ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

101 ‘ಲಿಂಗಮುದ್ರೆ ಕಲ್ಲು’ಗಳಿಗೆ ಪೂಜೆ

Last Updated 17 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ನಮ್ಮ ಪೂರ್ವಜರು ಭೂಮಿಯ ಗಡಿ ಗುರುತಿಸಲು ಲಿಂಗಮುದ್ರೆ ಕಲ್ಲು ಬಳಸುತ್ತಿದ್ದರು. ಆದರೆ, ಇಂತಹ ಕಲ್ಲುಗಳು ಈಗ ಕಾಣ ಸಿಗುವುದು ಅಪರೂಪ. ಆದರೆ,ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲ್ಲೂಕಿನ ಬೊಪ್ಪಲಾಪುರ ಗ್ರಾಮಕ್ಕೆ ಬಂದರೆ, ನೀವು 101 ಲಿಂಗಮುದ್ರೆ ಕಲ್ಲುಗಳನ್ನು ನೋಡಬಹುದು. ಅದರಲ್ಲೂ ಶಿವರಾತ್ರಿ ದಿನ ಈ ಊರಿಗೆ ಬಂದರೆ, ಆ ಕಲ್ಲುಗಳಿಗೆ ಗ್ರಾಮಸ್ಥರು ಪೂಜೆ ಮಾಡುವುದನ್ನು ಕಾಣಬಹುದು !

ಹೌದು, ಗಡಿ ಗುರುತಿಸುವ ಕಲ್ಲುಗಳೆಂದೇ ಕರೆಯವ ಲಿಂಗಮುದ್ರೆ ಕಲ್ಲುಗಳನ್ನು ಈ ಗ್ರಾಮಸ್ಥರು ರಕ್ಷಿಸಿದ್ದಾರೆ. ಗ್ರಾಮದೊಳಗೆ ಇಂಥ ಸುಮಾರು 35 ಕಲ್ಲುಗಳಿವೆ.ಜನ ಅವರವರ ಮನೆ ಮುಂದೆ, ಹಿತ್ತಿಲು, ಕಣದಲ್ಲಿ ಇರುವ ಕಲ್ಲುಗಳಿಗೆ ಪ್ರತಿ ಸೋಮವಾರ, ಗುರುವಾರ ಪೂಜೆ ಮಾಡುತ್ತಾರೆ. ಪ್ರತಿ ಶಿವರಾತ್ರಿಗೆ ಊರೊಳಗೆ, ಜಮೀನಿನಲ್ಲಿರುವ ಎಲ್ಲ 101 ಕಲ್ಲುಗಳಿಗೂ ವಿಶೇಷವಾಗಿ ಪೂಜೆಮಾಡುತ್ತಾರೆ. ಇಲ್ಲಿ ಎರಡರಿಂದ ಆರು ಅಡಿ ಎತ್ತರದವರೆಗಿನ ವಿವಿಧ ಗಾತ್ರ ಮತ್ತು ಆಕಾರದಲ್ಲಿರುವ ಕಲ್ಲುಗಳಿವೆ.ಅದರಲ್ಲಿ ಶಿವಲಿಂಗ, ಶಿವಲಿಂಗದ ಅಕ್ಕ-ಪಕ್ಕ ಸೂರ್ಯ, ಚಂದ್ರರ ಕೆತ್ತನೆ ಇದೆ. ಬಹುಶಃ ಈ ಕಾರಣಕ್ಕೆ ಇವುಗಳಿಗೆ ‘ಲಿಂಗಮುದ್ರೆ’ ಕಲ್ಲುಗಳೆಂದು ಹೆಸರು ಬಂದಿರಬಹುದು.

ಅಚ್ಚರಿ ಎಂದರೆ, ‘ಇಷ್ಟೊಂದು ಕಲ್ಲುಗಳು ಈ ಗ್ರಾಮದಲ್ಲೇ ಏಕಿವೆ’ ಎಂಬುದು. ಗ್ರಾಮಸ್ಥರಲ್ಲಿ ಈ ಪ್ರಶ್ನೆ ಕೇಳಿದರೆ, ‘ಗೊತ್ತಿಲ್ಲ’ ಎನ್ನುತ್ತಾರೆ. ‘ಲಿಂಗಮುದ್ರೆ ಕಲ್ಲುಗಳಿಗೆ ತಾತ-ಮುತ್ತಾತರ ಕಾಲದಿಂದ ಪೂಜೆ ಸಲ್ಲಿಸಿಕೊಂಡು ಬಂದಿದ್ದೇವೆ. ವರ್ಷವೂ ಪೂಜಿಸುತ್ತಿದ್ದೇವೆ. ಇದರಿಂದ ನಮ್ಮ ಗ್ರಾಮಕ್ಕೆ ಒಳಿತಾಗಿದೆ’ ಎನ್ನುತ್ತಾರೆ ಗ್ರಾಮದ ಹಿರಿಯ ಬಣಕಾರ ಚನ್ನಬಸಪ್ಪ.

ಶಿವರಾತ್ರಿಯ ಪೂಜೆ ವಿಶೇಷ

ಶಿವರಾತ್ರಿಯಂದು ಇಡೀ ಬೊಪ್ಪಲಾಪುರದಲ್ಲಿ ಹಬ್ಬದ ಸಂಭ್ರಮವಿರುತ್ತದೆ. ವಿಶೇಷವಾಗಿ ಈಶ್ವರ ಗುಡಿಯನ್ನು ತಳಿರು ತೋರಣದಿಂದ ಸಿಂಗರಿಸುತ್ತಾರೆ. ಮುಂಜಾನೆಯೇ ಊರಿನ ಮುಂದೆ ಜನರೆಲ್ಲಾ ಸೇರಿ ಸ್ಪರ್ಧೆಗೆ ಬಿದ್ದವರಂತೆ 101 ತೆಂಗಿನ ಕಾಯಿಗಳ ಸಿಪ್ಪೆ ಸುಲಿಯುತ್ತಾರೆ. ಈಶ್ವರ ಮತ್ತು ಬಸವಣ್ಣನಿಗೆ ಪ್ರಥಮ ಅಭಿಷೇಕ ನೆರವೇರಿಸಿ, ನಂತರ ಕರುಗಲ್ಲು, ಉಳಿದ ಗ್ರಾಮ ದೇವರ ಪೂಜೆ ಸಲ್ಲಿಸಿ, ಲಿಂಗಮುದ್ರೆ ಕಲ್ಲುಗಳ ಪೂಜೆಗೆ ಅಣಿಯಾಗುತ್ತಾರೆ.

ಗ್ರಾಮದ ಒಳಗೆ ಮತ್ತು 10 ರಿಂದ 15 ಕಿ.ಮೀ ವ್ಯಾಪ್ತಿಯ ಹೊಲಗದ್ದೆಗಳಲ್ಲಿರುವ ಲಿಂಗಮುದ್ರೆ ಕಲ್ಲುಗಳ ಪೂಜೆಗೆ ಹೋಗಲುಎರಡು ತಂಡಗಳು ಸಿದ್ಧವಾಗುತ್ತವೆ. ಒಂದೊಂದು ತಂಡದಲ್ಲಿ 10 ರಿಂದ 12 ಮಂದಿ ಇರುತ್ತಾರೆ. ಇವರೆಲ್ಲಾ ಆ ದಿನ ಉಪವಾಸ ಇರುತ್ತಾರೆ. ಪೂಜಾ ಸಾಮಗ್ರಿಗಳೊಂದಿಗೆ ಬರಿಗಾಲಲ್ಲಿ ಪೂಜೆಗೆ ಹೊರಡುತ್ತಾರೆ. ಒಂದು ಗುಂಪು ಪೂರ್ವದಿಂದ ದಕ್ಷಿಣ ದಿಕ್ಕಿಗೆ ಮತ್ತೊಂದು ಗುಂಪು ಪಶ್ಚಿಮದಿಂದ ದಕ್ಷಿಣ ದಿಕ್ಕಿಗೆ ಹೋಗುತ್ತಾರೆ. ಬೆಳಿಗ್ಗೆ ಪೂಜೆಗೆ ಹೊರಟವರು ಗ್ರಾಮಕ್ಕೆ ಮರಳುವ ಹೊತ್ತಿಗೆ ಇಳಿ ಸಂಜೆಯಾಗಿರುತ್ತದೆ. ಪೂಜೆಗೆ ಹೋದವರು ಪ್ರತಿ ಕಲ್ಲನ್ನು ಶುಚಿಗೊಳಿಸಿ, ವಿಭೂತಿ, ಕುಂಕುಮ, ಹಣ್ಣು-ಹೂವು ಇಟ್ಟು, ಪಂಚಾಮೃತ ಅಭಿಷೇಕ ಮಾಡಿ, ಪೂಜೆ ಮಾಡುತ್ತಾರೆ.

‘ಅಡವಿ ಕೊಟ್ರಯ್ಯ’ ದೇವರಿಗೆ ಕೊನೆ ಪೂಜೆ ಸಲ್ಲಿಸಿದ ನಂತರ ಲಿಂಗಮುದ್ರೆ ಕಲ್ಲುಗಳ ಪೂಜೆಗೆ ತೆರೆಬೀಳುತ್ತೆ. ನಂತರ ಶಿವನ ನಾಮ ಸ್ಮರಣೆ ಮಾಡುತ್ತಾ ಜಾಗರಣೆ ಮಾಡುತ್ತಾರೆ. ಇದು ಬೊಪ್ಪಲಾಪುರದ ಶಿವರಾತ್ರಿಯ ವಿಶೇಷ.

ಸೀಮಾಬಂಧಿ ಕಲ್ಲುಗಳು

‘ಕ್ರಿ.ಶ 5 ಮತ್ತು 6 ನೇ ಶತಮಾನದಿಂದಲೂ ಲಿಂಗಮುದ್ರೆ ಕಲ್ಲುಗಳಿರುವುದಾಗಿ ಇತಿಹಾಸದಲ್ಲಿ ದಾಖಲೆಗಳುಸಿಗುತ್ತವೆ’ ಎನ್ನುತ್ತಾರೆ ಬಳ್ಳಾರಿಯ ವಿಎಸ್‌ಕೆ ವಿವಿಯ ಇತಿಹಾಸ ಮತ್ತು ಪುರಾತತ್ವ ವಿಭಾಗದ ಸಹಪ್ರಾಧ್ಯಾಪಕ ಡಾ. ಎಚ್. ತಿಪ್ಪೇಸ್ವಾಮಿ.‘ಇವುಗಳಿಗೆ ಸೀಮಾಬಂಧಿ ಕಲ್ಲುಗಳು ಎಂತಲೂ ಹೆಸರು. ರಾಜರ ಆಳ್ವಿಕೆ ಕಾಲದಲ್ಲಿ ಊರಿನ ಗಡಿ ಗುರುತಿಸಲು ಈ ಕಲ್ಲುಗಳನ್ನು ಹಾಕುತ್ತಿದ್ದರು. ಇತ್ತೀಚೆಗೆ ಈ ಕಲ್ಲುಗಳು ಎಲ್ಲೂ ಕಾಣುತ್ತಿರಲಿಲ್ಲ. ಆದರೆ ಒಂದೇ ಗ್ರಾಮದಲ್ಲಿ ಇಷ್ಟೊಂದು ಕಲ್ಲುಗಳು ಇರುವುದು, ಜನರು ಅವುಗಳನ್ನು ಪೂಜಿಸುತ್ತಿರುವುದು ವಿಶೇಷ’ ಎಂದು ಅಚ್ಚರಿ ವ್ಯಕ್ತಪಡಿಸುತ್ತಾರೆ ಅವರು.

ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT