ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಷಯ ತೃತೀಯಾ 2022: ಅಕ್ಷಯ ಫಲದ ತೃತೀಯಾ

Last Updated 2 ಮೇ 2022, 20:05 IST
ಅಕ್ಷರ ಗಾತ್ರ

ಚೈತ್ರಮಾಸದ ಯುಗಾದಿಯ ನಂತರ ಬರುವ ಪ್ರಮುಖವಾದ ಹಬ್ಬ ‘ಅಕ್ಷಯ ತೃತೀಯಾ’. ಈ ವ್ರತ-ಪರ್ವದ ಪ್ರಶಂಸೆಯನ್ನು ಭವಿಷ್ಯಪುರಾಣದಲ್ಲಿ ಶ್ರೀಕೃಷ್ಣ ಪರಮಾತ್ಮನೇ ಮಾಡಿದ್ದಾನೆ. ವೈಶಾಖಮಾಸದ ಶುಕ್ಲಪಕ್ಷದ ತೃತೀಯಾ ತಿಥಿಯಂದು ಈ ಪರ್ವದ ಆಚರಣೆಯನ್ನು ಹೇಳಿದೆ. ಈ ತೃತೀಯಾ ತಿಥಿಯನ್ನು ‘ಜಯಾತಿಥಿ’ ಎಂದೂ ಕರೆಯಲಾಗುತ್ತದೆ. ಇದು ಬಹು ವಿಶೇಷವೂ ಪವಿತ್ರವೂ ಆದ ತಿಥಿ ಎಂದು ‘ಧರ್ಮಸಿಂಧು’ವು ಹೇಳಿದೆ.

ನಾಲ್ಕು ಯುಗಗಳಲ್ಲಿ ಮೊದಲನೆಯ ಯುಗವಾದ ಕೃತಯುಗವು ಆರಂಭವಾದ ದಿನ ಇದು ಎಂಬ ವಿಶ್ವಾಸವೂ ಪ್ರಚಲಿತವಿದೆ. ಹಾಗಾಗಿ ಈ ದಿನವನ್ನು ‘ಕೃತ ಯುಗಾದಿ’ ಎಂದೂ ಕರೆಯುವುದುಂಟು. ಮಹಾವಿಷ್ಣುವಿನ ಹತ್ತು ಅವತಾರಗಳಲ್ಲಿ ಬ್ರಹ್ಮ-ಕ್ಷಾತ್ರಗಳ ಸಮಾಹಾರದ ಅವತಾರವಾದ ‘ಪರಶುರಾಮ ಜಯಂತಿ’ಯೂ ಅಕ್ಷಯ ತೃತೀಯೆಯಂದೇ ಬರುತ್ತದೆ.

ಜ್ಯೋತಿಶ್ಶಾಸ್ತ್ರವು ಅಕ್ಷಯ ತೃತೀಯೆಯನ್ನು ‘ಮೂರೂವರೆ’ ಮುಹೂರ್ತಗಳಲ್ಲಿ ಒಂದು ಎಂದು ಪರಿಗಣಿಸಿದೆ. ಈ ಮುಹೂರ್ತದಲ್ಲಿ ಯಾರು ಬೇಕಾದರೂ, ಇತರ ಯಾವ ಶುದ್ಧಿಗಳನ್ನೂ ನೋಡದೆ, ಯಾವ ಒ‍ಳ್ಳೆಯ ಕೆಲಸವನ್ನು ಬೇಕಾದರೂ ಆರಂಭಿಸಬಹುದಾಗಿದೆ. ಸತ್ಪಾತ್ರರಿಗೆ ದಾನ ಕೊಡುವುದನ್ನು ‘ನಿರ್ಣಯಸಿಂಧು’ವಿನಲ್ಲಿ ವಿಶೇಷವಾಗಿ ಹೇಳಲಾಗಿದೆ. ಈ ಪರ್ವದಿನದಂದು ಆಚರಿಸುವ ಸ್ನಾನ, ಜಪ, ತಪ, ಅಧ್ಯಯನ, ತರ್ಪಣ, ದಾನಗಳೆಲ್ಲವೂ ಅತಿಶಯವಾದ, ಅಕ್ಷಯವಾದ ಫಲಗಳನ್ನು ಕೊಡುತ್ತವೆ ಎಂದು ‘ವ್ರತರಾಜ’ ಎಂಬ ಗ್ರಂಥದಲ್ಲಿ ಹೇಳಲಾಗಿದೆ. ಈ ದಿನ ಹೊಲಗದ್ದೆಗಳಲ್ಲಿ ಬಿತ್ತನೆ ಮಾಡಿದರೆ ಫಸಲು ಅಕ್ಷಯವಾಗುತ್ತದೆ ಎಂಬ ನಂಬಿಕೆಯೂ ಇದೆ. ಅಕ್ಷಯವಾದ ಫಲವು ಸಿಗುವುದರಿಂದಲೇ ಈ ದಿನವನ್ನು ’ಅಕ್ಷಯ ತೃತೀಯಾ’ ಎಂದು ಕರೆದಿದ್ದಾರೆ.

‘ಭವಿಷ್ಯಪುರಾಣ’ವು ಈ ದಿನ ಪ್ರಾತಃಕಾಲದಲ್ಲಿ ಸಂಕಲ್ಪಪೂರ್ವಕವಾಗಿ ಗಂಗಾಸ್ನಾನ ಮಾಡಬೇಕು. ಸಾಕ್ಷಾತ್ತಾಗಿ ಗಂಗಾಸ್ನಾನ ಸಾಧ್ಯವಿಲ್ಲದಾಗ, ನಾವು ಸ್ನಾನಮಾಡುವ ನೀರಿನಲ್ಲೇ ಗಂಗೆಯನ್ನು ಪರಿಭಾವಿಸಿ, ಭಕ್ತಿಯಿಂದ ಮಜ್ಜನ ಮಾಡಿ ಹಬ್ಬವನ್ನು ಆಚರಿಸಬೇಕು. ಶ್ರೀಕೃಷ್ಣನನ್ನು ಚಂದನಲೇಪದಿಂದ ಪೂಜಿಸಬೇಕು; ತರ್ಪಣ ದಾನಾದಿಗಳಿಂದ ಪಿತೃಗಳಿಗೆ ಪೂಜೆ ಸಲ್ಲಿಸಬೇಕು– ಎನ್ನುತ್ತದೆ. ಗೋಧಿ, ಯವ (ಜವೆಗೋಧಿ), ಯವೆಯ ಹುರಿಹಿಟ್ಟು, ಕಡಲೆ, ಮೊಸರನ್ನ, ನೀರು ತುಂಬಿದ ಬಿಂದಿಗೆ, ಬಿಸಿಲಿನ ತಾಪದ ಉಪಶಮನಕ್ಕೆ ಬೇಕಾಗುವ ಬೀಸಣಿಗೆ, ಮಂದಳಿಗೆ, ಚಂದನಗಳನ್ನು ದಕ್ಷಿಣೆಯ ಜೊತೆ ದಾನ ಮಾಡಬೇಕೆಂದು ಹೇಳಲಾಗಿದೆ. ಸುವರ್ಣದಾನವನ್ನೂ ಹೇಳಿದೆ. ಚಿನ್ನವನ್ನು ದಾನ ಕೊಡಲಾಗದವರು ಯವೆಯ ದಾನವನ್ನು ಮಾಡಬಹುದು ಎಂಬ ರಿಯಾಯಿತಿಯೂ ಇದೆ. ಇದು ಈಗ ಚಿನ್ನದ ಖರೀದಿಯ ವ್ಯಾಪಾರೀ ತಂತ್ರವಾಗಿ ಬದಲಾಗಿದೆ. ಇಂದು ಮಹಿಳೆಯರು ವಿಶೇಷವಾಗಿ ತದಿಗೆಯ ಗೌರಿಯನ್ನು ಪೂಜಿಸುವ ಪದ್ಧತಿಯೂ ಇದೆ.

ಅಕ್ಷಯ ತೃತೀಯೆಯಂದು ಮಾಡುವ ಧಾರ್ಮಿಕ ಆಚರಣೆಗಳ ಹಿಂದೆ ಋತುಮಾನಕ್ಕೆ ಅನುಗುಣವಾದ ಸೂಕ್ಷ್ಮವಾದ ಅಂಶವೂ ಅಡಕವಾಗಿರುವುದನ್ನು ಗಮನಿಸಬಹುದು. ಗಂಗಾಸ್ನಾನ, ಚಂದನ ಜಲಕುಂಭ ಬೀಸಣಿಗೆ ಮೊದಲಾದ ದಾನಗಳೆಲ್ಲವೂ ವೈಶಾಖದ ಬಿಸಿಲಿನ ಧಗೆಗೆ ಉಪಶಮನವನ್ನು ತರುವಂತಹವೇ ಆಗಿವೆ. ಯವದ ಹುರಿಹಿಟ್ಟು ಶರೀರಕ್ಕೆ ಶೈತ್ಯಕಾರಕವಾದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT