತಾಯಿಯೊಂದಿಗೆ ಸ್ಮರಿಸಿ ಹೇಳುವುದು ಉಚಿತವಾದುದೇ ಅಲ್ಲವೆ?

ಕೃಷ್ಣನಿಗೂ ಸುಪ್ರಭಾತ ಹೇಳಿದ್ದಾನೆ, ಲೀಲಾಶುಕ.

ಕೃಷ್ಣನ ತಾಯಿ ರಾತ್ರಿ ಮೊಸರನ್ನು ಕಡೆಯುತ್ತಿದ್ದಾಳೆ. ಅದೇ ಅವನಿಗೆ ಜೋಗುಳವಾಗಿ, ಅವನು ನಿದ್ರೆಗೆ ಜಾರಿದ್ದಾನೆ (ದಧಿಘೋಷವಿನೀತನಿದ್ರಂ). ಅಂಥವನನ್ನು ಸ್ಮರಿಸಿಕೊಳ್ಳುವ ಕವಿ, ಅವನು ಬೆಳಗ್ಗೆ ಏಳುವ ಕ್ರಮವನ್ನೂ ವಿವರಿಸುತ್ತಾನೆ: ಮೊಸರನ್ನು ಕಡೆಯುವುದರಿಂದ ಉಂಟಾದ ಶಬ್ದನಿನಾದವೇ ಬಾಲಕೃಷ್ಣನಿಗೆ ಸುಪ್ರಭಾತದ ಹಾಡಾಯಿತಂತೆ (ದಧಿಮಥನನಿನಾದೈಃ ತ್ಯಕ್ತನಿದ್ರಃ ಪ್ರಭಾತೇ). ತಾಯಿಯ ಒಂದೇ ಕಾರ್ಯ – ಇಲ್ಲಿ ಮೊಸರನ್ನು ಕಡೆಯುವಾಗಿನ ಸದ್ದು – ಮಗುವಿಗೆ ಜೋಗುಳವೂ ಆಗುತ್ತದೆ; ಸುಪ್ರಭಾತದ ಹಾಡೂ ಆಗುತ್ತದೆ. ಧರ್ಮವೂ ಹೀಗೆ ಅಲ್ಲವೆ – ನಮ್ಮ ನೆಮ್ಮದಿಗೂ ಕಾರಣ, ಕ್ರಿಯಾಶೀಲತೆಗೂ ಕಾರಣ. ಇನ್ನು ತಾಯಿಯೇ ಸುಪ್ರಭಾತ ಹೇಳಿದರೆ ಹೇಗಿರುತ್ತದೆ:

‘ವತ್ಸ ಜಾಗೃಹಿ ವಿಭಾತಮಾಗತಂ!

ಜೀವ ಕೃಷ್ಣ ಶರದಾಂ ಶತಂ ಶತಂ!’

‘ಮಗು ಎಚ್ಚರವಾಗು. ಬೆಳಗಾಯಿತು. ನೂರು ವರ್ಷಗಳು ಬದುಕು!’

ಉಪನಿಷತ್ತಿನ ಸಂದೇಶವಾದರೂ ಇದೇ:

ಕುರ್ವನ್ನೇವೇಹ ಕರ್ಮಾಣಿ ಜಿಜೀವಿಷೇಚ್ಛತಗ್ಂ ಸಮಾಃ |

ಏವಂ ತ್ವಯಿ ನಾನ್ಯಥೇತೋSಸ್ತಿ ನ ಕರ್ಮ ಲಿಪ್ಯತೇ ನರೇ ||

ಇದರ ತಾತ್ಪರ್ಯ: ‘ಕರ್ಮಗಳನ್ನು ಆಚರಿಸುತ್ತಲೇ ನೂರು ವರ್ಷಗಳು ಬದುಕಲು ಇಚ್ಛಿಸಬೇಕು; ಇದನ್ನು ಬಿಟ್ಟು ಇನ್ನೊಂದು ದಾರಿ ಇಲ್ಲ.’

ರಾಮನನ್ನು ಕರ್ತವ್ಯದತ್ತ ಮುಖಮಾಡಿಸಲು ಅರುಣೋದಯದಲ್ಲಿ ಸುಪ್ರಭಾತ ಹಾಡಿದ ವಿಶ್ವಾಮಿತ್ರನಿಗೆ, ರಾಮನು ಕೌಸಲ್ಯೆಯ ಮಗನಾಗಿಯೇ ಕಂಡಿರುವುದರಲ್ಲಿ ಆಶ್ಚರ್ಯವೇನಿಲ್ಲ. ರಾಮನನ್ನು ‘ರಾಜೀವಲೋಚನ’ ಎಂದು ಮತ್ತೆ ಮತ್ತೆ ಕರೆಯುವುದರ ಸ್ವಾರಸ್ಯವನ್ನೂ ಇಲ್ಲಿ ನೋಡಬಹುದು. ಸೂರ್ಯವಂಶದ ಧರ್ಮಕಿರಣಗಳಿಗೆ ತೆರೆದುಕೊಳ್ಳುವ ನೋಟ ಇರುವವನು ಅವನು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT